*ಪ್ರತಿಕ್ರಿಯೆ*
*ಲಿಂಗಾಯತ ಧರ್ಮ ಜಿನ್ನಾ ವಿಭಜನೆಗೆ ಹೋಲಿಸಲಾಗದು*
ನಾಡಿನ ಹಿರಿಯ ಚಿಂತಕರು, ಲಂಕೇಶ್ ಅವರ ಒಡನಾಡಿಗಳು ಆದ ಪ್ರೊ.ರವೀಂದ್ರ ರೇಷ್ಮೆ ಅವರು ತಮ್ಮ ಕ್ರಿಯಾಲೋಪ ಅಂಕಣದಲ್ಲಿ ಸಣ್ಣ ಲೋಪವಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಬರೆಯುವಾಗ ಅಧಿಕಾರಿ ಡಾ.ಎಸ್.ಎಂ.ಜಾಮದಾರ ಅವರನ್ನು ಖಳನಾಯಕರಂತೆ, ಸಚಿವರಾದ ಡಿ.ಕೆ.ಶಿವಕುಮಾರ ಅವರನ್ನು ಮಹಾನ್ ಚಿಂತಕರಂತೆ ಚಿತ್ರಿಸಿದ್ದಾರೆ.
ಇಡೀ ಲೇಖನವನ್ನು ಗಮನಿಸಿದಾಗ ಲಿಂಗಾಯತ ಧರ್ಮದ ಕುರಿತು ಅವರಿಗಿರಬಹುದಾದ ಅಸ್ಪಷ್ಟತೆ ಸ್ಪಷ್ಟವಾಗುತ್ತದೆ.
ಯಾಕೆಂದರೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು *ಧರ್ಮ ವಿಭಜನೆ* ಎಂದು ಪದೇ ಪದೇ ಉಲ್ಲೇಖಿಸುತ್ತಾರೆ.
ಲಿಂಗಾಯತ ಹಾಗೂ ವೀರಶೈವ ಒಂದೇ ಅಂದುಕೊಂಡರೂ, ಹಿಂದು ಧರ್ಮ ಅಲ್ಲ ಎಂಬ ವಾದವನ್ನಾದರು ಒಪ್ಪಿಕೊಳ್ಳಬೇಕು.
ಈ ವಿಭಜನೆ ಇಂದಿನ ಆಲೋಚನೆಯಲ್ಲ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪವೆಂಬ ಸಂಸತ್ತಿನಲ್ಲಿ ಜಾರಿಗೊಳಿಸಿದ ಸ್ವತಂತ್ರ ಧರ್ಮವಾಗಿದೆ.
ಹಿಂದು ಧರ್ಮದ ವರ್ಣಾಶ್ರಮ ಪದ್ಧತಿಯನ್ನು ನಿರಾಕರಿಸಿ ದೀನದಲಿತರಿಗೆ, ಶೂದ್ರರಿಗೆ, ಮಹಿಳೆಯರಿಗೆ ಹಾಗೂ ಅಲಕ್ಷಿತ ಪಂಚಮರಿಗೆ ಧಾರ್ಮಿಕ ಆತ್ಮವಿಶ್ವಾಸ ತುಂಬಲು ಅಂಗೈಗೆ ಇಷ್ಟಲಿಂಗ ನೀಡುವ ಮೂಲಕ ಸ್ಥಾಪಿತವಾದ ವಿನೂತನ ಧರ್ಮವಾಗಿದೆ.
ಈ ಧಾರ್ಮಿಕ ವಿಭಜನೆ ಎಂಬ ವಾದವೇ ನಿರಾಧಾರ.
ಜಾತ್ಯಾತೀತ ಪರಿಕಲ್ಪನೆಯ, ದೇವಾಲಯ ಸಂಸ್ಕೃತಿಯ ಪುರೋಹಿತಶಾಹಿಯ ನಿರಾಕರಣವೇ ಹೊರತು ಬ್ರಾಹ್ಮಣ ವಿರೋಧಿ ಕ್ರಮವಲ್ಲ. ಕೇವಲ ಬ್ರಾಹ್ಮಣ್ಯದ ವಿರುದ್ಧದ ಜನಪರ ಹೋರಾಟವೂ ಆಗಿತ್ತು.
ಅದೇ ಪರಂಪರೆಯ ಲಿಂಗಾಯತ ಮಠಗಳು ನಂತರದ ಕೆಲವು ಗೊಂದಲಗಳಿಂದ ವೀರಶೈವ ಅಥವಾ ಲಿಂಗಾಯತ ಎಂಬ ಧರ್ಮ ಎಂದು ಕರೆಯಲ್ಪಟ್ಟಿತೋ ವಿನಹ ಒಂದು ಜಾತಿ ಎಂದು ಯಾವತ್ತೂ ಗುರುತಿಸಲ್ಪಡಲಿಲ್ಲ.
ಲಿಂಗಾಯತ ಧರ್ಮದ ಹೋರಾಟದ ಸಂದರ್ಭದಲ್ಲಿ ವೀರಶೈವ ಪದ ಬಳಕೆಯ ನಿವಾರಣೆಯ ಸಂಗತಿಯೂ ಚರ್ಚೆಗೊಳಪಟ್ಟಿತು.
ವೀರಶೈವ ಪದದಲ್ಲಿ ನಂಬಿಕೆ ಇಟ್ಟವರು, ಲಿಂಗಾಯತ ಪದ ಒಪ್ಪಿಕೊಳ್ಳುವವರೂ ಕೂಡಾ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದನ್ನು ಪ್ರೊ.ರೇಷ್ಮೆಯವರು ದಯವಿಟ್ಟು ಅರ್ಥಮಾಡಿಕೊಳ್ಳಬೇಕು.
ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜಕೀಯ ಉದ್ದೇಶ ಏನೇ ಇರಲಿ, ಇಡೀ ಧಾರ್ಮಿಕ ಚಳುವಳಿಯ ಉದ್ದೇಶ ಹಾಗೂ ಸಾಮರ್ಥ್ಯವನ್ನು ಸರಿಯಾಗಿಯೇ ಗ್ರಹಿಸಿದ್ದರು.
ಜನತಾ ಪರಿವಾರದ ಜೆ.ಪಿ. ಹಾಗೂ ಲೋಹಿಯಾ ಸಿದ್ಧಾಂತ ಓದಿಕೊಂಡ ಮುತ್ಸದ್ದಿ ನಾಯಕ. ವೈಚಾರಿಕವಾಗಿ ಅವರನ್ನು ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಹೋಲಿಸಲಾಗದು, ಹೋಲಿಸಬಾರದು ಕೂಡ.
ಕಾಂಗ್ರೆಸ್ ಸೋಲಿಗೆ ಅನೇಕ ಬೇರೆ, ಬೇರೆ ಕಾರಣಗಳಿರಬಹುದು. ಆದರೆ ಲಿಂಗಾಯತ ಸ್ವತಂತ್ರ ಧರ್ಮ ಚಳುವಳಿಯಿಂದ ಖಂಡಿತವಾಗಿ ಲಾಭವಾಗಿದೆ. ಕೆಲವು ಪ್ರಮಾಣದ ಮತಗಳನ್ನು ವಿಭಜಿಸಲಾಯಿತು, ಪ್ರಮಾಣ ಹೆಚ್ಚು ಕಡಿಮೆ ಇರಬಹುದು ಅಷ್ಟೇ.
ಧರ್ಮ, ಸಾಹಿತ್ಯ, ಸಾಮಾಜಿಕ ಚಳುವಳಿ ಕುರಿತು ಆಳ ಗ್ರಹಿಕೆ ಹೊಂದಿರದ ಸಚಿವರ ಕ್ಷಮೆಯಾಚನೆಯಿಂದ ರೇಷ್ಮೆ ಅವರು ಇಷ್ಟೊಂದು ಪುಳಕಗೊಳ್ಳುವ ಅಗತ್ಯವಿಲ್ಲ.
ಹಾಗೆ ಜಾಮದಾರ ಅವರ ಧಾರ್ಮಿಕ ಬದ್ಧತೆಯನ್ನು ಜಿನ್ನಾ ದೇಶ ವಿಭಜನೆಗೆ ಹೋಲಿಸುವುದು ಅಸಮಂಜಸ.
ರೇಷ್ಮೆ ಅವರ ಈ ವಾದವನ್ನು ಅವರ ಪತ್ರಿಕಾ ಒಡನಾಡಿ, ಹಿರಿಯ ಚಿಂತಕ ಲಂಕೇಶ್ ಕೇಳಿದ್ದರೆ ಖಂಡಿತವಾಗಿ ಖಂಡಿಸುತ್ತಿದ್ದರು.
ಲಂಕೇಶ್ ಅವರ ಜನಪರ ಸಿದ್ಧಾಂತದ ಆಶಯಗಳ ನೆರಳಡಿ ಬೆಳೆದ ರೇಷ್ಮೆ ಅವರು ಹೀಗೆ ವ್ಯಾಖ್ಯಾನಿಸುವುದು ನೋವಿನ ಸಂಗತಿ.
ಯಾರೋ ಅಪಕ್ವ ಚಿಂತಕರ ಆರೋಪವಾಗಿದ್ದರೆ ಅಲಕ್ಷಿಸಬಹುದಿತ್ತೇನೋ !
ರೇಷ್ಮೆ ಅವರು ನಿಸ್ಸಂಶಯವಾಗಿ ನುರಿತ ರಾಜಕೀಯ ಚಿಂತಕರು. ಧಾರ್ಮಿಕ ಸಂಗತಿಯನ್ನು ರಾಜಕೀಯ ವಿಶ್ಲೇಷಣೆಯಂತೆ ಅರ್ಥೈಸಿಕೊಳ್ಳುವುದು ಸರಿಯಲ್ಲ.
ಪ್ರತ್ಯೇಕ ಧರ್ಮ ಬೇಡಿಕೆ ರಾಜಕಾರಣದಾಚೆಗಿನ ಹೋರಾಟ.
ಅದನ್ನು ರಾಜಕಾರಣಿಗಳು ಹೇಗಾದರೂ ಬಳಸಿಕೊಂಡು ಬೆಳೆಯಲಿ ಅದು ಅವರ ಸಾಮರ್ಥ್ಯಕ್ಕೆ ಬಿಟ್ಟ ವಿಷಯ.
ಸೈದ್ಧಾಂತಿಕವಾಗಿ ಇಡೀ ಹೋರಾಟದ ಸದುದ್ದೇಶವನ್ನು ಗಮನಿಸಿ ವಿಶ್ಲೇಷಿಸುವುದು ಒಳಿತು.
ದೇಶ ವಿಭಜನೆ ನಿಜಾರ್ಥದ ವಿಭಜನೆ ಆದರೆ ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ವಿಭಜನೆ ಅಲ್ಲ. ಇರುವ ಸತ್ಯ ಸಂಗತಿಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವುದಾಗಿದೆ ಎಂದು ಈ ಮೂಲಕ ನಿವೇದಿಸಿಕೊಳ್ಳುತ್ತೇನೆ.
*ಸಿದ್ದು ಯಾಪಲಪರವಿ*
No comments:
Post a Comment