*ಅಮಿತಾಬ್ ಎಂಬ ಎತ್ತರದ ಮನುಷ್ಯ*
ಭಾರತೀಯ ಸಿನಿರಂಗದಲಿ ಸೂಪರ್ ಸ್ಟಾರ್ ಪಟ್ಟ ಈ ತನಕ ಉಳಿಸಿಕೊಂಡಿರುವ ಏಕೈಕ ಎತ್ತರದ ನಟ ಅಮಿತಾಬ್ ಬಚ್ಚನ್. Tall man ಪದದ ಅನ್ವರ್ಥಕ ಈ ಅಮಿತಾಬ್.
ಹಿರಿಯ ಕವಿಯ ಮಗನಾಗಿ, ದೇಶದ ಪ್ರಭಾವಿ ನೆಹರು ಮನೆತನದ ಸ್ನೇಹಿತನಾಗಿ ಮನಸು ಮಾಡಿದರೆ ಏನೆಲ್ಲ ಆಗಬಹುದಿತ್ತು, ಉನ್ನತ ಹುದ್ದೆಯನ್ನು ಅಲಂಕರಿಸಬಹುದಿತ್ತು.
But he gave preference to his passion of acting.
ಆದರೆ ಅಮಿತಾಬ್ ದೇಹ,ಧ್ವನಿ ಅದಕ್ಕೆ ಪೂರಕವಾಗಿರಲಿಲ್ಲ ಎಂದು ತಿರಸ್ಕರಿಲ್ಪಟ್ಟರೂ ಹಿಡಿದ ಹಟ ಬಿಡಲಿಲ್ಲ.
ನಟನಾಗಬೇಕೆಂಬ ಪಣ ತೊಟ್ಟ ಸಾಧಕ.
ಇಡೀ ಇತಿಹಾಸ ನಮ್ಮ ಕಣ್ಣ ಮುಂದಿದೆ. ಅವನ ಸಿನೆಮಾ ಪಯಣ ಇಡೀ ಜಗತ್ತಿಗೆ ಗೊತ್ತಿದೆ.
ಸಣ್ಣಪಾತ್ರಗಳಿಂದ ಆರಂಭವಾಗಿ ಸೂಪರ್ ಸ್ಟಾರ್ ಆದ ಮೇಲೆ ಅನುಭವಿಸಿದ ಯಾತನೆ, ಅವಮಾನ, ಅನಾರೋಗ್ಯ ಯಾರೂ ಅನುಭವಿಸಿಲ್ಲ.
ಕೆಲವರು ಅನುಭವಿಸಿ ನರಳಿ ಕಣ್ಮರೆಯಾಗಿ ನಾಶವಾಗಿದ್ದರೆ.
ಅಮಿತಾಬ್ ನಾಶವಾಗಲು ಅವಕಾಶ ಕೊಡಲಿಲ್ಲ. ಖಾಸಗಿ ಬದುಕಿನಲ್ಲಿಯೂ ಹೀರೊ ಆಗಿ ಇಂದಿಗೂ ಮೆರೆಯುತ್ತಲೇ ಇದ್ದಾರೆ.
ಸೋಲು, ಅವಮಾನ, ಆರ್ಥಿಕ ಸಂಕಷ್ಟ, ಅನಾರೋಗ್ಯ, ವಿಫಲ ಪ್ರೇಮ, ಸಾರ್ವಜನಿಕ ಬದುಕಿನ ವೈಫಲ್ಯದಂತಹ ನೇತಾತ್ಮಕ ಸಂಗತಿಗಳು ಘಟಿಸಿದಾಗ ಎದೆ ಒಡೆದು ಸತ್ತವರೇ ಹೆಚ್ಚು, ಅವರೆಂದು ನಮಗೆ ಆದರ್ಶಪ್ರಾಯರಾಗಲಾರರು, ಆಗಲೂಬಾರದು.
ನಾವು ಅಬ್ಬಬ್ಬ ಅಂದರೆ ಆರೋಗ್ಯ ಪೂರ್ಣವಾಗಿ ಎಪ್ಪತ್ತು ವರ್ಷ ಬದುಕುತ್ತೇವೆ. ನಂತರದ್ದೆಲ್ಲ ಬರೀ ಬೋನಸ್.
