Monday, January 23, 2017

ನಾನು , ನಡೆ ಮತ್ತು ಗಾಡಿ

ನಾನು , ನಡೆ ಮತ್ತು ಗಾಡಿ

ಉಪನ್ಯಾಸಕ ವೃತ್ತಿಗೆ ಸೇರಿದ ಮೇಲೆ ಅಸಂಖ್ಯ ಅನುಭವಗಳು.
ಇಂಗ್ಲಿಷ್ ಉಪನ್ಯಾಸಕ ಅಂದ ಮೇಲೆ ವಿದ್ಯಾರ್ಥಿಗಳು ಏನೇನೋ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದು ತಪ್ಪಲ್ಲ ಬಿಡಿ !

ಅವರು class ನಲ್ಲಿ ತುಂಬಾ serious ಆಗಿ ಗಲಾಟೆ ಮಾಡದೇ ಕುಳಿತಿರುವುದಕ್ಕೆ ತುಂಬಾ ಹೆಮ್ಮೆ ಪಡುತ್ತಿದ್ದೆ , ಅದ್ಭುತ ಪಾಠ ಅಂದುಕೊಂಡಿದ್ದೆ ಆದರೆ ನಂತರ ತಿಳೀತು ಏನೂ ಅರ್ಥವಾಗದ ಕಾರಣಕ್ಕೆ ಸುಮ್ಮನೇ ಇರುತ್ತಾರೆ ಎಂದು .

ಸತ್ಯ ತಿಳಿದ ಮೇಲೆ ಪಾಠ ಮಾಡುವ ಶೈಲಿ ಬದಲಾಯಿಸಿಕೊಂಡು ಅಗತ್ಯವೆನಿಸಿದಾಗ ಕನ್ನಡದಲ್ಲಿ ಹೇಳಿ ನಿಜವಾದ ಜನಪ್ರಿಯತೆ ಗಳಿಸಿಕೊಂಡೆ. ಈಗ ಬಿಡಿ ಇಪ್ಪತ್ತೆಂಟು ವರ್ಷಗಳ ಅನುಭವ. ಕೆ.ಜಿ.ಯಿಂದ ಪಿ.ಜಿ.ವರೆಗೆ ನಿರಾಯಾಸವಾಗಿ ಪಾಠ ಮಾಡುವ ಸಂಭ್ರಮ. ಉದ್ಯೋಗವೇ ಇದಾದ್ದರಿಂದ ಹೆಗ್ಗಳಿಕೆಯ ಮಾತೆಲ್ಲಿ ?

ಇದು ಪಾಠದ ಕತೆಯಾದರೆ , ಬಳಸುವ ವಾಹನದ ಬಗೆಗೂ ಹಿಂದಿನ ವಿದ್ಯಾರ್ಥಿಗಳಿಗೆ ಕುತೂಹಲವಿರುತ್ತಿತ್ತು. ಕೇವಲ ಆರುನೂರು ರೂಪಾಯಿ ಸಂಬಳದಲ್ಲಿ , ಅರೆಕಾಲಿಕ , ಅನುದಾನರಹಿತ ಪದಗಳಿಗೆ ಬೆಂಡಾದ ನಾವು ಕಾಲನ್ನೇ ನಂಬಿದ ಕಾಲವದು. ಆದರೆ ನಮ್ಮ ಕಣ್ಣೆದುರಿಗೆ ನಮ್ಮ ವಿದ್ಯಾರ್ಥಿಗಳು ಮೊಪೆಡ್ಡುಗಳಲಿ ಓಡಾಡಿದರೂ ನಮಗೇನು ಅವಮಾನವಾಗುತ್ತಿರಲಿಲ್ಲ.

ಮುಂದೆ 600 ರೂಪಾಯಿಯಲ್ಲಿ ಕಂತಿನ ಮೇಲೆ ಸೈಕಲ್ ತೆಗೆದುಕೊಂಡಾಗಲೂ ವಿದ್ಯಾರ್ಥಿಗಳಿಗೆ ಅಸಮಾಧಾನ. ' ಅಯ್ಯೋ ಸರ್ ಸೂಟು , ಬೂಟು ಹಾಕಿಕೊಂಡು ಸೈಕಲ್ ಮೇಲೆ ಬರುವುದು ಒಂಥರಾ ಕಾಣುತ್ತೆ ' ಎಂದು ರಗಳೆ ತೆಗೆದರು. ಮುಂದೆ ಮತ್ತೆ ಸಾಲ ಮಾಡಿ ಸ್ಕೂಟರ್ ತಗೊಂಡಾಗ ತುಂಬಾ ಖುಷಿಯಾದರು...

