Saturday, December 31, 2016

ಕಾವಲುಗಾರ


ಕಾವಲುಗಾರ

ಬುದ್ಧ ಬಸವ ಅಲ್ಲಮರ
ವಾರಸುದಾರ ನಾನು
ನನ್ನಷ್ಟು ಶ್ರೀಮಂತ
ಬೇರೆ ಯಾರೂ ಇಲ್ಲವೇ
ಇಲ್ಲ.
ಬುದ್ಧ ಬಿಟ್ಟು ಹೋದ
ಶಾಂತಿ ಸರೋವರಕೆ ಬೆಲೆ
ಕಟ್ಟುವ ತಾಕತ್ತು ಯಾರಿಗಿದೆ?
ಬಸವ ಬಿತ್ತಿ ಬೆಳೆದ ಸೌಹಾರ್ದ
ಎಂಬ ವಿಶಾಲ  ತೋಟವ ಉತ್ತಿ
ಬಿತ್ತಿ ಸಾಗುವಳಿ ಮಾಡಲಾದೀತೆ?
ಅಲ್ಲಮನ ಜ್ಞಾನ ಭಂಡಾರದಲಿ
ತೆರೆದು ಕೈಮಾಡಿ ಕರೆಯುತಿರುವ
ಕೋಟಿ ಕೋಟಿ ಅಸಂಖ್ಯ ಶಬ್ದಗಳ
ಅಳೆದು ತೂಗಿ ಅರಿಯುವ ಅನನ್ಯ
ಜ್ಞಾನಿ ಎಲ್ಲಿದ್ದಾನೆ?
ನಾನೂ ಅಷ್ಟೇ
ಯಾರಾದರೂ ಅರ್ಹರು
ಬಂದರೆ ಅವರವರ
ಪಾಲಿನದು ಅವರಿಗೆ ನೀಡಿ
ಮುಂದೆ ಸಾಗಲು ಕಾಯುತ್ತಲಿರುವೆ.
ಬುದ್ಧ ಬಸವ ಅಲ್ಲಮರ ಮಹಾ
ಸಂಪತ್ತಿನ ಕೇವಲ  ಕಾವಲುಗಾರ
ನಾ...ನು...
----ಸಿದ್ದು ಯಾಪಲಪರವಿ

ಹೆಣ್ಣು

ಹೆಣ್ಣು ಎಲ್ಲವೂ ಹೌದು !

ಎಲ್ಲಿಲ್ಲದ ಅಕ್ಕರೆ
ಅನುಭವಿಸಿದರೆ
ಎಲ್ಲವೂ ಸಕ್ಕರೆ
ನೀ ಬರೀ ನಕ್ಕರೆ.
ಬಾಲ್ಯದ ಕೃಷ್ಣ
ಲೀಲೆಗೆ ತಾಯಾಗಿ
ಸಾಂಗ್ಯತ್ಯಕ್ಕೆ ಸೋದರಿ
ಏರು ಯೌವ್ವನಕೆ ಗೆಳತಿ
ಪ್ರೌಢಿಮೆಗೆ ಸತಿ
ದೌರ್ಬಲ್ಯಗಳ
ಇತಿ-ಮಿತಿಗಳ
ಕೆಣಕಿ ರಮಿಸಿ
ಕಾಡುವ ಸಂಗತಿಗಳ
ಸಂಗಾತಿ.
ಅಕ್ಕರೆಯ ಅನುಭವದ
ಮಗಳು
ಅನುಭಾವದ ರಸದೌತಣ
ಉಣಬಡಿಸುವ ಮೊಮ್ಮಗಳು...
ಹೀಗೆ ಏನೆಲ್ಲ ಸವಿಸುಖದ
ಘಮಲು ನೀ ಕೇವಲ
ಹೆಣ್ಣಲ್ಲ.. ಗಂಡಿಗೆ ಕಾಡುವ
ಮಾಯೆಯೂ ಅಲ್ಲ.
ಜೀವನೋತ್ಸಾಹದ
ಜೀವಜಲ
ಎಂದೂ ಮಾಸದ
ಮಾನಸ ಸರೋವರ.
ಬೇಡಿದ್ದನ್ನು ಬೇಕಾದಾಗ
ತಿಳಿಸಿ ತಿಳುವಳಿಕೆಯ
ಅರವಳಿಕೆಯ ನೀಡಿ
ಹರಸುವ ಚೈತನ್ಯ.
ಪುರುಷ ಪ್ರಧಾ ನ
ವ್ಯವಸ್ಥೆಯಲಿ
ದುರ್ಬಲಳೆಂಬ
ಪಟ್ಟ ಹೊತ್ತ
ಪ್ರಬಲೆ , ಸಬಲೆ
ಶಕ್ತಿಶಾಲಿ...
ಬತ್ತದ ಚಿಲುಮೆ...

---ಸಿದ್ದು ಯಾಪಲಪರವಿ

Friday, December 30, 2016

ಬೇಡಲಾರೆ ಯಾರನೂ

ಬೇಡಲಾರೆ ನಾನಿನ್ನು ಬೇಡಿದರೆ
ವರವ ಯಾರೂ ಕೊಡುವುದಿಲ್ಲ
ಇವರು ನಮ್ಮವರು ಕೈ ಬಿಡ
ಲಾರರು ಎಂಬ ಭ್ರಮೆಯ
ಬದುಕಲಿ ನೂರೆಂಟು ಆಸೆ
ಭರವಸೆಗಳ ಲೆಕ್ಕಾಚಾರ.

ಯಾರೂ ನಮ್ಮವರಲ್ಲದಿರೆಯೂ
ನಮ್ಮವರು ನಮಗೆ ಏನೆಲ್ಲ
ಆಗುತ್ತಾರೆಂಬ ಗಾಳಿ ಗೋಪುರದ
ಮೇಲೆ ಕಳಸವಿಟ್ಟು ಜಾತ್ರೆ
ಮಾಡಿ ತೇರನೆಳೆಯುವ ಹುಚ್ಚು.

ನಮ್ಮವರೆನಿಸಿಕೊಂಡವರು ಒಮ್ಮೆ
ಮೇಲೆ ಹಾರಿದರೆ ಗಾಳಿಪಟ ಹಾರಿದ್ದೇ
ಹಾರಿದ್ದು ಪಾಪ ಪಟಕ್ಕೇನು ಗೊತ್ತು
ಪಟ ಹಾರಿಸುವವನ ಕೈ ಸೋತರೆ
ಎಳೆದಾನೆಂದು.

