Sunday, October 21, 2018

ಮೀಟೂ ದುರುಪಯೋಗ ಬೇಡ

#Metoo

*ಆರೋಗ್ಯಪೂರ್ಣ ಚಿಂತನೆ ಇರಲಿ, ದುರುಪಯೋಗ ಬೇಡ*

ಎಲ್ಲ ದಾರಿಗಳು ಈಗ ಅಮೆರಿಕದ ಕಡೆಗೆ ಅನ್ನುವಂತಾಗಿದೆ, ಅದೇ ಅಮೇರಿಕಾದಿಂದ ಎದ್ದ #Metoo ಚಳುವಳಿ ಈಗ ಇಂಡಿಯಾಕ್ಕೂ ಕಾಲಿಟ್ಟಿದೆ.

ಪರ-ವಿರೋಧ ಚರ್ಚೆ ಸಹಜ ಆದರೆ ಅನಾರೋಗ್ಯಕರ ಹಾದಿ ಹಿಡಿಯುವುದು ದುರಂತ.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಸದಾ ಬಲಿಪಶು.
ಕಾರಣ ಆವಳನ್ನು ದುರ್ಬಲ ಎಂದು ಕರೆಯುವುದೇ ಆಗಿದೆ.

“ಅತ್ಯಾಚಾರ ಹೆಣ್ಣಿನ ಒಪ್ಪಿಗೆ ಇಲ್ಲದೇ ನಡೆಯುವುದಿಲ್ಲ” ಎಂದು ಕುಹಕವಾಡಿ “ಅವಳು ಮನಸು ಮಾಡಿದ್ದರೆ ತಪ್ಪಿಸಿಕೊಳ್ಳಬಹುದು” ಎಂಬ ಹೇಳಿಕೆ ಗಂಡಿಂದ ಬಂದಿದೆ. ಅನ್ಯಾಯಕ್ಕೆ ಒಳಗಾದ ಯಾವ ಹೆಣ್ಣು ಈ ತರಹದ ಹೇಳಿಕೆ ನೀಡಿಲ್ಲ ಎಂಬುದು ಗಮನಾರ್ಹ.

ಶೋಷಣೆ ಮಾಡುವ ಧೈರ್ಯ ಬರಲು ವ್ಯಕ್ತಿ ಹೊಂದಿರುವ ಅಧಿಕಾರ, ಸ್ಥಾನ ಮತ್ತು ಮೇಲರಿಮೆ.
ಉನ್ನತ ಹುದ್ದೆಯಲ್ಲಿರುವವರು, ಅವಕಾಶ ಕಲ್ಪಿಸುವ ತಾಕತ್ತು ಹೊಂದಿದವರು ಈ ಕೆಲಸಕ್ಕೆ ಕೈ ಹಾಕುವ ಭಂಡತನ ತೋರಿಸುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಿರಿವಂತರು, ಮೇಲ್ಜಾತಿಯವರು ಈ ಅಟ್ಟಹಾಸಕೆ ಕೈ ಹಾಕುತ್ತಿದ್ದರು ಆದರದು ಸುದ್ದಿಯಾಗುತ್ತಿರಲಿಲ್ಲ.

ಈಗ ಸಾರ್ವಜನಿಕವಾಗಿ ಮಹಿಳೆ ಕೆಲಸ ಮಾಡುವ, ಒಂಟಿಯಾಗಿ ಪಯಣಿಸುವ ಅನಿವಾರ್ಯತೆ ಹೆಚ್ಚಾಗಿದ್ದರಿಂದ ತೀವ್ರತೆ ಎದ್ದು ಕಾಣುತ್ತದೆ.
ಮಹಿಳೆ ಸಿಗುತ್ತಿರುವ ಶಿಕ್ಷಣ ಹಾಗೂ ಅವೇರ್ನೆಸ್ ಹೆಚ್ಚಾದ್ದರಿಂದ ಗಂಡಸು ಅಪರಾಧಿ ಸ್ಥಾನದಲ್ಲಿ ನಿಲ್ಲುವ ವಾತಾವರಣ ಸೃಷ್ಟಿಯಾಗಿದೆ.

ಲೈಫ್ ಸ್ಕಿಲ್ ತರಬೇತಿಯ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಘಟನೆಗಳನ್ನು ಯಥಾವತ್ತಾಗಿ ಇಲ್ಲಿ ನಿವೇದಿಸುತ್ತೇನೆ. ನನ್ನ ಯಾವುದೇ ಅಭಿಪ್ರಾಯ ಹೇರದೇ.