ಆ ಹಂತದೊಳಗೆ ಅನಿರೀಕ್ಷಿತವಾಗಿ ಅಪ್ಪಳಿಸುವ ಸಂಕಷ್ಟಗಳನ್ನು ಎದುರಿಸಿ ಬದುಕಿ, ಹೊಸ ಬದುಕನ್ನು ಕಟ್ಟಿಕೊಳ್ಳಲೇಬೇಕು. ಹಾಗೆ ಬದುಕಲು ಕೆಲವರು ಪ್ರೇರಕರಾಗುತ್ತಾರೆ.
*ನಾನು ದಶಕದಿಂದ ನಡೆಸಿಕೊಡುತ್ತಿರುವ Joyful Living ಎಂಬ Life skill ತರಬೇತಿಯಲ್ಲಿ ಅಮಿತಾಬ್ ನೆನಪಾಗಿ ಕಾಡುತ್ತಾನೆ*.
ತನಗೆ ಆದ ಅನೇಕ ಅವಮಾನಗಳನ್ನು ನೇರವಾಗಿ ಹೇಳಿಕೊಳ್ಳವ ಎದೆಗಾರಿಕೆ ಇದೆ. ನೈತಿಕ ವಿಶ್ವಾಸ ಕಳೆದುಕೊಳ್ಳದೇ ಅಮಿತಾಬ್ ವಯಸ್ಸಾದ ಮೇಲೂ ಬದುಕು ಕಟ್ಟಿಕೊಂಡದ್ದು ಪವಾಡವೇ ಸರಿ.
ಕಲಾವಿದರು, ಕ್ರಿಯಾಶೀಲ ವ್ಯಕ್ತಿಗಳಿಗೆ ಭಂಡತನ ಇರುವುದಿಲ್ಲ. ಸಣ್ಣ ಸಮಸ್ಯೆಗಳನ್ನು ಭಾವನಾತ್ಮಕವಾಗಿ ಸ್ವೀಕರಿಸಿ ನರಳುತ್ತಾರೆ.
ಅನೇಕ ಕಲಾವಿದರು ಎದುರಿಸಲಾಗದೇ ಆತ್ಮಹತ್ಯೆಗೆ ಶರಣಾಗಿ ಕೆಟ್ಟ ಆದರ್ಶವಾಗುತ್ತಾರೆ.
ಅಂತಹ ಅನೇಕ ಪ್ರಸಂಗಗಳನ್ನು ಸಮರ್ಥವಾಗಿ ಎದುರಿಸಿ ಮತ್ತೆ ಇನ್ನೂ ಬಾನೆತ್ತರಕೆ ಬೆಳೆದವನೇ ಈ ಬಚ್ಚನ್.
ಅದರಲ್ಲೂ ಸೆಲಿಬ್ರಿಟಿಗಳಿಗೆ ಸಂಕಷ್ಟ ಬಂದಾಗ ಅದು ಬೇಗ ಬಯಲಾಗಿ ದೊಡ್ಡ ದುರಂತ ಎಂಬಂತೆ ಬಿಂಬಿಸಲಾಗುತ್ತದೆ.
ಅದಕ್ಕಾಗಿ ವಿಲಿಯಂ ಶೇಕ್ಸ್‌ಪಿಯರ್ ತನ್ನ ದುರಂತ ನಾಟಕಗಳಲಿ ದೊಡ್ಡವರ ಸಂಕಷ್ಟಗಳನ್ನು ತೋರಿದ್ದಾನೆ.
ಜನಸಾಮಾನ್ಯರ ಸಂಕಷ್ಟಗಳಿಗೆ ಬೆಲೆ ಬರದೇ ಹಾಗೆ ಮಾಯವಾಗಿ ಇತಿಹಾಸ ಸೇರಿ ಬಿಡುತ್ತವೆ.
ಆರಂಭದ ಅವಮಾನಗಳನ್ನು ಮೆಟ್ಟಿ ಬೆಳೆದ ಮೇಲೆ ಅಮಿತಾಬ್ ಅನಗತ್ಯ ರಿಸ್ಕ್ ಎಳೆದುಕೊಂಡರು.
ಸ್ನೇಹಿತನನ್ನು ಬೆಂಬಲಿಸಲು ರಾಜಕೀಯ ಸೇರಿದ್ದು ಮೊದಲನೇ ತಪ್ಪು.