ನಿನ್ಪಷ್ಟಕೆ ನೀ ನಡೆ ನಿನ್ನಿಷ್ಟದ ಹಾಗೆ
ಯಾರೂ ಇಲ್ಲಿ ಇಲ್ಲ ನಿನಗೆ ನೆರವಾಗಿ
ನೆರಳಾಗಿ ಕೈ ಹಿಡಿದು ಮುನ್ನಡೆಸಲು

ಏಳು ಎದ್ದೇಳು ಸಾಗು ನಿಧಾನದಿ ನಿನ್ನ
ವೇಗವ ನೀ ಅರಿತು ಅಲ್ಲಿರಲಿ ಒಂದು
ಗುರಿ ಅದ ತಲುಪಲು ನೀ ತೆವಳುತ್ತ
ಏಳುತ್ತ ಒಮ್ಮೊಮ್ಮೆ ಬೀಳುತ್ತಲಾದರೂ
ನಡೆಯುವದ ಬಿಡಬೇಡ

ದಣಿವು ಹಸಿವು ಬಾಯಾರಿಕೆಯ
ಸಂಕಷ್ಟದಲಿಯೂ ಮಾಸದ
ನಗುವಿರಲಿ ಮೊಗದಲಿ

ಗಂಟು ಮುಖದ ಕಗ್ಗಂಟು ಕಳಚ
ಬಹುದು ಸುತ್ತಲಿನವರ ನಂಟು

ಬೇರೆಯವರ ನಂಟಿನ ಗಂಟನು
ನೆಚ್ಚದೆ ಬಿಚ್ಚದೆ ಬೆಚ್ಚದೆ ನಡೆ ನಿನ್ನ
ಕಾಲುಗಳ ಮೇಲೆ ನಿನ್ನದೇ ಕಾಲ
ಕೂಡಿ ಬರುವವರೆಗೆ....

---ಸಿದ್ದು ಯಾಪಲಪರವಿ

Wednesday, December 28, 2016

ಇಂಗದ ದಾಹ

ಆಕಾಶ ಭೂಮಿ ಒಂದಾಗಿ ನಿಂತು
ಉರಿವ ಅಗ್ನಿಯ ಅಂಗೈಯಲಿ
ಹಿಡಿದು ಸಪ್ತ ಸರೋವರಗಳ
ನೀರ ಗಟ ಗಟನೆ ಕುಡಿದರೂ
ಇಂಗದ ದಾಹ
ಬತ್ತದ ತಳಮಳ

ಮನದಾಳದಲಿ ಭೋರ್ಗರೆಯುವ
ಬಯಕಗಳ ಹಂಗು ತೀರಿಸಿ
ಹಗುರಾಗಿ ಬೆತ್ತಲಾಗಿ ಬಯಲಲಿ
ಬಯಲಾಗಲು
ಬಂದು ಸೇರಬಾರದೇ ಬೇಗ

---ಸಿದ್ದು ಯಾಪಲಪರವಿ

ಪಂಚಮಹಾಭೂತಗಳು

ಪಂಚ ಮಹಾಭೂತಗಳು
ಪಂಚ ಮಹಾನದಿಗಳ
ಸ್ವರೂಪದಲಿ ಎದುರು
ಕಂಗೊಳಿಸುವ ಅನನ್ಯ ಪರಿಗೆ
ಬೆರಗಾಗಿದೆ ಎನ್ನ ಮನ

ರಂಭೆ-ರಂಭೆ-ಊರ್ವಶಿಯರನೂ
ಮೀರಿಸುವ ಅಪ್ರತಿಮ ಸೌಂದರ್ಯ
ರಾಶಿಯ ಕಂಡು
ಮೈಮನಗಳ ತಲ್ಲಣಗಳ
ಸಹಿಸಲಾರೆ...

---ಸಿದ್ದು ಯಾಪಲಪರವಿ

Tuesday, December 27, 2016

ಹನಿಗಳು

1
ಬಾನಂಗಳದ ಕಾರ್ಗತ್ತಲಲಿ ಚಕ ಚಕನೆ ಹೊಳೆಯುವ
ನಕ್ಷತ್ರಗಳ ಮಧ್ಯೆ ಮಿನುಗುವ ಚಂದಿರ.

2
ಉರಿ ಬಿಸಿಲಲಿ ಬಳಲಿದ ಭೂಮಿ ತಣ್ಣಗಾಗಲು ಚಡಪಡಿಸುತಿರೆ  ಒಮ್ಮೆಲೇ ಜೋರಾಗಿ ಸುರಿವ ಮುಂಗಾರು.

3
ಹರಿವ ನದಿಗೆ ಒಮ್ಮೆಲೇ  ಉನ್ಮಾದವ ಹೆಚ್ಚಿಸಿ ವೇಗವಾಗಿ ಹರಿದು ಸಮುದ್ರ ಸೇರಿ ನಲಿಯಲು ದೊರೆಯುವ ತಿರುವು.

4
ಹೂ ಬಿಸಿಲಲಿ ಅರಳಿದ ಕೆಂದಾವರೆ ಮಿಲನೋತ್ಸವದ ಸ್ಪರ್ಷಕೆ ಹಾರುವ ದುಂಬಿ.

5
ಬೆಳದಿಂಗಳಲಿ ಮೈದುಂಬಿ ನರ್ತಿಸುತ ಮಿಲನದೊಳಿರುವ
ಸರ್ಪಗಳ ಕಂಡು ಬೆಚ್ಚಿ ಚಡಪಡಿಸಿದ ಹಾವಾಡಿಗ.

    ----ಸಿದ್ದು ಯಾಪಲಪರವಿ

ಬೀಜ

ಕಲ್ಲಲಿ ಅಡಗಿರುವ ಬೆಂಕಿಯ
ನೀರಲಿ ಅಡಗಿರುವ ಪ್ರವಾಹವ

ಮರದೊಳು ಅಡಗಿರುವ ಜೀವವ
ಗಾಳಿಯೊಳು ಅಡಗಿರುವ ಉಸಿರ

ಬೀಜದೊಳು ಅಡಗಿರುವ ಮರವ
ಮೊಟ್ಟೆಯಲಿ ಅಡಗಿರುವ ಕೋಳಿಯ

ಮಣ್ಣಲಿ ಅಡಗಿರುವ ಚಿನ್ನವ
ಈ ಮನುಷ್ಯನ ಆಳದಲಿ
ಅಡಗಿರುವ ದಿವ್ಯ ಪ್ರಭೆಯ

ಮಹಿಮೆಯ ಬರಿಗಣ್ಣಲಿ
ಅಳೆಯಲಾಗದು
ಕಣ್ಣರಿಯದನು ಕರಳು ಮಾತ್ರ
ಅರಿಯಬಹುದು ದೊರೆ.