ಘಟನೆ -1

ಸಾಹಿತ್ಯದ ವಿದ್ಯಾರ್ಥಿಗೆ ಅವರ ಗೈಡ್ ನೀಡುತ್ತಿದ್ದ ಕಿರುಕಳದಿಂದಾಗಿ ಅರ್ಧಕ್ಕೆ ನಿಂತ ಅಧ್ಯಯನ.
ಸದರಿ ಯುವತಿ ಅಷ್ಟೇನು ಸುಂದರಿಯಲ್ಲ ಆದರೂ ಅರವತ್ತರ ಆಜು ಬಾಜು ಇದ್ದ ಗೈಡ್ ಆಹ್ವಾನಿಸಿದ್ದು ಹೇಸಿಗೆ ಎನಿಸಿದೆ. ಈ ಘಟನೆಯ ವಿವರಣೆಯಲ್ಲಿ ಅವಳು ನೇರವಾಗಿ ಹೇಳಿದ ಪದಗಳನ್ನು ಇಲ್ಲಿ ವಿವರಿಸಲಾಗದು.
ನಂತರ ಈ ಘಟನೆಯನ್ನು ಕೇಳಿದ ಗೆಳೆಯ ಪ್ರೇಮಿಯೂ ಆಗಿ ನಂತರ ಅವಳನ್ನು ವಿಪರೀತ ಸಂಶಯದಿಂದ ಕಂಡು ದೂರಾದ ಸಂಕಷ್ಟದ ಕತೆಯೂ ಅಷ್ಟೇ ಕ್ರೂರ.
ಮುಂದೆ ಒಂದೆರಡು ವರ್ಷದ ನಂತರ ಅವಳು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದು..‌.

ಘಟನೆ-2

ಆಡಳಿತ ಮಂಡಳಿ ಮುಖ್ಯಸ್ಥ ತನ್ನ ಒಳಮನಸಿನ ಹೀನ ಆಸೆಯನ್ನು ಹೇಳಿಕೊಂಡಿದ್ದಾನೆ. ಮದುವೆಯಾಗಿ ಸುಖೀ ಬದುಕಿನ ಅವಳಿಗಿದು ಅಸಹ್ಯವೆನಿಸಿ ತಿರಸ್ಕರಿದ್ದಾಳೆ.
ಮುಂದೆ ನಿರಂತರ ಕಿರುಕಳ ಸಹಿಸದೇ ಕೆಲಸದಿಂದ ಮುಕ್ತಿ ಪಡೆಯುವ ನಿರ್ಧಾರ ಕೇಳಿದ ಗಂಡ ‘ ಹೋಗಲಿ ಒಪ್ಪಿಕೋ’ ಅಂದದ್ದು ಕೇಳಿ ತತ್ತರಿಸಿ ಹೋಗಿದ್ದಾಳೆ.
ತೀವ್ರ ಮನೋರೋಗದಿಂದ ನರಳಿ ಪುರುಷ ದ್ವೇಷಿಯಾಗಿ ಗಂಡನಿಂದ ಮಾನಸಿಕವಾಗಿ ದೂರಾಗಿದ್ದಾಳೆ.

ಘಟನೆ-3

ಸಾಮಾಜಿಕ ಜಾಲತಾಣದಲಿ ಐವತ್ತರ ಅಂಚಿನಲ್ಲಿರುವ ಮಹಿಳೆಗೆ ವಯಸ್ಸಿನ ಮಿತಿ ಗೊತ್ತಿದ್ದರೂ ವಿಕೃತ ಮನಸಿನ ನಾಲ್ವತ್ತರ ವ್ಯಕ್ತಿ ಜೊಲ್ಲು ಸುರಿಸಿ ನಿವೇದಿಸಿಕೊಂಡಿದ್ದಾನೆ.
ಅವಳು ವಯಸ್ಸಿನಲ್ಲಿ ಹಿರಿಯಳು, ಗೃಹಿಣಿ ಬೆಳೆದ ಮಕ್ಕಳ ಮದುವೆ ಮುಗಿಸುವ ಹಂತ. ಇವನ ಉದ್ಧಟತನಕೆ ಪ್ರತಿಕ್ರಿಯಿಸದೇ ಸುಮ್ಮನಾದದ್ದು ಕಂಡು ಉತ್ತೇಜಿತನಾಗಿ ಚಿಗುರಿ ಅವಳ ಫೋಟೋ ಕ್ರಾಪ್ ಮಾಡಿ ಕಳಿಸುವುದು, ಸಾರ್ವಜನಿಕ ಕಾರ್ಯಕ್ರಮಳಲ್ಲಿ ತೆಗೆದ ಫೋಟೋಗಳನ್ನು ಸಂಗ್ರಹಿಸಿ ಬಳಿ ಇಟ್ಟುಕೊಂಡ ಈ ವಿಕೃತನಿಗೆ ಆ ಮಹಿಳೆ ಸರಿಯಾಗಿ ದಬಾಯಿಸಿದ್ದಾಳೆ.