ನಂತರ ಬಿಡಿ ಸಾಲು ಸಾಲಾಗಿ ಸಾಲದ ಮೇಲೆ ಸಾಲ , ಮದುವೆ , ಮತ್ತೆ ಕಾರು , ಮನೆ ಹೀಗೆ ಸಾಲವೆಂಬ ಶೂಲ ಹಿಡಿದು ಓಡಿದ್ದೇ ಓಡಿದ್ದು.

ಮುಂದೆ ಬ್ಯಾಂಕುಗಳ ಆರಾಧಕರಾಗಿ , ಬ್ಯಾಂಕಿನವರ ಪಾಲಿನ ಸಂಪನ್ಮೂಲವೂ ಆಗಿದ್ದೇನೆ.
ಇಂದು ಅನಿವಾರ್ಯವಾಗಿ ನಾನು ಕೆಲಸ ಮಾಡಲು ಹೋಗುವ ತಿಮ್ಮಾಪುರದ ಬಸ್ ಹರ್ಲಾಪೂರದಿಂದ ಕೈಕೊಟ್ಟಾಗ ಕೊಂಚ ವಾಕಿಂಗ್ ಇರಲಿ ಎಂದು ನಡೆಯುತ್ತಾ ಹೊರಟಾಗ ಮನಸ್ಸು ಇಪ್ಪತ್ತೈದು ವರ್ಷಗಳ ಹಿಂದೆ ಓಡಿದ flash back ನಲ್ಲಿ ತಿಮ್ಮಾಪುರ ಬಂದಿದ್ದೇ ಗೊತ್ತಾಗಲಿಲ್ಲ.

ಈಗ ಬಿಡಿ ಪ್ರಾಥಮಿಕ ಶಾಲಾ ಹುಡುಗರೇ ನಡೆಯುವುದಿಲ್ಲ ಇನ್ನೂ ಉಪನ್ಯಾಸಕರು ನಡೆಯುವುದೆಲ್ಲಿ ?

ನಾವೀಗ ನಡೆಯುವುದು ಕೇವಲ ಮಧುಮೇಹಕ್ಕೆ ಹೆದರಿಯೇ ಹೊರತು ಸರಳತೆಗಾಗಿ ಅಲ್ಲ.

ಹೂ ಬಿಸಲಿನ ನಡಿಗೆ ತಂದ ಹತ್ತಾರು ನೆನಪುಗಳ ಗೊಂಚಲನ್ನ ಹಾಗೆ ಹಂಚಿಕೊಂಡೆ , ನಿಮಗೂ ಏನಾದರೂ ನೆನಪಾಗಬಹುದೆಂದು !!

---ಸಿದ್ದು ಯಾಪಲಪರವಿ

Wednesday, January 18, 2017

ಕವಿತೆ ಹಾಗೂ ಪ್ರಾಸ

ಕವಿತೆ ಹಾಗೂ ಪ್ರಾಸ

ಕವಿತೆ ಕಟ್ಟಲು ತ್ರಾಸು
ಮಾಡಿಕೊಂಡು ಪ್ರಾಸ
ಹುಡುಕಬೇಕಿಲ್ಲ
ಯಾರೀಗೂ ಹೇಳದ ನೋವು
ಅವಮಾನ , ಮುಜುಗರವಷ್ಟೇ ಸಾಕು
ಕವಿತೆ ಕಟ್ಟಲು.

ಬಾಲ್ಯದಲ್ಲಿ ನನಸಾಗದ ಕನಸುಗಳು
ಪ್ರೀತಿಸಿ ಕೈಕೊಟ್ಟ ಹುಡುಗಿ
ನಂಬಿದ ಗೆಳೆಯ ಕದ್ದು-ಮುಚ್ಚಿ
ಕುಡಿದ ಬೀರು
ಆಘಾತ ಮೂಡಿಸಿದ ಮುಷ್ಠಿ-
-ಮೈಥುನ
ನೆತ್ತಿಗೇರಿದ ಕೊರಿ ಬೀಡಿ
ಫೇಲಾಗಿ ಓಡಿ ಹೋಗಿ
ಸಾಯಲು ಒದ್ದಾಡಿದ ಹಿಂಸೆ
ಬೆಚ್ಚಿ ಬೀಳಿಸಿ ಎಚ್ಚರಾಗಿಸಿ
ಕಸಿವಿಸಿಗೊಳಿಸಿದ ಸ್ವಪ್ನ-
-ಸ್ಖಲನ.

