*ರಾಜಕಾರಣದ ಶಕ್ತಿ ಕೇಂದ್ರಗಳಿಂದ ಅಂತರ ಅನಿವಾರ್ಯ*
ವೈಯಕ್ತಿಕ ಸ್ನೇಹವಿದ್ದರೂ ವಿಮರ್ಶಿಸುವ ಪ್ರಸಂಗ ಬಂದಾಗ ಕಟುವಾದ ಮಾತುಗಳಿಂದ ಬರೆಯುವ ತಾಕತ್ತು ಹೊಂದಿದ್ದ ಲಂಕೇಶ್ ಸದಾ ರಾಜಕಾರಣಿಗಳಿಂದ ಆ ಅಂತರ ಕಾಪಾಡಿಕೊಂಡಿದ್ದರು.
ಅದು ಅವರ ನೈತಿಕ ಶಕ್ತಿಯಾಗಿತ್ತು ಕೂಡ.
ಇತ್ತೀಚಿನ ನನ್ನ ಪ್ರತಿಕ್ರಿಯೆ ಗಮನಿಸಿದ ಹಿರಿಯ ಪ್ರಾಧ್ಯಾಪಕ, ಕಿರುತೆರೆ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿದ ಹಿತೈಷಿಗಳು ಈ ಮಾತನ್ನು ನನಗೆ ಮತ್ತೆ ನೆನಪಿಸಿಕೊಟ್ಟರು.
ಲಿಂಗಾಯತ ಧರ್ಮದ ಕುರಿತ ಪ್ರತಿಕ್ರಿಯೆ ಬರೆಯುವಾಗ ಸಾಂದರ್ಭಿಕವಾಗಿ ಮಾಜಿ ಮುಖ್ಯಮಂತ್ರಿಗಳನ್ನು ಹೊಗಳಿದ್ದು ಅವರಿಗೆ ಸರಿ ಅನಿಸಿಲ್ಲ.
ಒಬ್ಬ ಬರಹಗಾರ ಅನವಶ್ಯಕವಾಗಿ ರಾಜಕಾರಣಿಗಳನ್ನು ಹೊಗಳಿ ಕ್ಲೀನ್ ಚಿಟ್ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ.
“ಇಂದಿನ ಪ್ರತಿಯೊಬ್ಬ ರಾಜಕಾರಣಿ ಏನೇ ಮಾಡಿದರು ರಾಜಕೀಯ ಲಾಭದ ಲೆಕ್ಕಾಚಾರ ಮುಖ್ಯವಾಗಿರುತ್ತದೆ.
ಕೇವಲ ಸೈದ್ಧಾಂತಿಕ ಕಾರಣಕ್ಕಾಗಿ ಬೆಂಬಲಕ್ಕೆ ಬರುವುದಿಲ್ಲ “
ಎಂಬ ಅವರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ, ನನಗೆ ಆ ಎಚ್ಚರಿಕೆಯೂ ಇದೆ.
ಸಾಂದರ್ಭಿಕವಾಗಿ ಇನ್ನೊಬ್ಬ ರಾಜಕಾರಣಿಗೆ ಹೋಲಿಸುವ ಭರದಲಿ ನನ್ನಿಂದ ತಪ್ಪಾಯಿತು ಎಂದು ಕ್ಷಮೆಯಾಚಿಸಿದೆ.
ನಮ್ಮ ಸಿದ್ಧಾಂತಗಳನ್ನು ಗೌರವಿಸಿ ಬೆಂಬಲಿಸುವ ಪಕ್ಷಕ್ಕೆ ಮತ ನೀಡಿ ಎಂದು ಹೇಳಿಕೆ ಕೊಡುವದು, ಅವರ ಪರ ಬರಹಗಾರ ನಿಲ್ಲುವದಕ್ಕೆ ನನ್ನ ವಿರೋಧವಿದೆ.
ಸಂವಿಧಾನಕ್ಕೆ ಗೌರವ ನೀಡುವ ಕಾರಣದಿಂದ ಮತ ಚಲಾಯಿಸಿ ಕರ್ತವ್ಯ ಮೆರೆಯಬೇಕು. ರಾಜಕಾರಣದ ನಿಲುವು ಸಾರ್ವತ್ರಿಕ ಆಗಬಾರದೆಂಬುದನ್ನು ನಾನು ಗೌರವಿಸುತ್ತೇನೆ.
