*ಸಾಮಾಜಿಕ ನ್ಯಾಯ, ಜನಪರ ಹೋರಾಟಗಳ ಸಂತ: ಕನ್ನಡದ ಜಗದ್ಗುರು ಡಾ.ತೋಂಟದಾರ್ಯ ಸ್ವಾಮಿಗಳು*
ಧಾರ್ಮಿಕ ಮಡಿವಂತನೆಗಳನ್ನು ಸಾರಾಸಗಟ ತಿರಸ್ಕರಿಸಿ ಮೂಲಭೂತ ಸಂಪ್ರದಾಯವಾದಿಗಳ ಬಾಯಿ ಮುಚ್ಚಿಸಿದ ಶ್ರೇಯಸ್ಸು ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮಿಗಳಿಗೆ ಸಲ್ಲುತ್ತದೆ.
೧೯೭೪ ರಲ್ಲಿ ಪೀಠಾರೋಹಣದ ನಂತರ ಅನೇಕ ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟರು. ಪೀಠ ಪರಂಪರೆಯ ನೆಪದಲ್ಲಿ ಆಚರಿಸುತ್ತಿದ್ದ ಮೂಢ ನಂಬಿಕೆಗಳನ್ನು ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಬದಲಾಯಿಸಿದರು.
ಜಾತ್ರೆಯ ಸಂದರ್ಭದಲ್ಲಿ ತೇರಿನ ಗಾಲಿಗೆ ಅನ್ನ ಹಾಕುವುದನ್ನು ತಡೆದರು. ಹಸಿದವರು ತಿನ್ನುವ ಅನ್ನ ಪ್ರಸಾದಕ್ಕೆ ಸಮ, ಅದನ್ನು ಗಾಲಿಗೆ ಸುರಿಯುವುದು ಮೂರ್ಖತನವನ್ನು ವೈಚಾರಿಕವಾಗಿ ಪ್ರಶ್ನಿಸಿದ್ದನ್ನು ಅನೇಕ ಮಠಾಧೀಶರು ಇಷ್ಟಪಡಲಿಲ್ಲ.
ಸ್ವಾಮಿಗಳು ಭಕ್ತರು ಹೊರುವ ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಮೆರೆಯುವುದು ಅಮಾನವೀಯ ಎಂದು ಘೋಷಿಸಿ ಪಾದಯಾತ್ರೆ ಮೂಲಕ ಜಾತ್ರೆಯಲ್ಲಿ ಭಾಗವಹಿಸಿದರು.
ಇವರ ಸಿಂಹ ಘರ್ಜನೆಯ ಮಾತುಗಳ ಕೇಳಿ ಸಂಪ್ರದಾಯವಾದಿಗಳು ಬಾಲ ಮುದುರಿಕೊಂಡರು.
ಬಸವಾದಿ ಶರಣರ ವಚನಗಳನ್ನು, ಕನ್ನಡ ಸಾಹಿತ್ಯದ ಪ್ರಗತಿಶೀಲ, ನವ್ಯ ಸಾಹಿತ್ಯದ ಒಡನಾಡಿಯೂ ಆಗಿದ್ದ ಶ್ರೀಗಳು ಹಂತ ಹಂತವಾಗಿ ಸರಳೆತೆಯನ್ನು ಜಾರಿಗೊಳಿಸಿದರು.
ಸ್ವಾಮಿಗಳು ಪೂಜೆ, ಧ್ಯಾನಗಳ ಮೂಲಕ ಭಕ್ತರು ಕೊಡುವ ಕಾಣಿಕೆ, ಪ್ರಸಾದ ತಿಂದು ಕಾಲ ಕಳೆಯಲಿ ಎಂಬ ವಾದವನ್ನು ಕಠೋರವಾಗಿ ಪ್ರಶ್ನಿಸಿದರು. ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಕಲಿಸಿದ ಜಾತ್ಯಾತೀತ ಮೌಲ್ಯಗಳ ಅನುಸಂಧಾನವನ್ನು ಪ್ರತಿ ಸೋಮವಾರದ ಶಿವಾನುಭವ ಚಿಂತನ ಗೋಷ್ಟಿಗಳ ಮೂಲಕ ಚರ್ಚೆಗೆ ಒಡ್ಡಿದರು.
ಎಡಪಂಥೀಯ ವಿಚಾರವಾದಿಗಳಿಗೆ ವೇದಿಕೆ ಮೇಲೆ ಅಭಿಪ್ರಾಯ ಹಂಚಿಕೊಳ್ಳುವ ಅವಕಾಶ ಕಲ್ಪಿಸಿದರು.
