* ಲವ್ ಕಾಲ *
ಪ್ರೇಮ ಬಿಕ್ಷೆಯಲ್ಲ
ಬದುಕಿನ ಆಟದಲಿ ನೂರೆಂಟು ಜನ ಬಂದು ಹೋಗುತ್ತಾರೆ . ಬಂದವರೆಲ್ಲ ಒಂದೊಂದು ಕಾರಣಕ್ಕೆ ಬಿಟ್ಟು ಹೋಗುತ್ತಾರೆ. ಮನಸಿನ ಭಾವನೆಗಳನ್ನು ಯಾವುದೇ ಸೋಗಲಾಡಿತನವಿಲ್ಲದೆ ಮುಕ್ತವಾಗಿ ಹಂಚಿಕೊಂಡದ್ದು ನಮಗಿಷ್ಟವಾಗದಿದ್ದರೂ ಸಮಾಧಾನದಿಂದ ಸ್ವೀಕರಿಸಬೇಕು. ರಪ್ ಅಂತ ಮುಖಕ್ಕೆ ಬಾರಿಸಿದಂತೆ ಹೇಳುವದು ಮಹಾ ಘನಂದಾರಿ ಕೆಲಸವಲ್ಲ .
ಬೇಕು ಬೇಡಗಳಿಗೆ ಕಾರಣಗಳು ಏನೇ ಇದ್ದರೂ ನಿಷ್ಪ್ರಹವಾಗಿರುವ ಸಂಬಂಧಗಳು ಕಡಿದುಹೋಗಬಾರದು. ಮುಳ್ಳ ಮೇಲಿನ ನಾಜೂಕಾದ ಬಟ್ಟೆಯನ್ನು ಹರಿಯಬಾರದು ಎಂದು ಬಯಸುವ ನಾವು , ಸಂಬಂಧಗಳನು ಬಟ್ಟೆಗಿಂತ ಕನಿಷ್ಠ ಎನಬಹುದಾ ?
ಯಾವುದೋ ಒಂದು ಗಳಿಗೆಯ ವಿಚಿತ್ರ ಸಮಯದಲ್ಲಿ ಮನಸೋತು ಅದನ್ನು ಹಾಗೆ ಹೇಳಿದ್ದನ್ನು ನೀ ಭಯಂಕರ ದೌರ್ಬಲ್ಯ ಅಂದುಕೋಬೇಡ ಮರಿ. ಅಗೋಚರವಾಗಿ ಇಬ್ಬರೂ ಈ ಸುಳಿಯಲಿ ಸಿಕ್ಕ ಪರಿಣಾಮಕ್ಕಾಗಿ ನೀ ಹೇಳಲಾಗದಿರುವದ ಅರಿತು ನಾ ಬಾಯಿ ಬಿಟ್ಟಿದ್ದೇನೆ. ಹಾಗಂತ ನನ್ನನ್ನು ಮೂರ್ಖ ಎಂದು ಭಾವಿಸಬೇಡ.
ಅಂದುಕೊಂಡದ್ದೆಲ್ಲ ನಡೆಯುವುದಿಲ್ಲ ಅದೂ ಒಂದು ರೀತಿಯ ಮಾನಸಿಕ ಲೆಕ್ಕಾಚಾರ. ಬಹುದು ಅಥವಾ ಇಲ್ಲ ಹಾಗಿರುವಾಗ ಬರೀ ಮನೋಮಂಥನದ ಚಡಪಡಿಕೆ. ಆ ಚಡಪಡಿಕೆಯ ಹಂತದಲ್ಲಿ ನಿರ್ದಾಕ್ಷಿಣ್ಯ ನಿರ್ಧಾರ ಪ್ರಕಟಿಸುವ ಹಕ್ಕು ಖಂಡಿತವಾಗಿ ನಿನಗಿಲ್ಲ. ನಿನ್ನ ಕಠಿಣ ನಿರ್ಧಾರಕ್ಕೆ ನಾ ತಲೆಬಾಗಿ ಕೀಳರಿಮೆಯಿಂದ ಒದ್ದಾಡುವ ಅಗತ್ಯವಿಲ್ಲ. ಅನೇಕ ಅತೃಪ್ತಿ , ಅಸಮಾಧಾನಗಳ ಕೂಪದಲಿರುವ ನಮ್ಮ ನರಳಾಟದ ಕೂಗು ' ಅವನಿಗೆ ' ಕೇಳಿಸಿರುತ್ತದೆ. ಅವನು ತಥಾಸ್ತು ಅಂದ ಕಾರಣಕ್ಕೆ ಈ ಎಲ್ಲ ಘಟನೆಗಳು.
ಒಲ್ಲೆ ಎಂದರೆ ಬಿಡು . ಏನೋ ಕಳಕೊಂಡೆ ಎಂಬ ಭಾವ ಮೂಡಿದಾಗ ' 'ಅವನು ' ನನ್ನನ್ನು ಕರೆದುಕೊಂಡು , ನಿನ್ನಿಂದ ಕಿತ್ತಿಕೊಂಡಿರುತ್ತಾನೆ.
ನಿನ್ನ ನಿಷ್ಠುರ ನುಡಿಗಳನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸಿ ಮುಂದೆ ಸಾಗಿದ್ದೇನೆ , ನಿನ್ನ ತಪ್ಪಿನ ಅರಿವಾದಾಗ ಸಿಕ್ಕರೂ ಸಿಗಬಹುದು ಎಂಬ ಅನುಮಾನದಿಂದ.
Thanks a lot for your rude reply.
Always yours
---ಸಿದ್ದು ಯಾಪಲಪರವಿ
No comments:
Post a Comment