Friday, December 2, 2016

ರವೀಂದ್ರ ರೇಷ್ಮೆ

ಇವರ ಪರಿಚಯ ಯಾರಿಗಿಲ್ಲ ಹೇಳಿ ?

ಕನ್ನಡ ಓದುಗರನ್ನು ಬೆಚ್ಚಿ ಬೀಳಿಸಿ ಪುಳಕಗೊಳಿಸಿ , ಹೊಸ ಬಗೆಯ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದ 'ಲಂಕೇಶ್ ಪತ್ರಿಕೆ'ಯ ಜೀವಾಳ. ರಾಜಕೀಯ ಲೇಖನಗಳು , ತನಿಖಾ ವರದಿಗಳ ಮೂಲಕ ಅನೇಕರ ಮುಖವಾಡಗಳ ಕಳಚಿದ ಹೆಗ್ಗಳಿಕೆ . ನಿರಂತರ ಬರೆಯುತ್ತಾ ಪತ್ರಿಕೆಗೆ ಹೊಸ ರಾಜಕೀಯ ಭಾಷ್ಯ ಬರೆದ ಸಾಹಸಿ .
ಕರ್ನಾಟಕ ರಾಜಕೀಯ ಇತಿಹಾಸದ ಎನ್ಸೈಕ್ಲೋಪಿಡಿಯಾ ಎಂದರೆ 'ರವೀಂದ್ರ ರೇಷ್ಮೆ ' .
ಲಂಕೇಶ್ ಜೀವಂತವಾಗಿ ಇರುವವರೆಗೆ ಪತ್ರಿಕೆಯ ಜೀವಂತಿಕೆ ಉಳಿಯಲು ರೇಷ್ಮೆ ಕಾರಣರಾದರು.
ವರ್ತಮಾನದ ಪತ್ರಿಕೋದ್ಯಮ ತುಂಬಾ ಬದಲಾದಾಗ ರೇಷ್ಮೆಯವರಂತಹ ವ್ಯಕ್ತಿಗಳು ಪಕ್ಕಕ್ಕೆ ಸರಿದರೂ ಇವರು ದೃಶ್ಯ ಮಾಧ್ಯಮಗಳ ಪಾಲಿನ ಹೀರೋ ಆಗಿ ಅಲ್ಲಿಯೂ ಮಿಂಚಿದರು.
ಅವರ ಸಾರಥ್ಯದಲ್ಲಿ ಮೂಡಿಬಂದ ' ವಿಕ್ರಾಂತ ಕರ್ನಾಟಕ ' ತಾಂತ್ರಿಕ ಕಾರಣಗಳಿಂದ ಬಹುಕಾಲ ನಿಲ್ಲದಿದ್ದರೂ , ಇದ್ದಷ್ಟು ದಿನ ಮೌಲಿಕವಾಗಿ ಮೆರೆಯಿತು.
ಕೇವಲ ಅವರ ಓದುಗ ಅಭಿಮಾನಿಯಾಗಿದ್ದ ನಾನು ವಿಕ್ರಾಂತ ಕರ್ನಾಟಕದ ಮೂಲಕ ಅವರನ್ನು ಹತ್ತಿರದಿಂದ ಗಮನಿಸುವ ಸದಾವಕಾಶ ಒದಗಿ ನನ್ನ ಬರಹಕ್ಕೆ ಹೊಳಪು ನೀಡಿದರು.
ನಂತರ ಎಲ್ಲ ಕಡೆ ಹೊಂದಿಕೊಂಡರೂ ನಂಬಿದ ಮೌಲ್ಯಗಳನ್ನು ಬಿಟ್ಟುಕೊಡಲಿಲ್ಲ .
ನೇರ , ನಿಷ್ಠುರ ಒಳನೋಟದ ವಾದ ತುಂಬಾ ಸಾತ್ವಿಕ ಮಧುರತೆಯ ತಲ್ಲಣ.
ಹವ್ಯಾಸಿ ಪತ್ರಿಕೋದ್ಯಮಿಯಾಗಿದ್ದುಕೊಂಡು ತಮ್ಮ 'ಅಕ್ಯಾಡೆಮಿಕ್ ' ಸಂಪರ್ಕ ಕಳೆದುಕೊಳ್ಳಲಿಲ್ಲ .
MES ಪದವಿ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಸಾವಿರಾರು ವಿಧ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾದರು. ಪದವಿ ಕಾಲೇಜು ಒಕ್ಕೂಟದ ಅಧ್ಯಕ್ಷರಾಗಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು.
