Friday, October 26, 2018

ಇಂದು ರಾತ್ರಿ

ಇಂದು ರಾತ್ರಿ ಎಂದಿನಂತೆ

ಇಂದು ಈ ರಾತ್ರಿಯೂ ಎಂದಿನಂತೆ ಇದೆ
ಅತ್ತ ಭಯಾನಕವೂ ಅಲ್ಲದ ಸುಖವೂ
ಇಲ್ಲದ ಏನೋ ಹುಡುಕಾಟದ ಹುಡುಕಾಟಿಕೆ

ಕಳ್ಳರು ಎಚ್ಚರಾಗಿದ್ದಾರೆ ಮಲಗುವದ
ಕಾಯುತ್ತ
ಸಿರಿವಂತರೂ ಎಚ್ಚರಾಗಿದ್ದಾರೆ ಕಳ್ಳರ
ಹಾಗೆ ಮತ್ತಿಷ್ಟು ಸಿರಿವಂತರಾಗುವ ಹೊಂಚು
ಹಾಕುತ್ತ

ಎಲ್ಲರೂ ಕಳ್ಳ -ಮಳ್ಳರು ಈ ರಾತ್ರಿಯ
ಕಣ್ಣೊಳಗೆ.

ನಶೆ ಏರಿಸಿಕೊಂಡವರು ಏನನ್ನೋ
ಬಡಬಡಿಸುತ್ತ ನಿಚ್ಚಳಾಗಿದ್ದೇವೆ ಎಂದು
ಸಾಬೀತು ಪಡಿಸಲು ಹವಣಿಸುತ್ತಾರೆ

ಹರೆಯದವರು ಬೆದೆಗೆ ಬಂದ ಗೂಳಿಗಳ
ಹಾಗೆ ಕಾದಾಡಿ ಕಾಮಿಸುವ ಜಪ
ಮಾಡುತ್ತಾರೆ

ಇನ್ನು ಕೆಲವರಿಗೆ ಉದ್ರೇಕಗೊಳ್ಳದಿರುವ
ಆತಂಕದ ಅವಮಾನದಲಿ ಸುಖಿಸಿ
ಇನ್ನೂ ಇದೆ ಎಂದು ಸಾಧಿಸುವ ಧಾವಂತ

ವಿರಹ ವೇದನೆಗೆ ನೂರಾರು ದಾಳಿಗಳು
ಮೈಮನಗಳ ಸುಳಿಯಲಿ ಲೆಕ್ಕವಿಲ್ಲದಷ್ಟು
ತಿರುಗುಣಿಗಳು
ಕಳಕೊಂಡವರು ಹೇಗಾದರೂ ಮಾಡಿ
ಪಡೆದೇನು ಎಂಬ ಭ್ರಮಾನಂದ

ತಿಣುಕಾಡಿ ಕೊಸರಾಡಿದರೂ ಎಚ್ಚರಗೊಳ್ಳದ
ಪುರುಷತ್ವ
ಆದರೂ ಎಲ್ಲವೂ ಸರಿ ಇದೆ ಸ್ವಲ್ಪ ಎಡವಟ್ಟು
ಎಂಬ ಸಮಜಾಯಿಷಿ

ಪ್ರೀತಿ-ಪ್ರೇಮ-ಪ್ರಣಯಗಳ ನೂರು
ಸುತ್ತಿನ ನಿಲ್ಲದ ಇನ್ನಿಲ್ಲದ ಪಯಣ

ಹಗಲುಗನಸಿನ ಸವಾರಿಯಲಿ ದಣಿದ
ದೇಹ ಜಪ್ಪನೆ ಮಲಗಿದರೂ ಬಿಡದ
ಕನಸುಗಳು

ಮುಲುಕಾಟ ಕುಲುಕಾಟದ ಕಲರವಕೆ
ನೀರವ ಮೌನದಬ್ಬರ
ನಲುಗುವ ದೇಹ ಹಿಂಡಿ ಹಿಪ್ಪಿಯಾದರೂ
ಸುಖದ ಮೇಲಾಟ

ಹಗಲಿನಲಿ ಊಹಿಸಲಾಗದ
ನಿಲುಕಲಾಗದ ಸಂಗತಿಗಳ ಗಾಳಕೆ
ಬೀಳಿಸುವ ಹರಸಾಹಸ

ಎಂದೆಂದೂ ನಿಲುಕಲಾಗದ ಆಗಸದಲಿ
ತೇಲಾಡುವ
ನಕ್ಷತ್ರಗಳ ಗುಣಿಸಿ ಎಣಿಸಿ ಗುಡ್ಡೆ ಹಾಕುವ
ಮಾಯಾಲೋಕ

ಹಗಲು ಸನ್ಯಾಸದ ವೇಶಗಳು
ವೇಗದಲಿ ಕಳೆದು ಕಾದಾಡಲು
ಕಾದಿರುವ ಸವಿ ಗಳಿಗೆ
ಒಮ್ಮೆ ಮೈ ಹಗುರಾಗಿಸಿ
ತೇಲಾಡುವ ಮಹದಾನಂದ

ಮುಖಕ್ಕೆ ಅಂಟಿದ ಮುಖವಾಡಗಳು
ರಪ ರಪನೆ ಉದುರಿ ಮುಖದರ್ಶನದ
ಲಿಲಾವುಗಳ ಲೀಲೆ
ಕದ್ದ ಮಾಲಿಗೆ ಲೆಕ್ಕ ಕೊಡುವ
ನಾಟಕ

ಅಶ್ಲೀಲ ಲೋಕದ ಝಗಮಗ
ಝೇಂಕಾರ
ನಿರ್ಲಜ್ಯ ಲೋಕದ
ರಂಭೆ-ಊರ್ವಶಿಯರೊಂದಿಗೆ
ಬೆತ್ತಲೆ ಕುಣಿದು ಬಯಲಾಗುವ
ಬಯಕೆಗೆ ಶುಭ ಮುಹೂರ್ತ

ಇಂದು ರಾತ್ರಿ ಎಂದಿನಂತೆ
ಒಬ್ಬೊಬ್ಬರಿಗೆ ಒಂದೊಂದು
ಲೋಕದಂತೆ ಇದು ನಿತ್ಯವೂ
ನಿಲ್ಲದ ಜಾತ್ರೆ
ಮುಗಿಯುವವರೆಗೆ ಈ
ಜೀವನ ಯಾತ್ರೆ.

----ಸಿದ್ದು ಯಾಪಲಪರವಿ

No comments:

Post a Comment