----ಸಿದ್ದು ಯಾಪಲಪರವಿ

ಜಲಪ್ರಳಯ

ಹೆಬ್ಬಂಡೆಯ ತೊಡೆಗಳು
ಜಲಪ್ರಳಯದಬ್ಬರಕೆ
ನಡುಗಿ ಗುಡುಗಿ
ಧರೆಗುರುಳುವ ಪರಿಯ
ಕಂಡಾಗ ನೀರಿಗೆಲ್ಲಿಲ್ಲದ
ಉನ್ಮಾದ ಉತ್ಸಾಹ

ಮೇಲಿಂದ ಮೇಲೆ
ಅಪ್ಪಳಿಸುವ
ಪ್ರಳಯದ ಸಾಂಗತ್ಯದಲಿ
ಎಲ್ಲಿಲ್ಲದ ಸವಿಸುಖ
ಬಿಡುವ ಏದುಸಿರಲು
ಸರಿಗಮದ ನಿನಾದ...

----ಸಿದ್ದು ಯಾಪಲಪರವಿ

ಹರಿವ ನದಿ

ಹರಿವ ನದಿಗೆ
ಧುಮುಕುವ ಭರದಲಿ
ಕಲ್ಲು ಮುಳ್ಳುಗಳ
ಲೆಕ್ಕವೇ
ಇಲ್ಲ

ಉತ್ಸಾಹದಿ
ಹರಿಯುವ
ಪರಿಯಲಿ
ಪರಚಿದ
ತೆರಚಿ
ಗೀಚಿದ
ಗಾಯಗಳಲಿಯೂ
ಇನ್ನಿಲ್ಲದ ಉನ್ಮಾದದಿ
ಹಿತಾನಂದ .
----ಸಿದ್ದು ಯಾಪಲಪರವಿ

ಹಾರುವ ದುಂಬಿ

ಚುಮು ಚುಮು
ಛಳಿಯಲಿ
ಘಮ ಘಮಿಸಲು
ಅರಳುವ
ಹೂವಿಗೆ ಹಾರುವ
ದುಂಬಿ ಮೇಲೇರಿ
ಮಧು ಹೀರಿ
ಹಿಂಡಿ ಹಿಪ್ಪೆ
ಮಾಡಿ ಸುಖಿಸಿ
ಮೈಮನಗಳ
ಪುಳಕಗೊಳಿಸಲಿ
ಎಂಬ ಚಡಪಡಿಕೆ.
----ಸಿದ್ದು ಯಾಪಲಪರವಿ

ಜೋಡಿ ಬೆಟ್ಟ

ವಿಶಾಲವಾಗಿ
ಹರಡಿದ
ನೀಲಾಕಾಶ
ಬೆತ್ತಲಾಗಿರುವ
ಜೋಡಿ ಬೆಟ್ಟಗಳ
ಎದೆ ಮುಚ್ಚಲು
ಜಾರಲೆತ್ನಿಸಲು
ತವಕಿಸಿದರೂ
ಚೂಪಾದ ಬೆಟ್ಟಗಳಿಗೆ
ಬೆತ್ತಲಾಗಿದ್ದು
ಬಾನ ಕೆಣಕಿ
ಸಂಭ್ರಮಿಸುವ
ಹಂಬಲ.

----ಸಿದ್ದು ಯಾಪಲಪರವಿ

ತವಕ

ಬಿದಿಗೆ ಚಂದ್ರ
ಬೆದೆಗೆ ಬಂದಾನು
ಕೊಂಚ ಮೌನವಾಗಿರಿ
ಅಬ್ಬರಿಸುವ ಅಲೆಗಳೆ
ಅವನನು
ಹಿಡಿಯಲಾಗದು
ಬಾನಲಿ ರವಿ
ಅರಳುವತನಕ
ನಿಲ್ಲಿಸಬಾರದೆ
ನಿಮ್ಮ ತವಕ.
----ಸಿದ್ದು ಯಾಪಲಪರವಿ

ವಿರಹ ವೇದನೆ

ತಡರಾತ್ರಿ ಅತಿ
ಮಧುರ
ಯಾರೂ ಇಲ್ಲದ
ಹೊತ್ತು
ನೆನಪುಗಳು
ದಾಂಗುಡಿ
ಇಡಲು ನೂರೆಂಟು
ದಾರಿ
ವಿರಹ ವೇದನೆಯ
ಮಧುರ
ಸಂಗಾತಿ
ಜೊತೆಗಿರಲು
ಇನ್ಯಾತರ ಹಂಗು.

----ಸಿದ್ದು ಯಾಪಲಪರವಿ

ತೆರೆಯಬ್ಬರ

ಉಕ್ಕಿ ಅಬ್ಬರಿಸುವ
ತೆರೆಗಳಿಗೆ
ಮೋಡದ ಮರೆಯಲಿ
ನಾಚಿಕೆಯಿಂದ
ಅಡಿಗಿ ಕುಳಿತ
ಚಂದ್ರಮನ ಕಾಮನೆಗಳ
ಕೆರಳಿಸಿದಷ್ಟು
ಖುಷಿಯೇ
ಖುಷಿ

ತೆರೆಗಳ ಅಬ್ಬರ
ಚಂದ್ರನ ನಗುವಿನ
ಮಿಲನೋತ್ಸವದಿ
ಸ್ಖಲನವೇ ಮಾಯ

----ಸಿದ್ದು ಯಾಪಲಪರವಿ

Monday, December 19, 2016

ಛಳಿ -15

ಕುದಿಯುವ ಬೇಗುದಿಯ
ಅನುಭವಿಸುವವರೇ
ಬಲ್ಲರು
ಚಹಾಪುಡಿಗೆ ಚನ್ನಾಗಿ
ಗೊತ್ತು ಇದು ಕೇವಲ
ಕುದಿಯಲ್ಲ
ಕೊನೆಯ ದಾಂಗುಡಿ

ಕುದ್ದು ಕುದ್ದು ತನ್ನ ಸತ್ವ
ಕಳೆದುಕೊಂಡರೂ
ರುಚಿ ಕೊಟ್ಟ
ಅಪ್ಯಾಯ 
ತ್ಯಾಗದಾನಂದ

ಎಲ್ಲವನೂ ಗುಡಿಸಿ
ಸ್ವಚ್ಛಗೊಳಿಸಿ 
ತೃಪ್ತಿಯಿಂದ
ಮೂಲೆಸೇರುವ
ಪೊರಕೆಯ ಪರಿ

ಮೈಕೊರೆಯುವ
ಛಳಿಯಲಿ ತಮ್ಮ
ತನುವ ಸಂತೈಸಿಕೊಳುವ
ಜೀವಗಳ ಆಪ್ತ
ಸಂಗಾತಿಯಾಗಿ ತುಟಿ
ಚುಂಬಿಸುವ ಸಾರ್ಥಕ
ಭಾವ
ಈ ಚಹಾ
ಪುಡಿಗೆ
ಈಗ
ಧನ್ಯತೆಯ ವಿಶ್ರಾಂತಿ
ಕಸದ ಡಬ್ಬದಲಿ.

