ಓಶೋ ಎಂಬ ವಿಚಿತ್ರ ಅತಿಮಾನುಷ ಶಕ್ತಿ
ಆಚಾರ್ಯ ರಜನೀಶ್ ಉರ್ಫ್ ಓಶೋ ಇಡೀ ಜಗತ್ತು ಕಂಡ ಅಪರೂಪದ ಚಿಂತಕ.
Sex to superconscios ಪುಸ್ತಕ ಬರೆಯುವ ತನಕ ಒಳ್ಳೆಯ ಹೆಸರಿತ್ತು ಆದರೆ ಸೆಕ್ಸ್ ಪದ ಬಳಸಿದ ಕೂಡಲೇ ಮಡಿವಂತ ಸನ್ಯಾಸಿಗಳು ಹೌ ಹಾರಿಬಿಟ್ಟರು. ಸಾಲದ್ದಕ್ಕೆ ಸಾವಿರಾರು ರಂಜನೀಯ ಕತೆಗಳನ್ನು ಕಟ್ಟಿದರು.
ನಾನು ಡಿಗ್ರಿ ಓದುವಾಗ ಟೇಪ್ ಜಮಾನಾದಲ್ಲಿ ಒಂದೆರಡು ಟೇಪ್ ಕೇಳಿ ಸಂಭ್ರಮಿಸಿದ್ದೆ. ಲವ್, ಪ್ರೀಡಮ್ ಹಾಗೂ ಜಜ್ಮೆಂಟ್ ಕ್ಯಾಸೆಟ್ಟುಗಳನ್ನು ಹರಿದು ಹೋಗುವವರೆಗೆ ಕೇಳಿದೆ. ಮುಂದೆ ಇಂಗ್ಲಿಷ್ ಹಾಗೂ ಕನ್ನಡದ ಪುಸ್ತಕಗಳನ್ನು ಓದಲಾರಂಭಿಸಿದೆ.
ಬದುಕು ಮತ್ತು ಆಧ್ಯಾತ್ಮ ಗೊತ್ತಿರದ ಹೊರತು ಓಶೋ ಅರ್ಥ ಆಗುವುದೇ ಇಲ್ಲ.
ಧರ್ಮ, ರಿಲಿಜನ್, ದೇಶಪ್ರೇಮ, ದೇವರು, ದೇವಾಲಯ, ಚರ್ಚು, ಮಸೀದಿ ಮತ್ತು ಅಲ್ಲಿ ವಿವಿಧ ಹೆಸರುಗಳಲ್ಲಿ ಕರೆಯಲ್ಪಡುವ ಪೂಜಾರಿಗಳೆಂಬ ಮಧ್ಯವರ್ತಿಗಳ ಬಗ್ಗೆ ಜನಸಾಮಾನ್ಯರಿಗೆ ತುಂಬಾ ಗೊಂದಲಗಳಿವೆ.
ದೇವರನ್ನು ಒಲಿಸಿಕೊಳ್ಳಲು ಮಧ್ಯವರ್ತಿಗಳ ಅಗತ್ಯವೇ ಇಲ್ಲ ಎಂದು ಸಾರಿದ ಶರಣರು ಅನುಭವ ಮಂಟಪ ಎಂಬ ಸಂಸತ್ತಿನ ಮೂಲಕ ಇಷ್ಟಲಿಂಗ ಕೈಗಿತ್ತರೂ ನಮಗೆ ಆತ್ಮವಿಶ್ವಾಸವಿಲ್ಲ.
ಎಲ್ಲ ಧರ್ಮದ ಮೂಲಭೂತವಾದಿಗಳು ದೇವರು ಹಾಗೂ ಧರ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ಮೋಸ ಮಾಡುವುದು ಸಾಗಿಯೇ ಇದೆ. ಮಹಿಳೆಯರ, ಕೆಳವರ್ಗದ ಜನರ ಶೋಶಣೆಗೂ ಈ ದೇವರು ಮತ್ತು ಧರ್ಮವೆಂಬ ಅಸ್ತ್ರಗಳ ಬಳಕೆ.
