ಈಗ ನಾವೂ ಬಿಕ್ಷುಕರು
'ಅಮ್ಮಾ ತಾಯೇ ಹತ್ತು ರೂಪಾಯಿ
ಚಿಲ್ರೆ ಕೊಡಿ ಖರ್ಚಿಗೆ ಬೇಕಾಗಿದೆ
ನನ್ನ ಹತ್ರ ಸಾವಿರ ರೂಪಾಯಿ ಇದೆ
ಚಿಲ್ರೆ ಕೊಡಿ ಬಿಳಿ ಮಾಡ್ಕೋತೀನಿ '
ಎಂಬುದು
ಸರತಿ ಸಾಲಿನ ಪಾಳೆಯದಲಿ
ಹಗಲು ರಾತ್ರಿ ಬ್ಯಾಂಕಿನ ಮುಂದೆ
ಆಕ್ರೋಶ
ಸತ್ಯದ ಆಳಗಲ ಅವರಿಗೂ ಇವರಿಗೂ
ಇಬ್ಬರಿಗೂ ಗೊತ್ತಿಲ್ಲ
ಕೊಡಿ ಖಂಡಿತಾ ಬಿಳಿಯಾಗಿಸುತ್ತೇನೆ
ಎಂಬ ಹುಸಿ ಕನಸು ಮಾರುವ ಕತ್ತಲೆ
ಖದೀಮರ ಕಹಳೆಗೆ ಬೆಚ್ಚಿಬಿದ್ದವರದು
ನಾಯಿಪಾಡು
ಬಿಸಿತುಪ್ಪದ ರುಚಿ ಅನುಭವಿಸಲಾಗದ
ಚಡಪಡಿಕೆಯಲಿಯೂ ಧನಿಕರಿಗೆ ಸಾವಿರ
ದಾರಿ ಸಾವಿನಿಂದ ಪಾರಾಗಲು
ನಿಶ್ಚಿಂತರವರು ಈ ಕರಾಳ ರಾತ್ರಿಯ
ಕಳವಳದಲೂ
ಕಾಲಪ್ರವಾಹದಲಿ ಕೊಚ್ಚಿ ಹೋಗುವ
ಇಲ್ಲವೇ ಸಿಕ್ಕು ನರಳುವ ಕರ್ಮ
ಕೇವಲ ಬಡಪಾಯಿಗಳಿಗೆ
ಸರತಿ ಸಾಲಿನಲಿ ನಿಂತವರಿಗೆ
ನೀರುಣಿಸುವ ಕುಹಕ ಉದಾರತೆಯ
ಕಾಳ ಧಣಿಗಳ ಮಸಲತ್ತುಗಳ ಅರಿಯದ
ಅಮಾಯಕರ ಮುಖದ ಮೇಲೆ
ಧಾರಾಕಾರ ಬೆವರು
ರಾಜಕಾರಣದ ಮಸಲತ್ತುಗಳ
ಆಳದಲಿ ಅಡಗಿರಬಹುದಾದ
ಉದ್ದೇಶವ ಅರಿಯುವದ ಮರೆತ
ಅಮಾಯಕರು
ದೇಶೋದ್ಧಾರದ ಸೋಗಲಾಡಿತನಕೆ
ನಿರಂತರ ಜಯಕಾರದ ಅಬ್ಬರದಲಿ
ಕಪ್ಪು ಹಣ ಸದ್ದಿಲ್ಲದೆ ಬೆಳಗಾಗುತ್ತಲೇ
ಇದೆ...
----ಸಿದ್ದು ಯಾಪಲಪರವಿ
No comments:
Post a Comment