----ಸಿದ್ದು ಯಾಪಲಪರವಿ

ಛಳಿ -14

ಬಿಸಿಯಪ್ಪುಗೆಗೆ ಸರಿಸಮ
ಬೇರೇನು ಇಲ್ಲ
ಎಂಬ ಪರಿವಿನಲಿ
ಒಮ್ಮೊಮ್ಮೆ ಅಪ್ಪುಗೆಯ
ಸಡಿಲಿಸಿ ಬಿಸಿ
ಚಹಾ ಮೂಗಿಗೆ ಹಿಡಿಯುವ
ನಿನ್ನ  ಪರಿ ಅನನ್ಯ

ಬೇಕು ಬೇಡಗಳ
ಸವಿಯಾಟದಲಿ ಲೆಕ್ಕವಿರದ
ತುಂಟಾಟಗಳು

ಚಹಾ ತುಟಿಗಂಟಿಸಿ
ಮಗದೊಮ್ಮೆ
ಬಿಗಿದಪ್ಪಿ
ತೋಳಬಂಧಿಯಾಗಿರೆ
ಸ್ವರ್ಗ ಸವಿಸುಖ
ಈ ನಡುಗುವ ಛಳಿಯಲಿ...

----ಸಿದ್ದು ಯಾಪಲಪರವಿ
19-12-2016

ಛಳಿ -13

ಯಾರು ಕದ್ದರೇನು
ಕುಡಿದರೇನು ಚಹಾ
ಮಾಡಿದ್ದು ಯಾರಿಗೆಂದು
ಬಲ್ಲದು ಮನಸಾಕ್ಷಿ 

ಚಹಾಕ್ಕೆ ಬೇಕಾಗಿರುವುದು
ಕೇವಲ ಹಾಲು ಸಕ್ಕರೆಯಲ್ಲ
ಬರೀ ನಿನ್ನ ಅಕ್ಕರೆ
ಜೊತೆಗೆ ನೀ ನಕ್ಕರೆ
ಸಾಕು

ಕೇವಲ ವಾಸನೆ
ಹಿಡಿದು ಬಂದ ಬೆಕ್ಕು
ಪ್ರೀತಿಯಿಂದ ಕುಡಿದರೆ
ಕಳ್ಳನ ಪಟ್ಟ ಬೇಡ

ಚಹಾ ಕುಡಿದು
ಸಂಭ್ರಮಿಸುವವರ
ನಗುಮುಗದಲಿಯೂ
ಅಡಗಿ ಬೆಚ್ಚಗೆ
ಕುಳಿತಿದೆ ನಿನ್ನ ಪ್ರೀತಿ
ಅಷ್ಟೇ ಸಾಕು ಸಖಿ
ಈ ಛಳಿಯಲಿ
ಮೈಮನಗಳಲಿ 
ಪುಳಕವರಳಲು...

----ಸಿದ್ದು ಯಾಪಲಪರವಿ
18-12-2016

ಛಳಿ -12

ಮನದ ಮಾಯೆಯ
ಮಾತುಗಳಿಗೆ ಮರುಳಾಗಿ
ನಿನ್ನ ನಂಬಿ ಕಾದು
ಕುಳಿತಿರುವೆ
ಈ ಮಾಗಿಯ ಛಳಿಯಲಿ

ಚಹಾ ತಣ್ಣಗಾಗುವ ಮುಂಚೆ
ನೀ ಮನದ 
ಮಾಧುರ್ಯವ ಗ್ರಹಿಸಿ
ಒಮ್ಮೆ ನವಿರಾಗಿ
ತುಟಿಗಂಟಿರುವ
ಮಧುರತೆಯ
ಹೀರಿ
ಮೈಮನಗಳ
ಪುಳಕಗೊಳಿಸಿ
ಬೆಚ್ಚಗಾಗಿಸುವ
ದಿವ್ಯ ಭರವಸೆ 

ಹಾಗಾದರೆ
ಸಖಿ
ಉಲ್ಲಸಿತಗೊಂಡ
ತುಟಿಗಳಲಿ ಅರಳುವ
ನಗೆ ಸೂಸಲಿದೆ
ಸಾವಿರದ ಭಾವಗಳ..

----ಸಿದ್ದು ಯಾಪಲಪರವಿ
17-12-2016

ಛಳಿ -11

ಮೌನ ಮುರಿದು
ಮನದಾಳದ ಆಸೆಯ
ಹರವಿದರೆ
ಸ್ವೀಕರಿಸದಿರೆ ಹೇಗೆ ?
ಎಂಬ ಆತಂಕ ಹಬೆಯಾಡುವ
ಚಹಾ ದಿಟ್ಟಿಸುವಂತಾಗಿದೆ

ಕಪ್ಪಂಚಿನಲಿ ನೀ ತಾಗಿಸಿದ
ತುಟಿಯ ರಂಗನು
ಕಣ್ಣಂಚಿನಲಿ
ಗಮನಿಸಿಯೂ
ಮೌನವಾಗಿ
ಕಾಯುತಿರುವೆ
ನಿನಗಾಗಿ
ನಿನ್ನ ನವಿರಾದ
ಸಿಹಿ ಸಿಂಚನಕೆ

ನಿನ್ನ
ತುಟಿಯಾಲಿಂಗವಿರದ
ಚಹಾ ರುಚಿಸಲಾರದು
ಛಳಿಯೂ ದೂರಾಗದು
----ಸಿದ್ದು ಯಾಪಲಪರವಿ
16-122016

ಛಳಿ -10

ಅಲೌಕಿಕ ಅನುಭಾವ
ಅನುಭವಕೆ  ದಕ್ಕಲು
ಬಿಸಿ ಚಹಾ ತುಟಿಗೆ ತಾಗಿ
ಮುದ ನೀಡುವಂತೆ

ಮನಸು ಹಾತೊರೆಯುತಿದೆ
ಪಿಸುಮಾತುಗಳ
ಬಿಸಿಯಪ್ಪುಗೆಯ
ಸವಿಸುಖಕೆ
ಈ ಮಾಗಿಯ
ಛಳಿ ಬಿಡಿಸಲು.