ಅದಕ್ಕೆ ಬೇಕಾಗಿರುವ ಸಾವಿರಾರು ಕಟ್ಟು ಕತೆಗಳು. ಅವುಗಳ ನಿವೇದನೆ ಮೂಲಕ ಭಯದ ಬೀಜ ಬಿತ್ತಿ, ಬೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪುರೋಗಾಮಿ ವ್ಯವಸ್ಥೆ ಜಗತ್ತಿನ ಎಲ್ಲ ಕಡೆ, ಎಲ್ಲಾ ಧರ್ಮಗಳಲ್ಲಿಯೂ ಇದೆ.
ಧ್ಯಾನದ ಮೂಲಕ ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲದೇ ದೇವರಾಗುವ ಬಗೆ ಹೇಳಿಕೊಟ್ಟವನು ಬುದ್ಧ, ಅಲ್ಲಮ ಹಾಗೂ ಓಶೋ.
ಆದರೆ ಈ ತರಹದ ಮಾತುಗಳನ್ನು ಒಪ್ಪಿಕೊಳ್ಳಲು ನಮ್ಮ ಪೂರ್ವಾಗ್ರಹ ಮನಸ್ಥಿತಿ ಅಡ್ಡ ಬರುತ್ತಿದೆ.
ಒಳಗೆ, ಆಳದೊಳಗಿರುವ ಭಯ-ಭಕ್ತಿ ಅದನ್ನು ಒಪ್ಪಿಕೊಳ್ಳಲು ಅವಕಾಶ ಮಾಡಿಕೊಡುವುದೇ ಇಲ್ಲ.
ಬಲ-ಎಡ ಪಂಥಗಳ ಆರ್ಭಟದಲ್ಲಿ ಮಧ್ಯಮ ಆಧ್ಯಾತ್ಮ ಮಾರ್ಗ ಮಂಕಾಗುತ್ತಲೇ ಇದೆ.
ಇದಕೆ ಕಾರಣ ಆಧ್ಯಾತ್ಮವೂ ವ್ಯಾಪಾರವಾಗಿಬಿಡುವುದು.
ಕೆಲವರು ದೇವರ ಹೆಸರಿನಲ್ಲಿ ಶೋಶಣೆ ಮಾಡಿದರೆ ಮತ್ತೆ ಕೆಲವರು ಆಧ್ಯಾತ್ಮದ ಹೆಸರಿನಲ್ಲಿ ಮಹಾ ಮಾಂತ್ರಿಕರಾಗಬಯಸುತ್ತಾರೆ.
ಈ ಎಲ್ಲ ಅಪಾಯಗಳ ಮಧ್ಯೆ ಓಶೋ ಭಿನ್ನ ಎನಿಸುತ್ತಾನೆ. ಸತ್ಯದ ನಿಷ್ಠುರ ಪ್ರತಿಪಾದನೆ ಮಾಡಿದರೂ ಯಾವುದೋ ಕಮರ್ಶಿಯಲ್ ತಂತ್ರದ ಮೂಲಕ ಕೋಟ್ಯಾಂತರ ಅನುಯಾಯಿಗಳನ್ನು ಇಂದಿಗೂ ಉಳಿಸಿಕೊಂಡಿದ್ದಾನೆ.
ಅವನನ್ನು ದ್ವೇಶಿಸುವವರು ಕಾಮದ ಆರೋಪ ಮಾಡಿ ಅವನ ನಿಜವಾದ ಜ್ಞಾನ ಮತ್ತು ತಾಕತ್ತನ್ನು ಮರೆಮಾಚುತ್ತಾರೆ.
ಓಶೋ ತುಂಬಾ ಜಾಣ, ವಾಸ್ತವವಾದಿ, ಅವನು ಹೇಳಿದ ಪ್ರತಿ ಮಾತುಗಳನ್ನು ವಿಡಿಯೋ ಮೂಲಕ ದಾಖಲಿಸಿದ್ದಾನೆ. ಊಹಾಪೋಹಕೆ ಅಲ್ಲಿ ಅವಕಾಶವೇ ಇಲ್ಲ.
ಹೈಟೆಕ್ ಸಾಮರ್ಥ್ಯ ಇರುವ ಕ್ಯಾಮರಾ ಆ ಕಾಲದಲ್ಲಿ ಬಳಸಿದ ಹೆಗ್ಗಳಿಕೆ ಅವನಿಗೆ ಸಲ್ಲುತ್ತದೆ.
