Sunday, July 2, 2017

ಒಮ್ಮೆ ಪಡೆಯೋಣ

ಒಮ್ಮೆ ಪಡೆಯೋಣ

ರಾಜಮಾರ್ಗದಲಿ ನಡೆಯುವಾಗ
ನೂರೆಂಟು ಅಡೆತಡೆಗಳು
ಬೇಕಿದ್ದ ಪಡೆಯಲು ಕಳ್ಳ
ಹಾದಿ ಬೇಡ ಬದುಕಿನ ಬೆಲೆ
ಇರುವುದು ಕೊನೆಯ ಅಧ್ಯಾಯದಲಿ

ಇರುವವರು ಇರುತ್ತಾರೆ ಹೋಗುವವರು
ಹೋಗುತ್ತಾರೆ ತಡೆಯಲಾಗದು
ಯಾರನೂ

ಇರಲಿ ಬರಲಿ ಮುದ ನೀಡಲಿ
ಎಂಬ ಹಟ ಬೇಡ
ಎಲ್ಲವೂ ಎಲ್ಲರೂ ದಕ್ಕಲಿ
ಎಂಬ ದಾಹವೂ ಬೇಡ

ಸಿಹಿ ಕನಸುಗಳು ಸವಿ ಸಂಬಂಧಗಳ
ಬೆಸುಗೆ ಮುಳ್ಳಾಗದಿರಲಿ ಬಾಳಿಗೆ
ಎಲ್ಲದನು ನಿಭಾಯಿಸುವ ಭರದ
ನಡಿಗೆಯಲಿ ಎಡುವದೇ ಮುಂದೆ
ಸಾಗೋಣ

ದೇವನೊಲುಮೆಯ ಜಗದಲಿ ಸಿಗುವುದು
ಸಿಕ್ಕೀತು ದಕ್ಕುವುದು ದಕ್ಕೀತು

ಒಲ್ಲೆನೆಂಬ ಇಲ್ಲದ ವೈರಾಗ್ಯ ಒಲವ
ಕಸಿದೀತು ಇರಲಿ ಒಂದಿನಿತು ಅರಿವು
ಸಿಕ್ಕುದ  ಕಳೆದುಕೊಳ್ಳದ ಹಾಗೆ

ಬಾಳೊಂದು ಯುಗಳ ಗೀತೆ ಒಂಟಿಯಾಗಿ
ಹಾಡಲಾಗದು ರಾಗ ತಾಳ ಮೇಳೈಸಿದರೆ
ಹಾಡುವುದು ಅನಿವಾರ್ಯ ಮುಂದೆ ಸಾಗಲು

ಅರಿವಿನೆಚ್ಚರದಲಿ ನೆಚ್ಚಿದವರನು ಬೆಚ್ಚಿ
ಬೀಳಿಸದೇ ಸಾಗುತಿರಲಿ ಜೀವನ

ಮನಸು ಮಲ್ಲಿಗೆಯ ಸುವಾಸನೆಯ
ತಡೆಯಲಾಗದು ಬೇಡವಾದುದ
ಮೂಸಲಾಗದು ಆದರೆ ಮೂಗ
ಕೊಯ್ಯಲಾದೀತೆ ?

ನನ್ನ ಪ್ರಶ್ನೆಗಳಿಗೆ ನನ್ನ ಬಳಿ
ಉತ್ತರಗಳೂ ಇವೆ ಮತ್ತೆ ಪ್ರಶ್ನೆ ಬೇಡ

ಬೇಕು-ಬೇಡ ಜೀಕಾಟದಲಿ ಒಮ್ಮೆ
ನಿಲ್ಲಲೇಬೇಕು ನಿಂತು ದೇವನೊಲುಮೆಯ
ಒಲವ ಪಡೆದು ಮುಂದೆ ಸಾಗೋಣ

ಮತ್ತೆ ಮತ್ತೆ ಮತ್ತೆ ಬಯಸದೇ
ಒಮ್ಮೆಯೇ ಪಡೆಯೋಣ
ಪಡೆದುದಲಿ ಸಂತೃಪ್ತಿ ಹೊಂದೋಣ.

---ಸಿದ್ದು ಯಾಪಲಪರವಿ

No comments:

Post a Comment