Tuesday, July 11, 2017

ಹೆಣ್ಣು ಮಾಯೆಯಲ್ಲ

ಹೆಣ್ಣು ಮಾಯೆಯಲ್ಲ

ತಾಯಾಗಿ ಹಡೆದು ಬದುಕಿನ
ಸೂತಕವ ಕಳೆದೆ      

ಸೋದರಿಯಾಗಿ ಒಡನಾಡಿ
ಗೆಳೆತನದ ಹಂಗು ಹರಿದೆ        

ಗೆಳತಿಯಾಗಿ ಕಾಡಿ        
ಭಾವನೆಗಳ ಅರಳಿಸಿದೆ        

ಸಂಗಾತಿಯಾಗಿ ಬಾಳ ಬೆಳಗಿ  
ಸಂತೃಪ್ತಿಯ ಸಂಭ್ರಮಿಸಿದೆ              

ಮಗಳಾಗಿ ಕರುಳಧಾರೆ
ಹರಿಸಿದೆ       

ಮತ್ತದೇ ಬಂಧನ ಮಾಯಜಾಲದ    
ಅನುಬಂಧ

ಕನಸ ಕಟ್ಟಿ ಕವಿತೆಯಾಗಿ 
ಹಾಡಲು ಶಬ್ದಗಳಲಿ ಜೊತೆಯಾದೆ    
ಕೊರಳ ರಾಗಕೆ ಶೃತಿ ಲಯವಾದೆ  
  
ಕನಸಲಿ ಬೆಳಗುತ ಮುಪ್ಪಿನ ಹಂಗು 
ದೂರಾಗಿಸುವ ಚೇತನವಾದೆ            

ತಾಯಾಗಿ ಸತಿಯಾಗಿ ಮಗಳಾಗಿ
ಸಖಿಯಾಗಿ ಹತ್ತಾರು ರೂಪದಲಿ
ನನ್ನ ಕಾಡಿ ಕಲಕುತ ಮನದ ಭಾವಗಳ
ಝೇಂಕರಿಸುತ                

ಒಳಗೊಳಗೇ ಹೂಂಕರಿಸುತ            
ಸರ್ವ ವ್ಯಾಪಕವಾದೆ                       

ಹುಸಿ ಮುನಿಸು ಪಿಸು ಮಾತು 
ಬಿಸಿಯಪ್ಪುಗೆಯ ಕಚಗುಳಿಯಲಿ    
ಕರಗದ ಕ್ಷಣಗಳಿಲ್ಲ                          

ಈಗಲೂ ಅಷ್ಟೇ ಹಲವು ರೂಪಗಳಲಿ
ಅವತರಿಸಿ ಕಾಡುವ ನೆಲಮುಗಿಲು       
  
ಕಣ್ಣ ಮಿಂಚು ಹೊಳೆವ ರಂಗು          
ಎನ್ನ ಮಿತಿಯ ಹಂಗು                     

ಬೇಡುವೆ ಕಾಡುವೆ ಸೋತು ಗೆಲ್ಲುವೆ  
ಅರಳುವೆ ಕೆರಳುವೆ ಕರಗುವೆ

ನಿನ್ನ ಮಡಿಲಲಿ ಪುಟ್ಟ
ಮುಗ್ಧ ಮಗುವಾಗಿ...             
                
ನಿತ್ಯ ನೂತನವಾಗಿ

---ಸಿದ್ದು ಯಾಪಲಪರವಿ

ಮಹಿಳಾ ದಿನಾಚರಣೆಯ ಶುಭಾಶಯಗಳು

No comments:

Post a Comment