ಮನುಷ್ಯನ ಬದುಕಿನ ಪ್ರತಿಯೊಂದು ಸಂಗತಿಗಳನ್ನು ದಾಖಲೆ ಸಮೇತ ವಿವರಿಸುವ ಮಹಾಜ್ಞಾನಿ.
ಕೃಷ್ಣ, ಬುದ್ಧ, ಮಹಾವೀರ, ಹಿಮಾಲಯದ ಸಂತರು ಹಾಗೂ ಝೆನ್ ಸಿದ್ಧಾಂತಗಳನ್ನು ಆಳವಾಗಿ ಗ್ರಹಿಸಿದ ಏಕೈಕ ಸಂತ. ಗ್ರಹಿಕೆ ಹಾಗೂ ನಿರೂಪಣೆಯಲ್ಲಿ ಯಾವುದೇ ರೀತಿಯ ಗೊಂದಲಗಳೇ ಇಲ್ಲ.
ಗೀತೆಯ ಸಾರ, ಬುದ್ಧನ ಧ್ಯಾನ ಸೂತ್ರ, ಮಹಾವೀರನ ಅಹಿಂಸಾವಾದ ಅವನ ಮಾತಿನ ಸೆಳೆತಗಳು.
ಎದುರಗಡೆ ಅಮೆರಿಕದ ಭಕ್ತರನ್ನು ಕೂಡಿಸಿಕೊಂಡು, ಅವರಿಂದ ಪ್ರಶ್ನೆ ಕೇಳಿಸಿಕೊಂಡು ಉತ್ತರ ಕೊಡುವ ನೆಪದಲ್ಲಿ ಕ್ರಿಶ್ಚಿಯನ್ ಧರ್ಮದ ಮೂಲಭೂತವಾದವನ್ನು ಹಣಿಯುತ್ತಾನೆ.
ಕ್ರಿಶ್ಚಿಯನ್ ಧರ್ಮದ ಪ್ರೀಸ್ಟ್ ಹಾಗೂ ಅವರು ನಿಲ್ಲಿಸುವ ಕನ್ಫೆಸ್ ಬಾಕ್ಸನ್ನು ಲೇವಡಿ ಮಾಡುತ್ತಾನೆ. ಸಿನ್ ಎಂಬ ಪದ ಮನುಷ್ಯನ ಮನಸಿನಲಿ ಬಿತ್ತುವ ಭಯದ ಬೀಜವನ್ನು ಪ್ರಶ್ನಿಸಿದ್ದಕ್ಕಾಗಿ ಅಮೇರಿಕಾ ಅವನಿಗೆ ಸ್ಲೋ ಪಾಯಿಸನ್ ನೀಡಿ ಕೊಂದದ್ದು ಇತಿಹಾಸ.
ಭಾರತಕ್ಕೆ ಮರಳಿದ ಮೇಲೆ ಒಂದು ನಿಮಿಷ ವಿರಮಿಸದೇ ನಿರಂತರ ಪ್ರವಚನಗಳ ಮೂಲಕ ತನ್ನ ಆಕ್ರೋಶ ಹೊರ ಹಾಕಿದ್ದಾನೆ.
ಸಾವು ಹೊಟ್ಟಯಲಿ ಹರಿಯುತ್ತಿದ್ದರೂ ಲೆಕ್ಕಿಸದೇ ಮಾತನಾಡುತ್ತಲೇ ಪ್ರಾಣ ಬಿಟ್ಟ ಧೀಮಂತ, ಧೀರ.
ವಿಷಪ್ರಾಸನ ಮಾಡದಿದ್ದರೆ ಇನ್ನೂ ಕೆಲವು ಕಾಲ ನಮ್ಮೊಂದಿಗೆ ಬದುಕುತ್ತಿದ್ದ.
ಬದುಕಿರುವ ತನಕ ಹೇಳುವ ಎಲ್ಲ ಸಂಗತಿಗಳನ್ನು ಹೇಳಿ ಹೋಗಿದ್ದಾನೆ.
ಈಗ ಅವನ ಆಶ್ರಮದ ಅನುಯಾಯಿಗಳು YouTube ಮೂಲಕ ಅವನ ಚಿಕ್ಕ ಭಾಷಣಗಳನ್ನಾಗಿ ವಿಂಗಡಿಸಿದ್ದಾರೆ. ಆಧ್ಯಾತ್ಮ ಹಾಗೂ ಧರ್ಮದ ವ್ಯಾಖ್ಯಾನಗಳನ್ನು ಧಾರಾಳವಾಗಿ ಆಲಿಸಬಹುದು.
