*ವಚನಾನುಸಂಧಾನ*
ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ?
ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ?
ಸುರಭಿ ಮನೆಯಲ್ಲಿ ಕರೆವುತ್ತಿರೆ , ಹರಿವರೆ ಸೊಣಗನ ಹಾಲಿಂಗೆ?
ಬಯಸಿದಮೃತವಿದ್ದಂತೆ,
ಅಂಬಿಲವ ನೆರೆದುಂಬ ಭ್ರಮಿತಮಾನವಾ, ನೀನು ಕೇಳಾ.
ಪರಮಪದವೀಯನೀವ ಚೆನ್ನಸೊಡ್ಡಳನಿದ್ದಂತೆ, ಸಾವದೇವರ ನೋಂತರೆ, ಕಾವುದೆ ನಿನ್ನ?
----ಸೊಡ್ಡಳ ಬಾಚರಸ.
ಈಗ ವಚನಗಳು, ವಚನಕಾರರು, ಶರಣರು ಹಾಗೂ ಲಿಂಗಾಯತ ಧರ್ಮ ಭಿನ್ನ ನೆಲೆಯ ಮರು ಓದಿಗೆ ಒಳಪಡಬೇಕು.
ಆಧುನಿಕ ಸ್ವತಂತ್ರ ಧರ್ಮದ ಹೋರಾಟ, ಲಿಂಗಾಯತ ಧರ್ಮವೋ? ಅಥವಾ ಪಂಥವೋ? ಎಂಬ ಕಿತ್ತಾಟ ತಾರಕಕ್ಕೆ ಏರಿರುವಾಗ ವಚನಗಳು ಮಾತ್ರ ತಮ್ಮ ಪಾಡಿಗೆ ತಾವು ಶಾಂತವಾಗಿ ನದಿಯಂತೆ ಹರಿಯುತ್ತ ಹೊಸ ಹೊಸ ಹೊಳವು ಕೊಡುತ್ತಲೇ ಇರುತ್ತವೆ.
ವಚನಗಳ ಓದು ಕೊಡುವ ರಸಾನುಭವದ ಅನುಭೂತಿಯ ಮುಂದೆ ಮಿಕ್ಕದ್ದೆಲ್ಲ ಗೌಣ.
ಇಡೀ ಕಾಲಘಟ್ಟದ ಎಲ್ಲ ವಚನಕಾರರ ಜೀವಪರ ನಿಲುವು ಹಾಗೂ ಪ್ರಗತಿಪರ ಮನೋಧರ್ಮ ಈ ಮೇಲಿನ ವಚನದಲ್ಲಿಯೂ ಕಾಣುತ್ತದೆ.
ಸೊಡ್ಡಲ ಬಾಚರಸರಂತಹ ಶರಣರು ಬಸವಣ್ಣ, ಅಲ್ಲಮ ಹಾಗೂ ಅಕ್ಕನಷ್ಠೇ ಸಮರ್ಥವಾಗಿ ಬರೆಯಬಲ್ಲವರಾಗಿದ್ದರು.
ವೈಚಾರಿಕ ಸಾಮರ್ಥ್ಯ ಎಲ್ಲರಲ್ಲೂ ಪುಟಿಯುವ ಜೀವಸೆಲೆ.
ಅನುಭವ ಮಂಟಪದ ಪ್ರತಿಯೊಂದು ಚರ್ಚೆಗಳ ಸಾರಾಂಶಗಳನ್ನು ವಚನಗಳ ಮೂಲಕ ಶರಣರು ದಾಖಲಿಸಿದ್ದಾರೆ. ಇವತ್ತಿನ ಪಾರ್ಲಿಮೆಂಟಿನ ಚರ್ಚೆಗಳ ಹಾಗೆ.
ಚರ್ಚೆ ಮತ್ತು ದಾಖಲೆಯ ಸ್ವರೂಪ ಅತ್ಯಂತ ಆಧುನಿಕ ಹಾಗೂ ಸೈದ್ಧಾಂತಿಕ.
ಏಕಪಕ್ಷೀಯ ವಾದಗಳಿಂದ ಮುಕ್ತವಾದ ಅನುಭವ ಮಂಟಪದ ಅನನ್ಯತೆ ಊಹಿಸಿಕೊಂಡರೆ ರೋಮಾಂಚನ.
