Friday, October 26, 2018

ಗರತಿಯ ಅಳಲು

*ಗರತಿಯ ಅಳಲು*

ನನ್ನವ್ವ ತನ್ನ ದೇಸೀಯ ಸೊಗಡಲಿ
ಬೈದು ಹೇಳಿದ್ದು ಇನ್ನೂ ಹಸಿರು
*ಗರತೀನ ತಡುವ ಬ್ಯಾಡಲೋ ಆಕಿ
ಉಸರು ಚೊಲೋ ಅಲ್ಲ*

ಯಾರೀ ಗರತಿ ?

ಗಾಣದ ಎತ್ತಿನಂಗ ಹಗಲು-ರಾತ್ರಿ
ಬದುಕ ತೇದು ನೋವ
ನುಂಗಿ  ಹೊಟ್ಟಿ ಕಟ್ಟಿ

ಅರೆನಿದ್ರೆಯ ಮಂಪರಿನಲಿ
ಮೈಯನರಳಿಸಿ
ಕೆರಳದೇ
ಸುಖಿಸದೇ ಬಸಿರ ಕಟ್ಟಿ
ಹಡೆದ ಸದ್ದಿಗೆ ಬೆದರಿದ
ಹೊರಸು

ನಾಲ್ಕಾರು ಮಕ್ಕಳ ಉಣಿಸಿ
ಬೆಳೆಸುವ ಧಾವಂತದಿ
ಅವಳೇ ಮಾಯ

ಜೋತು ಬಿದ್ದ ದೇಹವ ಎತ್ತಿ ಕಟ್ಟಿ
ಗಂಡನೆಂಬ *ಮಹಾ ಗಂಡನ*
ಪುಂಡಾಟ ಸಹಿಸಿ ಬೆಚ್ಚಿ
ಬಸವಳಿದರೂ *ತಾಳಿಗೆ* ಶರಣು

ಮಕ್ಕಳೆಂಬ ಭೂಪರು ಹೆಂಡತಿಯ
ಸೆರಗ ಹಿಡಿದು
' ಅವ್ವ ನಿಂದು ಸರಿ ಅಲ್ಲ '
ಅಂದಾಗ ಹೌಹಾರಿದ
ನೆಲಮುಗಿಲು

'ನೀನರ ಚೊಲೋ ಇರು '
ಅನ್ನುವ ಹರಕೆಯಲಿ ಕರಗಿ
ನೀರಾಗಿ ಹರಿಯುತ್ತ ಹರಿಯುತ್ತ
ಬೆನ್ನು ಬಾಗಿದ ಭಾರಕೆ ಕುಸಿದ
ಗರತಿಗೆ ಭೂತಾಯಿ 
ನೆಲದಾಸರೆ.

---ಸಿದ್ದು ಯಾಪಲಪರವಿ

No comments:

Post a Comment