Wednesday, November 16, 2016

ಕವಿತಾ

ಕಳವಳವ ದೂರಾಗಿಸುವ ಕವಿತಾ

ಲೆಕ್ಕವಿಲ್ಲದಷ್ಟು ಕಳವಳಗಳು
ನೂರೆಂಟು ಆತಂಕಗಳು
ಮನೋಮಂದಿರವ ಹೊಕ್ಕು
ಚಲ್ಲಾಟವಾಡುವ ಅರಗಿಣಿಗಳು
ಭಾವನೆಗಳ ಜೊತೆ ಕಣ್ಣಾ-ಮುಚ್ಚಾಲೆ
ಆಡುವ ಸಂಗತಿಗಳು

ಹತ್ತಿರವಾದಂತೆ ಭ್ರಮೆ ಹುಟ್ಟಿಸಿ
ಫಕ್ಕನೆ ಛಕ್ಕನೆ ದೂರಾಗಿ
ಬೆರಳು ತೋರಿಸಿ ಬೆರಗು ಹುಟ್ಟಿಸುವ
ಮಾಯಾಂಗನೆಯರು

ಹೆಣ್ಣು-ಹೊನ್ನು-ಮಣ್ಣು
ಮಾಯೆಯಲ್ಲ ಎಂದರಿಯುತ
ಮಾಯದ ಬಲೆಯಲಿ ಮತ್ತೆ
ಮತ್ತೆ ಸಿಕ್ಕು ಗಿರಕಿ ಹೊಡೆಯುವ
ಹೊತ್ತು ತಪ್ಪಿಸಿಕೊಳ್ಳಲಾಗದ
ಗಮ್ಮತ್ತು

ಮನದ ಮುಂದಣ ಆಸೆಗೆ
ನಿತ್ಯ ಪರಿತಪಿಸಿ ಹಪಾಹಪಿಸಿ
ಬಳಲಿ ಬೆಂಡಾದಾಗ

ಕೈ ಹಿಡಿದು ನಡೆಸಿ , ಕೈ ಕೊಟ್ಟವರ
ಮುಖವಾಡ ಕಳಚಿ ಅಂಗೈಯಲಿಟ್ಟು
ಭ್ರಮಾಲೋಕದ ಭೂತವ ಬಿಡಿಸಿ
ವಾಸ್ತವದಲೆಯ ನಡೆಸುವ
ಅಂದಗಾತಿ

ನೀ ನಿರದಿರೆ ನಿದಿರೆಯೂ ಬಹು
ದೂರ
ತೋಳ ದಿಂಬಾಗಿಸಿ ಬೆಚ್ಚಗೆ ಮುದದಿ
ಮಲಗಿಸುವ ನೀ ನಿತ್ಯ ನೂತನ
ಕಾವ್ಯ ಕನ್ನಿಕೆ...

----ಸಿದ್ದು ಯಾಪಲಪರವಿ

No comments:

Post a Comment