----ಸಿದ್ದು ಯಾಪಲಪರವಿ
15-12-2016

ಛಳಿ -9

ಅರ್ಥವಾದ ಭಾವಗಳು
ಅಭಿವ್ಯಕ್ತಗೊಂಡಾಗ
ಅನರ್ಥವಾಗಬಾರದೆಂಬ
ಚಡಪಡಿಕೆ

ಬಿಡಿಸಿ ಹೇಳಿದ ಒಗಟು
ಹುಸಿಯಾದರೆ
ಈ ಛಳಿಯಲಿ
ಬಯಸಿಯೂ ತಣ್ಣನೆಯ
ಚಹಾ ಕುಡಿದು
ಹಳಹಳಿಸಿದಂತೆ

----ಸಿದ್ದು ಯಾಪಲಪರವಿ
14-12-2016

ಛಳಿ -8

ಕನಸಾಗಿ ಉಳಿದ
ಆಸೆಗಳಿಗೆ
ಕನವರಿಕೆ ಬೇಡ

ಕೇಳಿದ ಹಾಡಿಗಿಂತ
ಕೇಳದ ಹಾಡು
ಅತಿ ಮಧುರ 

ನೆನಪಿನ ಸವಿಗೆ
ಸಾವೆಂಬುದಿಲ್ಲ
ನಿನ್ನ ಮಧುರ ನೆನಪೇ
ಸಾಕು

ಈ ಛಳಿಯಲಿ
ಬೆಚ್ಚಗಾಗಲು

----ಸಿದ್ದು ಯಾಪಲಪರವಿ
13-12-206

ಛಳಿ -7

ಕೇವಲ ನಿನ್ನ ನೆನಪಿನ
ಸಾಂಗತ್ಯ ಸಾಲುತ್ತಿಲ್ಲ
ಈ ಬಿಸಿ ಚಹಾದೊಂದಿಗೆ

ನೀ ಹತ್ತಿರ ಸುಳಿಯುತಿರೆ
ಇನ್ನೂ ಬಿಸಿ
ನೀಡಬಹುದೇನೋ
ಈ ಛಳಿಯಲಿ.

----ಸಿದ್ದು ಯಾಪಲಪರವಿ
12-12-2016

ಛಳಿ -6

ಮೈಕೊರೆಯುವ ಛಳಿಯಲಿ
ಚಹಾ ಬೇಗ ತಣ್ಣಗಾಗಿ
ಬಿಡಬಹುದು
ಬಿಸಿಯಪ್ಪುಗೆಯ ಭರದ
ಬಿಸಿಯುಸಿರು ಚಹಾದ
ಬಿಸಿಗಿಂತ ಹಿತಕರ
ಮಧುಕರ
ನಮ್ಮ ಬಿಸಿಯಪ್ಪುಗೆಯ
ಸಡಿಲಿಸುವುದು ಬೇಡವೇ
ಬೇಡ ಸಖೀ
ಈ ಛಳಿಗಾಲ
ಮುಗಿಯುವವರೆಗೆ...
----ಸಿದ್ದು ಯಾಪಲಪರವಿ
11-12-2016

ಛಳಿ -5

ಈ ಕಾಲದಲಿ ಬಿಸಿಯದೆ
ಕಾರು-ಬಾರು
ನೀ
ಕುಡಿದ ಚಹಾ ಹನಿ
ತುಟಿ ಮೇಲೆ ನಗುತಿರುವಾಗ
ನಿನಗರಿವಿಲ್ಲದಂತೆ
ಚುಂಬಿಸುವ
ನೆಪದಲಿ Honey
ನಿನ್ನ ಹನಿಯ
ಹೀರುವಾಸೆ
----ಸಿದ್ದು ಯಾಪಲಪರವಿ
10-12-2016

ಛಳಿ -4

ಈ ಕಾಲದಲಿ ಬಿಸಿಯದೆ
ಕಾರು-ಬಾರು
ನೀ
ಕುಡಿದ ಚಹಾ ಹನಿ
ತುಟಿ ಮೇಲೆ ನಗುತಿರುವಾಗ

ನಿನಗರಿವಿಲ್ಲದಂತೆ
ಚುಂಬಿಸುವ
ನೆಪದಲಿ Honey
ನಿನ್ನ ಹನಿಯ
ಹೀರುವಾಸೆ
----ಸಿದ್ದು ಯಾಪಲಪರವಿ
10-12-2016

ಛಳಿ -3

ಈ ಛಳಿಗಾಲದ ಹಿತವನು
ಹೀರಲು
ಬರೀ ಚಹಾದ ಬಿಸಿಯಷ್ಟೇ
ಸಾಕೇ
ಸಖಿ

ಬಸವಳಿಕೆಯ ದೂರಾಗಿಸಲು
ಒಂದಷ್ಟು
ಬಿಸಿಯಪ್ಪುಗೆಯ
ಹಿತವೂ ಇರಲಿ
ಚಹಾದ ಜೋಡಿ ಚುಡಾದಂಗ...
----ಸಿದ್ದು ಯಾಪಲಪರವಿ
9-12-2016

ಛಳಿ -2

ಮೈಕೊರೆಯುವ
ಛಳಿಯಲಿ
ಮೈ ಬಿಸಿಯಾಗಿಸುವ
ಭರದಲಿ

ಚಹಾ ಕುಡಿವ ಹೊತ್ತಲಿ
ತುಟಿ ಸುಟ್ಟ ತಲ್ಲಣವ
ಮರೆಸಿತು ನಿನ್ನ ಸವಿನೆನಪು...
----ಸಿದ್ದು ಯಾಪಲಪರವಿ
8-12-2016

ಛಳಿ -1

ಕೇವಲ ಹೊಗೆ
ಉಕ್ಕಿಸುವ ಸುಡು
ಚಹಾ
ನಡುಗುವ
ಮೈಮನಗಳ
ಬೆಚ್ಚಗಿಡುವುದಿಲ್ಲ 

ಈ ಸುನಾಮಿಯಂತಹ
ಛಳಿಗೆ ಬೇಕೆ
ಬೇಕು
ನಿನ್ನಪ್ಪುಗೆಯ
ಮಿಲನಮಹೋತ್ಸವ.

