Sunday, October 21, 2018

ಹೋರಾಟಕೀಗ

*#metoo ಹೋರಾಟಕೀಗ ಎಡ-ಬಲ ರೋಗ*

ನಮ್ಮ ಸಮಾಜದ ಒಳನೋಟದಲಿ, ಆಲೋಚನಾ ಕ್ರಮದಲ್ಲಿ ಸೈದ್ಧಾಂತಿಕ ವಾಸನೆ ಹೊಡೆಯುತ್ತಲೇ ಇರುತ್ತದೆ.
ಎಡ-ಬಲ, ಮೇಲು-ಕೀಳು, ಗಂಡು-ಹೆಣ್ಣು, ಕಪ್ಪು-ಬಿಳಿ,ಬಡವ-ಬಲ್ಲಿದ…
ಹೀಗೆ ತರತಮದ ಪೆಟ್ಟಿಗೆ ಎಲ್ಲ ಹೋರಾಟಗಳು ನಲುಗಿ ಹೋಗುತ್ತವೆ.

ಅಮೇರಿಕಾ ಮೂಲದ ಚಳುವಳಿ metoo ಭಾರತಕ್ಕೆ ಕಾಲಿಟ್ಟ ಕೂಡಲೇ ರಾಜಕಾರಣ ಶುರುವಾಯಿತು.
ನಮ್ಮದು ಮೊದಲೇ ಮಡಿವಂತ ದೇಶ. ಚಾರಿತ್ರ್ಯಹರಣವೆಂಬ ಅಸ್ತ್ರ ಹಿಡಿದು ಮಾನ ಹರಾಜು ಹಾಕುವ ಕುತಂತ್ರ ಮನಸ್ಥಿತಿ.
ಒಬ್ಬ ವ್ಯಕ್ತಿಯನ್ನು ಭ್ರಷ್ಟಾಚಾರ ಆರೋಪದ ಮೇಲೆ ಅಧಿಕಾರದಿಂದ ಕೆಳಗಿಳಿಸಲು ನೈತಿಕ ಹೊಣೆಗಾರಿಕೆಯೆಂಬ ಎಂಬ ಪದ ಬಳಕೆ ಚಾಲ್ತಿಯಲ್ಲಿತ್ತು.

ಆದರೀಗ ಭ್ರಷ್ಟಾಚಾರ ದೊಡ್ಡ ಸಂಗತಿಯಾಗಿ ಉಳಿಯಲಿಲ್ಲ. ಸಾರ್ವಜನಿಕ ಬದುಕಿನಲ್ಲಿ ಬೆಳೆಯಬೇಕಾದರೆ ಹಣದ ಚಲ್ಲಾಟ ಅನಿವಾರ್ಯವೆಂಬ ವಾತಾವರಣ.

ಈಗ ಕಡೆಯ ಅಸ್ತ್ರವಾಗಿ ಚಾರಿತ್ರ್ಯ ಹರಣದ ಸೆಕ್ಸ್ ಸ್ಕ್ಯಾಂಡಲ್ ತೀವ್ರ ಚಾಲ್ತಿಯಲ್ಲಿದೆ.
ಸೆಲಿಬ್ರಿಟಿಗಳ ಮುಖಕ್ಕೆ ಮಸಿ ಬಳಿಯಲು ಅದೇ ರಂಗದಲ್ಲಿ  ಪೈಪೋಟಿಯಲ್ಲಿರುವ ಇನ್ನೊಬ್ಬ ಪ್ರಯತ್ನಿಸುತ್ತಿರುತ್ತಾನೆ.
Professional jealous ಎಂಬ ರೋಗ ಇಂದಿಗೂ ವಾಸಿಯಾಗಿಲ್ಲ, ಆಗುವುದೂ ಇಲ್ಲ.

ಸ್ಟಾರಡಮ್ ದುನಿಯಾಗಳಾದ ಸಿನೆಮಾ, ಕ್ರೀಡೆ, ರಾಜಕಾರಣ, ಅಕ್ಯಾಡೆಮಿಕ್, ಪತ್ರಿಕೋದ್ಯಮದಂತಹ ಬಹು ಚರ್ಚಿತ ರಂಗಗಳಲ್ಲಿ ಹಣದೊಂದಿಗೆ ಪ್ರತಿಷ್ಟೆಯ ರುದ್ರನರ್ತನ.

ಪೈಪೋಟಿಯ ನೆಪದಲ್ಲಿ ಪರಸ್ಪರ ಮುಖಕ್ಕೆ ಮಸಿ ಬಳಿಯುವ ಹುಮ್ಮಸ್ಸಿನಲ್ಲಿ ಎಲ್ಲರ ಮಾನ ಹರಾಜು.
ಮಹಾಭಾರತ ಓದಿ ಬೆಳೆದವರು ನಾವು. ಧರ್ಮ,ಅಧರ್ಮಗಳ ತಾಕಲಾಟದಲ್ಲಿದ್ದುಕೊಂಡೆ ಅಧರ್ಮೀಯ ಒಲುಮೆ.

