Monday, January 27, 2014

ಮಣ್ಣಿನ ಹಾಡು

ತಂಗಾಳಿ ಬೀಸುವದಿಲ್ಲ
ಕೋಗಿಲೆ ಹಾಡುವುದಿಲ್ಲ
ಮಾಮರಗಳ ಎಲೆಗಳ ನಾದ
ಝೇಂಕರಿಸುವುದಿಲ್ಲ
ದೇಶಕೆಲ್ಲ ಮೂರು ಕಾಲ
ನಮ್ಮೂರಿಗೆ ಎರಡೇ ಕಾಲ
ಸದಾ ಬೇಸಿಗೆ!
ಉರಿಯುವ ಬೇಸಿಗೆ!!
ಥಟ್ಟನೆ ಮಳೆಹನಿ ಬೀಳುವುದಿಲ್ಲ
ಸದಾ ಹರಿಯುವ ನದಿ ನಿಲ್ಲುವದಿಲ್ಲ
ಮೇಲೆಲ್ಲ ಸುಡುವ ಸೂರ್ಯ
ಕೆಳಗೆ ಜುಳು ಜುಳು ಹರಿವ ಗಂಗೆ.
ಗಟ್ಟಿಯಾಗಿಸಿದೆ ಮೈಮನಗಳ
ಹುಡಿಧೂಳು-ಉರಿಬಿಸಿಲು
ಮೈ ಸುಟ್ಟರೂ ಬೆವರು
ಧಾರಾಕಾರ ಸುರಿದರೂ
ಹಗಲಿರುಳು ಗದ್ದೆ-ಮಿಲ್ಲುಗಳಲಿ
ದುಡಿಯುವ ಧೀರರು
ನಮ್ಮೂರ ವೀರರು.
ಬರಿಶಾಲೆ ಅಕ್ಷರ ಸಾಕೆ ಬದುಕಲು?
ದುಡಿದ ಚೈತನ್ಯ ಸಾಕು ಬೆವರಿಗೆ
ಬರುವ ಲಾರಿ ನೆಲ್ಲು ಅಕ್ಕಿ ಧನ ಧಾನ್ಯಕೆ.
ಬಾಯಿಬಿಟ್ಟರೆ 'ಖೋಡಿ'.'ಟಿಕ್ಕ'
ಒರಟು ಭಾಷೆ
ಮನದಲೆಲ್ಲ ಜೇನು ತುಪ್ಪ
ಸುರಿವ ಅಭಿಲಾಷೆ
ಮುನಿದಳಿಲ್ಲಿ ನಿಸರ್ಗ ಲಕ್ಷ್ಮಿ
ನಲಿವಳಿಲ್ಲಿ ಧನಲಕ್ಷ್ಮಿ
ಅಂತು ಇಂತೂ ಎಂತೂ
ಉರಿವ ಬಿಸಿಲಲು ತಂಪು ಕೊಡುವದೆನಗೆ
ನನ್ನ ತವರನಾಡು
ಇದೇ ನನ್ನ ಮಣ್ಣಿನ ಹಾಡು

No comments:

Post a Comment