“ ಈ ಹಾಳು WhatsApp ನಲ್ಲಿ ತೋರಿಸುವ ಧೈರ್ಯ ಎದುರಿಗೆ ತೋರಿಸು ಸರಿಯಾಗಿ ಉತ್ತರ ಕೊಡುವೆ” ಎಂದು ಜಾಡಿಸಿದ್ದಾರೆ. ಆದರೂ ಆ ನಿರ್ಲಜ್ಯ ತನ್ನ ಕೆಲಸ ಬಿಟ್ಟಿಲ್ಲ. ಈಗವನು blocked. ಅವನು ಏನಾದರೂ ಎಡವಟ್ಟು ಮಾಡಿದರೆ ಎಂಬ ಆತಂಕವೂ ಇದೆ.

ಮೇಲಿನ ಮಹಿಳೆಯ ಅಳುಕು ದೂರ ದೂಡಿ ನಾನವಳ ಧೈರ್ಯಕ್ಕೆ ಬೆಂಬಲಿಸಿದೆ.

ಘಟನೆ-4

ಕುಟುಂಬ ವ್ಯವಸ್ಥೆಯಲಿ ಮಾವ, ಭಾವ ಇತ್ಯಾದಿಗಳ ಹಿಂಸೆಯಿಂದ ಒದ್ದಾಡುವ ಮಹಿಳೆಯರಿಗೆ ಗಂಡ ನೈತಿಕ ಬೆಂಬಲ ನೀಡದ ಅಸಹಾಯಕ ಘಟನೆಗಳು.

                           ***

ಹೀಗೆ ಹೇಳುತ್ತ ಹೋದರೆ ಅಸಂಖ್ಯ ಪ್ರಕರಣಗಳು.
ಒಟ್ಟು ಗಂಡಸಿನ ಅನುಮಾನ-ಅವಮಾನ ಪ್ರಧಾನ ಪಾತ್ರ ಎಲ್ಲ ಪ್ರಕರಣಗಳಲ್ಲಿ.

ಮನೆಯಲ್ಲಿ ನಮ್ಮ ಬಂಧುಗಳಿಗೆ ಇಂತಹ ಸ್ಥಿತಿ ಬರಬಾರದೆಂದು ಆಶಿಸುವ ನಾವು ಅವಕಾಶ ಸಿಕ್ಕಾಗ ದುರ್ಬಲರಾಗಿಬಿಡುತ್ತೇವೆ ಯಾಕೆ?

ಅವಕಾಶ ಸಿಕ್ಕಾಗ ಹೆಣ್ಣನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಂಡು ಇನ್ನೂ ದೊಡ್ಡವರಾಗಬಹುದು. ಮನೆಯ ಮಕ್ಕಳು ಒಮ್ಮೆ ಕಣ್ಣೆದುರು ನಿಲ್ಲಬೇಕು ಅಷ್ಟೇ.

ಕಾನೂನು ಹೋರಾಟದಿಂದ ಯಾವ ಪ್ರಯೋಜನ ದೊರಕುವುದಿಲ್ಲ, ಅನಗತ್ಯ ಮಾನಸಿಕ ಹಿಂಸೆ. ಹಣ ಬಲ ಬಳಸಿ ಪ್ರಕರಣಗಳು ದುರ್ಬಲವಾಗಿ ಬಿದ್ದು ಹೋಗುತ್ತವೆ.

ನೈತಿಕಪ್ರಜ್ಞೆ ಹೆಚ್ಚಾಗುವಂತ ವಾತಾವರಣ ಉಂಟಾಗಬೇಕು.
ಪ್ರಗತಿಪರ ಮಹಿಳೆಯರು ಹುಡುಗಿಯರಿಗೆ, ಯುವತಿಯರಿಗೆ ತರಬೇತಿ ನೀಡಬೇಕು. ಡ್ರೆಸ್ ಕೋಡ್ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಜೊಲ್ಲು ಸುರಿಸುವ ಪರಿಸರದಲ್ಲಿ ಕೆರಳುವಿಕೆಗೆ ಅವಕಾಶ ಕೊಡಬಾರದು.

ಸಾಮಾಜಿಕ ಜಾಲತಾಣಗಳಲ್ಲಿ ಬಿಂದಾಸ್ ಫೋಟೋ ಹಾಕಿದವರೆಲ್ಲರೂ ಪ್ರದರ್ಶನದ ಬೊಂಬೆಗಳೆಂದು ಪರಿಗಣಿಸಬಾರದು. ಅವರ ಖುಷಿಗಾಗಿ ಶೆರ್ ಮಾಡಿದ್ದನ್ನು ತಪ್ಪಾಗಿ ಭಾವಿಸಿ ನಾಲಿಗೆ ಚಾಚಬಾರದು.