*ನಮ್ಮವರ‌್ಯಾರೋ ಸ್ಪರ್ಧಿಸಿದಾಗ ಸಿದ್ಧಾಂತಗಳ ಮರೆತು ಮತ ಹಾಕಿದ ಆತ್ಮವಂಚನೆ ನಮ್ಮ ಒಡಲೊಳು ಹೊತ್ತಿ ಉರಿಯುವುದು ಅಷ್ಟೇ ಸತ್ಯ*.
ಆದರದು ಬರಹದ ಮೂಲಕ ದಾಖಲಾಗಿ ತನ್ನ ಘನತೆ ಕಳೆದುಕೊಳ್ಳಬಾರದು.
ನಿರಂತರ ಬರೆಯುವ ಭರದಲ್ಲಿ, ಸೈದ್ಧಾಂತಿಕವಾಗಿ ಯಾರಾದರು ನಮ್ಮನ್ನು ಬೆಂಬಲಿಸುವ ನಾಟಕವಾಡಿದಾಗ ನಾವು ಮೈಮರೆತು ಪುಳಕಗೊಳ್ಳುವದು ಸಹಜ.
ಒಮ್ಮೊಮ್ಮೆ ವೇದಿಕೆ ಮೇಲಿದ್ದಾಗ ಸಭಾ ಗೌರವ ಕಾಪಾಡಲು ಹೊಗಳುವ ಅಪಾಯ ನಮ್ಮ ಪಾಲಿಗಿರುತ್ತದೆ. ಅದು ಅನಿವಾರ್ಯದ ದಾಕ್ಷಿಣ್ಯ.
ಆದರೆ ಬರೆಯುವಾಗ ಲೇಖಕನಿಗೆ ಇರಬೇಕಾದ ನಿಷ್ಟುರತೆಯನ್ನು ನೆನಪಿಸಿ ಎಚ್ಚರಿಸಿದ ಹಿರಿಯರ ಔದಾರ್ಯಕ್ಕೆ ಋಣಿಯಾಗಿದ್ದೇನೆ.
*ಜನತಾ ಪರಿವಾರದ ಜೆ.ಎಚ್. ಪಟೇಲ್, ಎಂ.ಪಿ.ಪ್ರಕಾಶ, ಬಾಪು ಹೆದ್ದೂರಶೆಟ್ಟಿ ಹಾಗೂ ಇತರ ಕೆಲವರ ಸಂಪರ್ಕ ರಾಜಕಾರಣದ ಸೆಳೆತ ಹೆಚ್ಚಿಸಿದ್ದು ನಿಜ*.
ಆದರೆ ವರ್ತಮಾನದ ರಾಜಕಾರಣಕೀಗ ಯಾವುದೇ ಸಿದ್ಧಾಂತಗಳಿಲ್ಲ. ಬರೀ ಚುನಾವಣಾ ರಾಜಕಾರಣದ ಅಧಿಕಾರದ ಹಂಬಲ.
ಇಲ್ಲಿ ಪ್ರಾಮಾಣಿಕತೆ, ಸಿದ್ಧಾಂತಗಳು ವೇದಿಕೆಗಷ್ಟೇ ಸೀಮಿತ. ಯಾವುದೇ ಕಾರಣಕ್ಕೂ ಅವರ ಮಾತುಗಳನ್ನು ನಂಬಬಾರದ ಸ್ಥಿತಿ. ಎರಡು ದಶಕಗಳ ರಾಜಕೀಯ ವಾತಾವರಣದಲ್ಲಿ ಬರೀ ಜಾತಿ, ಹಣ ಹಾಗೂ ತೋಳ್ಬಲಕ್ಕೆ ಪ್ರಾಧಾನ್ಯತೆ.
ಈ ಅರಿವಿದ್ದರೂ ಸಾಂದರ್ಭಿಕವಾಗಿ ನಾನು ಅಧಿಕಾರಸ್ಥರ ಪರ ಬರೆದದ್ದಕ್ಕೆ ಕ್ಷಮೆ ಕೋರುತ್ತೇನೆ.
ನನ್ನ ನಿರಂತರ ಬರಹದ ಮೇಲಿನ ಪ್ರೀತಿ, ಅಭಿಮಾನ ಇಟ್ಟುಕೊಂಡ ಸಹೃದಯ ಮನಸುಗಳ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತೇನೆ.
*ಸಿದ್ದು ಯಾಪಲಪರವಿ*
No comments:
Post a Comment