Saturday, July 1, 2017

ಏಕಾಂತವಲ್ಲ

ಏಕಾಂತವಲ್ಲ

ಯೋಜನೆಗಳು ಯೋಚನೆಗಳು
ಓಡಾಟಗಳು ನಿರಂತರ
ಚಟುವಟಿಕೆಯ ಚಡಪಡಿಕೆಗಳು

ಸಾವಿರದ ಕನಸುಗಳು
ಬತ್ತದ ಜೀವನೋತ್ಸಾಹದ ಚಿಲುಮೆಗಳು

ಜೊತೆಗಿದ್ದಂತೆ ನಟಿಸಿ ಮಾರ್ಗ
ಮಧ್ಯೆ ಬಿಟ್ಟು ಮಾಯವಾಗುವ
ಮಾಯಾಂಗನೆಯರು

ಎಲ್ಲರೂ , ಎಲ್ಲದೂ ಇದ್ದು ಇಲ್ಲದ
ಮಾಡಿಯೂ ಮಾಡದ ಮಾಯದಾಟ

ಗೊತ್ತು ಗುರಿಯಿಲ್ಲದ ಅಲೆದಾಟದಲೆಗಳಲಿ
ತೇಲುತ ಈಜಾಡಿ ಸಾಗಲೇಬೇಕು

ವಿಶಾಲ ಜೀವಸರೋವರದಲಿ
ದಂಡೆಗೆಲ್ಲಿಯ ಕೊನೆ ಅರಿತವರಾರು

ಹೀಗೆ ಸಾಗುತಿರಲಿ ಜೀವಪಯಣ
ಉಳಿದವರು ಉಳಿಯುತ್ತಾರೆ

ಹಳಿಯುವವರು ಅಳಿಯುತ್ತಾರೆ
ಅಳೆಯುತ್ತಾರೆ ಹಳಹಳಿಸುತ...

ಹಗಲಿರುಳು ದೇಹಮನಸುಗಳ
ಸವಿಮಿಲನ ನೋವುನಲಿವುಗಳ
ಬಿಗಿದಪ್ಪಿ ಮುದ್ದು ಮಾಡಿ

ನಮಗೆ ನಾವೇ ರಮಿಸುತ ವಿರಮಿಸುವ
ಹೊತ್ತು ಬರೀ ಏಕಾಂತವಲ್ಲ...

---ಸಿದ್ದು ಯಾಪಲಪರವಿ

No comments:

Post a Comment