ಕ್ರಿಯಾಶೀಲ ಕಲಾವಿದರಿಗೆ ರಾಜಕಾರಣ ಸುಲಭವಾಗಿ ಜೀರ್ಣವಾಗುವುದಿಲ್ಲ. ಅಸೂಕ್ಷ್ಮ ಭಂಡತನವೂ ಬೇಕಾಗುತ್ತದೆ. ಥಳುಕು ಬಳುಕಿನ ಅಭಿನಯದ ನಟರೇ ನಾಚುವಂತ ನಟನೆ ರಾಜಕಾರಣದಲ್ಲಿರುತ್ತದೆ.
ಮುಖವಾಡದ ಬದುಕಿನ ಕಹಿ ಕಂಡು ಬೇಗ ಹೊರಗೆ ಓಡಿ ಬಂದ ಬಚ್ಚನ್ ಎದುರಿಸಿದ ಎರಡನೇ ದೊಡ್ಡ ಸಂಕಷ್ಟ ABCL, ನಿಜ ಕಲಾವಿದರು ವ್ಯಾಪಾರಿಗಳಾಗುವುದು ಬಹಳ ಕಷ್ಟ ಎಲ್ಲೋ ಸಾವಿರಕೊಬ್ಬರು ವ್ಯವಹಾರ ಚಾಣಾಕ್ಷತನ ರೂಪಿಸಿಕೊಂಡಿರುತ್ತಾರೆ.
ತಮ್ಮ ಸೂಪರ್ ಸ್ಟಾರ್ ಖ್ಯಾತಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಲೆಕ್ಕಾಚಾರ ತಲೆಕೆಳಗಾಗಿ ಅಪಾರ ಹಾನಿ ಅನುಭವಿಸುತ್ತಾರೆ.
ಆರ್ಥಿಕ ಸಂಕಷ್ಟ ಕಲಾವಿದನಿಗೆ ಭೀಕರ ಅನಿಸಿಬಿಡುತ್ತದೆ. ರಾಜಕಾರಣದ ಸ್ನೇಹಿತರು ಮನಸು ಮಾಡಿದ್ದರೆ ಅದು ದೊಡ್ಡ ಸಂಗತಿಯಾಗುತ್ತಿರಲಿಲ್ಲ. ಆದರೆ ಅವರ ನೆರವು ಬೇಡ ಎನಿಸಿದ್ದು ಸಹಜ.
ಏನೇ ಆಗಲಿ ತನ್ನ ಪ್ರತಿಭೆಯ ಮೂಲಕ ಕಳೆದುಕೊಂಡದ್ದು ಮರಳಿ ಪಡೆಯುವ ಪಣ ತೊಡುತ್ತಾರೆ.
ಈ ಮಧ್ಯೆ ಕೂಲಿ ಶೂಟಿಂಗ್ ಸಂದರ್ಭದ ಆಘಾತ ಎಲ್ಲಕ್ಕಿಂತ ಭೀಕರ. ನಟರು ದೈಹಿಕವಾಗಿ ಊನವಾದರೆ ಮುಗಿಯಿತು, ಜೀವಂತ ಹೆಣ.
ದೈಹಿಕವಾಗಿ ಬಹುಬಾಗ ಜರ್ಜರಿತಗೊಂಡರೂ ಮನಸು ಗಟ್ಟಿಯಾಗಿತ್ತು, ಹಾಗೆ ಇಚ್ಛಾಶಕ್ತಿ ಕೂಡ. ಅಮಿತಾಬ್ ಕತೆ ಮುಗಿಯಿತು ಅಂದುಕೊಂಡರು. ಆದರೆ ಅದು ಮುಗಿಯಲು ಅಮಿತಾಬ್ ಅವಕಾಶ ನೀಡಲೇ ಇಲ್ಲ. ಅದೇ ಅವನ ಅದಮ್ಯ ಶಕ್ತಿ.