----ಸಿದ್ದು ಯಾಪಲಪರವಿ
7-12-2016

Saturday, December 3, 2016

ಪುಟ್ಟಣ್ಣ ಕಣಗಾಲ್

ಕತ್ತಲಲ್ಲಿ ಮಾಯವಾದ ಭಾವ ಜೀವಿ

1982 ನಾನಾಗ ಪಿಯುಸಿ ವಿಧ್ಯಾರ್ಥಿ , ಕನಸುಗಳೇ ನನ್ನ ಜೀವಾಳ. ಸಿನಿಮಾ , ಸಿನಿಮಾ ನಟರು , ಸಾಹಿತಿಗಳೇ ನನ್ನ ಲೋಕ.
ಅಂತಹ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಧಾರವಾಡಕ್ಕೆ ಪುಟ್ಟಣ್ಣ ಕಣಗಾಲ್ ಬಂದಿದ್ದರು. ಅವರು ತುಂಬಾ ಭಾವುಕರಾದ ಸಂದರ್ಭ , ಅದೇ ತಾನೇ ಅವರ
' ಮಾನಸ ಸರೋವರ ' ಯಶಸ್ವಿಯಾಗಿತ್ತು. ತಮ್ಮನ್ನು ನೋಯಿಸಿದ ನಟಿಯೊಬ್ಬರ ಮೇಲೆ ಸವಾಲು ಹಾಕಿ ಕೊಂಚ ನಿರಮ್ಮಳರಾದ ಗೆಲುವು ಅವರಲ್ಲಿ ಇದ್ದರೂ ನೋವು ಮಾಯವಾಗಿರಲಿಲ್ಲ.
ಅವರ ಸಾಲು ಸಾಲು ಯಶಸ್ವಿ ಚಿತ್ರಗಳು ಅವರಿಗೆ ರಾಷ್ಟ್ರೀಯ ಮನ್ನಣೆ ದೊರಕಿಸಿದ್ದವು. ಅವರ ಬಹುಪಾಲು ಶಿಷ್ಯರು ಸ್ಟಾರ್ ಗಿರಿಯ ಮೇಲಿದ್ದರೂ ಪುಟ್ಟಣ್ಣ ಏಕಾಂಗಿ.

ಅವರ get up ಬದಲಾಗಿ ಸಂತರಾಗಿದ್ದರು. 'ನೀನೇ  ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ' ಎಂದು ಜೋರಾಗಿ ಹಾಡಿ ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಂಡಿದ್ದರು.

ತಪ್ಪು ಯಾರದು ಎಂಬ ವಿಶ್ಲೇಷಣೆ ನನ್ನ ಉದ್ದೇಶವಲ್ಲ. ಅವರು ಕಾನೂನು ಕಾಲೇಜಿಗೆ ಅತಿಥಿಯಾಗಿ ಬಂದಾಗ
ಮಾತನಾಡಲಾರಂಭಿಸಿದ ಕೂಡಲೇ ಕರೆಂಟ್ ಹೋಗಿ ಕತ್ತಲಾದ ಕೂಡಲೇ ಅವರ ಕ್ರಿಯಾಶೀಲ ಮನಸು ಜಾಗೃತವಾಗಿ ಅಷ್ಟೇ ಭಾವುಕರಾಗಿ ಮಾತನಾಡಿದರು ' ನಾವು ಸಿನಿಮಾದವರು ನಿಮ್ಮನ್ನು ಕತ್ತಲೆಯಲ್ಲಿ ಕೂಡಿಸಿ ಸಿನಿಮಾ ತೋರಿಸುತ್ತೇವೆ , ನಾವು ಬೆಳಕಿನಲ್ಲಿ ನಿಮಗೆ ಕಾಣಬಾರದೆಂದು ಕರೆಂಟ್ ಹೋಗಿದೆ ಆದ್ದರಿಂದ ಕತ್ತಲಲ್ಲೇ ನನ್ನ ಮಾತುಗಳನ್ನು ಕೇಳಿ ' ಎಂದು ವೇದಾಂತಿಯಂತೆ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ.

ಇದು ಈಗ ಮತ್ತೆ ನೆನಪಾಗಿ ಇಲ್ಲಿ ದಾಖಲಿಸಲು ಕಾರಣ ನಿನ್ನೆ ಮಧ್ಯೆ ರಾತ್ರಿಯವರೆಗೆ ನನ್ನನ್ನು ಹಿಡಿದಿಟ್ಟ ' ಮಾನಸ ಸರೋವರ ' ಕಾರಣ.
ಒಬ್ಬ ಅಪ್ರತಿಮ ಕ್ರಿಯಾಶೀಲ ವ್ಯಕ್ತಿ ವೈಯಕ್ತಿಕ ಅನುಭವಗಳನ್ನು ಹಾಗೂ ಎಲ್ಲವನ್ನೂ ಸೃಜನಶೀಲವಾಗಿ ದಾಖಲಿಸಬಲ್ಲ ಎಂಬುದಕ್ಕೆ ಪುಟ್ಟಣ್ಣ ಹಾಗೂ ಮಾನಸ ಸರೋವರವೇ ದಿವ್ಯ ಸಾಕ್ಷಿ.

ಸಿನಿಮಾದ ಹಾಗೆ ಪುಟ್ಟಣ್ಣ ಬದುಕನ್ನು ಅಷ್ಟೊಂದು ಭಾವಕರಾಗಿ ನೋಡದೇ ಕೊಂಚ ವಾಸ್ತವಿಕವಾಗಿ ನೋಡಿದ್ದರೆ ಕೇವಲ 51ರ ಕಿರಿದು ಪ್ರಾಯದಲ್ಲಿ ಚಿತ್ರರಂಗವನ್ನು ಅನಾಥವಾಗಿಸುತ್ತಿರಲಿಲ್ಲ ಎಂದನಿಸುತ್ತದೆ.

----ಸಿದ್ದು ಯಾಪಲಪರವಿ

Friday, December 2, 2016

ರವೀಂದ್ರ ರೇಷ್ಮೆ

ಇವರ ಪರಿಚಯ ಯಾರಿಗಿಲ್ಲ ಹೇಳಿ ?

