Monday, July 31, 2017

ಮಾತಿನ ಮೆರವಣಿಗೆ

ಮಾತಿನ ಮೆರವಣಿಗೆ

ಮುಗಿಯದ ಮಾತುಗಳಲಿ
ನವರಸಗಳ ಸಡಗರ
ಪ್ರೀತಿಯ ಪಾಳೆಗಾರಿಕೆ
ಕೋಟಿ ಶಬ್ದಗಳಲಿ ಹೇಳಿದರೂ
ಕೊನೆಗೊಳದ ಮಾತು-ಕಥೆ

ಸಾಪೇಕ್ಷ ಸಿದ್ಧಾಂತದ ಸಮಾಗಮ
ಸಮಯದ ಪರಿವೇ ಇಲ್ಲ

ಬರೀ ಅಲ್ಪ ವಿರಾಮದ ವಾಕ್ಯಗಳು
ಪೂರ್ಣವಿರಾಮ ಬೇಡವೆಂಬ
ವಾಕ್ಯಗಳ ಹಟಕೆ ಸೋತ ಮನಸು

ಎಷ್ಟು ಆಡಿದರೂ ಮುಗಿಯದ ಮಾತುಗಳ
ಸಂಗವೇ ಹೀಗೆ
ಹೊತ್ತಿಲ್ಲದ ಹೊತ್ತಲಿ ಬೆದೆಗೆ ಬರುವ
ಭಾವನೆಗಳು

ರಮಿಸಲು ಇನ್ನಿಲ್ಲದ ಹೆಣಗಾಟ
ಇಲ್ಲಿ ಸೋಲು-ಗೆಲುವುಗಳ ಹಮ್ಮಿಲ್ಲ
ವಾದ-ವಿವಾದಗಳ ಹಂಗಿಲ್ಲ

ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ
ಎನ್ನಲು ಬಯಲ ಪಂದ್ಯವಲ್ಲ
ಒಲವ ಒಳ ಒಪ್ಪಂದ

ಇದು ಮುಗಿಯುವ ಮಾತಲ್ಲ ಬಿಡು
ಶಬ್ದಗಳ ಹೆರಿಗೆಗೆ ಬೆದರಿದ ಸೂಲಗಿತ್ತಿ
ದೂರ ಹೋದಾಳು ಸಾಕು ಬಿಡು

ಕೊಡೋಣ ಒಂದು ಸಣ್ಣ ವಿರಾಮ
ಪೂರ್ಣ ವಿರಾಮದ ಗೊಡವೆ ಮರೆತು
ಸಾಗಿಯೇ ಇರಲಿ ಮಾತಿನ ಮೆರವಣಿಗೆ.

---ಸಿದ್ದು ಯಾಪಲಪರವಿ

No comments:

Post a Comment