ಹಿಮಗುದುರೆ
ಹಿಮಗುದುರೆಯ ಸವಾರಿ
ಸರಳವಲ್ಲ ಬಿಸಿಲಿಗೆ ಸಿಕ್ಕು ಕರಗಿದರೆ
ಹೇಗೆ ಎಂಬ ಭಯ
ಸವಾರಿ ಮಾಡಲಾದೀತೆ ಹಿಮದುಂಡೆಯನೇರಿ
ಎಂಬ ತಲ್ಲಣ ತಿಳಿದೋ , ತಿಳಿಯದೆಯೋ
ಏರಿದ ಭಾವ ಪ್ರಪಂಚದ ಸವಾರಿಗೆ
ಕಾಲನ ಪರಿವಿಲ್ಲ , ಬದುಕಿನ ಹಂಗಿಲ್ಲ
ಆಡಿದ್ದೇ ಆಟ ಮಾಡಿದ್ದೇ ಮಾಟ
ಕಾಣದ ಮಿಲನ ಸುಖದ ಸಡಗರದಲಿ
ವಾಸ್ತವ ಮಂಗ ಮಾಯ
ಸಾವಿರದ ಕನಸುಗಳ ನನಸಾಗಿಸಲು
ಸಾವಿನ ಹಂಗೂ ಇಲ್ಲ
ಭ್ರಮೆಗೆ ವಾಸ್ತವದ ಬಿಸಿಮುಟ್ಟಿಸುತ
ಸಾಗುವ ಸಾತ್ವಿಕ ಹಟಮಾರಿತನಕೆ
ಇಬ್ಬರೂ ಮಾಯ
ಕಳೆದುಹೋಗಿದ್ದೇವೆ ಇಬ್ಬರೂ
ಕೂಡುವ ಧಾವಂತದಲಿ
ಪ್ರೀತಿ ಪ್ರೇಮ ಮಾಯವಾಗಿ ಡೇಟಿಂಗ್
ವೀಕೆಂಡ್ ಲಿವಿಂಗ್ ಟುಗೆದರ್
ಅಬ್ಬರದಲಿ ನಮಗೆ
ನೈಜ ಪ್ರೀತಿಯ ಸೆಳೆತ
ಮಾನ-ಮರ್ಯಾದೆಯ ಮುಲಾಜು
ಮಾನಕಾಗಿ ಪ್ರಾಣ ಬಿಡುವ ಶೃದ್ಧೆ
ಆಧುನಿಕತೆಯ ಅಬ್ಬರದಲಿಯೂ
ಮೇಘಸಂದೇಶಗಳ ಸಂವಹನ
ನಿಷ್ಠೆಯ ಭಯ ನಿಯತ್ತಿನ ಸೆಳೆತ
ಹೇಳಲಾಗದ ಅಸ್ಪಷ್ಟ ಅಸಂಗತ
ತಳಮಳದಲಿ ಇಬ್ಬರೂ
ಕಳೆದುಹೋಗಿದ್ದೇವೆ
ಹೊರಬರಲಾಗದೇ ಸಿಕ್ಕರೂ
ಸಂಭ್ರಮದ ನಾವಿನಲಿ ಸಾಗಿದ್ದೇವೆ.
---ಸಿದ್ದು ಯಾಪಲಪರವಿ
No comments:
Post a Comment