ದೀಪಾವಳಿ ಇಸ್ಪೀಟು ಆಟದ
ನಾಕಾಣೆಯ ಗೆಲುವು
ಕಬಡ್ಡಿ ಸೋಲಲಿ ಕೆತ್ತಿದ
ಮೊಣಕಾಲು

ಕಾಲೇಜಲಿ ಮುಸಿನಕ್ಕು ಹುಸಿ
ಭರವಸೆ ಮೂಡಿಸಿ ಮಾಯವಾದ
ಮಲೆನಾಡ ಹುಡುಗಿ

ಮೀನಲಡಗಿದ ಮುಳ್ಳ ತೆಗೆದು
ತಿನಿಸಿ ಖುಷಿ ಪಟ್ಟಿ ಗೆಳೆಯ

ಮೊದಲ ಬಾರಿ ಹೊಟ್ಟೆ ಸೇರಿದ
ಮೊಟ್ಟೆ ಕೋಳಿಯ ನರ್ತನ
ಮೈಲಿಗೆಯಾದ ಲಿಂಗಾಯತ
ಹುಡುಗನ ಆಕ್ರಂದನ

ಹುಟ್ಟು ಹಬ್ಬದೂಟದಲಿ
ಬಾಯಲಿ ಕೇಕಿಟ್ಟು ಕಚಗುಳಿ
ಕೊಟ್ಟು ನೂರೆಂಟು ಕನಸ
ಬಿಟ್ಟು ಮರೆಯಾದ ಹಸಿ ಪ್ರೇಮಿ

ಹೀಗೆ ನೀ ಕವಿತೆ ಕಟ್ಟಿ ಹಾಡಲು
ಇನ್ನೇನು ಬೇಕು
ಜೀವಕ ಆಗೋ ತ್ರಾಸು ಬೇಕು
ನಿನಗ್ಯಾಕ ಬೇಕು
ಎಲ್ಲಿಲ್ಲದ ಪ್ರಾಸ
ಕವಿತೆ ಕಟ್ಟಲು.

---ಸಿದ್ದು ಯಾಪಲಪರವಿ

Tuesday, January 17, 2017

ನಮ್ಮ ರೈತ

ರೈತ ದ್ವಿಪದಿಗಳು

ಉಳುವ ಯೋಗಿಯ ದುಡಿವ
ಕೈಗಳಿಗೆ ಸಾವಿರದ ಶರಣು

ದಣಿವರಿಯದ  ಧಣಿ
ಭೂಮಿಯನಾಳುವ ಹೊನ್ನಿನ ಗಣಿ

ಜನರ ಹಸಿವು ಇಂಗಿಸುವ ದೇವ
ಭೂತಾಯಿಗಾಗಿ ದುಡಿಯುವ ಮಹದೇವ

ರೈತ ನೀನೆಂದರೆ ಈ ದೇಶ
ಜಗ ಮೆಚ್ಚುವ ಸರ್ವೇಶ

ಸಂಪೂರ್ಣ ಬಾಗಿದರೂ ಬೆನ್ನು
ಮಣ್ಣೇ ಇವನ ಪಾಲಿನ ಹೊನ್ನು

---ಸಿದ್ದು ಯಾಪಲಪರವಿ

Saturday, January 14, 2017

ಸಂಕ್ರಮಣದ ಆಶಯ

ಹೊಸ ವರುಷ  ಹೊಸ ಹರುಷ

ಹೊಸ ವರುಷದ ಹೊಸ ಹರುಷದ
ಸಂಕ್ರಮಣದ ನೂರೆಂಟು ಸಂಕಟಗಳು
ಮಾಯವಾಗಬಹುದೆಂಬ ಭರವಸೆಯ
ಕನಸುಗಳ ಗಟ್ಟಿಗೊಳಿಸಿ ಹದವಾಗಿ
ಎಳ್ಳು ಬೆಲ್ಲವ ಬೆರೆಸಿ ಮೆಲ್ಲ ಮೆಲ್ಲನೆ
ಸವಿಯೋಣ.

