Friday, December 2, 2016

ಗಾನ ಗಾರುಡಿಗ

ಬದಕು ನೀಡಿದ ಕಠಿಣತೆಯ
ಸವಾಲಾಗಿ ಸ್ವೀಕರಿಸಿ ಬೆನ್ನು
ಹತ್ತಿದ ನಾದಗಳ ಹಿಡಿದಿಟ್ಟು
ಹದವಾಗಿ ಮುದವಾಗಿ
ರಾಗಗಳ ಆಲಾಪಿಸಿ ಜಯಿಸಿದ
ಗಾನ ಗಾರುಡಿಗ
ಒಳಗಣ್ಣ ಬೆಳಕ ಹಿಡಿದು
ಅಂಧರ ಕಣ್ಣಾಗಿ ಹೆಳವರ ಕಾಲಾಗಿ,
ಅನಾಥರ ನಾಥರಾಗಿ ಬಾಳ
ದಯಪಾಲಿಸಿದ ನಡೆದಾಡುವ ದೇವರು.
ಇಷ್ಟ ಲಿಂಗದ ಸಂಗದಲಿ
ಲಿಂಗಾಂಗ ಸಾಮರಸ್ಯದ ಉತ್ತುಂಗಕೆ
ಏರಿದರೂ ಎನಗಿಂತ ಕಿರಿಯರಿಲ್ಲ
ಎಂದು ಹಾಡಿದ ಪುಟ್ಟ'ರಾಜ'.
ಮೈ ತುಂಬಾ ಧ್ಯಾನದ ಕಂಪು
ಕಿವಿ ತುಂಬ ನಾದದ ಇಂಪು
ಬೆರಳಾಟಕೆ ಸಿಕ್ಕ ತಾಳ-ವಾದ್ಯಗಳು
ನಲಿದು ಸಂಭ್ರಮಿಸಿದ ಕ್ಷಣಗಳಲಿ.......
ಈಗ ಮೌ.....ನ. ದಿವ್ಯ ಮೌನ......
ಆ ಮೌನದಲಿ ಮೆರೆಯುವ ಮರೆಯಾಗದ
ಗುಂಗು ಹಿಡಿಸಿರುವ ತರಂಗಗಳು
ನಿಧಾನ ಸುಳಿಯುತ ಅಲೆಯುತಿವೆ.
ನೀ ನಡೆದಾಡಿದ ಹೆಜ್ಜೆ ಗುರುತಿನಲಿ.
ಅಳುವ ಅಂಧರ ಕಣ್ಣೊರೆಸಲು
ಅನಾಥರ ಸಾಕಿ - ಸಲಹಲು ನೀ
ಹುಟ್ಟಿ ಬಾ ಮತ್ತೊಮ್ಮೆ ಎನ್ನಲು
ಬಿಟ್ಟು ಹೋಗಿಲ್ಲ ವಲ್ಲ ಅಜ್ಜ
- ಸಿದ್ದು ಯಾಪಲಪರವಿ
Read more...

No comments:

Post a Comment