ನಮ್ಮ ಪಾಡಿಗೆ ನಾವು ನಮ್ಮ ಮನೆಯಲ್ಲಿದ್ದರೆ ಮಾನಾಪಮಾನದ ಮಾತೇ ಇರೋಲ್ಲ.
ಆದರೆ ಪ್ರತಿಯೊಂದು ಜೀವಕಿರುವ ಜನಪ್ರಿಯತೆಯ ತುಡಿತ, ಸಾರ್ವಜನಿಕ ಜೀವನದ ಸೆಳೆತ, ಹಣ,ಕೀರ್ತಿಯ ಹುಚ್ಚು ತಪ್ಪಲ್ಲ ಅನಿಸಿ ಅದು ಉಲ್ಬಣಗೊಂಡಾಗ ರೋಗವಾಗಿ ಸಮಾಜದ ಆರೋಗ್ಯ ಹಾಳಾಗುತ್ತೆ.

ದ್ರೌಪದಿಯ ಕುಹಕ ನಗು ದುರ್ಯೋಧನನ್ನು ಅವಮಾನಿಸಿತು. ವಸ್ತ್ರಾಪಹರಣದ ಮೂಲಕ ಸೇಡು ತೀರಿಸಿಕೊಳ್ಳುವ ದ್ವೇಶದಿಂದ ಕುರುಕ್ಷೇತ್ರ ಕಾಳಗ ನಡೆಯಿತು.

ಅಲ್ಲೂ ಅದೇ ಹೆಣ್ಣು ಕೇಂದ್ರಿತ ಯುದ್ಧ, ಹೆಣ್ಣಿಗಾಗಿ ಹೊಡೆದಾಟವೆಂಬ ಮರು ವ್ಯಾಖ್ಯಾನ.
ಆಧುನಿಕ ದಿನಮಾಗಳಲ್ಲೂ ಅದೇ ಸ್ತ್ರೀ ಕೇಂದ್ರಿತ ರಾಮಾಯಣ, ಮಹಾಭಾರತ.

ದ್ರೌಪದಿಯರ ಮಾನಾಪಹರಣ‌ ಭಿನ್ನ ರೀತಿಯಲ್ಲಿ.
ಏನೋ ಗಳಿಸುವ ಭರದಲ್ಲಿ ಮತ್ತೇನನ್ನೊ ಕಳೆದುಕೊಳ್ಳುವುದೇ ಹೆಚ್ಚು.

ಈಗ ಮತ್ತದರ ಪುನರ್ ಸೃಷ್ಟಗೆ #metoo ಬಳಕೆ, ಸೆಲಿಬ್ರಟಿಗಳ ಮಾನ ಅಲ್ಲ ಹೆಸರು ಕೆಡಿಸಲು.
ಇಷ್ಟು ದಿನ ಗಂಡು ಹೆಣ್ಣಿನ ಮಿತಿಯಲ್ಲಿ ಓಡಾಡುತ್ತಿದ್ದ ಚಳುವಳಿ ಬಹುಬೇಗ ರಾಜಕಾರಣದ ಸ್ವರೂಪ ಪಡೆದುಕೊಂಡಿದೆ.
ಈ ಹೋರಾಟಕ್ಕೆ ಎಡಪರ,ಬಲಪರ ಸಿದ್ಧಾಂತಗಳ ಮಾನದಂಡದ ಅಗತ್ಯವಿರಲಿಲ್ಲ.

ಗಂಡು-ಹೆಣ್ಣು ತುಂಬಾ ಹತ್ತಿರವಾಗಿ ಮೈಮನಗಳ ಸಾಮಿಪ್ಯದ ಸುಳಿಗೆ ಸಿಗುವ ಅವಕಾಶ ಸಿನೆಮಾ ರಂಗದಲ್ಲಿ ಎಲ್ಲಕ್ಕಿಂತ ಹೆಚ್ಚು. ಮಾನಸಿಕವಾಗಿ ಹತ್ತಿರವಾಗಿ ಭಾವನೆಗಳ ಹಂಚಿಕೊಳ್ಳುವ ಮೂಲಕ ಮನಸಿನೊಂದಿಗೆ ಮೈ ಕೂಡ ಕರಗಿ ಹೋಗುವುದು ಅಸಹಜವಲ್ಲ. ಇದು ಸೃಷ್ಟಿ ಸಮ್ಮತ ಕೂಡುವಿಕೆ, ಹಾದರದ ಬಣ್ಣ ಬಳಿಯಲಾಗದು, ಬಳಿಯಬಾರದು ಕೂಡ.