ದಾರಿಗುಂಟ ತೊಡರುವ ಕಲ್ಲು ಮುಳ್ಳುಗಳ
ಮೆಲ್ಲನೆ ನೋವಾಗದಿ ದಾಟೋಣ
ಆಗುವುದೆಲ್ಲ ಒಳಿತಿಗೆ ಎಂಬ ಹಿರಿಯರ
ಭರವಸೆಯ ಜಾಡ ಹಿಡಿದು ಜೀವ ಜೀಕೋಣ

ಬಿಟ್ಟೆನೆಂದರೆ ಬಿಡದ ಮಾಯೆಯ ಬೆಂಬಿಡದೆ
ಕಾಯೋಣ ಒಳಗಣ್ಣಿಂದ
ಕೈಗೆ ಸಿಗದೆ ಅತ್ತಿತ್ತ  ಓಡಾಡಿ
ನಲಿಯುತ ಸಮರಸದಿ ಬಾಳೋಣ

ನೋವಿರಲಿ ನಲಿವಿರಲಿ ನಸುನಗುತ ಬೆಚ್ಚಗೆ
ಬಿಗಿದಪ್ಪಿ ರಮಿಸಿ ಲಾಲಿ ಹಾಡೋಣ
ಓಡಿ ಹೋದರೆ ತಪ್ಪಿಸಿಕೊಳ್ಳಲಾಗದ
ಆಗುಹೋಗುಗಳ ಎಳ್ಳು -ಬೆಲ್ಲದ ತೆರದಿ
ಸವಿಯೋಣ ಸುಖಿಸೋಣ

ನೂರರಾಟದ ಬದುಕ ಪಯಣದಲಿ
ಬರುವುದೆಲ್ಲ ಬರಲಿ ಇರುವುದೆಲ್ಲ ಇರಲಿ
ಉಸಿರ ಆಟ ನಡೆಯುವವರೆಗೆ
ಸಾಗುತಿರಲಿ ಭರವಸೆಯ ನಡಿಗೆ...

---ಸಿದ್ದು ಯಾಪಲಪರವಿ
ಸಂಕ್ರಮಣದ ಶುಭಾಶಯಗಳು

Thursday, January 5, 2017

ಮನದ ಮಾತು-301

ಮನದ ಮಾತು-301

ಬಿದ್ದಾಗ ಪೆಟ್ಟಾಗುತ್ತದೆ ಆದರೆ ನೋವಾಗುವದಿಲ್ಲ, ಯಾರಾದರೂ ಬೈದಾಗ ಬೇಸರವಾಗುತ್ತದೆ ಆದರೆ ಅವಮಾನವಾಗುವದಿಲ್ಲ.
ಕಳೆದುಕೊಂಡಾಗ ಪಡೆದುಕೊಳ್ಳುತ್ತೇನೆ
ಎನಿಸುತ್ತದೆ ಆದರೆ ನಿರಾಶೆಯಾಗುವದಿಲ್ಲ .
ಹಸಿವಾಗುತ್ತದೆ ಆದರೆ ಊಟ ಬೇಕೆನಿಸುವದಿಲ್ಲ.
ನಿದ್ದೆ ಆವರಿಸುತ್ತದೆ ಆದರೆ ಹಾಸಿಗೆಯನೇರುವದಿಲ್ಲ ,
ದೇಹ ಸವಿ ಸಂಪದಗಳು ಕಣ್ಮುಂದೆ ಕಂಗೊಳಿಸುತ್ತವೆ
ಆದರೆ ಮೈಮೇಲೆ ಸುಳಿಯುವದಿಲ್ಲ.
ಹಾಗಾದರೆ ನಿರಾಶಾ ಭಾವವೇ, ನಿರ್ವೀರ್ಯ ಮನೋಭಾವವೇ.
ಒಮ್ಮೊಮ್ಮೆ ಸಹನೆ ಕೂಡ ದೌರ್ಬಲ್ಯದಿ ದೌರ್ಜನ್ಯವಾಗಬಾರದೆಂದುಕೊಳ್ಳುತ್ತಲೇ ಮತ್ತೆ ಮೌನಿಯಾಗಿ ಅಂತರಂಗದ ಅಂತಃಸತ್ವವನರಿಯಲು ಧ್ಯಾನಸ್ಥನಾಗಿದ್ದೇನೆ.
----ಸಿದ್ದು ಯಾಪಲಪರವಿ

ಸಂದರ್ಶನ

ಫೆಬ್ರುವರಿ 6, 2017 ರಂದು
ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಎಫ್.ದಂಡಿನ ಅವರ ಸಂದರ್ಶನ.