ಈ ರೀತಿ ಘಟನೆಗಳು ನಡೆದಾಗ ಹತ್ತಿರದ ಬಂಧುಗಳಿಗೆ ಹೇಳಿಕೊಳ್ಳಬೇಕು ಆದರೆ ಅವರೊಂದಿಗೆ ತಗಾದೆ ತೆಗೆದು ಅವಮಾನಿಸಿ ದ್ವೇಷ ಕಟ್ಟಿಕೊಳ್ಳದೇ ನಯವಾಗಿ  ತಿರಸ್ಕರಿಸಿ ಉದಾಸೀನ ಮಾಡಬೇಕು.

ಪ್ರತಿ ಶಾಲಾ ಕಾಲೇಜುಗಳಲ್ಲಿ ಮಹಿಳಾ ಆಪ್ತಸಮಾಲೋಚಕರು ತರಬೇತಿ ನೀಡಬೇಕು. ವೃತ್ತಿ ಬದುಕಿನಲಿ ಎದುರಾಗುವ ಇಂತಹ ಸಮಸ್ಯೆಗಳ ಕುರಿತು ಮಾಹಿತಿ ನೀಡಬೇಕು.

ಸೋಸಿಯಲ್, ಕ್ಲೋಸ್ ನೆಪದಲ್ಲಿ ಹತ್ತಿರ ಬಂದು ನಾಲಿಗೆ ಚಾಚುವ ಮುಖವಾಡಗಳ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮಹಿಳೆಯರಲ್ಲಿ ಹೆಚ್ಚಾಗಬೇಕು.

*ಪುರುಷನ ನೋಟ ಮತ್ತು ಸ್ಪರ್ಷದ ಆಳವನ್ನು ಗ್ರಹಿಸುವ ಶಕ್ತಿ, ತಾಕತ್ತು ಪ್ರತಿ ಹೆಣ್ಣಿಗೆ ನಿಸರ್ಗದತ್ತವಾಗಿ ಬಂದ ವರ*

ಆ ವಿವೇಚನೆ ಬಳಸಿಕೊಂಡು ಅಪಾಯಕಾರಿ ನೋಟ ಹಾಗೂ ಸ್ಪರ್ಷವನ್ನು ನಾಜೂಕಾಗಿ ನಿರಾಕರಿಸಬೇಕು.

*ಕೊನೆ ಮಾತು*

ಸದರಿ ಚಳುವಳಿ ಪೂರ್ವ ನಿಯೋಜಿತ ಸಂಚಾಗಿ ದುರ್ಬಳಕೆಯಾಗಬಾರದು. ಅನಗತ್ಯ ಹಳೆ ಘಟನೆಗಳನ್ನು ಕೆದಕಿ ಮಾನ ಹಾರಾಜು ಹಾಕುವ ಸ್ಯಾಡಿಸಂ ಆಗಬಾರದು. ಬ್ಲ್ಯಾಕ್ ಮೇಲ್ ತಂತ್ರವಾದರೆ ಹೆಣ್ಣಿಗೆ ಅಪಾಯ ಹೆಚ್ಚು.
*ಪ್ರತಿಷ್ಟೆ, ಪ್ರಚಾರಗಳ ಹುಚ್ಚಿಗಾಗಿ ಗಂಡನ್ನು ಉತ್ತೇಜಿಸಿ ಆಟ ಆಡಿ ಬಳಸಿ ಬಿಸಾಕುವ ಮಹಿಳೆಯರು ಇದ್ದಾರೆ* ಎಂಬುದು ಸುಳ್ಳಾಗಬೇಕು‌.
ಹೆಸರು, ಕೀರ್ತಿಯ ಬೆನ್ನು ಹತ್ತಿ ಚಾರಿತ್ರ್ಯ ಬಲಿಕೊಟ್ಟು ಪರಿತಪಿಸಬಾರದು.
ಅವಕಾಶ ಬೇಗ ಸಿಗಲಿ ಎಂದು ಬಯಸಬಾರದು.
ಕೆಲಸ ಸಾಧಿಸಲು ಕಾಲು ಹಿಡಿಯುವ, ತಲೆ ಹಿಡಿಯುವ ದುರುಳರ ಮುಖವಾಡಗಳ ಅರ್ಥಮಾಡಿಕೊಂಡು ಸಂಬಂಧ ಬೆಳೆಸಬೇಕು.

*ಸಿದ್ದು ಯಾಪಲಪರವಿ*

No comments:

Post a Comment