ಕಾವ್ಯ ಕನ್ನಿಕೆ
ಮಾತೇ ಹೊರಡಲಿಲ್ಲ ಎಂಬುದರ
ಅರ್ಥ ಇಂದೇ ತಿಳಿಯಿತು
ಶಿಲಾ ಬಾಲಕಿಯ ಪ್ರತಿರೂಪ
ಅನುಪಮ ದಿವ್ಯಾನುಭವ
ಜೀವಂತಿಕೆಯ ನವ ಚೇತನ
ಎಲ್ಲೋ ಇದ್ದು ಇಷ್ಟು ದಿನ
ಒಂದಿನಿತು ಸದ್ದು ಮಾಡದೇ
ಅಡಗಿ ಕುಳಿತು ಅಣಕಿಸಿದೆ
ದೇಹದ ಪ್ರತಿ ಅಂಗುಲದಲಿ
ಜೀವಸೆಲೆಯ ನಲಿವಿನ ನರ್ತನ
ಎದೆಗಾರಿಕೆ ಬೇಕು ಕಣ್ಣು
ಕೊರೆಯುವ ಮೈಮಾಟ
ದಿಟ್ಟಿಸಲು ದಿಟ್ಟತನವೂ ಬೇಕು
ಕಣ್ಣು ಪಿಳುಕಿಸದೇ ತದೇಕದಿ
ನೋಟ ಕೀಳದೇ ನೋಡುತ್ತ
ನೋಡುತ್ತಾ ಬೆರಗಾದೆ
ಹುಡುಕುತ್ತಲೇ ಇದ್ದೇನೆ ನನ್ನ ನಾ
ನಿನ್ನಲಿ ಕಳಕೊಂಡು
ಹುಡುಕಿದರೆ ಹೊರಗೆ ಸಿಕ್ಕೇನು ಹೇಗೆ ?
ಅಪ್ಪಟ ದೇಸಿಯ ಚಲುವಿನ ಒಲವ
ಧಾರೆ ಎಲ್ಲಂದರಲ್ಲಿ ಹರಿಯುತಿರಲು
ಹಿಡಿದು ಕಟ್ಟುವುದು ಕನಸಿನ ಮಾತು
ಚಂದಿರನ ಕಾಂತಿ ನಕ್ಷತ್ರಗಳ ನಲಿವು
ಹಾಲು ಗಲ್ಲಕೆ ಬೆಲ್ಲದ ಸೊಗಡು
ನೀಳ ನಾಸಿಕದ ಮೇಲೆ ಗಿಣಿಯ ಆಟ
ಕೆಳಗೆ ತುಟಿಗಳ ರಂಗು ರಂಗಿನಾಟ
ಸಾಕು ಬಿಡು ಈ ಜನುಮಕೆ ಹೆಚ್ಚು
ಹೇಳಿದರೆ ಹುಚ್ಚು ಹಿಡಿಸಿಕೊಂಡು
ಬೆನ್ನು ಬಿದ್ದಾರು ?
ದೃಷ್ಟಿ ತೆಗೆಯಲು ಸಾವಿರ ಪೊರಕೆ ಸಾಲದು
ನಾ ದೃಷ್ಟಿ ಕೀಳುವತನಕ ನಿರ್ಗಮಿಸದಿರು
ಹಿಡಿದು ಬಚ್ಚಿಡುವೆ ಮನೋಮಂದಿರದಲಿ
ಮಹಾ ರಾಣಿಯ ಹಾಗೆ
ಶಬ್ದಗಳು ನಿಶಬ್ದವಾಗಿ ಮಾತು
ಮೌನವಾದ ಹೊತ್ತಲಿ
ಶಬ್ದಗಳಲಿ ಪೋಣಿಸಿ ಮಾಲೆಯ
ಧರಿಸಿ ನಲಿದು ಹಾಡಿ
ಕುಣಿಯುವೆ ನಿನ್ನ ಒಲುಮೆಗಾಗಿ.
---ಸಿದ್ದು ಯಾಪಲಪರವಿ
No comments:
Post a Comment