ಇಷ್ಟೇ ಸಾಲದು ಎಂಬಂತೆ ಖಾಸಗಿ ಬದುಕು ಛಿದ್ರವಾಗಿತ್ತು. ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ತಾವೇ ಮಾನಸಿಕವಾಗಿ ದೂರ ಮಾಡಿಕೊಂಡು, ಮೋಹಕ ನಟಿ ರೇಖಾಳನ್ನು ಹತ್ತಿರ ಎದೆ ಮೇಲೆ ಎಳೆದುಕೊಂಡಿದ್ದರು.
ಈ ಗಾಸಿಪ್ ಸರಳವಾಗಿ ತೆಗೆದುಕೊಳ್ಳುವ ತಾಕತ್ತು ಇಬ್ಬರಲ್ಲೂ ಮೇಲ್ನೋಟಕ್ಕೆ ಮಾತ್ರ ಕಾಣಿಸುತ್ತಿತ್ತು ಆದರೆ ಆಂತರಿಕವಾಗಿ ದೂರ ಸರಿದಿದ್ದರು. ಅಮಿತಾಬ್-ರೇಖಾ ಆನ್ ಸ್ಕ್ರೀನ್ ಜೋಡಿಯನ್ನು ಅಭಿಮಾನಿಗಳೂ ಒಪ್ಪಿಕೊಂಡಿದ್ದರು.
ಈ ಬೇಗುದಿ ಜ್ವಾಲಾಮುಖಿಯಾಗುವ ಮೊದಲೇ ಅಪಘಾತದ ನಂತರ ಅಮಿತಾಬ್ ಅಸಹಾಯಕರಾಗಿ ಕುಟುಂಬದ ಪಾಲಾದರು. ಇದೇ ಕತೆ ಸಿಲ್ ಸಿಲಾ ಸಿನೆಮಾ ಕೂಡಾ ಆದದ್ದು ಇತಿಹಾಸ.
ರೇಖಾ ಬಲಿಪಶುವಾಗಿ ಚಿರಯೌವ್ವನೆಯಂತೆ ಕಾಯುತ್ತಲೇ ಇದ್ದಾರೆ.
ಸೂಕ್ಷ್ಮವಾಗಿ ಅನುಭೂತಿಯಿಂದ ಗಮನಿಸಿದರೆ ಆ ಸತ್ಯ ಕಂಡೇ ಕಾಣುತ್ತದೆ. ಮಾನಸಿಕವಾಗಿ ಅಮಿತಾಬ್-ರೇಖಾ ಈಗಲೂ ಒಂದಾಗಿಯೇ ಇದ್ದಾರೆ.
*ಈ ಬದುಕೇ ಒಂದು ಮಹಾಕಾವ್ಯ. ದೂರವಿದ್ದವರು ಎದೆಯೊಳಗೆ ಅಡಗಿ ಕುಳಿತುಬಿಡುತ್ತಾರೆ. ಜೊತೆಗಿದ್ದವರು ದೂರಾಗಿ ಇರುತ್ತಾರೆ. ಸತ್ಯ ಕಣ್ಣಿಗೆ ಕಾಣದ ಮನದ ಮಾತಾಗಿ ತೆರೆ ಮರೆಯ ಆಟವಾಗಿ ಕಾಡುತ್ತಲೇ ಇರುತ್ತೆ*.
ಈ ನೋವನ್ನು ಕುಟುಂಬದ ನೆಮ್ಮದಿಗಾಗಿ ನಂಜುಂಡ ಬಚ್ಚನ್ ಹೊಸ ಇನ್ನಿಂಗ್ಸ್ ಆರಂಭಿಸಿದರು.
ದೊಡ್ಡ ಪರದೆಯ ಸೂಪರ್ ಸ್ಟಾರ್ ಆದವರು ಕಿರು ತೆರೆ ಮೇಲೆ ಕಾಣಿಸಿಕೊಳ್ಳುವುದು ಅವಮಾನ ಅಂದುಕೊಂಡ ಅನೇಕ ನಟರು ನೇಪತ್ಯಕೆ ಸರಿದಿದ್ದರು.
ಬಚ್ಚನ್ ಹಾಗೆಂದುಕೊಳ್ಳದೇ ಭಿನ್ನ ಆಯಾಮದ ಮೂಲಕ ಕರೋಡಪತಿ ಒಪ್ಪಿಕೊಂಡು ಹೊಸ ಭಾಷ್ಯ ಬರೆದರು, ಅವರು ಅಲ್ಲಿಯೂ ಸೂಪರ್ ಸ್ಟಾರ್.