ಕನ್ನಡ ಓದುಗರನ್ನು ಬೆಚ್ಚಿ ಬೀಳಿಸಿ ಪುಳಕಗೊಳಿಸಿ , ಹೊಸ ಬಗೆಯ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದ 'ಲಂಕೇಶ್ ಪತ್ರಿಕೆ'ಯ ಜೀವಾಳ. ರಾಜಕೀಯ ಲೇಖನಗಳು , ತನಿಖಾ ವರದಿಗಳ ಮೂಲಕ ಅನೇಕರ ಮುಖವಾಡಗಳ ಕಳಚಿದ ಹೆಗ್ಗಳಿಕೆ . ನಿರಂತರ ಬರೆಯುತ್ತಾ ಪತ್ರಿಕೆಗೆ ಹೊಸ ರಾಜಕೀಯ ಭಾಷ್ಯ ಬರೆದ ಸಾಹಸಿ .
ಕರ್ನಾಟಕ ರಾಜಕೀಯ ಇತಿಹಾಸದ ಎನ್ಸೈಕ್ಲೋಪಿಡಿಯಾ ಎಂದರೆ 'ರವೀಂದ್ರ ರೇಷ್ಮೆ ' .
ಲಂಕೇಶ್ ಜೀವಂತವಾಗಿ ಇರುವವರೆಗೆ ಪತ್ರಿಕೆಯ ಜೀವಂತಿಕೆ ಉಳಿಯಲು ರೇಷ್ಮೆ ಕಾರಣರಾದರು.
ವರ್ತಮಾನದ ಪತ್ರಿಕೋದ್ಯಮ ತುಂಬಾ ಬದಲಾದಾಗ ರೇಷ್ಮೆಯವರಂತಹ ವ್ಯಕ್ತಿಗಳು ಪಕ್ಕಕ್ಕೆ ಸರಿದರೂ ಇವರು ದೃಶ್ಯ ಮಾಧ್ಯಮಗಳ ಪಾಲಿನ ಹೀರೋ ಆಗಿ ಅಲ್ಲಿಯೂ ಮಿಂಚಿದರು.
ಅವರ ಸಾರಥ್ಯದಲ್ಲಿ ಮೂಡಿಬಂದ ' ವಿಕ್ರಾಂತ ಕರ್ನಾಟಕ ' ತಾಂತ್ರಿಕ ಕಾರಣಗಳಿಂದ ಬಹುಕಾಲ ನಿಲ್ಲದಿದ್ದರೂ , ಇದ್ದಷ್ಟು ದಿನ ಮೌಲಿಕವಾಗಿ ಮೆರೆಯಿತು.
ಕೇವಲ ಅವರ ಓದುಗ ಅಭಿಮಾನಿಯಾಗಿದ್ದ ನಾನು ವಿಕ್ರಾಂತ ಕರ್ನಾಟಕದ ಮೂಲಕ ಅವರನ್ನು ಹತ್ತಿರದಿಂದ ಗಮನಿಸುವ ಸದಾವಕಾಶ ಒದಗಿ ನನ್ನ ಬರಹಕ್ಕೆ ಹೊಳಪು ನೀಡಿದರು.
ನಂತರ ಎಲ್ಲ ಕಡೆ ಹೊಂದಿಕೊಂಡರೂ ನಂಬಿದ ಮೌಲ್ಯಗಳನ್ನು ಬಿಟ್ಟುಕೊಡಲಿಲ್ಲ .
ನೇರ , ನಿಷ್ಠುರ ಒಳನೋಟದ ವಾದ ತುಂಬಾ ಸಾತ್ವಿಕ ಮಧುರತೆಯ ತಲ್ಲಣ.
ಹವ್ಯಾಸಿ ಪತ್ರಿಕೋದ್ಯಮಿಯಾಗಿದ್ದುಕೊಂಡು ತಮ್ಮ 'ಅಕ್ಯಾಡೆಮಿಕ್ ' ಸಂಪರ್ಕ ಕಳೆದುಕೊಳ್ಳಲಿಲ್ಲ .
MES ಪದವಿ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಸಾವಿರಾರು ವಿಧ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾದರು. ಪದವಿ ಕಾಲೇಜು ಒಕ್ಕೂಟದ ಅಧ್ಯಕ್ಷರಾಗಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು.
ಅವರ ಆಪ್ತರು , ಹಿತೈಷಿಗಳೂ ಆದ ಪ್ರೊ. ಡಾ. ಆರ್.ಎಮ್. ರಂಗನಾಥ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿದ್ದಾಗ ಅವರ ನೆರಳಿನಂತೆ ನಿಷ್ಪ್ರಹವಾಗಿ ಕೆಲಸ ಮಾಡಿದರು.
ಡಾ.ಎನ್.ಪ್ರಭುದೇವ್ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿದಾಗ ಅವರ ನೈತಿಕ ಸ್ಥೈರ್ಯ ಹೆಚ್ಚಿಸಿದರು.
ಉನ್ನತ ಶಿಕ್ಷಣದ ಉನ್ನತೀಕರಣಕ್ಕೆ ಅನೇಕ ಮೌಲಿಕ ವಿಚಾರಧಾರೆಗಳನ್ನು ವಿಶ್ವವಿದ್ಯಾಲಯಗಳ ವೇದಿಕೆಗಳ ಮೂಲಕ ಈಗಲೂ ಹಂಚಿಕೊಳ್ಳುತ್ತಾರೆ.
ಇದಿಷ್ಟು ಅವರ ವೃತ್ತಿಪರತೆಯ ಗುಣವಿಶೇಷಗಳು, ವೈಯಕ್ತಿಕವಾಗಿ ರೇಷ್ಮೆಯವರು ಸ್ನೇಹಜೀವಿ , ಸ್ನೇಹ ಅವರ ದೌರ್ಬಲ್ಯವೂ ಹೌದು ಶಕ್ತಿಯೂ ಹೌದು. ರಾಜ್ಯದ ಅನೇಕ ರಾಜಕೀಯ  ಘಟಾನುಘಟಿಗಳ ಸಂಪರ್ಕವಿದ್ಯರೂ ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಳ್ಳದ ನಿರ್ಲಿಪ್ತ ವ್ಯಕ್ತಿತ್ವ.
ಬೆಂಗಳೂರು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುವಾಗ , ವಿಕ್ರಾಂತದಲ್ಲಿ ಸಹಾಯಕ ಸಂಪಾದಕನಾಗಿ ದುಡಿಯುವಾಗ ಹೊಸ ಲೋಕದಲ್ಲಿ ನಿರಾಯಾಸವಾಗಿ ಬದುಕುವ ಬಗೆಯನ್ನು ಕಲಿಸಿದರು.
ಮಾತು , ಮಂಥನ , ಚಿಂತನ , ಸಾತ್ವಿಕ ಕೋಪ ಎಲ್ಲದರಲ್ಲೂ ತೀವ್ರತೆಯ ಧಾವಂತ. ಸಾಮಾಜಿಕ ಸ್ವಾಸ್ಥ ಕಾಪಾಡಲು ಸಾವಿರಾರು ಕನಸುಗಳು , ಯೋಜನೆಗಳು ಹಾಗೂ ಯೋಚನೆಗಳು.

