Wednesday, November 30, 2016

ನಾ ಮರೆಯಲಾರೆ

ನಾ ಮರೆಯಲಾರೆ
ದಟ್ಟಡವಿಯಲಿ ಅಂಡಲೆಯುವಾಗ
ಕೈಹಿಡಿದು ಸನ್ಮಾರ್ಗವ ತೋರಿ ದಡ
ಸೇರಿಸಿದ ಗುರುವಿಗೆ ಗುಲಾಮನಾಗಿರುವೆ
ಸಾಕಿ ಸಲಹಿ ಕಷ್ಟ ಕೋಟಲೆಗಳ
ಜೀರ್ಣಿಸಿಕೊಂಡು ಬದುಕಿನ ಬೆಲೆಯ ಅಳೆದು
ತೂಗಿದ ಹೆತ್ತೊಡಲ ಋಣವ ತೀರಿಸಲಾರೆ
ಮೈಮನಗಳಲಿ ಸುಳಿದಾಡಿ ಭಾವನೆಗಳ
ರಮಿಸಿ ಸುಖದ ಸೋಪಾನದಲಿ ತೇಲಿಸಿ
ವಾಸ್ತವದಲೆ ಅಪ್ಪಳಿಸಿದಾಗ ತೇಲಿ ಹೋದ
ಸಂಗಾತಿಗಳ ಸಂಗತಿಗಳ ಮರೆಯಲಾರೆ
ಕಂಡ ಕನಸುಗಳ ಕಸುವು ಹೆಚ್ಚಿಸಲು
ನೀರೆರೆದ ಕೈಗಳಿಗೆ ನಮಿಸದಿರಲಾರೆ
ಸಾವಿರಾರು ಕನಸುಗಳಿಗೆ ಬಣ್ಣ ತುಂಬುವೆ
ಎಂದು ಪಾಠ-ಪ್ರವಚನಗಳ ಮಂತ್ರ ಮುಗ್ಧರಾಗಿ
ಆಲಿಸಿದ ಕಿವಿಗಳ ರಿಂಗಣವ ನಿಲ್ಲಿಸಲಾರೆ
ನಕ್ಕು ನಲಿದು ಮುಗ್ಧತೆಯ ಪಾಠ ಕಲಿಸಿ
ಅಪ್ಪುಗೆಯ ಆಲಿಂಗನದಲಿ ನನ್ನ ನಾ
ಮರೆಯುವಂತೆ ಮಾಡಿದ ಮಕ್ಕಳ
ಬಿಸಿಯಪ್ಪುಗೆಯ ಪ್ರೀತಿಯುಸಿರ
ಹಿತವ ಆರಲು ಬಿಡಲಾರೆ
ಅಲ್ಲಿ ಇಲ್ಲಿ ಎಲ್ಲೆಲ್ಲೂ ಅಲೆಯುವಾಗ
ಪರಿಚಯವಾದ ಅಪರಿಚಿತರು ಚಿತ್ತವಲುಗಾಡಿಸಿ
ಹೊಸ ಚಿತ್ರ ಬಿಡಿಸಿ ನನ್ನೆದೆಯ ಬಗೆದು ಒಳ
ಹೊಕ್ಕು ಹಿತವಾಗಿ ಗೀಚಿ ಗಾಯ ಮಾಡಿ
ಕೆರಳಿಸಿ ಕೆರೆಯುವಂತೆ ಮಾಡಿ ಉಗುರು
ಸಂದಿಯ  ನೆತ್ತರು ಕಲೆಗಳ ಚೀಪಿದಾಗ
ನೆನಪಾಗಿ ನನ್ನ ನಾ ಪರಚಿಕೊಳಲು
ಪ್ರೇರೇಪಿಸುವ ಚಲುವೆಯರ ಮಧುರತೆಯ
ಮೀಟದಿರಲಾರೆ
ಸೋತಾಗ ಎಲ್ಲರೂ ಓಡಿ ಹೋಗಿ ಮೈದಾನದಲಿ
ಒಂಟಿಯಾಗಿ ಅಳುತ ನಿಂತಿರುವಾಗ ಓಡಿ ಬಂದು
ಧೈರ್ಯ ಹೇಳಿ ಮತ್ತೆ ಆಟ ಆಡಲು ಉತ್ತೇಜಿಸಿ
ಗೆದ್ದಾಗ ದೂರದ ಮೂಲೆಯಲಿ ನಿಂತು ಚಪ್ಪಾಳೆ
ತಟ್ಟಿ ಸಂಭ್ರಮಿಸುವ ನಿಷ್ಪ್ರಹ ಕೆಲವೇ ಕೆಲವು
ಗೆಳೆಯರ ಕೈ ಬಿಡಲಾರೆ
ಹೊಸ ಕನಸುಗಳ ಗಾಳ ಹಾಕಿ ಮೋಸ ಮಾಡಿ
ಕೈ ಕೊಟ್ಟು ಕೇಕೆ ಹಾಕಿ ಹೊಸ ಪಾಠಗಳನು
ದಯಪಾಲಿಸಿದವರನು ಹಿತಶತ್ರುಗಳು ಎಂದು
ಜರಿಯಲಾರೆ ದಟ್ಟ ಕತ್ತಲಲಿ ಕೈಬಿಟ್ಟು
ಚೀರಾಡಿಸಿ ಬೆಳಕಿನ ಮಹಿಮೆಯ ಸಾರಿದವರ
ಮರೆಯಲಾದೀತೇ ?
ಬಾಳ ಪಯಣದಲಿ ಭೇಟಿಯಾದ ಎಲ್ಲರೂ
ಎಲ್ಲರೂ ಭಿನ್ನ ವಿಭಿನ್ನ ಅಂತವರನು ದಕ್ಕಿಸಿಕೊಂಡ
ನಾ ನಿಜವಾಗಲೂ ಧನ್ಯ ಧನ್ಯ...
----ಸಿದ್ದು ಯಾಪಲಪರವಿ

No comments:

Post a Comment