ಮೊದಲ ಕ್ಷಣದ ಮರೆಯದ ರಾತ್ರಿ
ನಮ್ಮ ಬದುಕಿನಲಿ ಅಸಂಖ್ಯ ರಾತ್ರಿಗಳು
ಕಳೆದ ಕ್ಷಣಗಳು ಸುಮಧರ ಅತಿಮಧುರ
ಎಂಬ ಭ್ರಮೆ ಈಗ ಬಟಾಬಯಲು
ನಾ ನೀನಾಗಿ ನೀ ನಾನಾಗುವ ಹೊತ್ತಿಗೆ
ಕಾಯುತ್ತಿದ್ದ ಕಳವಳ ಹೀಗೆ ಕಳೆಯಬಹುದೆಂಬ ಊಹೆಗೂ ಮೀರಿದ ಅದಮ್ಯ ರಾತ್ರಿ
ಮೈಮನಗಳು ಎಂಬ ಅಕ್ಷರಗಳ ಸಡಗರಕೆ ಬಣ್ಣ ತುಂಬಿದ ಅಮರ ಚಿತ್ರಣ
ಕವಿತಗಳೋ ಬರೀ ಶಬ್ದದಾಡಂಬರ ತುಂಬಬಹುದೇ ಮೈಮನಗಳು ಎಂಬ ಅಸಡ್ಡೆಗೆ ಇತಿಶ್ರೀ
ಕವಿತೆಗಳು ಮೈ ಹೊಕ್ಕ ದೆವ್ವದಂತೆ ಥಕ-ಥಕ ಕುಣಿತ
ಕತ್ತಲಿಗೆ ಬೆಳಕಿನ ಸಡಗರ ಬೆತ್ತಲ ಬಯಲಾಟದಲಿ ಮುತ್ತುಗಳ ಸುರಿಮಳೆಯಲಿ ತೊಯ್ದು ತೆಪ್ಪದಲಿ ತೇಲಿದಾನುಭವ
ಕರಡಿ , ಬುಸುಗುಡುವ ಸರ್ಪ ದಾಳಿಗೆ ನಲುಗಿದ ಮೈಮನ ಹಿತಕಾರಿ ನೋವಿನ ತಲ್ಲಣದಲಿ ಎಲ್ಲವೂ ಮಂಗ ಮಾಯ
ಸಂಕೋಚದ ಸಂಕೋಲೆ ಕಳಚಿ ಎಲ್ಲವೂ ನಿನಗರ್ಪಿತ
ಪ್ರಕೃತಿಯ ಮಡಿಲಲಿ ಅರಳಿದ ಹೂಮನ
ಹೀರುವ ದುಂಬಿಗೆ ನಿಲ್ಲದ ಸಡಗರ ಹಾರುತ ಹೀರುತ ಜಾರುತ ಏರುತ ಇಳಿಯುತ ಕೆರಳುತ ಅನುಸಂಧಾನದ ಪಿಸುಮಾತುಗಳ ಸಹಸ್ಪಂದನೆಯಲಿ ಎಲ್ಲವೂ ಅಯೋಮಯ
ಶಬ್ದಗಳು ಖಾಲಿಯಾಗಿ ಮಾತು ಮೌನವಾಗಿ ಬಾನಲಿ ತೇಲಾಡುವ ಮನಕೆ ಭೂಮಿಯ ಹಂಗೆಲ್ಲಿ
ನಿರ್ಲಜ್ಯತೆಗೆ ಲಜ್ಜೆಯ ಹಿತೋಪದೇಶದ ದೇಶಾವರಿ ಮಾತುಗಳ ಹಂಗೇ ಇಲ್ಲ
ಆಡಿದ್ದೇ ಆಟ ಮಾಡಿದ್ದೇ ಮಾಟ ಇತಿಹಾಸದ ಚರಿತ್ರೆಯ ಮುನ್ಸೋಟಕಿದು ಮುಗಿದ ಕಾಲ
ಈ ಕ್ಷಣದ ದಿವ್ಯ ಸ್ವರ್ಗದಲಿ ನಿಲ್ಲದಾಲಿಂಗನಕೆ ಸಿಹಿಮುತ್ತುಗಳ ತಳಿರು ತೋರಣ
ದೇವಲೋಕದ ಗಂಧರ್ವ ಬಯಸಿದ ಅಪ್ಸರೆಯ ತೋಳಬಂಧಿ
ಪಡೆದ ಸುಖಕೆ ಕೊಟ್ಟ ಮುತ್ತುಗಳಿಗೆ ಲೆಕ್ಕ ಇಡುವ ಧೀರ ಯಾರು ?
ಯಾರೂ ಹೇಳದ , ಯಾರೂ ಕೇಳದ , ಕಂಡರಿಯದ ಈ ಕಳ್ಳಾಟವ ಕಣ್ಣಲಿ ಸೆರೆಹಿಡಿದು ಎದೆಗೂಡಲಿ ಹೂತಿಡುವೆ ಯಾರೂ ಕದಿಯದ ಹಾಗೆ
ಎಲ್ಲಿ ಅಡಗಿದ್ದೆ ಇಷ್ಟೊಂದು ದಿನ ಈ ವಿದ್ಯೆಯ ನನಗೆ ಧಾರೆಯರೆಯದೆ ಕಾದಿದ್ದೆ ಹಗಲಿರುಳು ಗುಪ್ತಗಾಮಿನಿಯ ಹಾಗೆ
ಸಂತೆಯ ಸಡಗರದಲಿ , ಜಾತ್ರೆಯ ಸಂಭ್ರಮದಲಿ , ಮದುವೆಯ ದಿಬ್ಬಣಗಳಲಿ , ಮಸಣದ ಸೂತಕದಲಿ ಗಾಳ ಹಾಕಿದವರ ಕಣ್ಣೋಟಕೆ ಸಿಗದೇ ಓಡೋಡಿ ಬಂದು ನಿನ್ನ ಸೇರಿದ್ದು
ಪರಮ ಸಾರ್ಥಕ
ಕಾಣಲಾಗದ ನಾಕವ ಧರೆಗಿಳಿಸಿ ಅಂಗೈಯಲಿ ಹಿಡಿದು ಕುಣಿಸಿದ ಪ್ರೇಮಜಾದೂಗಾರ ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಯ ಸಿರಿ ಸಂಪದವ ಸೂರೆ ಮಾಡಿದ ಒಲವವೀರ
ಎಂದೂ ಯಾರೂ ಊಹಿಸದ ಹೊಸ ಲೋಕದೊಡೆಯ
ಇಲ್ಲಿ ನಿನಗೆ ನಾ ನನಗೆ ನೀ ಸರಿಸಾಟಿ ಬೇರೆಯವರ ಉಸಿರಿಗೂ ಇಲ್ಲ ಒಂದಂಗುಲ ಜಾಗ
ಕಳೆದು ಹೋದ ನಮ್ಮ ಹುಡುಕಿ ಹೊರಗೆ ಎಳೆಯಲು
ನನಗೆ ನೀ ನಿನಗೆ ನಾ ಬೇಕೆ ಬೇಕು ಭುವಿಗಳಿದು ಬೆಳಕ ಹರಿಸಿ ಕತ್ತಲೆಯ ಗುಂಗ ಮರೆಸಿ ಮುಂದೆ ಸಾಗಿ
ಮತ್ತೆ ಮತ್ತೆ ಮತ್ತೆ ಒಂದಾಗಿ ಮಾಯವಾಗಲು.
---ಸಿದ್ದು ಯಾಪಲಪರವಿ
No comments:
Post a Comment