ಅವರ ಶಕ್ತಿ , ಸಾಮರ್ಥ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಾಲ ಬರುತ್ತದೆ ಎಂಬ ಭರವಸೆ ನನ್ನಂತಹ ಸಾವಿರಾರು ಅಭಿಮಾನಿಗಳ ಆಸೆ , ಆಶಯ...
ಅದಕ್ಕೆ ಇಷ್ಟೆಲ್ಲಾ ಹೇಳಿದೆ.
----ಸಿದ್ದು ಯಾಪಲಪರವಿ

ಪುಟ್ಟರಾಜ ಪ್ರಭುವೆ

ವಿಧಿ ಕಣ್ಣು ಕಟ್ಟಿದಾಗ
ಒಳಗಣ್ಣು ತೆರೆಸಿದ ಕರುಣಾ
ಸಾಗರನೆ
ಹೆತ್ತೊಡಲ ಬರಸಿಡಿಲಿಗೆ
ಕಾರಣನಾಗಿ
ಬದುಕು ಶೂನ್ಯ
ವಾದಾಗ ಅಸಂಖ್ಯ
ಸಂಖ್ಯ ಬಳಸಿ ಬಾಳ
ಪಯಣದಿ ಜೀವಯಾನಕೆ
ಭಾವ ತುಂಬಿದ ಗುರುವಿನ
ಗುರುವೆ.

ನಾದ ಲೋಕದೊಳೊಂದು
ಹೊಸ ಲೋಕ ಸೃಷ್ಟಿಸಿ ದಿವ್ಯ
ಬೆಳಕ ತೋರಿ ಅಂಧತ್ವ
ದೂರಾಗಿಸಿದ ಜಗದಾದಿ ಗುರುವೆ.

ನೀನಿಲ್ಲದ ಜಗದ ಶೂನ್ಯವ
ತುಂಬುವ ಶಕ್ತಿ ಕರುಣಿಸು
ದಯಾಮಯಿ ಪ್ರಭುವೆ.

ಪುಣ್ಯಾಶ್ರಮ

ಇಲ್ಲಿ ಎಲ್ಲಂದರಲ್ಲಿ ನಾದ
ನಿನಾದಗಳ ಕಂಪು
ಅಂಧರ ಬೆಳಕಲಿ ಅನಾಥರ ಖುಷಿಯಲಿ
ಸಂಭ್ರಮಿಸುವ ತಂಪು.

ಪುಣ್ಯಾಶ್ರಮದ ಪ್ರತಿ ಕಲ್ಲಲಿ
ಸರಿಗಮಗಳ ಸರಪಳಿ.
ಅಂಗುಲಂಗುಲದ ನಡೆಯಲಿ
ಅಂತಕರಣದ ಹೊಳಪು.
ಪಂಚಾಕ್ಷರ ಗವಾಯಿಗಳವರ
ಉಭಯ ಗಾನ ವಿಶಾರದೆ
ಇಲ್ಲಿ ಅಲುಗದೆ ನೆಲೆಯೂರಿ
ತನ್ಮಯಗಳಾಗಿ ಮೈ ಮರೆತು
ನಲಿಯುತ ಸಂಚರಿಸುವ
ಪರಿಯನು ಅರಿಯದವರು ಯಾರು?
ಪುಟ್ಟರಾಜರ ಶ್ರಮದ ಬೆವರ
ಹನಿಯಲೂ ಸೂಸುತಿದೆ ಗಾನ ಸುಗಂಧ
ಸರಿಗಮಗಳ ಜಪದಲಿ.
ಇಲ್ಲೊಮ್ಮೆ ಜಪಿಸಿದರೆ ಮೈ
ಮನಗಳಲಿ ಕಂಪನ.
ಮಲಿನವಾದ ಮನಸನು
ಬದಿಗಿಟ್ಟು ಒಮ್ಮೆ ಕೈಮುಗಿದು
ಒಳಗೆ ಬಾ ನಾದ ಪ್ರಿಯನೆ
ಎಲ್ಲಂದರಲಿ ಬೀಸುವ ಗಾನ
ಗಂಧದ ಕಂಪನು
ನಿನ್ನದಾಗಿಸಲು

ಗಾನ ಗಾರುಡಿಗ

ಬದಕು ನೀಡಿದ ಕಠಿಣತೆಯ
ಸವಾಲಾಗಿ ಸ್ವೀಕರಿಸಿ ಬೆನ್ನು
ಹತ್ತಿದ ನಾದಗಳ ಹಿಡಿದಿಟ್ಟು
ಹದವಾಗಿ ಮುದವಾಗಿ
ರಾಗಗಳ ಆಲಾಪಿಸಿ ಜಯಿಸಿದ
ಗಾನ ಗಾರುಡಿಗ
ಒಳಗಣ್ಣ ಬೆಳಕ ಹಿಡಿದು
ಅಂಧರ ಕಣ್ಣಾಗಿ ಹೆಳವರ ಕಾಲಾಗಿ,
ಅನಾಥರ ನಾಥರಾಗಿ ಬಾಳ
ದಯಪಾಲಿಸಿದ ನಡೆದಾಡುವ ದೇವರು.
ಇಷ್ಟ ಲಿಂಗದ ಸಂಗದಲಿ
ಲಿಂಗಾಂಗ ಸಾಮರಸ್ಯದ ಉತ್ತುಂಗಕೆ
ಏರಿದರೂ ಎನಗಿಂತ ಕಿರಿಯರಿಲ್ಲ
ಎಂದು ಹಾಡಿದ ಪುಟ್ಟ'ರಾಜ'.
ಮೈ ತುಂಬಾ ಧ್ಯಾನದ ಕಂಪು
ಕಿವಿ ತುಂಬ ನಾದದ ಇಂಪು
ಬೆರಳಾಟಕೆ ಸಿಕ್ಕ ತಾಳ-ವಾದ್ಯಗಳು
ನಲಿದು ಸಂಭ್ರಮಿಸಿದ ಕ್ಷಣಗಳಲಿ.......
ಈಗ ಮೌ.....ನ. ದಿವ್ಯ ಮೌನ......
ಆ ಮೌನದಲಿ ಮೆರೆಯುವ ಮರೆಯಾಗದ
ಗುಂಗು ಹಿಡಿಸಿರುವ ತರಂಗಗಳು
ನಿಧಾನ ಸುಳಿಯುತ ಅಲೆಯುತಿವೆ.
ನೀ ನಡೆದಾಡಿದ ಹೆಜ್ಜೆ ಗುರುತಿನಲಿ.
ಅಳುವ ಅಂಧರ ಕಣ್ಣೊರೆಸಲು
ಅನಾಥರ ಸಾಕಿ - ಸಲಹಲು ನೀ
ಹುಟ್ಟಿ ಬಾ ಮತ್ತೊಮ್ಮೆ ಎನ್ನಲು
ಬಿಟ್ಟು ಹೋಗಿಲ್ಲ ವಲ್ಲ ಅಜ್ಜ
- ಸಿದ್ದು ಯಾಪಲಪರವಿ
Read more...