ನಿರಂತರ ಓದಿನ ಹರವಿನಲ್ಲಿ ಅನೇಕ ಸಂಗತಿಗಳನ್ನು ಕಲ್ಪಿಸಿಕೊಳ್ಳಲು ಮನಸು ಬಯಸುತ್ತದೆ. ಆಳವಾದ ಅನುಭೂತಿಯ ಅನುಭವಿಸಿ ಶರಣರನ್ನು ಸ್ಮರಿಸಿಕೊಂಡಾಗ ದಿವ್ಯಾನುಭದ ಪ್ರಭೆ ಹೊರಹೊಮ್ಮುತ್ತದೆ.
ಎಲ್ಲ ವಚನಗಳ ಓದು ಆ ಕಾಲದ ಸಾಮಾಜಿಕ ಸ್ಥಿತಿಯ ನೈಜತೆಯನ್ನು ಚಿತ್ರಿಸುತ್ತದೆ. ಅಲ್ಲದೆ
ಆಧ್ಯಾತ್ಮಿಕ ತಳಹದಿಯ ಮೇಲೆ ಕಟ್ಟಿದ್ದರಿಂದ ಅನುಭವ ಮಂಟಪ ಅಲುಗಾಡಲಿಲ್ಲ.
ಅವರ ಪ್ರಖರ ವಿಚಾರಧಾರೆಗಳು, ಅದನ್ನು ನಿರೂಪಿಸುವಾಗ ಬಳಸುವ ಉಪಮೇಯ,ಪ್ರತಿಮೆಗಳು ವಿಸ್ತಾರವನ್ನು ಅನುಭವಿಸಿ ಅನುಭಾವಿಸಬೇಕು.
ಪ್ರತಿಯೊಬ್ಬ ವ್ಯಕ್ತಿ ಒಂದೊಂದು ಕಾಲ ಘಟ್ಟದಲ್ಲಿ ತನ್ನ ಆಸಕ್ತಿಗೆ ತಕ್ಕಂತೆ ಹುಡುಕಾಟದಲ್ಲಿರುತ್ತಾನೆ.
ಹೆಣ್ಣು-ಹೊನ್ನು-ಮಣ್ಣು ಎಂಬ ಸಾಮಾನ್ಯ ವಿಶ್ಲೇಣೆಯನ್ನೂ ಮೀರಿದ ಹುಡುಕಾಟ ಅದಾಗಿರುತ್ತದೆ.
ಮೋಕ್ಷಕ್ಕಾಗಿ ಹಂಬಲಿಸುವ ಮನಸು ಆಧ್ಯಾತ್ಮಿಕ ಸಾಧನೆಗೆ ಸಾಗಿದಾಗ ನೂರೆಂಟು ಗೊಂದಲಗಳು.
ಇಲ್ಲಿಯೂ ಧಾವಂತ, ಅವಸರ ಬೇಗ ದಕ್ಕಿಸಿಕೊಳ್ಳುವ ತುಡಿತ.
ತಲುಪಬೇಕಾದ ಗುರಿ ಗೊತ್ತಿರುತ್ತದೆ ಆದರೆ ಮಾರ್ಗ ಗೊತ್ತಿರುವುದಿಲ್ಲ.
ಗಂಗಾ ನದಿಯಲ್ಲಿ ಮಿಂದು, ಯಜ್ಞ ಯಾಗಾದಿಗಳ ಮೂಲಕ ಬೇಗನೇ ಮೋಕ್ಷ ಪ್ರಾಪ್ತಿಯಾಗಬಹುದೆಂಬ ದುರಾಸೆಯ ಅವಸರದ ಮಾರ್ಗ.
ಗಂಗಾನದಿ ಪವಿತ್ರ ಎಂಬ ನಂಬಿಕೆ ಅಂದಿನಿಂದಲೂ ಇರುವುದರಿಂದ ಶರಣರು ಇವುಗಳನ್ನು ಪ್ರತಿಮೆಯಾಗಿ ಬಳಸಿದ್ದಾರೆ. ಆದರೆ ಗಂಗಾ ಸ್ನಾನ ಪವಿತ್ರ ಎಂದು ಒಪ್ಪಿಕೊಂಡಂತೆಯೂ ಅಲ್ಲ.
ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಹಾಗೂ ಮೋಕ್ಷ ಸಾಧನೆಯ ಸೂತ್ರಗಳು ನಮ್ಮಲ್ಲಿಯೇ ಲಭ್ಯವಿರುವಾಗ ಅಲ್ಲಲ್ಲಿ ಹುಡುಕುವದ್ಯಾಕೆ ? ಎಂಬ ಪ್ರಶ್ನೆ ಎತ್ತಿದ್ದಾರೆ.
ಆ ಅನಗತ್ಯ ಹುಡುಕಾಟವನ್ನು ಗಂಜಳದ ಹೊರಳಾಟಕ್ಕೆ ಹೋಲಿಸಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ತರಹದ ಹೋಲಿಕೆ ಮಾಡುವಾಗ ಬಳಸುವ ಪದಗಳು ಅಷ್ಟೇ ಕ್ರೂರವಾಗಿ ಕಾಣಿಸುತ್ತವೆ.
ಚಂದನದಂತಹ ಘಮಘಮಿಸುವ ಸುವಾಸನೆ ಇರುವಾಗಲೂ ದುರ್ಗಂಧ ಪೂಸಲಾಗದು.
ಆಕಳ ಹಾಲು ಮನೆಯಲ್ಲಿರುವಾಗ ನಾಯಿಯ ಹಾಲು ಕರೆಯಲಾಗದು ಎಂಬ ಹೋಲಿಕೆಯ ಕಠೋರತೆಯ ಹಿಂದಿನ ಉದ್ದೇಶ ಗ್ರಹಿಸಬೇಕು.
ಇಡೀ ಶರಣ ಚಳುವಳಿಯ ಸದಾಶಯ ಮೌಢ್ಯತೆಯ ಪ್ರತಿರೋಧವಾಗಿರುವಾಗ ಮತ್ತೆ ಮೌಢ್ಯತೆಯ ಕಡೆಗೆ ಮನಸು ವಾಲುವುದನ್ನು ತೀವ್ರವಾಗಿ ಖಂಡಿಸುತ್ತಾರೆ.
ಬಹುದೇವೋಪಾಸನೆ ಹಾಗೂ ದೇವಾಲಯ ಸಂಸ್ಕೃತಿಯ ಶೋಷಣೆಯಿಂದ ಬೇಸತ್ತ ಶರಣರು ಹೊಸ ಮಾರ್ಗ ಕಂಡುಕೊಂಡಿದ್ದರು.
ಇಷ್ಟಲಿಂಗ ಬರೀ ಧಾರ್ಮಿಕ ಕುರುಹು ಆಗಿರದೇ, ಮೋಕ್ಷ ಸಾಧನೆಯ ಕೈದೀವಿಗೆಯಾಗಿತ್ತು.
ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹೊರಗಿನ ಹುಡುಕಾಟಕ್ಕೆ ನಿಂತ ನಿಲುವು ಶರಣರನ್ನು ಕೆರಳಿಸುತ್ತಿತ್ತು.
ಗುಡಿಯಲಿರುವ ದೇವರು ಅಂಗೈಯಲ್ಲಿ ಲಭ್ಯವಿರುವಾಗ, ಸಾಯುವ ದೇವರ ಹುಡುಕುವದರ ಅಜ್ಞಾನವನ್ನು ಬಾಚರಸ ಪ್ರಶ್ನಿಸುತ್ತಾನೆ.
ಮೋಕ್ಷ ಸಾಧನೆಗೆ ಬುದ್ಧನದು ನಿರಾಕಾರದ ಧ್ಯಾನ ಮಾರ್ಗವಾದರೆ, ಶರಣರದು ಭಿನ್ನ ಮತ್ತು ಸುಧಾರಿಸಿದ ಮಾದರಿಯ ಲಿಂಗಾಂಗ ಸಾಮರಸ್ಯದ ದೃಷ್ಟಿಯೋಗ, ಶಿವಯೋಗ.
