ಅಕ್ಷರ ಸಂಸ್ಕೃತಿ ಮತ್ತು ರಕ್ಕಸತನ: ಕಾಡುವ ಲಂಕೇಶ್
ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ . ಇತಿಹಾಸದಲಿ ಕೆಲವರು ಒತ್ತಾಯದಿಂದ ಮತ್ತೆ ಕೆಲವರು ತಾಕತ್ತಿನಿಂದ ನಮ್ಮ ಮನದ ಮೂಲೆಯಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಬದ್ಧತೆ , ತಾಕತ್ತು , ಅಪಾರವಾದ ಲೋಕಜ್ಞಾನ , ದೇಸಿಯ ಸೊಗಡು , ಮಾನವ ಸಹಜ ಮೋಜು , ಸಂಕೀರ್ಣ ಆಲೋಚನೆಗಳು , ಸಾಮಾಜಿಕ ಕಾಳಜಿ ಹೀಗೆ ಎಲ್ಲವನ್ನೂ ಇಟ್ಟುಕೊಂಡು ಧ್ಯಾನಸ್ಥ ಬರಹಗಳ ಮೂಲಕ ಲಕ್ಷಾಂತರ ಸದಭಿರುಚಿ ಓದುಗರ , ಸಾವಿರಾರು ಉತ್ತಮ ಬರಹಗಾರರನ್ನು ಸೃಷ್ಟಿಸಿದ ಹಿರಿಮೆ ಕೇವಲ ಲಂಕೇಶ್ ಅವರಿಗೆ ಸಲ್ಲುತ್ತದೆ.
ಖಾಸಗಿ ಬದುಕಿನ ಏರಿಳಿತ , ಅವಮಾನಗಳನ್ನು ಸವಾಲಾಗಿ ಸ್ವೀಕರಿಸಿ ಪತ್ರಿಕೋದ್ಯಮ ಮೂಲಕ ಕಳೆದುಕೊಂಡ ಎಲ್ಲವನ್ನೂ ಮತ್ತೆ ಪಡೆದುಕೊಂಡ ಬಗೆ ರೋಮಾಂಚಿತ. ಸದಾ ಓದುವ , ಬರೆಯುವ , ಚಿಂತನೆಗಳ ಮೂಲಕ ತನ್ನದೇ ಜಗತ್ತನ್ನು ರೂಪಿಸಿಕೊಂಡು ಎರಡು ದಶಕಗಳ ಕಾಲ ಅಕ್ಷರ ಲೋಕವನ್ನು ಆಳಿ ಹೊಸ ಮಾರ್ಗ ಹಾಕಿ ಕೊಟ್ಟರು.
ಒಂದಿಷ್ಟು ಜನ ಅದೇ ಹಾದಿಯಲ್ಲಿನಡೆಯಲಾರಂಭಿಸಿದರೂ ಆ ನಡಿಗೆಯಲ್ಲಿ ಲಂಕೇಶ್ ಅವರ ಸಾಚಾತನದ ಸೆಳೆತವಿರಲಿಲ್ಲ. ನಡೆಯುತ್ತಿರುವದು ರಾಜಮಾರ್ಗದಲ್ಲಿಯಾದರೂ ಮಹಾರಾಜರ ಗುಣವಿಲ್ಲದ ಕೃತಕ ನಡೆಯ ಸಂಭ್ರಮ.
ಟ್ಯಾಬಲಾಯ್ಡ್ ಪತ್ರಿಕೆಗೆ ಓದುಗರು addict ಆದ ಲಾಭ ಕೆಲವರಿಗೆ ದಕ್ಕಿತು. ಲಂಕೇಶ್ ಅವರಿಗಿದ್ದ ಬದ್ಧತೆ ಮಾಯವಾಗಿ ಅಕ್ಷರ ಸಂಸ್ಕೃತಿ ರಕ್ಕಸ ಸಂಸ್ಕೃತಿಯಾಯಿತು. ಬರಹವೆಂಬ ಅಗ್ನಿ ಜ್ಯೋತಿಯಾಗಿ ಬೆಳಗದೇ ಬಾಳನ್ನು ಸುಟ್ಟು ಹಾಕಿತು.