ಇತ್ತೀಚೆಗೆ ಒಬ್ಬ ಜನಪ್ರಿಯ ಮಠಾಧೀಶರೊಬ್ಬರು ಮಾತನಾಡುವಾಗ ಓಶೋ ಓದಿನ ಬಗ್ಗೆ ತಮ್ಮ ಅಸಹಾಯಕತೆ ತೋಡಿಕೊಂಡರು.
ಮಠದಲ್ಲಿ ಇವರು ಓಸೋ ಪುಸ್ತಕ ಓದುವುದನ್ನು ಕಂಡ ಹಿರಿಯ ಭಕ್ತರೊಬ್ಬರು ಪುಸ್ತಕ ಓದದಂತೆ ತಾಕೀತು ಮಾಡಿದರಂತೆ.
‘ ಅದಕ್ಕೆ ನಾನೀಗ ಮೇಲೆ ಕವರ್ ಹಾಕಿ ಏಕಾಂತದಲಿ ಓಶೋ ಪುಸ್ತಕ ಓದುತ್ತೇನೆ’ ಅಂದರು.
ಆ ಸ್ವಾಮಿಗಳ ಅಸಹಾಯಕತೆ ಹಾಗೂ ಭಕ್ತರ ಅಜ್ಞಾನಕೆ ಮರುಕಪಟ್ಟೆ.
ನನ್ನ ಪ್ರಾಮಾಣಿಕ ಅನುಭವವನ್ನು ನಿರ್ವಂಚನೆಯಿಂದ ಇಲ್ಲಿ ದಾಖಲಿಸ ಬಯಸುತ್ತೇನೆ.
*Love a sacred experience* ಎಂಬ ಮಾತುಗಳಲ್ಲಿ ಕಾಮದ ಬಗ್ಗೆ ಓಶೋ ನೀಡುವ ಕಟು ವಾಸ್ತವದ ವಿವರ ಕೇಳಿ ಮುಟ್ಟಿ, ಚಿವುಟಿ ನೋಡಿಕೊಂಡೆ.
ಧರ್ಮದ ಹೆಸರಿನಲ್ಲಿ ಲೈಂಗಿಕ ಶಿಕ್ಷಣ ನೀಡದೇ ಜನರನ್ನು ಅಜ್ಞಾನದಲ್ಲಿಟ್ಟ ಕಾರಣದಿಂದ ಉಂಟಾಗುವ ಎಲ್ಲ ಅಸಂತೋಷ, ಅತೃಪ್ತಿಗಳನ್ನು ವಿವರಿಸುತ್ತಾನೆ.
ಕೇಳಿದ ನಾವೆಲ್ಲ ನಿಜವಾದ ಕಾಮಾನುಭವದ ವಂಚಿತರೆನಿಸಿತು.
ಮದುವೆಯಾದ ಹೊಸದರಲ್ಲಿ ಈ ವಿಡಿಯೋ ನೋಡಿದ್ದರೆ ಎಷ್ಟೊಂದು ಚಂದಿತ್ತು ಎಂದು ಮರುಗಿದೆ.
ಈ ಕುರಿತು ಪ್ರಶ್ನೆ ಕೇಳಿದ ವಿದೇಶೀ ಮಹಿಳೆ ಮುಖ ಕೆಂಪಾಗಿ ಹೋಗುತ್ತದೆ.
ಕಾಮಾನುಭವ ಒಂದು ಸೆಲಿಬ್ರೇಶನ್ ಆಗಬೇಕೆಂಬ ಅವನ ವಿವರಣೆ ಪುಳಕಗೊಳಿಸಿ ಉತ್ತೇಜಿಸುವುದು ಸಹಜ.
ಇಂತಹ ಕೆಲವು ವಿವರಣೆ ಕದ್ದು ಕೇಳಿದ ಮೂಲಭೂತ ಮನೊಸ್ಥಿತಿ ಉಳ್ಳವರು ಅವನನ್ನು ಕಾಮುಕನೆಂದು ಬಿಂಬಿಸುತ್ತಾರೆ. ಅವನ ವಿರಣೆಯಲಿ ಯಾವುದೇ ರೀತಿಯ ವಿಕಾರವಿಲ್ಲದ ನಿಶ್ಚಲ, ನಿರ್ಮಲ ನಿರೂಪಣೆ ನನ್ನ ಪುಳಕಗೊಳಿಸಿತು.
