Monday, August 7, 2017

ಮನಸೀಗ ತುಂಬಿದ ಕೊಡ

ಮನಸೀಗ ತುಂಬಿದ ಕೊಡ

ಹೀಗೆ ಆಗುವುದು ಅಪರೂಪ ಅನುರೂಪ
ಅಸಂಖ್ಯ ಆಸೆಗಳು ದುಃಖಕೆ ದೂಡಿ
ಕೇಕೆ ಹಾಕಿ ನಗುತ್ತವೆ ತೋಳ ತೆಗ್ಗಿಗೆ ಬಿದ್ದಾಗ
ಆಳಿಗೊಂದು ಕಲ್ಲಿನಂತೆ

ನಾ ಬೇಡಿದಾಗ ಕೂಗ ಹಿಡಿದು ಕಾಡಲಿಲ್ಲ
ಕೊನೆತನಕ ನೀ ಬೇಕೆನಿಸಿದ ಕೂಡಲೇ
ಹಾಡತೊಡಗಿದೆ ಅನುರಾಗ ರಾಗವ

ಅಬ್ಬರಿಸಿದ ಭಾವನೆಗಳ ಏರಿಳತ ಈಗ
ಶಾಂತ ನಿವಾಂತ
ಕೂಗಿದ್ದು ಮನಸಾರೆ ಮಾತಾಡಿ
ಕೈಮಾಡಿ ಕರೆದದ್ದು ನಿರ್ಲಜ್ಯ ಎನಲಾದೀತೆ ?

ಕೂಡಿ ಕಾಲ ಕಳೆವಾಟಕೆ ನೂರೆಂಟು ಕಳ್ಳ
ದಾರಿಗಳು ಯಾರೂ ಇರುವುದಿಲ್ಲ ಅಲ್ಲಿ ಇಲ್ಲಿ
ಎಲ್ಲೆಲ್ಲಿ ಹೊರತುಪಡಿಸಿ ನಿನ್ನ ನನ್ನ ನಿನ್ನ

ತೊಂಟು ನ್ಯಾಯ ತೆಗೆಯದ ತುಂಟಾಟವಿದು
ಇಲ್ಲಿ ಸೋಲು-ಗೆಲುವುಗಳು ಲೆಕ್ಕವಿಲ್ಲ

ಬರೀ ಗೆಲುವು, ಸಂಭ್ರಮ, ಖುಷಿಗಳ
ಅಂದರ್-ಬಾಹರ್

ಬಾ ತೆರೆದಷ್ಟೇ ಬಾಗಿಲು ಹೊರಗೆ ಹೋಗೋಣ
ನೂಕು ನುಗ್ಗಲು ಬೇಡ ಆಕಾಶ
ನೋಡಲು ಇರುವುದು ನಾವು
ಇಬ್ಬರೇ ತಳ್ಳಾಟ ಬೇಡ

ನಿಧಾನಿಸಿ ಇತಿಮಿತಿಗಳ ಮಥಿಸೋಣ
ನೆರೆತ ಕೂದಲಿಗೆ ಬಣ್ಣ ಬಳಿಯುವ
ಸಡಗರದಲಿ ಕನ್ನಡಕ ಕಳೆದು
ತಡಕಾಡುವುದು ಬೇಡ

ನಿಧಾನ ಹೆಜ್ಜೆ ಹಾಕೋಣ ಜೋಲಿ
ಹೋಗಿ ಜ್ವಾಕಿ ತಪ್ಪದೆ
ಇಬ್ಬರೂ ಇಳಿದಿದ್ದೇವೆ ಪ್ರೇಮದಖಾಡಕೆ
ಪಟ್ಟಾಗಿ ಹಟಕೆ ಬಿದ್ದು ಹೊಡೆದಾಡದೆ
ಮೆತ್ತಗೆ ಮೇಯೋಣ ಹಲ್ಲುಗಳು
ಉದುರದ ಹಾಗೆ

ಅಳತೆ ತಪ್ಪಿ ಜೋತು ಬಿದ್ದ ಅಂಗಾಂಗಗಳ
ಎತ್ತಿ ಕಟ್ಟಿ ಹಂಗಿಸಿ ಹಳಹಳಿಸುವುದು ಬೇಡ

ಸುಮ್ಮನೇ ಎತ್ತಿ ಆಡಿಸೋಣ ಬೇಗ
ಸೋತು ನೊಂದುಕೊಳದ ಹಾಗೆ

ಈಗ ಇದು ಮಾಗಿದ ಜೀವ ಬೇಡ ಅನಗತ್ಯ
ಚಲ್ಲಾಟ ಇಲ್ಲಿ ನಾನು ನೀನು
ಸೋಲುವ ಪ್ರಶ್ನೆಯೇ ಇಲ್ಲ

ಈಗ ಈಗ ಇಬ್ಬರೂ ಸೋತು ಗೆದ್ದಿದ್ದೇವೆ
ಸೋಲದೇ ಗೆದ್ದು ಮನ ಸೋತಿದ್ದೇವೆ.

---ಸಿದ್ದು ಯಾಪಲಪರವಿ

No comments:

Post a Comment