Wednesday, March 22, 2017

ಬರೀ ತಿರುವುಗಳು

ಬರೀ ತಿರುವುಗಳು

ಈ ಬದುಕಿಗೆ ಬರೀ ತಿರುವುಗಳದೇ ಸೆಳೆತ
ಮೈಮಾಟದ  ವಿಧಿಯಾಟದ ನೂರೆಂಟು ಮಿಳಿತ

ಹರಿಯುವ ನದಿ ತನ್ನ ಹಾದಿ ಸೀಳಿಕೊಂಡು
ಹರಿವ ಪರಿ ನಿಲಿಸಲುಂಟೆ

ಎಲ್ಲವೂ ಎಲ್ಲರೂ ಅನಿರೀಕ್ಷಿತ ಯೋಜನೆ
ಯೋಚನೆ ಆಲೋಚನೆ ಬರೀ ಒಂದು ಲೆಕ್ಕದಾಟ

ಕೂಡಿಸಿ ಕಳೆದು ಗುಣಿಸಿ ಭಾಗಿಸುವ ಹುಮ್ಮಸ್ಸು
ಪರಿಣಾಮ ಅಗಣಿತ ಅಗೋಚರ
ಆದರೂ ನಿಲ್ಲದ ಲೆಕ್ಕಾಚಾರ
ಕಾಲನ ಹೊಡೆತಕೆ ಎಲ್ಲ ಉಲ್ಟಾ-ಪಲ್ಟಾ

ಮತ್ತದೇ ತಿರುವಿನ ತಿರುಗುಣಿಯ ಸುತ್ತ ತಿರುಗಾಟ
ಎಲ್ಲವೂ ಪೂರ್ವ ಲಿಖಿತ ದೇವನಾಟದಲಿ
ನಾ ಮಾಡಿದೆ ಹೀಗೆ ಮಾಡುವೆನೆಂಬ ಜಂಬದೂಟ

ಕಳೆದವರು ಕೂಡುತ್ತ , ಕೂಡಿದವರು ಕಳೆಯುತ್ತ
ಭಾಗವಾಗುವ ಹೊತ್ತು ನಾವೇ ಹೊರಗೆ ಬರೀ ಶೂನ್ಯ

ಆದರೂ ಹುಡುಕುತ್ತೇವೆ ಹೊಸ ಹಾದಿ ತಿರುವಿನೆದುರು
ತಳಮಳಿಸಿ ಎಲ್ಲಿಗೆ ಈ ದಾರಿ ಗೊತ್ತಿಲ್ಲ
ಆದರೂ ನಿಲ್ಲಲಾಗದು ಹೋಗಲೇಬೇಕು
ಸಾಗಲೇಬೇಕು ಕಾಲುಗಳು ಕಾಲನ
ಹೊಡೆತಕೆ ಸಿಕ್ಕು ದಣಿಯುವತನಕ
ಉಸಿರು ಹೆಸರಾಗಿ ಉಳಿಯುವತನಕ...

---ಸಿದ್ದು ಯಾಪಲಪರವಿ

Tuesday, March 21, 2017

ಆನೆ ಬಲ

ರಮ್ಯ ಪರಿಸರದ ಪಶ್ಚಿಮ ಘಟ್ಟದ ಮಡಿಲು

ಆನೆ ಬಲಕ್ಕಾಗಿ ಪ್ರಾರ್ಥಿಸೋಣ

ಮನಸ್ಸು ಪ್ರಫುಲ್ಲವಾಗಿದ್ದರೆ ಬದುಕು  ಅರ್ಥಪೂರ್ಣವೆನಿಸುತ್ತದೆ.

ನಮ್ಮ ಹಬ್ಬಗಳು , ಆಚರಣೆಗಳು  ಮನಸ್ಸು ಕಟ್ಟುವ ಕ್ರಿಯೆಯಾಗಬೇಕು.
ನಮ್ಮ ಪೂರ್ವಜರು ಆನೆ ಬಲ ಕೊಡು ಎಂದು ಪ್ರಾರ್ಥಿಸುತ್ತಿದ್ದರು.
ಹಾಗೆಂದರೇನು ?  ಯಾರಿಗೂ ಕೇಡು ಬಯಸದೇ ,
ಪಾಲಿಗೆ ಬಂದದ್ದು ಪಂಚಾಮೃತ ಎಂದು ನೆಮ್ಮದಿಯಿಂದ ಇರುತ್ತಿದ್ದರು.

ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಆತಂಕಗಳೂ ಹಂಚಿಹೋಗುತ್ತಿದ್ದವು.
ಈಗ ಒಂಟಿತನದ ಭಾರ ಹಾಗೂ generation gap ನಿಂದ  ತತ್ತರಿಸುತ್ತೇವೆ.

ಮತ್ತೆ ಹಿಂದಿನ ವ್ಯವಸ್ಥೆಗೆ ಮರಳುವ ಅನಿವಾರ್ಯತೆಯನ್ನು ನಮ್ಮ ಹಬ್ಬಗಳು , ಹಳ್ಳಿಗಳು  ನೆನಪಿಸುತ್ತವೆ.
ನನಗೀಗ ನನ್ನ ಬಾಲ್ಯವೇ ರಮ್ಯವೆನಿಸುತ್ತದೆ.

ಆದರೆ ಈಗ ಈ ಒಂಟಿ ಬದುಕಿನಲ್ಲಿ ಪರಿಸರವೇ ನಮ್ಮ ಸಂಗಾತಿ , ಏಕಾಂತದ ಧ್ಯಾನವೇ ನಮ್ಮ ಪ್ರಾಣ. ಬರಹವೇ ಸಂಗಾತಿ.
ಅವಕಾಶ ಸಿಕ್ಕಾಗ ಪರಿಸರದೊಂದಿಗೆ ಲೀನವಾಗಬೇಕು.

ಹಿರಿಯರ ಹಾಗೆ ಆ(ಆರೋಗ್ಯ)ನೆ(ನೆಮ್ಮದಿ) ಬಲಕ್ಕಾಗಿ ಪ್ರಾರ್ಥಿಸಬೇಕು .

---ಸಿದ್ದು ಯಾಪಲಪರವಿ.

ಪ್ರೇಮ ಬಿಕ್ಷೆ

*Begging is better than stealing*

ಪ್ರೇಮ ಬಿಕ್ಷೆ

ಬಿಕ್ಷೆ ಬೇಡುವುದು ಸಣ್ಣ ಸಂಗತಿಯೇನಲ್ಲ
ಹಂಗು ಹರಿದು ಮಾನ ಬಿಟ್ಟು
ಬೀದಿಗಿಳಿಯುವುದು ಎಲ್ಲಿಲ್ಲದ
ಅವಮಾನ
ಅಂಗೈಯಲಿ ಜೀವ ಹಿಡಿದು
ಅರೆಬೆತ್ತಲೆಯಾಗಿ ತಿರುಬೋಕಿಯ
ಹಾಗೆ ತಿರುಗುವುದು ನಡು
ಬೀದಿಯಲಿ ಮಾನ ತೂರಿಕೊಂಡಂತೆ

ಕರುಳು ಹಿಂಡಿ ಹೊಟ್ಟೆ ತಳಮಳಿಸಿ
ಉಸಿರು ಗಟ್ಟಿ ಹಪಾಹಪಿಸಿ ಸಾಯುವೆ
ಎನಿಸಿದಾಗ ತಟ್ಟೆ ಕೈ ಸೇರಿ ಮೈ
ಮನಗಳು ಅರೆಬೆತ್ತಲಾಗಿ  ಕಣ್ಣು
ಕತ್ತಲಾಗಿ ಬೀದಿಗೆ ದೂಡುತ್ತವೆ