ಪರಸ್ಪರ ಆಸಕ್ತಿ, ಸೆಳೆತ, ಸ್ನೇಹವೂ ಇಲ್ಲದಾಗ ಮೀಟೂ ಅನಿಸುವುದು ಸಹಜ. ತಿರಸ್ಕರಿಸಿದ ಕೂಡಲೇ ಸೂಕ್ಮವಾಗಿ ಅರ್ಥಮಾಡಿಕೊಂಡು ದೂರ ಸರಿಯುವುದು ಜಾಣತನ.
ಮನದೊಳಗಿನ ತುಮುಲ, ವಿಕಾರ ಆಸೆಗಳು ದೊಡ್ಡವರೆನಿಕೊಂಡು ಬೆಳೆದವರಿಗೆ ಅಷ್ಟೇ ದೊಡ್ಡದಾಗಿ ಜೀವ ಹಿಂಡುತ್ತವೆ.
ನಿರ್ಲಜ್ಯ ಮನಸು, ಹಣ, ಖ್ಯಾತಿಯ ಮದದಿಂದಾಗಿ ಪಿತ್ತ ನೆತ್ತಿಗೇರಿರುತ್ತದೆ.

ಅಮೇರಿಕ ಹಾಗೂ ಯುರೋಪಿಯನ್ ಸಂಸ್ಕೃತಿಗಳ ಬದುಕನ್ನು ನೋಡಿ, ಕೇಳಿದ ಮೇಲೂ ಹೀಗೆ ನಡೆದುಕೊಳ್ಳುವದು ಎಷ್ಟೊಂದು ಸಮಂಜಸ.
ಮುಕ್ತ ಲೈಂಗಿಕ ವಾತಾವರಣದ ದೇಶಗಳಲ್ಲಿ ಜನ ಸಾಮಿಪ್ಯ ಬಯಸಿ propose ಮಾಡುತ್ತಾರೆ, reject ಮಾಡಿದಾಗ ಸಹಜವಾಗಿದ್ದುಬಿಡುತ್ತಾರೆ. ಪ್ರತಿಭಟಿಸುವ ಮಟ್ಟಕ್ಕೆ ಇಳಿಯುವುದಿಲ್ಲ.

ಮನಸಿನ ಕಹಿಯ ಮರೆತು ಸ್ನೇಹಿತರಾಗಿ ನಂಜಿಲ್ಲದೆ ಬೆರೆಯುವ ಮುಕ್ತ ವಾತಾವರಣದ ಅಗತ್ಯವಿದೆ.
*ಪರಸ್ಪರ* ಎಂಬ ಅನುಸಂಧಾನ ಅರಿಯದವರಂತೆ ನಡೆದುಕೊಂಡಾಗ ಇನ್ನಿಲ್ಲದ ರಾದ್ಧಾಂತ.
ಅನೇಕ ಕಾರಣಗಳ ಮೇಲೆ ವಿದೇಶ ಸುತ್ತುವ ಈ ಸೆಲಿಬ್ರಿಟಿಗಳಿಗೆ ಇಂತಹ ಸೂಕ್ಷ್ಮ ಸಂಗತಿಗಳು ಯಾಕೆ ಅರ್ಥವಾಗುವುದಿಲ್ಲ.

ಅಂತಹ ಮುಜುಗರದ ಪ್ರಸಂಗ ಎದುರಾದಾಗ ತಕ್ಷಣ ನಿರಾಕರಿಸದೇ ಸಹಿಸಿಕೊಂಡು ಕೆಲಸ ಮುಗಿದ ತುಂಬಾ ದಿನಗಳ ನಂತರ ಬೀದಿ ರಂಪ ಮಾಡುವುದು ಕೂಡ ಅಷ್ಟೇ ಅಪ್ರಬುದ್ಧ ನಡೆ.

ಊಟ,ನಿದ್ರೆ,ನೀರಿನಷ್ಟು ಸಹಜವಿರಬೇಕಾದ ಕಾಮದ ವೈಭವೀಕರಣ ನಮ್ಮ ದೌರ್ಬಲ್ಯ.
ನಾನು, ನೀವು ಯಾರು ಇದಕೆ ಹೊರತಾಗಲಿಲ್ಲವಲ್ಲ ಎಂಬ ಬೇಸರ, ಒಳಗೊಳಗೆ. ನಮ್ಮೊಳಗೆ.
ಇವರು ಯಾವುದೋ ರಾಜಕೀಯ ಪಕ್ಷಕ್ಕೆ ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಮೀಟೂ ವಿಷಯವನ್ನು ಇದರ ವ್ಯಾಪ್ತಿಗೆ ಸೇರಿಸುವುದು ಅಸಂಗತ, ಅಪ್ರಸ್ತುತ. 

“ನಟ ಕ್ಷಮೆ ಕೇಳಬೇಕು” ಎಂದು ಇನ್ನೊಂದು ಗುಂಪು ಹೇಳುವ ಮೂಲಕ ಪ್ರಕರಣಕ್ಕೆ ರಾಜಕೀಯ ವಾಸನೆ ಬಡಿದುಕೊಂಡಿತಲ್ಲ ಎಂಬ ವಿಷಾದ.

*ಸಿದ್ದು ಯಾಪಲಪರವಿ*‌

No comments:

Post a Comment