ಈಗ ಎರಡು ಸಾವಿರ ಗಡಿ ದಾಟಿರುವ ಶಿವಾನುಭವಗಳಿಗೀಗ ಗಿನ್ನಿಸ್ ದಾಖಲೆ.
ದೀನ ದಲಿತರು, ಮುಸ್ಲಿಂ , ಕ್ರಿಶ್ಚಿಯನ್ ಹಾಗೂ ಇತರ ಸಮುದಾಯದ ಹಬ್ಬಗಳನ್ನು ಮಠದ ಶಿವಾನುಭವಗಳಲ್ಲಿ ಆಚರಿಸಿದ ಮೊದಲ ಲಿಂಗಾಯತ ಮಠಾಧೀಶರು.
ಅನ್ಯ ಧರ್ಮೀಯರನ್ನು ಮಠದಲ್ಲಿ ಅಷ್ಟೇ ಅಲ್ಲ, ತಮ್ಮ ಪೂಜಾ ಮಂದಿರದಲ್ಲಿ ಕರೆದುಕೊಂಡು ಊಟ ಮಾಡಿದರು.
ಮಠಕ್ಕೆ ಬರುವ ಅತಿಥಿಗಳ ಜೊತೆ ಸಮೂಹ ಪಂಕ್ತಿ ಭೋಜನ ಮಾಡಲಾರಂಭಿಸಿದರು. ದಲಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ನೀಡಿದರು. ಜಾತಿ ಕೇಳುವ ಅಮಾನವೀಯತೆಯ ಕೈ ಬಿಟ್ಟರು. ಭಕ್ತ ಸಮೂಹಕ್ಕೆ ಆರಂಭದಲ್ಲಿ ಇದು ಆಘಾತಕಾರಿ ಅನಿಸಿದರೂ, ತಮಗೆ ಮನಸ್ಸಿರದಿದ್ದರೂ ಪೂಜ್ಯರ ಇಚ್ಛಾಶಕ್ತಿಗೆ ಶರಣಾಗಿ ಮೌನ ತಾಳಿದರು.
ಸ್ವಾಮಿಗಳಿಗೂ ಸಾಮಾಜಿಕ ಹೋರಾಟಕ್ಕೂ ಸಂಬಂಧವೇ ಇಲ್ಲದ ಕಾಲಘಟ್ಟದಲ್ಲಿ ಕನ್ನಡ ಪರ ಗೋಕಾಕ ಚಳುವಳಿಯಲ್ಲಿ ಭಾಗವಹಿಸಿ ಅನೇಕ ಸಂಪ್ರದಾಯವಾದಿ ಮಠಾಧೀಶರ ಪಾಲಿನ ಬಿಸಿ ತುಪ್ಪವಾದರು.
“ಸ್ವಾಮಿ ಮಠದ ಒಳಗ ಗೌಪ್ಯವಾಗಿ ಕುಂತರ ಕೆಡತಾನ , ಅವನ ಖಾಸಗಿ ಬದುಕು ತೆರೆದ ಪುಸ್ತಕಧಂಗ ಇರಬೇಕು” ಎಂದು ಸಾರ್ವಜನಿಕ ಜೀವನ ಪ್ರವೇಶಿಸಲು ಕರೆ ಕೊಟ್ಟರು.
ಗೋಕಾಕ ಚಳುವಳಿ ತೀವ್ರ ಸ್ವರೂಪ ಪಡೆಯಲು ತೋಂಟದಾರ್ಯ ಶ್ರೀಗಳ ಭಾಷಣ ಕಾರಣವಾಯಿತು.
ವೇದಾಂತ ಉಪದೇಶ ಮೂಲೆಗೆಸೆದು ವಾಸ್ತವ ಸಂಗತಿಗಳನ್ನು ಭಕ್ತರೊಡನೆ ಹಂಚಿಕೊಳ್ಳಲಾರಂಭಿಸಿದರು.
ಕಾಯಕ, ದಾಸೋಹದ ಪರಿಕಲ್ಪನೆಗೆ ಹೊಸ ಆಯಾಮ ಒದಗೊಸಲು ಡಂಬಳದ ಬಂಜರು ಭೂಮಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಬಾವಿ ತೋಡಿ ನೀರು ಬರಿಸಿ ವ್ಯವಸಾಯ ಪ್ರಾರಂಭಿಸಿದ್ದನ್ನು ಅನೇಕರು ಮರೆತಿಲ್ಲ.