ಆತ್ಮಗೌರವ ಮನಸಾಕ್ಷಿ ಮಂಗ
ಮಾಯ ಈಗ ಬರೀ ಬದುಕು
ಸಾವು ದೂರಾದರೆ ಸಾಕು

ಮನೆಯೊಡತಿ ಮುಂದೆ ಹೋಗೆಂದಾಳು
ಎಂಬ ತಲ್ಲಣ
ಅನ್ನಲಿ ಬಿಡಿ ಮಾನಕ್ಕಿಂತ ಪ್ರಾಣ
ದೊಡ್ಡದು

ಎದೆ ಬಗೆದು ಕರುಳು ಕಿತ್ತಿ ಬರುವ ಹಾಗೆ
ಕೂಗಿದರೆ ಹೋಗೆನ್ನಲಾರಳೆಂಬ ಹುಚ್ಚು
ನಂಬಿಗೆ

ಆದರೂ ಬದುಕಿಗೆ ಬೇಕಲ್ಲ ತಂ
ಬಿಗೆ ಆ ಬಿಗಿಯಲಿ ಬಿಗುಮಾನ
ಬಿಟ್ಟು ಕೇಳುವ ಕರ್ಮ

ಕಳುವು , ಮೋಸ , ಸುಳ್ಳು ಹಾಗೂ
ಮಳ್ಳನ ಮುಖವಾಡವಿಲ್ಲದ
ಈ ಬಿಕ್ಷೆಯ ಬದುಕು ಹೀನಾಯವಲ್ಲ
ಎಂಬ ಸಂತೃಪ್ತಿ

ಕಡು-ಕಷ್ಟಗಳ ದೂರ ಮಾಡಿ ಮೈ
ಮನಗಳ ಮಾನ ಕಾಪಾಡಲು
ಬೇಡುವ ಬಿಕ್ಷೆಗೆ ಶಿಕ್ಷೆ ಬೇಡ

ಕಾಲನ ಮಹಿಮೆಯ ಕೂಸುಗಳು
ಮಿಂಚಿ ಮಾಯವಾಗುವ
ಸಂಚನು ಬಲ್ಲವರು ಯಾರು ?

ಮುಂದೆ ಹೋಗೆಂದರೆ ಹೋದಾನು
ತಿರುಗಿ ನೀ ಬೇಕೆಂದಾಗ ಬರಲಾರ
ಹಾಕಿಬಿಡು ಅನ್ನ ಹಳಸುವ ಮುನ್ನ
ಬೇರೆಯವರು ಕನ್ನ ಹಾಕುವ ಮುನ್ನ.

