ಕಾಯುವುದಿಲ್ಲ ಕಾಲ
ಪ್ರೀತಿಯ ಬೇರು ಹಿಡಿದು ಬೆಳೆಯುವ ಪ್ರೇಮ ಬಲಿತು ವ್ಯಾಮೋಹವಾಗಿ
ನಿತ್ಯವೂ ಕಾಡುವ ಜಂಜಾಟದ
ರಂಪಾಟ
ಒಮ್ಮೆ ಪ್ರೇಮದರಮನೆಯ ಹೊಕ್ಕರೆ ಸಾಕು ಎಲ್ಲವೂ ವಿಸ್ಮಯ
ಮಾತು ಮಾತಿಗೆ ಮಾತು ನಿಲ್ಲದ ಏರಿಳಿತಕೆ ತಲ್ಲಣಿಸುವ ಮನಕೆ
ಇನ್ನಿಲ್ಲದ ಕಾತರ ಕಾಯುವ ಕರ್ಮ
ಯಾರು ಮೇಲು ಯಾರು ಕೀಳು
ಎಂಬ ತರತಮದ ಕೇಡಿಲ್ಲದ ಜಾಡು
ಸಾಗುತ್ತ ಸಾಗುತ್ತ ಹೊಸ ಲೋಕಾನುಭವ ವಯೋಮಾನದ
ಮರೆವು ಮತ್ತೆ ತಿರುಗುವ ಹರೆಯ
ಪರಸ್ಪರ ಇನ್ನಿಲ್ಲದ ಸೆಳೆತ ಸದಾ
ಕಾಡುವ ನೆನಪಿನ ದಾಳಿ
ಕಂಗಳಲಿ ಹೊಸ ಹೊಳಪು ಮನಸಲಿ
ಅರಳುವ ಮುದ ಭಾವನೆಗಳು
ಹರೆಯದ ಕಚಗುಳಿ ಮೈಮನಗಳ ತುಂಬಾ ಪಸರಿಸುವ ಮಧುರ ನೆನಪುಗಳು
ದೇಹದ ಹಂಗು ಹರಿದು ಭಾವಗಳ ಬೆನ್ನು ಹತ್ತಿ ಸುಖಿಸುವ ಹೊಸದೊಂದು ಆಸೆ
ಸಾಕು ಬಿಡು ಉಳಿದಿರುವ ಅಲ್ಪ ಸ್ವಲ್ಪ ಕಾಲವ ಹರಣ ಮಾಡಿ ಕಳವಳಿಸುವುದು ಬೇಡ
ಕೂಡಿ ಆಡಿ ನೋಡಿ ನಡೆದು ಸೇರಿಕೊಂಡು ಸದ್ದಿಲ್ಲದೆ ಈ ಗದ್ದಲದಲಿ ಒಂದಾಗಿಬಿಡೋಣ
ಕಾಲನ ಕರೆ ಬಂದು ಮಾಯವಾಗುವ ಮುನ್ನ ಕೂಡಿ ನಲಿಯೋಣ ಬಾ
ಕಾಯುವುದಿಲ್ಲ ಕಾಲ ನಮಗಾಗಿ.
No comments:
Post a Comment