Sunday, November 6, 2016

ಹದ ಇದ್ದಾಗ

ಹದ ಇದ್ದಾಗ ಕದ ತಗೀಬ್ಯಾಡೋ

ಹದವಿದ್ದಾಗ ಕದ ತೆರೆದು
ಮುದವಾಗಿ ಬೆರೆತು ಜೋರಾಗಿ
ಗುದ್ದಿದ ಗೂಳಿಗಳ
ಮರೆಯುವದಾದರೂ ಹ್ಯಾಂಗ

ನಸು ನಗುತ ನುಸುಗುನ್ನಿಗಳ
ಹಾಂಗ ಮೈ ಮ್ಯಾಲ ನಲಿದು
ಕುಣಿದು ಕುಪ್ಪಳಿಸಿ
ಎದಿ ಮ್ಯಾಲಿನ ಕೂದಲಿನ್ಯಾಗ
ಸಣ್ಣಗ ಬೆರಳಾಡಿಸಿ ನುಣ್ಣಗ
ಮಾಡಿ

ಎದೀನ ಹರಗಿ ಹದಗೊಳಿಸಿ
ಪ್ರೀತಿ ಪ್ರೇಮಗಳ ಬೀಜ ಬಿತ್ತಿ
ಒಲವಿನ ನೀರ ಹರಿಸದ
ಭಾವನೆಗಳ ಬತ್ತಿಸಿದವರ

ಕಣ್ಣ ಕಾಂತಿಯನು
ಗುಳಿ ಕೆನ್ನೆಯನು ಸವರಿ
ಮುತ್ತಿಟ್ಟು ಕಚಗುಳಿ ಇಟ್ಟವರ

ಮೈಯಾಗ ನೆರಿ ಹಾವಳಿ
ಎಬ್ಬಿಸಿ ಸೊಕ್ಕನು ಉಕ್ಕಿ ಹರಿಸಿ
ಬೆಚ್ಚಿ ಬೀಳುವಂತೆ ಮಾಡಿದವರ
ನಾ
ಮರೆಯುವದಾದರ ಹ್ಯಾಂಗ

ತಮ್ಮ ಪಾಲಿನ ಸುಖಾನ
ಚಪ್ಪರಿಸಿ ಸವಿದು ರಸವ  ಹಿಂಡಿ
ಹೀರಿ
ಹಿಪ್ಪೆ ಮಾಡಿ ಕಸುವು ಕಳಕೊಂಡ ಈ
ಹೊತ್ತು
ಮರೆಯುವದಾದರೂ ಹ್ಯಾಂಗ

ನಿಮ್ಮ ಎದಿಯಾಗಿನ ಕಿಚ್ಚು
ಹೊತ್ತಿ ಉರಿದು ಹವಣಿಸಿದಾಗ
ನನ್ನ ಎದಿ ಕದ ಬಡಿದರ ಮತ್ತ
ಸಿಕ್ಕು ಮತ್ತು ಬರಿಸುವ ಊರ
ಹುಚ್ಚ ಖೋಡಿ ನಾ
ನಲ್ಲ

ಮುಚ್ಚೀನಿ ಈಗ ನಾ
ಕದ ನಿಮ್ಮಂತ ಊರ
ಹಕನಾಕ ಮಂದೀಯ
ನಂಜಿಗೆ ಅಂಜಿ

ಹದ ಇದ್ದವರಿಗೆ ಕದ
ತಗೀಬ್ಯಾಡೋ ತಿರಬೋಕಿ
ತಮ್ಮಾ ಅಂದವರ ಮಾತ
ಮರೆಯುವದಾದರೂ ಹ್ಯಾಂಗ.
----ಸಿದ್ದು ಯಾಪಲಪರವಿ

No comments:

Post a Comment