“ಸ್ವಾಮಿತ್ವ ಅಂದರೆ ಅರಸೊತ್ತಿಗೆಯಲ್ಲ, ನಿಜ ಕಾಯಕವಾಗಬೇಕು ಎಂಬುದನ್ನು ಸ್ವತಃ ದುಡಿದು ತೋರಿಸಿದರು.
ಆಧುನಿಕ ಮಠಾಧೀಶರು ತಮ್ಮ ಪೂಜಾ ಕೊಠಡಿ ಬಿಟ್ಟು ಹೊರ ಬಂದ ಉದಾಹರಣೆಗೆ ಆಗ ಇರಲಿಲ್ಲ.
ಮುಂಡರಗಿ ತಾಲೂಕಿನ ಹಿಂದುಳಿದ ಹಳ್ಳಿ ಡಂಬಳದ ಅಭಿವೃದ್ಧಿಗೆ ತಾವೇ ಮುಂದಾದರು. ರೈತರ ಕಲ್ಯಾಣ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸಲು ಗದುಗಿನಿಂದ ಡಂಬಳಕೆ ಪ್ರತಿ ಅಮವಾಸ್ಯೆಯೆಂದು ಹತ್ತು ವರ್ಷ ಪಾದಯಾತ್ರೆ
ಮಾಡಿದರು. ಅಭಿವೃದ್ಧಿ ಕಾಣುವ ತನಕ ನಿಲ್ಲಿಸಲೇ ಇಲ್ಲ.
ಧಾರ್ಮಿಕ ಜಾತ್ರೆ ರೈತರ ರೊಟ್ಟಿ ಜಾತ್ರೆಯಾಗಿ ಪರಿವರ್ತನೆಯಾಯಿತು. ಪ್ರತಿ ಮನೆಯಿಂದ ರೊಟ್ಟಿ ಸಂಗ್ರಹಿಸಿ ಸಾಮೂಹಿಕ ಊಟ ಮಾಡುವ ಪಾಲ್ಗೊಳ್ಳುವಿಕೆ ಗ್ರಾಮ ಸಾಮರಸ್ಯ ಕಾಪಾಡಲು ಕಾರಣವಾಯಿತು.
ತೊಂಬತ್ತರ ದಶಕದ ಅದ್ವಾನಿಯವರ ರಥಯಾತ್ರೆಯ ಪುರುಷಾರ್ಥವನ್ನು ಧಾರವಾಡದ ಸಭೆಯಲ್ಲಿ ಬಹಿರಂಗವಾಗಿ ಪ್ರಶ್ನಿಸಿ ತಮ್ಮ ದಿಟ್ಟ ಎಡಪಂಥೀಯ ನಿಲುವನ್ನು ನಿರೂಪಿಸಿದರು.
ಭಗವಾ ಧ್ವಜದ ಟೀಕೆಯನ್ನು , ರಾಷ್ಟ್ರ ದ್ವಜದ ಟೀಕೆ ಎಂದು ತಿರುಚುವ ಪ್ರಯತ್ನಕ್ಕೆ ಸಮರ್ಪಕ ಉತ್ತರ ನೀಡುವ ಎದೆಗಾರಿಕೆ ತೋರಿಸಿದರು.
ಬಸತತ್ವ ನಿಷ್ಠೆಯುಳ್ಳ ಇಲಕಲ್ಲ ಮಹಾಂತ ಸ್ವಾಮಿಗಳು ಜಂಗಮೇತರ ಸಮಾಜದ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಸಂದರ್ಭದಲ್ಲಿ ಉಂಟಾದ ಗಲಭೆಯನ್ನು ತಮ್ಮ ಗಟ್ಟಿ ಬೆಂಬಲದಿಂದ ನಿಯಂತ್ರಿಸಿದರು.
ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಡಾ.ಎಂ.ಎಂ.ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ನೂರಾರು ಸಂಶೋಧನಾ ಗ್ರಂಥಗಳು, ಸಾವಿರಾರು ಸಾಹಿತ್ಯೇತರ ಅಪರೂಪದ ಐತಿಹಾಸಿಕ ಪುಸ್ತಕ ಪ್ರಕಟಿಸಿ ಪುಸ್ತಕ ಸ್ವಾಮೀಜಿ ಎಂದು ಖ್ಯಾತರಾದರು.
