ಲವ್ ಕಾಲ
*ಭಾವತೀವ್ರತೆಗೆ ವಿದಾಯ*
ಅದೆಷ್ಟು ಚಡಪಡಿಸಿ ಒದ್ದಾಡಿದೆ ಸಾವಿರದ ಹಗಲು ರಾತ್ರಿಗಳಲಿ.
ತಲೆಚಿಟ್ಟು ಹಿಡಿಸುವಷ್ಟು ಭಾವುಕ ಎನಿಸಿಕೊಂಡು ಬಿಟ್ಟೆ. ಆದರೆ ಆ ತೀವ್ರತೆಯಲಿ ಪ್ರೀತಿ-ಕಾಳಜಿ ಬಿಟ್ಟರೆ ಬೇರೇನೂ ಇರಲಿಲ್ಲ, ನೀ ಅದನು ಯಾಕೋ ಬೇಗ ಅರ್ಥಮಾಡಿಕೊಳ್ಳದೇ ಅತಿರೇಕದ ಹುಚ್ಚಾಟ ಅಂದುಕೊಂಡುಬಿಟ್ಟೆ.
ಬದುಕಿನ ಪ್ರತಿಯೊಂದು ಘಟನೆಗಳನ್ನು, ಭೇಟಿಯಾದ ವ್ಯಕ್ತಿಗಳನ್ನು ತುಂಬ ಅಂದರೆ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತ ಬೆಳೆದದ್ದು ತಪ್ಪಾಗಿ ಹೋಯಿತು.
ಎಲ್ಲರೂ ಒಳ್ಳೆಯವರು, ಹಿತೈಷಿಗಳು ಎಂದು ನಂಬುತ್ತಲೇ ನಡೆದೆ. ಆ ನಂಬಿಕೆ ಯಾಕೋ ಕೈ ಕೊಡುತ್ತಲೇ ಹೋಯಿತು. ನಾನದನ್ನು ಸಹಿಸುತ್ತಲೇ ಬಂದೆ. ಸಹಿಸಿಕೊಳ್ಳಲೇಬೇಕು, ಏಕೆಂದರೆ ತಪ್ಪಿತಸ್ಥ ನಾನು.
ಆದರೂ ನಾ ಪಾಠ ಕಲಿಯದೇ ವಿಲಿ ವಿಲಿ ಒದ್ದಾಡುತ್ತಲೇ ಬೆಳೆದೆ, ಬುದ್ಧಿ ಬೆಳೆಸಿಕೊಳ್ಳದೇ.
ದಾರಿಯಲಿ ಸಿಕ್ಕವರ ಮಾತ ಕೇಳಿ ಮರ ಹತ್ತಿದೆ, ನೀರಿಗೆ ಹಾರಿದೆ, ಹಳ್ಳದಲಿ ಧುಮುಕಿದೆ, ಆಕಾಶದಲ್ಲಿ ತೇಲಾಡಿದೆ ಯಾಕೋ ಈ ಖೋಡಿ, ಕೊಟ್ಟಿ ವಾಸ್ತವ ನನಗೆ ಭೇಟಿಯಾಗಲಿಲ್ಲ. ನಾ ಜಾಣನಾಗಲೇ ಇಲ್ಲ.
ಇನ್ನೇನು ಸೋತು ತಣ್ಣಗಾಗಿ ಹೋದಾಗ ನೀ ಭೇಟಿಯಾದದ್ದು ಹೊಸ ಇತಿಹಾಸ ಆದರೆ ಪರಿಣಾಮ ಒಂದೇ.
ಭಾವತೀವ್ರತೆಯ ಗಡಿ ಮೀರಲೇ ಇಲ್ಲ. ಮತ್ತದೇ ಹಳೆಯ ಹಳವಂಡಗಳ ಮಾನದಂಡದಲಿ ನಿನ್ನ ಓಲೈಸಲು ಒದ್ದಾಡಿದೆ.
ನೀ ವಾಸ್ತವದ ಸವಾರಿ ಮೇಲಿದ್ದಾಗ ಯಾಕೋ ನನ್ನ ಸಂಬಂಧ ತಲೆಚಿಟ್ಟು ಹಿಡಿಸಿದ್ದು ಸಹಜ. ನನಗೆ ಅರ್ಥವಾಯಿತಾದರೂ ಹೊರ ಬರಲಾಗಲಿಲ್ಲ, ಭಾವತೀವ್ರತೆಯ ಸುಳಿಯಿಂದ.