ಅವರ ಆಪ್ತರು , ಹಿತೈಷಿಗಳೂ ಆದ ಪ್ರೊ. ಡಾ. ಆರ್.ಎಮ್. ರಂಗನಾಥ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿದ್ದಾಗ ಅವರ ನೆರಳಿನಂತೆ ನಿಷ್ಪ್ರಹವಾಗಿ ಕೆಲಸ ಮಾಡಿದರು.
ಡಾ.ಎನ್.ಪ್ರಭುದೇವ್ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿದಾಗ ಅವರ ನೈತಿಕ ಸ್ಥೈರ್ಯ ಹೆಚ್ಚಿಸಿದರು.
ಉನ್ನತ ಶಿಕ್ಷಣದ ಉನ್ನತೀಕರಣಕ್ಕೆ ಅನೇಕ ಮೌಲಿಕ ವಿಚಾರಧಾರೆಗಳನ್ನು ವಿಶ್ವವಿದ್ಯಾಲಯಗಳ ವೇದಿಕೆಗಳ ಮೂಲಕ ಈಗಲೂ ಹಂಚಿಕೊಳ್ಳುತ್ತಾರೆ.
ಇದಿಷ್ಟು ಅವರ ವೃತ್ತಿಪರತೆಯ ಗುಣವಿಶೇಷಗಳು, ವೈಯಕ್ತಿಕವಾಗಿ ರೇಷ್ಮೆಯವರು ಸ್ನೇಹಜೀವಿ , ಸ್ನೇಹ ಅವರ ದೌರ್ಬಲ್ಯವೂ ಹೌದು ಶಕ್ತಿಯೂ ಹೌದು. ರಾಜ್ಯದ ಅನೇಕ ರಾಜಕೀಯ  ಘಟಾನುಘಟಿಗಳ ಸಂಪರ್ಕವಿದ್ಯರೂ ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಳ್ಳದ ನಿರ್ಲಿಪ್ತ ವ್ಯಕ್ತಿತ್ವ.
ಬೆಂಗಳೂರು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುವಾಗ , ವಿಕ್ರಾಂತದಲ್ಲಿ ಸಹಾಯಕ ಸಂಪಾದಕನಾಗಿ ದುಡಿಯುವಾಗ ಹೊಸ ಲೋಕದಲ್ಲಿ ನಿರಾಯಾಸವಾಗಿ ಬದುಕುವ ಬಗೆಯನ್ನು ಕಲಿಸಿದರು.
ಮಾತು , ಮಂಥನ , ಚಿಂತನ , ಸಾತ್ವಿಕ ಕೋಪ ಎಲ್ಲದರಲ್ಲೂ ತೀವ್ರತೆಯ ಧಾವಂತ. ಸಾಮಾಜಿಕ ಸ್ವಾಸ್ಥ ಕಾಪಾಡಲು ಸಾವಿರಾರು ಕನಸುಗಳು , ಯೋಜನೆಗಳು ಹಾಗೂ ಯೋಚನೆಗಳು.

ಅವರ ಶಕ್ತಿ , ಸಾಮರ್ಥ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಾಲ ಬರುತ್ತದೆ ಎಂಬ ಭರವಸೆ ನನ್ನಂತಹ ಸಾವಿರಾರು ಅಭಿಮಾನಿಗಳ ಆಸೆ , ಆಶಯ...
ಅದಕ್ಕೆ ಇಷ್ಟೆಲ್ಲಾ ಹೇಳಿದೆ.
----ಸಿದ್ದು ಯಾಪಲಪರವಿ

No comments:

Post a Comment