*Poetic justice- ವಿಜಯದಶಮಿ ಮತ್ತು ವರ್ತಮಾನ*
ವಿಜಯ ದಶಮಿ ನಿಮಿತ್ಯ ಅನೇಕ ಕತೆಗಳು. ದುಷ್ಟ ಸಂಹಾರದ ಸಂಕೇತಗಳಿಂದ ಆರಂಭವಾಗಿ ಮನದೊಳಗಿನ ದುಷ್ಟತನದ ಸಂಹಾರದ ವ್ಯಾಖ್ಯಾನಗಳ ಸಂದರ್ಭದಲ್ಲಿ ನೆನಪಾದ #Poetic justice ಎಂಬ ಪದ.
ನಮ್ಮ ಬದುಕಿನಲ್ಲಿ ನ್ಯಾಯ-ಅನ್ಯಾಯ, ಧರ್ಮ-ಅಧರ್ಮ, ಸೋಲು-ಗೆಲುವು ಅನಿಸಿದಾಗಲೆಲ್ಲ “ ಅಯ್ಯೋ ಯಾಕೆ ಹೀಗಾಯಿತು ? “ ಎಂಬ ಹಳಹಳಿಕೆ.
*ಬಾರದು ಬಪ್ಪದು ಬಪ್ಪುದು ತಪ್ಪದು* ಎಂಬ ವಚನದ ಸಾಲುಗಳ ಜಾಡ ಹಿಡಿದು ಹೋಗುವಾಗ ಮಾಡದ ತಪ್ಪಿಗೆ ಶಿಕ್ಷೆಗಾಗಿ ತಲ್ಲಣಿಸುತ್ತೇವೆ. ಹಾಗಾದರೆ ನಾವು ತಪ್ಪು ಮಾಡಿಲ್ಲ ಅಂದುಕೊಳ್ಳುವುದೇ ಮಾಹಾ ತಪ್ಪು.
ತಪ್ಪು ನಮ್ಮ ಮನದ ಮುಂದಣ ದುರಾಸೆ, ಮಹತ್ವಾಕಾಂಕ್ಷೆಯಿಂದಾಗಿಯೇ ನಡೆದಿರುತ್ತದೆ.
ನಮ್ಮ ಮಹಾಕಾವ್ಯಗಳು ಹೇಳುವದು ಅದನ್ನೇ.
*ಹೆಣ್ಣು-ಹೊನ್ನು-ಮಣ್ಣು* ನೆಪ ಇಟ್ಟುಕೊಂಡು ಘಟಿಸಿದ ರಾಮಾಯಣ, ಮಹಾಭಾರತದ ಕತೆಗಳಿಂದ ಪಾಠ ಕಲಿಯದೇ ಅವೇ ತಪ್ಪನ್ನು ಮಾಡುತ್ತ ರಾಮ ರಾವಣರಾಗಿ ಸಂಭ್ರಮಿಸುತ್ತೇವೆ.
ರಾಮ ರಾವಣ, ಪಾಂಡವ ಕೌರವರಾಗುವ ಅವಕಾಶ ನಮ್ಮಲ್ಲಿದ್ದರೂ ಅಧರ್ಮದ ಹಾದಿ ಹಿಡಿಯುತ್ತೇವೆ.
ವಿಲಿಯಂ ಶೇಕ್ಸ್‌ಪಿಯರ್ ಬಳಸಿದ poetic justice ಎಲ್ಲ ಕಾಲಕ್ಕೂ ಹೊಸ ಅರ್ಥ ಪಡೆಯುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ದೌರ್ಬಲ್ಯವನ್ನು *Tragi flaw* ಎಂದು ಗುರುತಿಸಿ ಅವನ ದುರಂತಕೆ ಅವನ flaw ಕಾರಣ ಎಂಬ ಜಾಣ Poetic justice ಭಿನ್ನ ಆಯಾಮ ಪರಿಚಯಿಸುತ್ತಾನೆ. ಹಣೆಬರಹ, ವಿಧಿ ಅವನ ದುರಂತ ನಾಟಕಗಳಲಿ ಎರಡನೇ ಸ್ಥಾನ ಪಡೆಯುತ್ತವೆ. ಮೊದಲ ಆದ್ಯತೆ ದೌರ್ಬಲ್ಯ.
ಮನುಷ್ಯ ತನ್ನ ಮಿತಿ ಅರಿತುಕೊಳ್ಳದೇ ನರಳುತ್ತಾನೆ, ಅದರ ಮುಂದುವರೆದ ವಿವರಣೆಯೇ ಆತ್ಮಾವಲೋಕನವೆಂಬ #SWOT analysis.
ಅವನ ನಾಟಕಗಳ ದುರಂತ ನಾಯಕರಿಗೆ ನ್ಯಾಯ ಸಿಗಲಿಲ್ಲ ಎಂಬ ಕೊರಗು ಪ್ರೇಕ್ಷಕರಿಗೆ ಉಂಟಾಗದೇ flaw ವಿಶ್ಲೇಷಣೆ ಮಾಡುತ್ತ ಮರುಗುತ್ತಾರೆ.