ಹಣ , ಕೀರ್ತಿ , ಸೆಲಿಬ್ರಿಟಿ ಸ್ಟೇಟಸ್ , ಪುಸ್ತಕ ವ್ಯಾಪಾರ , ಬ್ಲ್ಯಾಕ್ ಮೇಲ್ ದಂಧೆ ನುಸುಳಿ ಅಕ್ಷರ ರಾಕ್ಷಸವಾಯಿತು. ಒಬ್ಬರಿದ್ದವರು ಇಬ್ಬರಾದರು. ಒಂದಿಷ್ಟು ದಿನ ಜೊತೆ ಜೊತೆಯಲಿ ಸಾಗಿ ಅಕ್ಷರ ಲೋಕದಲಿ ಡ್ಯುಯಟ್ ಹಾಡುತ ತಮ್ಮದೇ ಆದ ವಾದ್ಯ ಗೋಷ್ಟಿಗಳ ಮೂಲಕ ಸಾಥಿದಾರರನ್ನು ಬೆಳೆಸಿ ಮೌಲ್ಯಗಳನ್ನು ಗಾಳಿಗೆ ತೂರಿ ತಾವೂ ತೇಲಾಡಲಾರಂಭಿಸಿದರು.
ಹೇರಳ ಸಂಪತ್ತು , ಐಷಾರಾಮಿ ದುನಿಯಾದ ದುಷ್ಪರಿಣಾಮದಿಂದ ಉಬ್ಬಿ ಹೋದರು. ಪಾಪ , ಹಿಮ್ಮೇಳದಲ್ಲಿದ್ದವರು ಬರೀ ತಾಳ ಹಾಕುತ್ತಾ ಅಸಹಾಯಕರಾದರು. ಒಂದೇ ತಾಟಿನಲ್ಲಿ ಊಟ ಮಾಡುತ್ತ ಜಗತ್ತಿಗೆ ಬುದ್ಧಿ ಹೇಳಲಾರಂಭಿಸಿದರು.
ಕಾಲ ನಿಯಮ , poetic justice ಸುಮ್ಮನಿರಬೇಕಲ್ಲ ?
ಊಟ ಮಾಡಿದ ತಟ್ಟೆಯನ್ನ ತೂರಾಡಿ ನಶೆಯಲಿ ಹಾರಾಡಿ ಒಡೆದು ಹೋದರು. ಮತ್ತೊಮ್ಮೆ ಅಪಸ್ವರ . ಸಾಥಿದಾರರು ಬೇಸೂರು ಕಂಡು ಬೆಚ್ಚಿ ಬಿದ್ದು ಅಸಹಾಕರಾದರು.
ಪರಸ್ಪರ ಅನಾರೋಗ್ಯಕರ ಟೀಕೆ-ನಿಂದನೆಗಳಿಂದ ಓದುಗರಿಗೆ ಪುಕ್ಕಟೆ ಮನರಂಜನೆ. ಇಬ್ಬರ ಗುಟ್ಟುಗಳೂ ಬಟಾಬಯಲು. ಹಿಂಬಾಲಕರ ಬರವಣಿಗೆಯ ಮೂಲಕ ಆಗದವರ ಹೆಣ ಎತ್ತುವ ಕೆಲಸ , ಸಾರ್ವಜನಿಕ ಬದುಕಿನ ಖಾಸಗಿ ಸಂಗತಿಗಳಲ್ಲಿ ಕೈಯಲ್ಲ , ಕಾಲೂ ಆಡಿಸಿದ ಕುಖ್ಯಾತಿ.
ಈ ಎಲ್ಲ ಬೆಳವಣಿಗೆಯಲ್ಲಿ ನಾಡಿನ ಪ್ರಬುದ್ಧ ಮನಸುಗಳ ಮೌನ , ಏನೂ ಹೇಳಲಾಗದ ಹೇಸಿ ವಾತಾವರಣ.
ಲಂಕೇಶ್ ಪತ್ರಿಕೆಯ ದಿನಗಳನ್ನು ನೆನೆಯುತ ವರ್ತಮಾನವನು ಹಳಿಯುವ ಬರೀ ತಲ್ಲಣ .
ನಿಜವಾದ ಮೌಲಿಕ ಬರಹಗಾರರು ಮಂಗ ಮಾಯ. ಆದರೆ ಕಾಲ ತುಂಬ ದೊಡ್ಡದು , ಅದು ಅನ್ಯಾಯವನ್ನು ತುಂಬಾ ದಿನ ಸಹಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ನೆಪದಲ್ಲಿ ಕಂಡವರ ಬಾಳಿಗೆ ಬೆಂಕಿ ಇಟ್ಟು , ಕಲ್ಲು ಹೊಡೆದು ಗಾಜಿನ ಮನೆಯಲ್ಲಿ ಅಡಿಗಿ ಕುಳಿತುಕೊಳ್ಳಬಹುದಾ ?
ಈಗಿನ ಬಿಗುವಿನ ವಾತಾವರಣದಲ್ಲಿ ಸುಮ್ಮನಿದ್ದರೆ ಸ್ವಾತಂತ್ರ್ಯಹರಣ , ಮಾತನಾಡಿದರೆ ಮೌಲಿಕ ಅಧಃಪತನ ಎಂಬಂತಾಗಿದೆ.
---ಸಿದ್ದು ಯಾಪಲಪರವಿ
No comments:
Post a Comment