---ಸಿದ್ದು ಯಾಪಲಪರವಿ

Friday, March 17, 2017

ಸಂಬಂಧನ

ಸಂಬಂಧನ

ಸಂಬಂಧಗಳು ಎಂದರೆ ಹಸಿದ ನಾಯಿ
ಹಳಸಿದ ಅನ್ನದ ಕಥೆಯಲ್ಲ

ಬೇಕು ಬೇಡಗಳ ವ್ಯಥೆಯ ಕಥೆ
ಮನಸು ಭಾವನೆಗಳ ಮಧುರ ಮಿಲನ
ಕಡು ಕಷ್ಟಗಳ ಸಹಯೋಗ

ನೂಕು ನುಗ್ಗಲಿನ ಸಂತೆಯಲಿ ನಂಬಿ ಕೈ ಹಿಡಿದು
ಮುನ್ನಡೆಸುವ ಸಂಗಾತಿ

ಮೈಮನಗಳ ಪುಳಕಗೊಳಿಸಿ ಬದುಕ ಬವಣೆಗಳ
ಕೊಂಚ ದೂರ ದೂಡುವ ಸಾಂಗತ್ಯ

ಮೈ ಸೋಲುವ ಭ್ರಮೆಯಲ್ಲ ಮನ ಸೋಲುವ
ಅನನ್ನ ನಿರ್ಭಾವ ಲೋಕ

ತೆರೆದಷ್ಟೇ ಬಾಗಿಲು ಆಕಾಶ ನೋಡಲು ಇಲ್ಲ
ನೂಕು ನುಗ್ಗಲು

ಹೊಸ ಹುಮ್ಮಸ್ಸು ಉಳಿಯುವ ಭರವಸೆಯ
ಮಹಾ ಬೆಳಗು

ತಬ್ಬಿ ಬಿಗಿದಪ್ಪಿ ಮನಸು ಹಗುರಾಗಿಸುವ
ಜೀವಸೆಲೆ ಹೊಸದೊಂದು ನೆಲೆ

ಹಿಡಿದು ಬಿಡುವುದು ಬೇಡ  ಭಗವಂತನ
ದಯೆಯಲಿ ಸಿಕ್ಕ ವರ ಪ್ರಸಾದ

ದಕ್ಕಿದಷ್ಟು ದಕ್ಕಲಿ ಸಿಕ್ಕಷ್ಟು ಸಿಗಲಿ
ಧನಾತ್ಮಕ ಭಾವ ಬಂಧನ

ದೂರಾಗುವುದು ಬೇಡ ದೂರುವುದು ಬೇಡ
ಹೆಣ್ಣು-ಹೊನ್ನು-ಮಣ್ಣು ಋಣಾನುಬಂಧದ
ಹಂಗ ಹರಿಯುವುದು ಬೇಡ

ಒಲ್ಲೆನೆಂಬುದು ಇಲ್ಲದ ವೈರಾಗ್ಯ
ಒಲಿದುದು ಇರಲಿ ಬದುಕಲಿ ಎಂಬುದು
ಕಾಯ ಋಣ ಒಲಿದು ಒಲಿಸಿಕೊಂಡು
ಒಮ್ಮೆ ನಿಶ್ಚಿಂತರಾಗೋಣ.

---ಸಿದ್ದು ಯಾಪಲಪರವಿ

ಜೋಡಿ ಬೆಟ್ಟ

ಜೋಡಿ ಬೆಟ್ಟ

ಪರಿಸರದ ಮಡಿಲಲಿ ಬಾನೆತ್ತರಕೆ     
ಉಬ್ಬಿ ನಿಂತ ಜೋಡಿ ಬೆಟ್ಟಗಳ         
ಚಿತ್ತಾಕರ್ಷಣೆ ಅನನ್ಯ 
                 
ಬೀಸುವ ತಂಗಾಳಿಯ ಅಲೆಯಲಿ    
ಚಲಿಸುವ ಮೋಡಗಳ ಮರೆಯಲಿ   
ಮನವ ಕೆರಳಿಸುವ ಮೈ ಮಾಟ  
   
ಕಣ್ಣು ಕೀಳದೆ ದಿಟ್ಟಿಸಿ
ನೋಡುವ ಚಡಪಡಿಕೆ                      
ಮೇಲೇರಿ ಮನಸೋ
ಇಚ್ಛೆ ಹೊರಲಾಡಿ ತೇಲುವಾಸೆ        
      
ನಿಧಾನದಿ ಅಂಬೆಗಾಲಿಕ್ಕುತ
ನೆಕ್ಕುತ ಸುವಾಸನೆಯ ಮಲ್ಲುವಾಸೆ         
 
ಅಲ್ಲಿ ತುತ್ತ ತುದಿಯಲಿ ಕೊಬ್ಬಿ
ನಿಂತ ದ್ರಾಕ್ಷಿ ಹಣ್ಣ ತುಟಿಯಿಂದ       
ಮೃದುವಾಗಿ ಚೀಪಿ ಹೀರುವಾಸೆ      
                                           

ಅಂಗೈಯಲಿ ಬಿಗಿ ಹಿಡಿದು ಒಮ್ಮೆ  
ಉಸಿರು ಬಿಗಿ ಹಿಡಿದು ಕುಣಿದು
ಕುಪ್ಪಳಿಸುವಾಸೆ.

---ಸಿದ್ದು ಯಾಪಲಪರವಿ

Wednesday, March 15, 2017

ನಿಶ್ಚಿಂತನಾಗು

ನಿಶ್ಚಿಂತನಾಗು

ಹೇಳದೇ ಕೇಳದೇ ಒಮ್ಮೇಲೆ ನೀ
ಮರೆಯಾದೆ
ಚಿಂತೆ ಬೇಡ ಬೇಕು ಬೇಡಗಳ ಬಯಕೆ
ನನ್ನದಿರಬಹುದು ಆದರೆ ಬರುವುದು
ನಿನಗೆ ಸೇರಿದ್ದು

ಋಣಾನುಬಂಧದ ಬಂಧನದಲಿ ಸಿಕ್ಕವರು
ಕಳೆದು ಹೋಗುತ್ತಾರೆ ಕಳೆದವರು ಸಿಕ್ಕು
ಬಿಡುತ್ತಾರೆ

ಈ ಹಿಡಿಯುವ ಬಿಡುವ ಭರದ ಭರವಸೆಯಲಿ
ಕಳೆದು ಹೋಗುವ ಅಪಾಯದ ಅರಿವಿನೆಚ್ಚರ
ಇರಲಿ ನಾ ಕಳೆದು ಹೋಗುವ ಮುನ್ನ

ನೋಡಿ ನಕ್ಕು ಮನಸೋ ಇಚ್ಛೆ ಆಟವಾಡಿ
ಸೋತಂತೆ ನಾಟಕವಾಡಿ ಕೈ ಬೀಸಿ ಕರೆದು
ಆಸೆ ತೋರಿಸಿ ಓಡಿ ಹೋದವರ ಬೆನ್ನು
ಬೀಳಲಾದೀತೆ ?

