Wednesday, April 18, 2018

ಬಸವನೆಂಬ ಮಹಾಬೆಳಗು

*ಬಸವನೆಂಬ ಮಹಾಬೆಳಗು*

ಅಂದು...

ಅಸಂಖ್ಯ ಕನವರಿಕೆಯಲೂ ಬರೀ‌
ನಿನದೇ ಧ್ಯಾನ

ಅರಿವಿನ ಕುರುಹು ಕೊಟ್ಟು ಪ್ರಜ್ಞೆಯ
ಬೀಜ ಬಿತ್ತಿ ಆಧ್ಯಾತ್ಮದ ತಳಹದಿ ಮೇಲೆ
ನೆಲೆ ನಿಂತ ಅನಭಾವದ ಮಹಾ ಮಂಟಪ

ಸ್ಥಾವರವಳಿಸಿ ಜಂಗಮವ ಉಳಿಸಿ
ಇವರೆಲ್ಲ‌ ನಮ್ಮವರೆಂದೆನಿಸಿ
ಮನೆಯ ಮಗನಾದ ಮಹಾಮಾನವ

ಸಂತೆಯ ಸದ್ದಲೂ ಮೌನದ ಮೆರವಣಿಗೆ
ಬೆಟ್ಟದ ಮೇಲೂ ಮನುಜ ಪಥ
ಮೃಗಗಳಿಗಿಲ್ಲ ಒಂದಿನಿತು ಜಾಗ
ನಿಂದೆಗಳ ನೆರೆ-ತೊರೆಗಳಿಗೆ ಜಗ್ಗದೆ
ಕುಗ್ಗದೇ ನಡೆದದ್ದೇ ಆನೆ ಮಾರ್ಗ

ಇದು ಬರೀ ಬೀದಿ ಹೋರಾಟ ಹಾದಿ
ಜಗಳವಲ್ಲ ಅದರಾಚೆಗಿನ ಅರಿವಿನ
ಅಂತರಾಳದ ಮಹಾ ಬೆಳಗಿನ ಬೆರಗು

ರಾಜ ಮಹಾರಾಜರ ಕಿರೀಟದ ಕೀರ್ತಿ
ಅಲುಗಾಡಿತು ಶೂನ್ಯ ಸಿಂಹಾಸನದ
ಜ್ಞಾನರತ್ನದ ದಿವ್ಯ ಹೊಳಪಿನ ಪ್ರಭೆಗೆ

ಅಲ್ಲಮ ಪ್ರಭುವಾಗಿ ಅಕ್ಕ ಮಹಾದೇವಿಯಾಗಿ
ಮರೆವ ಮರೆಸಿ
ತಾನೇ ತಾನಾಗಿ ಬೆಳೆದು
ಸಂಸಾರದ ಹಂಗ ಹರಿದು ಹಾಡುತ
ಹಾಡುತ್ತ ವಚನಗಳ ಮಾಲೆ ಧರಿಸಿ
ಅಮರ ಅಜರಾಮರ

ಸಂಸಾರ ನೊಗ ಹೊತ್ತ ಶರಣರ ಕಾಯಕ
ದಲಿ ಕೈಲಾಸ ಹಿತವೆನಿಸಿದ ಸತಿ-ಪತಿ
ಒಂದಾದ ಭಕ್ತಿಗೆ ಕಾಮದ ಗುಂಗಿಲ್ಲ

ಒಲಿದಷ್ಟೇ ಉಂಡ ಉಪವಾಸಿಗಳು
ಹಸಿವಿಂದ ಹಪಹಪಿಸದ ದಾಸೋಹ

ಜಾತಿ-ಧರ್ಮ ರೀತಿ-ನೀತಿ
ಸನ್ಯಾಸ-ಸಂಸಾರ ಆಳು-ಅರಸರ
ಸಮತೆಯ ಸಮಪಾಲು ಸರ್ವರಿಗೂ
ಸಮಚಿತ್ತ

ಕಾಮದ ಗುಂಗಿನ ಸನ್ಯಾಸವ ಧಿಕ್ಕರಿಸಿ
ಶರಣ‌ ಪಥದಲಿ ಸಂಚರಿಸಿ ಒಲ್ಲೆನೆಂದು
ಗೊಣಗದೆ ಬೇಕೇ ಬೇಕೆಂದು ಪರಿತಪಿಸದ
ನಿರ್ವಿಕಾರ ನಿರ್ಲಿಪ್ತ ಸಂಕಲ್ಪ

ಲಿಂಗ ಜಾತಿ ವಯೋಮಾನಗಳ ದೂರ
ಸರಿಸಿ ಪ್ರಜ್ಞೆಯ ಜ್ಯೋತಿಯ ಬಲದಿಂದ
ಕತ್ತಲೆಯ ಕಳೆದ ಜ್ಞಾನಿಗಳ‌ ಕೂಡಲ
ಮಹಾಸಂಗಮ

ಇಂದು...

ಲಿಂಗಾಂಗ ಸಾಮರಸ್ಯದ ಶರಣರಿಗೀಗ
ಬರೀ ಹಸಿವು
ತುಂಬಲಾಗದ ಹೊಟ್ಟೆ ನೀರಿಗೂ ದಾಹ
ಬೆಳಕಿಗೂ ಕತ್ತಲೂ
ಕಾಯ ಭಾರದಿ ಕಾಯಕ ಮಾಯ

ಸನ್ಯಾಸವೆಂಬುದೊಂದು ಅರಸೊತ್ತಿಗೆ
ಹೊದಿಕೆಗೆ ಕಾವಿ ಪೊದೆಯೊಳು ಕಾಮ
ಮಠ-ಪೀಠಗಳ ಮತಿಗೆಟ್ಟ ಮಠೀಯ
ವಾದ-ವಿವಾದ

ಅವಕಾಶವಾದವೆಂಬ ಯೋಗ-ಧ್ಯಾನದ
ರಣಕಹಳೆ ತಲೆಚಿಟ್ಟು ಹಿಡಿಯುವ
ಪದಮಾಲಿನ್ಯ

ವಿವಾದಗಳ‌ ಆರ್ಭಟದಲಿ ಶಬ್ದಸೂತಕ
ಮಾತು ಮಂಗ
ಮಾನದ ಬಹಿರಂಗ ಹರಾಜು

ಆದರೂ

ವಚನ ಸಾಲುಗಳ ಸೆಳೆತದಿ
ಹಾಡಿ ನಲಿದು ಕುಣಿದು ನಮ್ಮನು
ನಾವೇ ರಮಿಸಿಕೊಂಡಾಗ ಮೈಮನಗಳ
ಸುಳಿಯಲಿ ಬಸವಪ್ರಜ್ಞೆಯ ಮಹಾಬೆಳಗಿನ
ಮಹಾಬೆರಗು ಮಹಾಬೆರಗು ಮಹಾಬೆರಗು.
  
        *ಸಿದ್ದು ಯಾಪಲಪರವಿ*

No comments:

Post a Comment