Wednesday, October 10, 2018

ಕಾಯಬೇಡ ಯಾರಿಗೂ

ಕಾಯಬೇಡ ಯಾರಿಗಾಗಿ

ಮಾಡಿದರೆ ಉಂಟು ನೂರೆಂಟು ಕೆಲಸಗಳು
ಭಾವನೆಗಳೊಂದಿಗೆ ಚಲ್ಲಾಟವಾಡುವವರ
ನಂಬಬೇಡ ನೀ ನಂಬಿದವರ ಮರೆತು

ಇತಿಹಾಸದಲಿ ಕಳೆದವರ ಭವಿಷ್ಯದಲಿ
ಹುಡುಕಿದರೂ ಸಿಗಲಾರರು
ಸಿಗಬಾರದೆಂದು ಹೋದವರ
ಮಲಗಿದಂತೆ ನಟಿಸುವವರ
ನಂಬಬಾರದು

ದಟ್ಟಡವಿಯಲಿ ಪಶು-ಪಕ್ಷಿಗಳ
ಒಡನಾಟ ಹಿತವಪ್ಪುವುದು
ಆದರೆ ನಸುನಗುತ ಹಿತಕಾಯದ
ಮನಜರೊಡನಾಟಕಿಂತ

ನಾಟಕದ ಆಟದಲಿ ಏನೂ
ನಾಟುವುದಿಲ್ಲ ಬರೀ ನಟನೆಯ
ಬಿಟ್ಟು
ಬಿಡು ಮನವೆ ಜಂಜಡದ ಬಂಧವ
ನೂಕಾಚೆ ಇಲ್ಲಸಲ್ಲದ ಭ್ರಮೆಯ

ಸಿಗಲಾರದ ಇತಿಹಾಸ
ಗೊತ್ತಿರದ ಭವಿಷ್ಯದ
ಕಳ್ಳಾಟದ ತಳ್ಳಾಟದಲಿ
ಕಳೆದುಕೊಳ್ಳುವುದು ಬೇಡ
ವರ್ತಮಾನದ ಸವಿಸುಖವ.

----ಸಿದ್ದು ಯಾಪಲಪರವಿ

No comments:

Post a Comment