Monday, July 10, 2017

ಭಾವಸಿರಿ ಜಾಡ ಹಿಡಿದು

ಭಾವಸಿರಿ ಜಾಡ ಹಿಡಿದು

ಇದು ಹೀಗೇಕೆ ಎಂದರಿಯಲು ಹೊರಟಷ್ಟೂ
ನಿಗೂಢ
ಈ ಬಂಧನಗಳೇ ಹೀಗೆ ಗೊತ್ತು ಗುರಿಯಿಲ್ಲದೆ ಬಂಧಿಯಾಗುತ್ತೇವೆ

ಕಾವ್ಯ ಲೋಕದಲಿ ಮೆರೆದು ಮರೆಯಾದ
ಅಕ್ಷರಗಳ ಸೊಗಡಿಗೆ ಬೆರಗಾಗಿ ಅಪ್ಪಿ ಮುದ್ದಾಡಿದ 
ಅವ್ವನ ಹಾಗೆ

ಎದೆಗವುಚಿ ಮಲಗಿಸಿ ನಿದಿರೆಗೆ ಜಾರಿದಾಗ ಕಣ್ಣರಳಿಸಿ ನೋಡಿದ
ಅಪ್ಪನ ಹಾಗೆ

ಮೃದು ಪಾದದ ಸ್ಪರ್ಷದಲಿ ಹೊಸ ಲೋಕವ ತೆರೆದ
ಮಗನ ಹಾಗೆ

ಒಂಟಿಯಾಗಿ ದುಃಖಿಸುವಾಗ ಪ್ರೀತಿಯಿಂದ ಅರ್ಥಮಾಡಿಕೊಳ್ಳುವ ಇನಿಯನಿದ್ದರೆ ಬದುಕು ಇನ್ನೂ ಸುಂದರ ಅನಿಸುವ ಕನಸಿನ ರಾಜನ ಹಾಗೆ

ಕವಿತೆಗಳ ತಾಳಕೆ ಲಯವಾಗಿ ನಿನ್ನ ಕೊರಳ
ಬಳಸಿ ಮುದ್ದು ಮಾಡಿ ಕಂಗಳ ಸೆಳೆತವ ಹೀರಿ
ಹಿಪ್ಪೆ ಮಾಡಿ ಪುಳಕಗೊಳಿಸುವ ಮನ್ಮಥನ ಹಾಗೆ

ನಿನ್ನ ಒಂಟಿತನದ ನಿಟ್ಟುಸಿರನಳಿಸಲು ದೇವ
ಕಳಿಸಿದ ಧೂತನ ಹಾಗೆ

ಇನ್ನೂ ಏನೇನೋ ಆಗಿ ಎಲ್ಲವಾಗಿ ಬಯಸಿ ಮನದ ಕದವ ತೆರೆದು ಮೌನವಾಗಿ ಒಳಗೆ ಜಾರಿ ತಳ ಹೊಡೆದದ್ದು ಕಂಡು ಕಾಣದ ಹಾಗೆ ಆಟ ಬೇಡ

ಅಗೋಚರ , ಅಪ್ಯಾಯಮಾನ , ಅನನ್ಯ ವಾತ್ಸಲ್ಯದ ಕರೆಯ ಆಲಿಸದವಳಂತೆ ನಟಿಸಬೇಡ

ಹೂ ಬಿಸಿಲಿಗೆ ಅರಳಿದ ಬಾಡದ ಕುಸುಮದ ಸುವಾಸನೆಯ ಹೀರಿ ಮೈಮನಗಳ ಪುಳಕಗೊಳಿಸಿ
ತಲ್ಲಣಗೊಂಡ ಈ ಹೊತ್ತು

ಎದೆ ಬಿರಿದು ತುಟಿ ನಡುಗಿ ಚಡಪಡಿಸುವ ಸಡಗರದ ಬಿಸಿಯುಸಿರಲಿ ಒಮ್ಮೆ ಹಿತವಾಗಿ ಬಿಗಿದಪ್ಪಿ ಸಿಹಿ ಮುತ್ತಿನ ಮಳೆಗರೆದು ಮಾಯವಾಗಿ ಮನದಾಳದಲಿ ನೆಲೆಯಾದ ಮೇಲೆ ನೀ
ನಾ
ನಾ ನೀ...

---ಸಿದ್ದು ಯಾಪಲಪರವಿ

No comments:

Post a Comment