ಕತ್ತಲಲ್ಲಿ ಮಾಯವಾದ ಭಾವ ಜೀವಿ
1982 ನಾನಾಗ ಪಿಯುಸಿ ವಿಧ್ಯಾರ್ಥಿ , ಕನಸುಗಳೇ ನನ್ನ ಜೀವಾಳ. ಸಿನಿಮಾ , ಸಿನಿಮಾ ನಟರು , ಸಾಹಿತಿಗಳೇ ನನ್ನ ಲೋಕ.
ಅಂತಹ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಧಾರವಾಡಕ್ಕೆ ಪುಟ್ಟಣ್ಣ ಕಣಗಾಲ್ ಬಂದಿದ್ದರು. ಅವರು ತುಂಬಾ ಭಾವುಕರಾದ ಸಂದರ್ಭ , ಅದೇ ತಾನೇ ಅವರ
' ಮಾನಸ ಸರೋವರ ' ಯಶಸ್ವಿಯಾಗಿತ್ತು. ತಮ್ಮನ್ನು ನೋಯಿಸಿದ ನಟಿಯೊಬ್ಬರ ಮೇಲೆ ಸವಾಲು ಹಾಕಿ ಕೊಂಚ ನಿರಮ್ಮಳರಾದ ಗೆಲುವು ಅವರಲ್ಲಿ ಇದ್ದರೂ ನೋವು ಮಾಯವಾಗಿರಲಿಲ್ಲ.
ಅವರ ಸಾಲು ಸಾಲು ಯಶಸ್ವಿ ಚಿತ್ರಗಳು ಅವರಿಗೆ ರಾಷ್ಟ್ರೀಯ ಮನ್ನಣೆ ದೊರಕಿಸಿದ್ದವು. ಅವರ ಬಹುಪಾಲು ಶಿಷ್ಯರು ಸ್ಟಾರ್ ಗಿರಿಯ ಮೇಲಿದ್ದರೂ ಪುಟ್ಟಣ್ಣ ಏಕಾಂಗಿ.
ಅವರ get up ಬದಲಾಗಿ ಸಂತರಾಗಿದ್ದರು. 'ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ' ಎಂದು ಜೋರಾಗಿ ಹಾಡಿ ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡಿದ್ದರು.
ತಪ್ಪು ಯಾರದು ಎಂಬ ವಿಶ್ಲೇಷಣೆ ನನ್ನ ಉದ್ದೇಶವಲ್ಲ. ಅವರು ಕಾನೂನು ಕಾಲೇಜಿಗೆ ಅತಿಥಿಯಾಗಿ ಬಂದಾಗ
ಮಾತನಾಡಲಾರಂಭಿಸಿದ ಕೂಡಲೇ ಕರೆಂಟ್ ಹೋಗಿ ಕತ್ತಲಾದ ಕೂಡಲೇ ಅವರ ಕ್ರಿಯಾಶೀಲ ಮನಸು ಜಾಗೃತವಾಗಿ ಅಷ್ಟೇ ಭಾವುಕರಾಗಿ ಮಾತನಾಡಿದರು ' ನಾವು ಸಿನಿಮಾದವರು ನಿಮ್ಮನ್ನು ಕತ್ತಲೆಯಲ್ಲಿ ಕೂಡಿಸಿ ಸಿನಿಮಾ ತೋರಿಸುತ್ತೇವೆ , ನಾವು ಬೆಳಕಿನಲ್ಲಿ ನಿಮಗೆ ಕಾಣಬಾರದೆಂದು ಕರೆಂಟ್ ಹೋಗಿದೆ ಆದ್ದರಿಂದ ಕತ್ತಲಲ್ಲೇ ನನ್ನ ಮಾತುಗಳನ್ನು ಕೇಳಿ ' ಎಂದು ವೇದಾಂತಿಯಂತೆ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ.
ಇದು ಈಗ ಮತ್ತೆ ನೆನಪಾಗಿ ಇಲ್ಲಿ ದಾಖಲಿಸಲು ಕಾರಣ ನಿನ್ನೆ ಮಧ್ಯೆ ರಾತ್ರಿಯವರೆಗೆ ನನ್ನನ್ನು ಹಿಡಿದಿಟ್ಟ ' ಮಾನಸ ಸರೋವರ ' ಕಾರಣ.
ಒಬ್ಬ ಅಪ್ರತಿಮ ಕ್ರಿಯಾಶೀಲ ವ್ಯಕ್ತಿ ವೈಯಕ್ತಿಕ ಅನುಭವಗಳನ್ನು ಹಾಗೂ ಎಲ್ಲವನ್ನೂ ಸೃಜನಶೀಲವಾಗಿ ದಾಖಲಿಸಬಲ್ಲ ಎಂಬುದಕ್ಕೆ ಪುಟ್ಟಣ್ಣ ಹಾಗೂ ಮಾನಸ ಸರೋವರವೇ ದಿವ್ಯ ಸಾಕ್ಷಿ.
ಸಿನಿಮಾದ ಹಾಗೆ ಪುಟ್ಟಣ್ಣ ಬದುಕನ್ನು ಅಷ್ಟೊಂದು ಭಾವಕರಾಗಿ ನೋಡದೇ ಕೊಂಚ ವಾಸ್ತವಿಕವಾಗಿ ನೋಡಿದ್ದರೆ ಕೇವಲ 51ರ ಕಿರಿದು ಪ್ರಾಯದಲ್ಲಿ ಚಿತ್ರರಂಗವನ್ನು ಅನಾಥವಾಗಿಸುತ್ತಿರಲಿಲ್ಲ ಎಂದನಿಸುತ್ತದೆ.
----ಸಿದ್ದು ಯಾಪಲಪರವಿ
No comments:
Post a Comment