*ಅನುಮಾನಿಸುವ ಒಥೆಲೋ , ಮಂದಗತಿಯ ಹ್ಯಾಮ್ಲೆಟ್, ಮಹತ್ವಾಕಾಂಕ್ಷೆಯ ಮ್ಯಾಕ್ ಬೆತ್ ಹಾಗೂ ವಯೋಮಾನದ ಮಿತಿ ಅರಿಯದ ಮುಪ್ಪಿನ ಕಿಂಗ್ ಲಿಯರ್* ನಮಗೆ ಎಚ್ಚರಿಕೆ ಗಂಟೆಯಾಗಬೇಕು.
ಮನುಷ್ಯ ಈ ನಾಲ್ಕು ಹಂತಗಳನ್ನೂ ದಾಟಿ ಅಂತ್ಯ ಕಾಣುತ್ತಾನೆ. ಯೌವನದಲ್ಲಿ ಈ ನಾಲ್ಕು ಪಾತ್ರಗಳನ್ನು ಅರ್ಥಮಾಡಿಕೊಂಡರೂ ನಾವೂ ದುರಂತ ನಾಯಕರಾಗಿ ಮರೆಯಾಗುತ್ತೇವೆ.
ಹಾಗೆ ದುರಂತದಲ್ಲಿ ಮರೆಯಾಗುವಾಗ ಮೊದಲು ನಮ್ಮೊಳಗಿದ್ದ tragic flaw ಮರೆತು ದುಃಖ ಪಡುತ್ತೇವೆ. ಅವೇ ಹೆಣ್ಣು-ಹೊನ್ನು-ಮಣ್ಣು ಮತ್ತು ಅದರಾಚೆಗಿನ ತಳಮಳ.
ನಮ್ಮ ಶರಣರು, ಸಾಧು ಸಂತರುಗಳು, ಬುದ್ಧ ಹೇಳಿದ್ದು ಇದನ್ನೇ ಅಲ್ಲವೇ?
*ಆಸೆಯೇ ದುಃಖಕ್ಕೆ ಮೂಲ, ಮನದ ಮುಂದಣ ಆಸೆಯೇ ಮಾಯೆ*.
ಮನದ ಮುಂದಣ ಅಂದದ ಮಾಯೆಗೆ ಬೆನ್ನು ಹತ್ತಿ ನರಳಿ ವರ್ತಮಾನದ ಸುಖ ಕಳೆದುಕೊಳ್ಳುತ್ತೇವೆ.
ಕೀರ್ತಿ ಶನಿಯ ಹೆಗಲೇರಿಸಿಕೊಂಡು ಅದರ ಮೂಲಕ ಹೆಣ್ಣು-ಹೊನ್ನು-ಮಣ್ಣು ಸುಲಭವಾಗಿ ದಕ್ಕಲಿ ಎಂಬ ಹೊಸ ಖಯಾಲಿ.
ಅದಕ್ಕಾಗಿಯೇ ಈ #metoo, #wetoo ರೋಗಗಳ ಹರಿದಾಟ. ಎಲ್ಲ ಕಾನೂನು ಹಾಗೂ ನಿಯಮಗಳ ದುರುಪಯೋಗದ ಹಪಾಹಪಿ.
ಕೀರ್ತಿ ಗಳಿಸಲು, ಮೇಲೆರಲು ಕಂಡ ಕಂಡವರ ಕಾಲು ನೆಕ್ಕಿ, ಹಿಡಿದು, ಹೊಗಳಿ, ಸಾಧ್ಯವಾದರೆ ತಲೇನೂ ಹಿಡಿಯುವ ಅಸಹ್ಯ.
ಹೀನ ಕೆಲಸ ಮಾಡದವರು ಬೇಗ ಮೇಲೇರುವುದಿಲ್ಲ, ಸ್ವಯಂಪ್ರತಿಭೆ ಇದ್ದವರು ನಿಧಾನವಾಗಿಯಾದರೂ ಮೇಲೇರುತ್ತಾರೆ.
ಹಾಗೆ ಸಾಧಿಸಲು ಅಪಾರ ಸಹನೆ, ಸಂಯಮ ಬೇಕು.
ಆ ಸಂಯಮ ಇದ್ದರೆ ಖಂಡಿತವಾಗಿ ಪೊಯಟಿಕ್ ಜಸ್ಟಿಸ್ ತನ್ನ ಅರ್ಥ ಉಳಿಸಿಕೊಳ್ಳುತ್ತದೆ.
ಜಗದ ಮೊಟ್ಟ ಮೊದಲ ಲಿಬರೇಟೆಡ್ ಮಹಿಳೆ, ಮೊದಲ ಕವಿ, ಆಧ್ಯಾತ್ಮ ಸಾಧಕಿ *ಅಕ್ಕಮಹಾದೇವಿ* ಯಾವುದೇ #metoo ಆರೋಪ ಮಾಡದೇ ದಟ್ಟ ಕಾಡಲಿ ಏಕಾಂಗಿಯಾಗಿ ಸಂಚರಿಸಿ ಮಹಿಳೆಯ ನೈತಿಕ ಮಟ್ಟದ ಹಿರಿಮೆ ಮರೆದ ಮಹಾ ಚಲುವೆ. ಅನುಭವ ಮಂಟಪದ ಶರಣರ ಪಾಲಿನ ದೊಡ್ಡಕ್ಕಳಾದಳು.