ಕಳೆಯದೇ ಕೊಳೆಯದೇ ಕೊಳೆತು ಹೋಗದೇ
ಮನಸು ಹಗುರಾಗಿ ತಿಳಿಯಾಗಿ ಮನದ ತೊಳೆಯ
ಬಿಡಿಸಿ ನಿರುಮ್ಮಳಾಗಿ ನಿಶ್ಚಿಂತನಾಗಿ ಬಿಡುವೆ
ಬಿಡದ ಜಂಜಡವ ಹಂಗ ಹರಿದು...

---ಸಿದ್ದು ಯಾಪಲಪರವಿ

Thursday, March 9, 2017

ದೇಹ ಸವಾರಿ

ಕೆಂದುಟಿಗಳು ದೇಹ ಸವಾರಿ ಮಾಡಿ
ಉಗುರುಗಳು ಬೆನ್ನ ಮೇಲೆ ಹರಿದಾಡಿ
ಮೈ ರೋಮಗಳಿಗೆ ಬಿಸಿಯುಸಿರು ತಾಗಿ
ಎದೆಯಲರಳಿದ ತೊಟ್ಟುಗಳು  ಎಲ್ಲಂದರಲಿ ಕಚಗುಳಿ ಇಟ್ಟು
ನನ್ನ ಇನ್ನು ಕೆಣಕದಿರಲಿ

ಸಹಿಸುವುದು ಸಣ್ಣ ಮಾತಲ್ಲ ಇದು
ಸ್ವರ್ಗದಾಲಿಂಗನದ ಏದುಸಿರು
ಬೆತ್ತಲೆ ಹೊಳಪು ಕತ್ತಲೆಯ ರಂಗನು
ದೂರ ದೂಡಿ ಬರಸೆಳೆದು ಬಿಗಿದಪ್ಪಿದ
ಪರಿಗೆ ತತ್ತರಿಸಿದೆ ಜೀವ
ತಾಳಲಾರೆ ಹಿತಕರ ನೋವ

ನಿನ್ನ ಅಂಗೈ ಹಿಡಿ ಮುಷ್ಟಿಗೆ ಸಿಕ್ಕ
ನನ್ನತನದ ಹಾರಾಟ ಅನನ್ಯ

ಬೇಗ ಸೇರಿಸಿಕೋ ನಿನ್ನ ಆಳದ
ಒಳಗೆ ದಹಿಸಿ ನರ್ತಿಸಲಿ ಆಟ
ಮುಗಿದು ಹಿಂಡಿ ಹಿಪ್ಪಿ ಆಗುವವರೆಗೆ

ನೀನೊಂದು ಅನರ್ಘ್ಯ ಬಿಂದು
ಎಂದೂ ಅಗಲದ ಬಂಧು

ಮೈಮನಗಳ ಬೆತ್ತಲಾಗಿಸಿ ಸೋತು
ಶರಣಾಗಿ ಅಂಗಾತ ಮಲಗಿ
ಅಂಗಾಂಗ ಅರ್ಪಿಸಿಕೊಳುವುದು ಸಂತೆಯ ಸುದ್ದಿಯಲ್ಲ
ಸಣ್ಣ ಮಾತೂ ಅಲ್ಲ

ನನ್ನದೆಯ ಬಗೆದು ಅಡಗಿ ಕುಳಿತಿದ್ದ
ನೂರು ಭಾವಗಳ ತೆರೆದಿಟ್ಟ
ಅಮೃತ ಘಳಿಗೆ

ಬಾ ಸೇರಿಕೊಂಡು ಒಂದಾಗಿ ಮಿಂದು ಮಿಲನ ಮಹೋತ್ಸವದಾಚರಣೆಯ
ಸಂಭ್ರಮವ ಸವಿಯೋಣ