ಈ ಭೂಮಿ ಮೇಲಿರುವ ಲಕ್ಷಾಂತರ ದಂಪತಿಗಳು ಅತೃಪ್ತ ಕಾಮದಿಂದಾಗಿ ಕಚ್ಚಾಡಿ ಸಾಯುತ್ತಾರೆ.
ಅದೇ ಅತೃಪ್ತ ಭಾವ ಮಾನಭಂಗ ಹಾಗೂ ಅನೈತಿಕ ಸಂಬಂಧಗಳಿಗೆ ಕಾರಣವಾಗುವುದು ಅಷ್ಟೇ ಸತ್ಯ.
ಮಡಿವಂತಿಕೆ ಹಾಗೂ ಧರ್ಮದ ಚೌಕಟ್ಟಿನಲ್ಲಿ ನಮ್ಮನ್ನು ಕೂಡಿ ಹಾಕಿ ಅತೃಪ್ತ ಆತ್ಮಗಳಾಗಿ ಸಾಯಿಸಿಬಿಡುತ್ತಾರೆ. ಚಾರಿತ್ರ್ಯದ ಹೆಸರಿನಲ್ಲಿ ಮನುಷ್ಯ ಪಾಪ ಪ್ರಜ್ಞೆಯಲಿ ಸಾಯುವಂತೆ ಮಾಡುತ್ತಾರೆ.
ಕಾಮದ ವಿವಿಧ ಆಯಾಮ ಹಾಗೂ ಲೈಂಗಿಕ ವಾತಾವರಣದ ವಿವರಣೆ ಕೇಳಿದಾಗ ಕಾಮ ಅಲ್ಲ ಅದು ಮಿಲನ ಮಹೋತ್ಸವ ಆಗುವುದರಲ್ಲಿ ಸಂಶಯವೇ ಇಲ್ಲ.
ಗಂಡು-ಹೆಣ್ಣು, ಚರಿತ್ರೆ-ಚಾರಿತ್ರ್ಯ ಎಂಬ ಸಂಕೋಲೆಯಲ್ಲಿ ಮನುಷ್ಯನ ಇತಿಹಾಸ ಬರೆಯುತ್ತ ವರ್ತಮಾನ ಸಾಯಿಸಿಬಿಡುವ ಸ್ಯಾಡಿಸಂ ಅರ್ಥವಾಗುತ್ತದೆ.
ಹೆಣ್ಣಿನ ಇಡೀ ದೇಹದ ಸೌಂದರ್ಯದ ತಾಕತ್ತನ್ನು ಹಾಗೂ ಗಂಡಿಗಿರುವ ಜೆಂಟಾಲಿಯದ ಮಿತಿಯನ್ನು ಲೇವಡಿ ಮಾಡಿ ಪುರುಷ ಪ್ರಧಾನ ವ್ಯವಸ್ಥೆ ಹುಟ್ಟು ಹಾಕಿದ ಪುರುಷರನ್ನು ಅಲ್ಲಾಡಿಸುತ್ತಾನೆ.
ಹೀಗೆ ಇಡೀ ವ್ಯವಸ್ಥೆಯ ಸಾವಿರಾರು ಲೋಪದೋಷಗಳನ್ನು ತನ್ನ ಮಾತುಗಳ ಮೂಲಕ ಜಾಡಿಸುತ್ತಾನೆ.
ಓಶೋ ಕಾಮದಾಚೆಗಿರುವ ಅನೇಕ ವಾಸ್ತವಗಳನ್ನು ತೆರೆದಿಟ್ಟಿದ್ದಾನೆ. ನಿಮ್ಮ ಕುತೂಹಲಕ್ಕಾಗಿ ಮೇಲಿನ ಒಂದು ಮಾತಿನ ಪ್ರಸಂಗ ಹಂಚಿಕೊಂಡೆ.
ಉಳಿದ ವಿಷಯಗಳ ಆಗಾಗ ಹಂಚಿಕೊಂಡು ಹಗುರಾಗುವೆ.
*ಸಿದ್ದು ಯಾಪಲಪರವಿ*
No comments:
Post a Comment