*ಬಾಳ ಸಂಗಾತಿ*
ಈ ಜೀವ ಪಯಣದಲಿ ಒಲುಮೆಯ
ಬಲದಿ ನನ್ನ ಬದಿ ಬಂದವಳು
ಮುತ್ತುಗಳ ರಾಶಿಯಲಿ ಮೈಮರೆತು
ನಗು ಚಲ್ಲುತ ನಡೆವ ಹಾದಿಯಲಿ
ಬರೀ ಹೂ ಅರಳಲಿಲ್ಲ
ಸಿಟ್ಟು ಪ್ರೀತಿ ಕೊಂಚ ಗುಮಾನಿ
ಕಿರಿ ಕಿರಿಯ ಸಹಿಸುತ ಮಕ್ಕಳ
ಮುದ್ದಿಗೆ ಎದೆಗೊಟ್ಟು ಹಾಲು
ಹರಿಸಿದ ಜೇನ ಸವಿ
ಎದೆಯ ರೋಮಗಳಲಿ ತಲೆಯಿಟ್ಟು
ಮಲಗಿ ಕನಸುಗಳಿಗೆ ಬಣ್ಣ ತುಂಬುವ
ಪಡಿಪಾಟಲು
ಬರೀ ಭರವಸೆಯೊಂದೇ ಸಾಕು
ಬಾಳ ದಡ ಸೇರಲು
ನಂಬಿಗೆಯ ಬಿಗಿಯಲೂ ಪಟ್ಟು
ಸಡಿಲಾಗಿ ಕಳ್ಳ ಮನಸು ಗಡಿ
ದಾಟಿದಾಗ ಕಂಡೂ ಕಾಣದಂತೆ
ನಸು ನಕ್ಕು ಎದೆಗವಚಿ
'ಇರಲಿ ಬಿಡು' ಅಂದಾಗ ನಾ
ಇಂಗು ತಿಂದ ಮಂಗ
ಸರಿ-ತಪ್ಪು ಸುಖ-ದುಃಖ
ಲೆಕ್ಕದಾಟದಲಿ ಗಳಿಸಿದ್ದು ಶೂನ್ಯ
ಮುಂದೊಂದು ದಿನ ಸರಿಯಾದೀತು
ಎಂಬ ತುಂಬು ಭರವಸೆ
ಅವ್ವನ ಮುನಿಸಿನ ಬಲಿಪಶು
ಕಸಿದುಕೊಂಡೆ ಎಂಬ ಆರೋಪಕೆ
ನಿರುತ್ತರ
ಈಗ ಏರಿದ ಧ್ವನಿಯ ಹಕ್ಕೊತ್ತಾಯ
ಬಲು ಜೋರು
'ನನಗೂ ವಯಸ್ಸಾತು ಹೆದರೋ
ಮಾತು ಮರೆತು ಬಿಡು' ಎಂಬ
ಜಂಬಕೆ ನನ್ನ ಮೌನ ಮುದ್ರೆ
ಹುಟ್ಟು ಹಬ್ಬದ ನೆಪದಲಿ
ಸಿಹಿ ತಿನ್ನದೇ ಹಂಚುವ ಸಡಗರ
ಇರಲಿ ನಿರಂತರ.
ನಿನ್ನ ಬಾಳ ಸಂಗತಿ.
------ಸಿದ್ದು ಯಾಪಲಪರವಿ.
No comments:
Post a Comment