ಜಾರಿ ಬೀಳಲಿಲ್ಲ
ಕೆಲವು ಕ್ಷಣ ಖುಷಿ
ಕೊಟ್ಟು ಕಚಗುಳಿ ಇಟ್ಟು
ಅಲ್ಲಲ್ಲಿ ಕಚ್ಚಿ ಒಂಚೂರು ಹಿತವಾದ
ಗಾಯ ಮಾಡಿ ಒಂದಿಷ್ಟು ಹೇಳ
ಬಾರದನ್ನ ಹೇಳಿ ಎಲ್ಲವನ್ನೂ ಕೇಳಿ
ಹೋದದ್ದು ಒಳ್ಳೆಯದೇ
ಈಗ ನಾ ಅಪರಾಧಿ ಅಲ್ಲವೇ
ಅಲ್ಲ ಹಸಿದಿದ್ದರೂ ಗಬ ಗಬ
ತಿನ್ನಲಿಲ್ಲ ಎಲ್ಲ ಏನೆಲ್ಲ ಎದುರಿಗೆ
ಬಟ್ಟ ಬಯಲು
ಆದರೂ ಗಡಬಡಿಸಿ
ಬಡಕೊಂಡು ಬಾಯಿ
ಹಾಕಲಿಲ್ಲ ಕೈ
ಹಚ್ಚಲಿಲ್ಲ ಮನದ
ಮೂಲೆಯಲೊಂದು
ಅನುಮಾನ ಕಾಡಿ ಕನವರಿಸುತಿತ್ತು
ಒಳಗಣ್ಣು ಬೇಡ ಇದು
ನಿನ್ನದಲ್ಲ ಎಂದು ಎಚ್ಚರಿಸುತಿತ್ತು
ಮೈಮನಗಳ ಮೂಲೆಗೊತ್ತಿ ದೂಡಿ
ಒಳಗಣ್ಣನಾಲಿಸಿ ಲಾಲಿಯ ಕೇಳಿ
ಎಚ್ಚರಾಗಿ ಬೆಚ್ಚಿ ಬಿದ್ದು ನನ್ನ
ಸಂಯಮಕೆ ಸ್ವಯಂ
ಬೆರಗಾದೆ
ಎಲ್ಲಂದರಲ್ಲಿ ನುಸುಳಿ
ಸುಳಿದಾಡದೇ ಸಹನೆಯಲಿ
ನೆಲೆ ನಿಂತು ಮತ್ತೊಮ್ಮೆ
ಉ ಹೂಂ ಊಹೂಂ ಇದು
ನನಗೆ ಈಗ ಈ ಕ್ಷಣದಲಿ
ಭಾವಾವೇಶಕೆ ಒಳಗಾಗಿ ಒಳ
ಸುಳಿದು ಬರಸೆಳೆದರೂ ಕೈ
ಜಾರುವ ಮೀನಿದೆಂಬುದ
ಮನಗಂಡು ಅಲ್ಲಿಯೇ ಮುದುಡಿದೆ
ಎಲ್ಲವೂ ವಿಧಿಯಾಟದ ಮಹಿಮೆ
ಯಲಿ ಜಾರಿ ಬೀಳಲಿಲ್ಲ
ಸಾಕೀಗ ದಡದಲಿ ನೆಮ್ಮದಿಯ
ಉಸಿರ ಬಿಟ್ಟು ಮತ್ತೆ
ಆತ್ಮಾವಲೋಕದಲಿ
ನೆಲೆಗೊಂಡುಬಿಟ್ಟೆ...
----ಸಿದ್ದು ಯಾಪಲಪರವಿ
No comments:
Post a Comment