ಶರಣರು ಹಾಗೂ ಬುದ್ಧ ಇಬ್ಬರದೂ ದೇವಾಲಯಗಳ ಆಚೆಗಿನ ಅನುಸಂಧಾನ. ಗುರಿ ಒಂದೇ, ಮಾರ್ಗ ಭಿನ್ನ.
ದೇವಾಲಯ ಸಂಸ್ಕೃತಿಯ ಶೋಷಣೆ,ವಂಚನೆ ಹಾಗೂ ಮೌಢ್ಯತೆಯ ನಿರಾಕರಣೆಯ ಸಂದೇಶವನ್ನು ಮೇಲಿನ ವಚನ ಪ್ರತಿಬಿಂಬಿಸುತ್ತದೆ.
***
ಭಾರತೀಯ ಸನಾತನ ಧರ್ಮದ ಕಾಲಘಟ್ಟದಲ್ಲಿ ದೇವರು, ಮೂರ್ತಿ ಪೂಜೆ ಹಾಗೂ ದೇವಾಲಯಗಳ ನಂಬಿಕೆಗಳನ್ನು ಗಟ್ಟಿಗೊಳಿಸುವ ಸಂದರ್ಭದಲ್ಲಿ ಹೇಳುವ ಕಥೆಗಳು, ನೀಡುವ ಉದಾಹರಣೆಗಳು ಪ್ರಾಥಮಿಕ ಹಂತದ ವಿವರಣೆಗಳೆನಿಸಿಬಿಡುವುದು ಸಹಜ.
ದೇಹವೇ ದೇವಾಲಯ ಎಂಬ ನಂಬಿಕೆಯನ್ನು ಗಟ್ಟಿಗೊಳಿಸಲು ಯಶಸ್ವಿಯಾದದ್ದು ಸಣ್ಣ ಸಾಧನೆಯಲ್ಲ.
ಭಾವಚಿತ್ರದಲ್ಲಿರುವ ತಂದೆಗೆ ಉಗುಳುವ ಧೈರ್ಯ ಮಾಡದ ರಾಜನ ಕಥೆ ಶರಣರಿಗೆ ಹಳಸಲು ಎನಿಸುವುದು ಸಹಜ.
ಧರ್ಮ, ಆಧ್ಯಾತ್ಮ ಹಾಗೂ ಬದುಕು ಈ ಮೂರನ್ನೂ ಸಮಪಾತಳಿಯಲಿ ತೂಗಿದವರು ನಮ್ಮ ಶರಣರು.
ಶರಣರನ್ನು ಕೇವಲ ಸಾಮಾಜಿಕ ಹೋರಾಟಗಾರರು, ಕಾರ್ಮಿಕ ನಾಯಕರು ಹಾಗೂ ವಚನಕಾರರು ಎಂಬಂತೆ ಬಿಂಬಿಸುವುದು ಅಸಮರ್ಪಕ.
ಶರಣರು ಪೂರ್ಣ ಪ್ರಮಾಣದ ಆಧ್ಯಾತ್ಮಜೀವಿಗಳು.ಬರೀ ಚಳುವಳಿಗಾರರಾಗಿದ್ದರೆ ನಾಯಕತ್ವಕ್ಕಾಗಿ ಕಚ್ಚಾಡುತ್ತಿದ್ದರು.
ನಿರ್ಭಯ-ನಿರಾಕರಣೆ-ನಿರ್ಲಿಪ್ತತೆಯ ಸೂತ್ರಗಳನ್ನು ಶರಣರು ಅರಿತು ಆಚರಣೆಗೆ ತಂದಿದ್ದರು. ಅವರಿಗೆ ಈ ಕುರಿತು ಯಾವುದೇ ಗೊಂದಲಗಳಿರಲಿಲ್ಲ.
ಶರಣ ಸಿದ್ಧಾಂತವು ಎಲ್ಲ ಧಾರ್ಮಿಕ ಮಿತಿಗಳ ದಾಟಿ ಭಾರತೀಯ ಸಂವಿಧಾನದ ಆಧ್ಯಾತ್ಮಿಕ ಸ್ವರೂಪದಂತಿದೆ.
----ಸಿದ್ದು ಯಾಪಲಪರವಿ.
No comments:
Post a Comment