ಕೌಶಿಕ ಮಹಾರಾಜನ ದುಷ್ಟ ಬಾಹುಗಳಿಗೂ ದಕ್ಕಲಿಲ್ಲ.
ನಮಗೆ ಅಕ್ಕ ಹಾಗೂ ಈ ದೇಶದ ಲಕ್ಷಾಂತರ ಗ್ರಾಮೀಣ ಮಹಿಳೆಯರು, ಆದರ್ಶ ಗೃಹಿಣಿಯರು ಮಾದರಿಯಾಗಬೇಕು. ಅವರು ತಮ್ಮನ್ನು ಕೆಣಕುವ ಕಾಮುಕರಿಗೆ *ಯಾಕೋ ಭಾಡ್ಕೋ ಹೆಂಗಿದೆ ಮೈಗೆ* ಎಂದು ಅಲ್ಲೇ ಜಾಡಿಸಿ ಒದ್ದು ಹೋಗಿ ಕಣ್ಣು ತೆರೆಸುತ್ತಾರೆ, #ಮೀಟೂ #ಮಿಟೂ ಎಂದು ಆರೋಪ ಮಾಡದೇ. ಯಾವುದೇ ಕಾನೂನು ಕೈಗೆ ತೆಗೆದುಕೊಳ್ಳದೆ ಚಾರಿತ್ರ್ಯವೆಂಬ ಆತ್ಮವಿಶ್ವಾಸದ ಆಯುಧದ ಮೂಲಕ ತಮ್ಮನ್ನು ಸಂರಕ್ಷಿಸಿಕೊಂಡಿರುತ್ತಾರೆ.
ಮಹತ್ವಾಕಾಂಕ್ಷೆ, ಹಣ, ಪ್ರಚಾರದ ಬೆನ್ನು ಹತ್ತಿದವರು, ಕೀರ್ತಿ ಶನಿಯ ಹೆಗಲಿಗೆ ಏರಿಸಿಕೊಂಡವರ ದೌರ್ಬಲ್ಯವ ಗುರುತಿಸಿ ಕಾಮುಕರು ಕೌಶಿಕರಾಗುತ್ತಾರೆ.
ಅಸಹಾಯಕತೆ ಹೇಳಿಕೊಂಡು ನೆರವು ಕೇಳಲು ಬರುವವರನ್ನು ಸಹಾಯದ ಮುಖವಾಡದಿ ಶೋಷಣೆ ಮಾಡುವ ಜನ ಕೂಡ ಇದ್ದಾರೆ. ಮುಖವಾಡಗಳ ಅರಿಯುವ ವಾತಾವರಣ ಸೃಷ್ಟಿ ಮಾಡಬೇಕು.
ಆಂತರಿಕ ನೈತಿಕ ತಾಕತ್ತು ಹೊಂದಿದ, ಗಟ್ಟಿ ಮನಸಿನ ಸುಂದರ ಮಹಿಳೆಯರ ತಂಟೆಗೆ ಕಾಮುಕರು ಯಾಕೆ ಹಾಯುವುದಿಲ್ಲ?.
ಇಲ್ಲಿ ಕೂಡ ಕೊಂಡುಕೊಳ್ಳುವ ಪ್ರಯೋಗದ ನಂತರ ನಿರ್ಧರಿಸುತ್ತಾರೆ.
*ಕಡೇ ಮಾತು*
*ಮನದ ತುಂಬ ಆಸೆಗಳ, ಕಣ್ಣ ತುಂಬ ಕನಸುಗಳ, ಮೈತುಂಬ ಸೌಂದರ್ಯ ಇಟ್ಟುಕೊಂಡಿರುವ ನನ್ನ ಮಕ್ಕಳ ಸಮಾನರಾದ ಹುಡುಗಿಯರ ಮನಸ್ಥಿತಿ ಗಟ್ಟಿಗೊಳಿಸಲು ಮಿಟೂ ಬಳಕೆಯಾಗಲಿ*.
ಯಾವುದೋ ಕಾಲದಲ್ಲಿ ನಡೆದ ಘಟನೆಗಳನ್ನು ಕೆದಕಿ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡಬಾರದು. ಆಗ ಸುಮ್ಮನಿದ್ದು ಏಣಿ ಏರಿದ ಮೇಲೆ ಈಗ ಹಾರಾಡಿ ವಿಕೃತರನ್ನು ಇನ್ನೂ ವಿಕೃತಗೊಳಿಸಬಾರದು.
ಹೋರಾಟಗಳು ಹಾದಿ ತಪ್ಪಿ ದುರುಪಯೋಗಬಾರದು.
#ಸಿದ್ದು ಯಾಪಲಪರವಿ.
No comments:
Post a Comment