ಮಲಗಿ ಮುಲುಗುತ್ತಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಎಚ್ಚರಾಗುವಂತೆ ಮಾಡಿದರು.
ಡಾ. ಎಂ.ಎಂ. ಕಲಬುರ್ಗಿ ಅವರ ಬಸವ ತತ್ವ ಚಿಂತನೆಗಳಿಗೆ ಗಟ್ಟಿ ಧ್ವನಿಯಾದರು. ಅವರು ಗುಡುಗಿದರೆ ಮಡಿವಂತ ಪರಂಪರೆಗೆ ನಡುಕ ಹುಟ್ಟುತ್ತಿತ್ತು.
ಕಪ್ಪತಗುಡ್ಡ ವಿನಾಶದ ಅಂಚಿಗೆ ದೂಡುವ ರಾಜಕೀಯ ಸಂಚನ್ನು ಬಯಲು ಮಾಡಿ ರಕ್ಷಣೆಗೆ ಬದ್ಧರಾದರು. ಪೋಸ್ಕೋ ಬಹುರಾಷ್ಟ್ರೀಯ ಕಂಪನಿ ಜಿಲ್ಲೆಗೆ ಬರುವ ಸುಳಿವು ಸಿಕ್ಕ ಕೂಡಲೇ ಬೀದಿಗಿಳಿದರು.
ರೈತರಿಗೆ ಭೂಮಿ ಹಾಗೂ ಮಣ್ಣಿನ ಮಹತ್ವ ವಿವರಿಸಿ ಭೂಮಿ ನೀಡದಂತೆ ತಡೆಯೊಡ್ಡಿದರು
ಆ ಸಂದರ್ಭದಲ್ಲಿ ಪ್ರಭಾವ ಬೀರಲು ಯತ್ನಿಸಿದ ಸಚಿವರುಗಳನ್ನು ಹತ್ತಿರ ಸೇರಿಸಿಕೊಳ್ಳದೇ ಜಾಣ, ನಿಸ್ವಾರ್ಥ ನಡೆ ತೋರಿದರು.
“ನ್ಯಾಯ ನಿಷ್ಟುರಿ ನಾ, ದಾಕ್ಷಿಣ್ಯ ಪರನಲ್ಲ” ಎಂಬ ಬಸವ ತತ್ವ ನಾಡಿಗೆ ಸಾರಿದರು. ಆಂತರಿಕ ರಾಜಕಾರಣದ ಒತ್ತಡ ಲೆಕ್ಕಿಸದೇ ರೈತರ ಮನ ಒಲಿಸಿದರು.
ಹಣದ ಆಸೆಗೆ ಭೂಮಿ ಮಾರಲು ಪ್ರೇರೇಪಿಸಿದ ಸಂಘಟನೆಗಳಿಗೆ ಆಘಾತ ನೀಡಿದರು.
ನಂತರ ಕಪ್ಪತಗುಡ್ಡವನ್ನು ಅಧಿಕೃತ ಗಣಿಗಾರಿಕೆ ನೆಪದಲ್ಲಿ ಬಲ್ದೋಟಾ ಕಂಪನಿಗೆ ನೀಡುವ ಆದೇಶವನ್ನು ಮರಳಿ ಪಡೆಯಲು ಅಹೋರಾತ್ರಿ ಧರಣಿ ನಡೆಸಿದರು.
ಎರಡನೇ ಬಾರಿ ಸಂಕಷ್ಟ ಎದಿರಿಸಿದ್ದ ಕಾಡನ್ನು ಉಳಿಸಿದರು.
ರಾಜಕಾರಣಿಗಳ ಒಳ್ಳೆಯ ಕಾರ್ಯಗಳನ್ನು ಹೊಗಳುತ್ತಿದ್ದರೂ ಅವರು ಹಾದಿ ಬಿಟ್ಟಾಗ ಮೂಗು ಹಿಡಿಯುತ್ತಿದ್ದರು.
ಹೊಗಳಿಕೆಯಷ್ಟೇ, ಟೀಕೆಯೂ ಉಗ್ರವಾಗಿರುತ್ತಿತ್ತು.
ಅವರ ನೇರ ಮಾತುಗಳಲಿ ಜನಪರ ಕಾಳಜಿ ಲಾಸ್ಯವಾಡುತ್ತಿತ್ತು, ಅವ್ವನ ಮಮತೆ ತುಂಬಿರುತ್ತಿತ್ತು.