ವೈಯಕ್ತಿಕವಾಗಿ ಕರೋಡಪತಿಯೂ ಆದರು. ಮಹಾನ್ ದಿವಾಳಿಕೋರ ಪಟ್ಟದಿಂದ ಕೆಳಗಿಳಿದು ಸಾವಿರ ಕೋಟಿಯ ಸಿಂಹಾಸನ ಏರಿದರು.
ಸಾಲು ಸಾಲು ಸಿನೆಮಾಗಳು, ಸಾವಿರಾರು ಜಾಹಿರಾತುಗಳು ಸಿಕ್ಕ ಸಣ್ಣ ಅವಕಾಶಗಳನ್ನು ಧಿಕ್ಕರಿಸದೇ ಸದು ವಿನಯ ಮೆರೆದರು.
ಈಗ ಅವರಿಗೆ ಹಣ ಮುಖ್ಯ ಅಲ್ಲ, ಅದು ಬೇಕಾಗಿಯೂ ಇಲ್ಲ. ಬೇಕಾದದ್ದು ಮೈತುಂಬ ಕೆಲಸ, ಅಪಾರ ಖ್ಯಾತಿ, ಕೊನೆ ಉಸಿರು ಇರೋ ತನಕ ಕಲಾವಿದ ತೆರೆ ಮೇಲೆ ಅಮರನಾಗಿರಲಿ ಎಂಬ ಜೀವಚೈತನ್ಯ, ಜೀವನೋತ್ಸಾಹ.
ಒಂದು ವೇಳೆ ಅಸಹಾಯಕರಾಗಿ ಕೈಕಟ್ಟಿ ಕುಳಿತಿದ್ದರೆ, ಆತ್ಮಹತ್ಯೆ ಮಾಡಿಕೊಂಡಿದ್ದರೆ ಲೋಕಕ್ಕೆ ಹೀರೋ ಆಗುತ್ತಿರಲಿಲ್ಲ.
ಅಮಿತಾಬ್ ಬರೀ ಪರದೆ ಮೇಲೆ ಸೂಪರ್ ಸ್ಟಾರ್ ಅಲ್ಲ ಖಾಸಗಿ ಬದುಕಿನಲ್ಲಿಯೂ ಸೂಪರ್ ಹೀರೊ.
ಸೆಲೆಬ್ರಿಟಿ ಆಗುವ ಕನಸು ಕಾಣುವ ಯುವಕರು ನಾಚುವಂತೆ ಸೆಟ್ ಮೇಲೆ ಕಾಣಿಸಿಕೊಳ್ಳುವ ಸರಳತೆಯನ್ನೂ ಕಾಪಿಟ್ಟುಕೊಂಡಿದ್ದು ಅನುಕರಣೀಯ ಆದರ್ಶ.
ಬೊಗಸೆಗಟ್ಟಲೇ ಮಾತ್ರೆ ದೇಹ ಸೇರುತ್ತಿದ್ದರೂ, ನೋವು ಹಿಂಡಿ ಹಿಪ್ಪೆ ಮಾಡಿದರೂ ಅದನ್ನೆಲ್ಲ ಮರೆ ಮಾಚಿ ನಸು ನಗುತ್ತ ನಟಿಸುತ್ತಲೇ ಇದ್ದಾರೆ.
ಇರಲಿ ಹೀಗೆ ನೂರಾರು ಕಾಲ ನಮಗೆಲ್ಲ ಆದರ್ಶಪ್ರಾಯರಾಗಿ.
ಹೋದವರು ಹೋಗಿಯೇ ಬಿಡುತ್ತಾರೆ ಆದರೆ ನಟರು ಬೆಳ್ಳಿ ಪರದೆ ಮೇಲೆ ಸದಾ ನಕ್ಷತ್ರಗಳ ಹಾಗೆ ಹೊಳೆಯುತ್ತ ಅಮರರಾಗಿ ಅಜರಾಮರವಾಗಿರುತ್ತಾರೆ.
*ಅದಕ್ಕೆ You are the Star Soul…*
*Many happy returns of the day Amithab Ji…*
*ಸಿದ್ದು ಯಾಪಲಪರವಿ*
No comments:
Post a Comment