ಬಂಧನದಿ ಬಿಡಿಸಿಕೊಂಡು ಬಚಾವಾಗಿ ನಾ ಹಗುರಾಗಲು ನಿರ್ಧರಿಸಿದ ಬೆನ್ನಲ್ಲೇ ನೀ ನನ್ನ ತೀವ್ರತೆಯ ಗ್ರಹಿಸಿ ಸಹಿಸಿಕೊಳ್ಳಲಾರಂಭಿಸಿದೆ.
ತಲೆ ಚಿಟ್ಟು ಅನಿಸಿದರೂ ಪ್ರೀತಿಯ ಆಳವ ಇಣುಕಿ ನೋಡುವ ಸಹನೆ ರೂಢಿಸಿಕೊಂಡಿದ್ದಕ್ಕೆ ನಾ ಸಂಪೂರ್ಣ ದಕ್ಕಿಬಿಟ್ಟೆ.
ಮಿತಿ, ಶಕ್ತಿ, ಆಳ, ಅಗಲ, ಅನನ್ಯ ಜೀವಪ್ರೇಮದ ಮುಂದೆ ಈ ತೀವ್ರತೆ ಸಹನೀಯ, ಸ್ವೀಕೃತ ಅನಿಸಿಬಿಟ್ಟಿತು. ಇಬ್ಬರಿಗೂ.
ನೀ ಇದಾವುದನ್ನು ಬಾಯಿ ಬಿಟ್ಟು ಹೇಳಲಿಲ್ಲವಾದರೂ ನಾ ಎರಡನೇ ವ್ಯಕ್ತಿಯಾಗಿ ಗಮನಿಸಿ ತಿಳಿದುಕೊಳ್ಳುತ್ತ ಹೋದೆ. *ಎಲ್ಲ ಓಕೆ, ಈ ತೀವ್ರತೆ ಏಕೆ* ಎಂಬ ಭಾವ ನಿನ್ನ ಸದಾ ಇರಿಯುತ್ತಲೇ ಇತ್ತು.
ಈ ತೀವ್ರತೆಯನ್ನು ಪೊಸೆಸ್ಸಿವ್ ಅಂತಲೂ ಕರಿತಾರೆ. ಪೊಸೆಸ್ಸಿವ್ ಇಲ್ಲದೇ ಪ್ರೀತಿ ಉಳಿಯಲಾರದು ಕೂಡ!
ಆದರೆ ಬಾಂಡೇಜಿನಲ್ಲಿ ಪ್ರಬುದ್ಧತೆ ಹೆಚ್ಚಾದಂತೆ ಪೊಸೆಸ್ಸಿವ್ ಮನಸ್ಥಿತಿ ಕಡಿಮೆಯಾಗುತ್ತ ಹೋಗುತ್ತದೆ.
*ಆದರೆ ಅದು ಕಡಿಮೆ ಆಗುವುದರೊಳಗೆ ರೋಸಿ ಹೋದರೆ, ತಲೆ ಚಿಟ್ಟು ಹಿಡಿಸಿಕೊಂಡರೆ ಬಾಂಡೇಜ್ ಕತೆ ಮುಗಿದಂತೆ*.
ನಮ್ಮ ಪುಣ್ಯ ಎಷ್ಟೇ ರೋಸಿ ಹೋದರೂ ನಾವಿಬ್ಬರೂ ಹಗ್ಗ ಜಗ್ಗಾಟದಲಿ ಪರಸ್ಪರ ಬಿಗಿದುಕೊಂಡು ಗಟ್ಟಿಯಾಗಿ ಉಳಿದದ್ದು, ಅಪರೂಪ, ಅನುರೂಪ, ಅನನ್ಯ ಹಾಗೂ ಅವನ ಲೀಲೆ.
*ಅವನು ಕೈ ಬಿಡದಿರಲು ಕಾರಣ ಇಷ್ಟೇ, ನಮ್ಮಿಬ್ಬರ ನಿಷ್ಟೆ*.
ನಮ್ಮ ಚಾರಿತ್ರ್ಯ ಹಾಗೂ ಚರಿತ್ರೆಯನು ಅಳೆದು ತೂಗಿದ *ಅವನು* ಇವರು ಉಳಿಯಲಿ ಎನಿಸಿ ತಥಾಸ್ತು ಅಂದಾಗ ನಾವು ಗೆದ್ದು ಬಿಟ್ಟೆವು.
*Now I'm totally free from possessiveness but…*
*ಸಿದ್ದು ಯಾಪಲಪರವಿ*
No comments:
Post a Comment