ಒಮ್ಮೆ ಹೊಗಳಿಸಿಕೊಂಡವರು ತಪ್ಪು ಮಾಡಿದರೇ ಅಷ್ಟೇ ನಿರ್ದಾಕ್ಷಿಣ್ಯವಾಗಿ ಟೀಕೆ ಮಾಡಿ ಎಚ್ಚರಿಸುತ್ತಿದ್ದರು.
ಕಟ್ಟಾ ಬ್ರಹ್ಮಚರ್ಯ ಪೂಜ್ಯರ ನೈತಿಕ ಶಕ್ತಿಯಾಗಿತ್ತು. ಕಾಮ ನಿಗ್ರಹಕೆ ಕಾಯಕವೊಂದೇ ಸಾಕು ಎಂದು ಘಂಟಾಘೋಷವಾಗಿ ಹೇಳುವ ತಾಕತ್ತು ಅವರಿಗಿತ್ತು.
ನಿರಂತರ ಜನರ ಕಷ್ಟ ಸುಖ ಆಲಿಸುವ ತಾಳ್ಮೆಯೂ ಇವರ ಹೆಚ್ಚುಗಾರಿಕೆ.
ಆಧುನಿಕ ಮಠಗಳ ಐಷಾರಾಮಿ ಸಂಸ್ಕೃತಿಗೆ ತೋಂಟದಾರ್ಯ ಮಠದಲ್ಲಿ ಅವಕಾಶವಿರಲಿಲ್ಲ. ಇಲ್ಲಿ ಎಲ್ಲರೂ ಸರಿ ಸಮಾನ.
ಐಷಾರಾಮಿ ಜೀವನ ಶೈಲಿ ನಿರಾಕರಿಸಿ ಕೊನೆ ತನಕ ಸಾಮಾನ್ಯರೊಡನೆ, ಸಾಮಾನ್ಯರಂತೆ ಬಾಳಿದರು.
ದೇಸಿಯ ಖಡಕ್ ಮಾತು, ಆಳ ಅಧ್ಯಯನ, ಅಪಾರ ಸಾಮಾನ್ಯ ಜ್ಞಾನ ಹೊಂದಿದ್ದ ಪೂಜ್ಯರು ಲಕ್ಷಾಂತರ ಭಕ್ತರ ನೇರ ಸಂಪರ್ಕ ಹೊಂದಿದ್ದರು. ಅವರ ಕಷ್ಟ ಸುಖ ಖುದ್ದಾಗಿ ವಿಚಾರಿಸುವ ಮಾನವೀಯತೆ ಅವರಲ್ಲಿತ್ತು.
ಡಾ.ಕಲಬುರ್ಗಿಯವರ ಹತ್ಯೆಯ ನಂತರ ವ್ಯವಸ್ಥೆ ಕ್ರೂರತನಕೆ ನೊಂದುಕೊಂಡರು.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಂದರ್ಭದಲ್ಲಿ ಬಹಿರಂಗ ಬೆಂಬಲಕೆ ನಿಂತು ತಾತ್ವಿಕ ಸಂಗತಿಗಳ ಸರಕಾರದ ಗಮನಕ್ಕೆ ತಂದರು. ಹೋರಾಟ ಕಾವೇರಲು ಬೆನ್ನೆಲುಬಾಗಿ ನಿಂತರು.
ಹೀಗೆ ನಿರಂತರ ಓದು, ಓಡಾಟ, ಚಳುವಳಿ, ಪ್ರಖರ ಮಾತುಗಳ ಮೂಲಕ ಮಲಗಿದ ರಣ ಹೇಡಿ ಮನಸುಗಳ ಎಚ್ಚರಿಸುತ್ತಲೇ ಇದ್ದರು.
ನಿನ್ನೆ ರಾತ್ರಿಯೂ ಎಂದಿನಂತೆ ವಿಜಯದಶಮಿ ಸಾರ್ವಜನಿಕ ಕಾರ್ಯಕ್ರಮದಲಿ ಭಾಗವಹಿಸಿ ಕೊನೆಯ ಆಶಿರ್ವಚನ ನೀಡಿದರು.
ಕನ್ನಡ ಪ್ರಗತಿಪರ ಮನಸುಗಳ ಅನಾಥ ಮಾಡಿ,
ಯಾರಿಗೂ ಸಾವಿನ ಸುಳಿವು ನೀಡದೇ ಮೌನವಾಗಿ ಹೊರಟೇ ಬಿಟ್ಟರು.
*ಸಿದ್ದು ಯಾಪಲಪರವಿ*
No comments:
Post a Comment