ಬೆಂಗಳೂರು ಚಂದನ  ದೂರದರ್ಶನದ ಬೆಳಗು ಕಾರ್ಯಕ್ರಮದಲ್ಲಿ  6-2-2017 ಮುಂಜಾನೆ 7.00 ಗಂಟೆ ಸೋಮವಾರ , ಕೆ.ಸಿ.ಶಿವರಾಮ್ ನಡೆಸಿಕೊಟ್ಟ ಡಾ.ಬಿ.ಎಫ್.ದಂಡಿನ ಅವರ ಸಂದರ್ಶನ ಪ್ರಸಾರವಾಗಲಿದ್ದು ದಯವಿಟ್ಟು ವೀಕ್ಷಿಸಿ...
ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಸಹಕಾರ ಹಾಗೂ ಮಾರ್ಗದರ್ಶನ  ನೀಡಿದ ಅಧಿಕಾರಿಗಳಾದ ಶ್ರೀಮತಿ ನಿರ್ಮಲಾ ಎಲಿಗಾರ್ ಹಾಗೂ ಅಬ್ದುಲ್ ಮಜೀದ್ ಅವರಿಗೆ ಕೃತಜ್ಞತೆಗಳು.

Wednesday, January 4, 2017

ಸೇರಿ ಬಿಡೋಣ

ಸೇರಿ ಬಿಡೋಣ

ಹೊಸ ಗೆಳೆತನದ ಹಂಗಾಮಾ
ಯಾತರದ ಹಂಗೂ ಇಲ್ಲ

ಮುಂದೊಂದು ದಿನ ಬೀಳುವ
ಅನುಮಾನದ ಲೆಕ್ಕವಿಲ್ಲದ
ಪರಮಾನಂದದ ತುದಿಯಲಿ
ಇನ್ನಿಲ್ಲದ ತುಡಿತ

ನಿಧಾನದಿ ಕಳಚಿ ಬೀಳಲಿವೆ
ಅಡೆತಡೆಗಳು ಹೊಸ ಬೆಸುಗೆಯ
ಸೊಗಸಲಿ

ಮಾತು-ಕತೆಗಳ ಮಿಲನ
ಭಾವಚಿತ್ತಾರಗಳ ವಿನಿಮಯದ
ತಂಗಾಳಿ ಒಮ್ಮೆ ನಿಧಾನದಿ
ಮಗದೊಮ್ಮೆ ಜೋರಾಗಿ
ಸೆರಗು
ಜಾರಿದರ ಪರಿವಿಲ್ಲ
ಎದೆಯ ಏರಿಳಿತ ಹೊರಗೂ
ಒಳಗೂ ನಿಂತಿಲ್ಲ

ಹೊಸ ಗೆಳೆತನದ ಹಂಗಾಮಾ
ಎಂದರೆ ಇದೆ ಎಂದು
ಗೊತ್ತಿರಲಿಲ್ಲ

ಕೊರೆಯುವ ಛಳಿಯಲಿ
ಮೈಮನಗಳ ಬೆಚ್ಚಗಿಡಲು ಬರೀ
ನೆನಪೇ ಸಾಕು
ಇನ್ನು ನೀ ಸಿಕ್ಕರೇ ?!

ಪ್ರಶ್ನೆ -ಉತ್ತರಗಳ ನಿಟ್ಟುಸಿರ
ನಿಟ್ಟನೇರಿ ನಿನ್ನ ಸೇರುವ
ನಿತ್ಯ ಜಪ

ಒಮ್ಮೆ ಸಿಕ್ಕು ಪರಸ್ಪರ ಹಿಂಡಿ
ಹಿಪ್ಪೆಯಾಗಿ ಕಬ್ಬಿನ ಜೇನ ಸುರಿಸಿ
ಸವಿಯೋಣ

ಇನ್ನು ಕಾಲ ತಳ್ಳಿದರೆ ಕಾಲ
ನಮಗಾಗಿ ಕಾಯುವುದಿಲ್ಲ

ಮನಸಿನ ವಿಶಾಲದ ಹರವು
ದೇಹಕೆ ಇಲ್ಲವಲ್ಲ
ಬಾಗಿ ಮುದುಡಿ ಮುಪ್ಪಾಗುವ
ಜೋಲಿಗೆ ನಿಮಿರುವ ಗತ್ತು
ಮುಗಿಯುವ ಮುನ್ನ
ಒಮ್ಮೆ ಸೇರಿ
ಬಿಡೋಣ
ಉಸಿರು

ಉಸಿರು
ನಿಲುವ ಮುನ್ನ...

-----ಸಿದ್ದು ಯಾಪಲಪರವಿ