ಮರೆತುಬಿಡು ಮರೆಯುವ ಮಾತ
ಸೋಲುವ ಮುನ್ನ ಸಾವಿರ ಬಾರಿ
ಜನಿಸಿ ಸತ್ತು ಸೋತೆ ಇನ್ನೂ ಸಾಯುವ
ಮಾತೇ ಇಲ್ಲ ಜನುಮಾಂತರ ನಂಟಿಗೆ
ಬೇಕಿಲ್ಲ ಮುಖವಾಡ
ಈಗ ಎಲ್ಲವನೂ ಕಳಚಿ ಬೆತ್ತಲಾಗಿ
ನಿನ್ನೆದುರು ಕಣ್ಣು ಮುಚ್ಚಿ ಧೇನಿಸುವ
ನನದು ಹಂಗಿಲ್ಲದ ಬದುಕು .
ಮುಂದೆ ಏನೋ ಎಂಬ ಸೂತಕದ
ಸೋಂಕಿಲ್ಲದ ನಿರ್ವ್ಯಾಜ್ಯ ಪ್ರೇಮ .
ರೋಮ ರೋಮಗಳಲಿ ನಿನ್ನದೇ ಧ್ಯಾನ
ಮೈಮನಗಳ ತುಂಬಾ ಹಗಲಿರುಳು
ನಿಲ್ಲದ ದಾಳಿ ಬೇಕಿಲ್ಲೆನಗೆ
ಮುಖವಾಡದ ಗಾಳ
ದೂರ ಮಾಡಿ ಮರೆಯುವ
ಮಾತ ಮರೆತುಬಿಡು
ನಗುವ ತುಟಿಯಲಿ ಅರಳಿದ ಕಂಗಳಲಿ
ಮುಂಗುರುಳ ನರ್ತನದಿ
ದಿಂಬಾಗುವ ತೋಳಲಿ ಮೈಮುಚ್ಚಲು
ಹಾತೊರೆಯವ ಸೀರೆಯ ಸೆರಗಿನ ಮರೆಯಲಿ
ಒತ್ತರಿಸುವ ದುಃಖದ ಕಣ್ಣೀರಲಿ
ನಿನ್ನನೇ ಅಣಕಿಸುವ ಎದೆ ತೊಟ್ಟುಗಳಲಿ
ಹಟ ಹಿಡಿಯುವ ಮನದ ಬಿಗಿ
ಪಟ್ಟಲಿ ಪಟ್ಟಾಗಿ ಅವಿತು ಎವೆಯಿಕ್ಕಿ
ಬೆಚ್ಚಗೆ ಕುಳಿತು ನಿನ್ನ ಧ್ಯಾನದ
ಗಾನದಲಿ ಲೀನವಾಗಿರುವಾಗ
ನೀ ನನ್ನ ಮರೆಯುವ
ಮಾತ ಮರೆತುಬಿಡು
---ಸಿದ್ದು ಯಾಪಲಪರವಿ
No comments:
Post a Comment