Monday, January 21, 2019

ಎದೆಯ ಗುಡಿ...

*ಎದೆಯ ಗುಡಿಯ ಗೂಡಲಿ*

ನೀ
ಬರೀ ಮುದ್ದು ಮಾಡಲು‌
ಮಾತ್ರ ಸಾಕು

ಚರ್ಚೆ ಉಸಾಬರಿ ಸಾಕು

ಪಟ್ಟು ಹಿಡಿದು ಕುಳಿತು
ಬರೆದರೆ ಪಾವನ ಸರಸ್ವತಿ

ಯಾವುದೋ ಋಣಾನುಬಂಧ
ಬೆಸೆಯಿತು ನಮ್ಮ
ಈ ಅನುಬಂಧ

ಅಗ್ನಿ ಪರೀಕ್ಷೆಯನು
ನಿರ್ವಿಕಾರವಾಗಿ
ಎದುರಿಸಿದ ಧೀರೆ

ಕ್ಷಮಿಸು ಸಖಿ ನಾ
ತಿರುಚಿದ ಗಾಯಕೆ

ಹಚ್ಚುವೆ ಗುಟುಕಿನ ಸವಿ
ಮುಲಾಮು

ನಿತ್ಯ ನಸುನಗುತ ಮುದ್ದು
ಅಕ್ಷರಗಳಲಿ ಬಂಧಿಸು

ಹೃದಯ ಸಿಂಹಾಸನದಲಿ
ಬೆಚ್ಚಗೆ ಮಲಗಿ

ಹಾಯಾಗಿ ಹೊಸಲೋಕದಿ
ಹಾರಾಡುವೆ

ಎಂದೋ ಕಂಡ ಕನಸ
ನನಸಾಗಿಸಿ ಬಣ್ಣ ತುಂಬಿ
ಬಾಳ ರಂಗೇರಿಸಿದ ರಾಣಿ

ಈಗ ನೀ ಮಹಾರಾಣಿ
ಮನದರಮನೆಯಲಿ

ಬರೆಯುತ ಬೆರೆಯುತ
ಹಾಡುತ ನಲಿಯುತ
ಕುಣಿದು ಕುಪ್ಪಳಿಸಿ
ಧರೆಗಿಳಿಸು
ಸ್ವರ್ಗ ಸಂಭ್ರಮ

ನೀ ನಿಲ್ಲದ ನೀ ಇಲ್ಲದ
ಈ‌ ಒಲವಲೋಕದಲಿ
ಇಲ್ಲ ನನಗೆ ಬೇರೇನೂ
ಕೆಲಸ

ಬಾ ಅರಗಿಣಿ ನೀ
ಬಂಧಿಯಾಗು ಮುಕ್ತವಾಗಿ
ನನ್ನ ಎದೆಯ
ಗುಡಿಯ ಗೂಡಲಿ

ದೊರಕಿದೆ ದೊರೆಯ ಅಪ್ಪಣೆ
ಬೇಕಿಲ್ಲ ಬೇರೇನೂ
ನಾ
ನೀ
ಸದಾ ಖುಷಿಯಾಗಿರಲು

ನೀ ನಕ್ಕರೆ ಅದೇ ಸಕ್ಕರೆ
ನಾ ಹಾಲಾಗಿ‌ ಕರಗಿ
ಲೀನವಾಗಿ

ಅವನ
ಗಂಟಲ ಸವಿಯಾಗಿ
ಆಳಕಿಳಿದು ಅಮರ

ಅಜರಾಮರ ನಿನ್ನ
ನೆನಪ‌ ಹಸಿರ ಉಸಿರಲಿ...

---ಸಿದ್ದು ಯಾಪಲಪರವಿ.

ಸಿದ್ಧಗಂಗಾ ಪೂಜ್ಯರು

*ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಸಿದ್ಧಗಂಗಾ ಮಠ*

ಗ್ರಾಮೀಣ ಕರ್ನಾಟಕದ ನೋವು ಅರಿತಿದ್ದ ಶ್ರೀಗಳು ಶಿಕ್ಷಣದ ಮೂಲಕ ಪರಿಹಾರ ನೀಡಲು ನಿರ್ಧರಿಸಿ ದಾಸೋಹ ಪ್ರಾರಂಭಿಸಿದರು. ಅನ್ನ,ಅರಿವೆ,ಅಕ್ಷರ ದಾಸೋಹ ಪಡೆದು ಲಕ್ಷಾಂತರ ಜನ ಧನ್ಯರಾದರು.
ಕೇವಲ ಅಕ್ಷರ ಸಿದ್ಧಾಂತದ ಮೂಲಕ ನಿರಂತರ ಮಕ್ಕಳ ಏಳ್ಗೆಗಾಗಿ ದುಡಿದ ಏಕೈಕ ಸ್ವಾಮೀಜಿಯವರ ಲಿಂಗಪೂಜಾ ನಿಷ್ಠೆ ಕೂಡಾ ಅಪರೂಪ.
ಶಿವಯೋಗದ ಮೂಲಕ ಚಾರಿತ್ರ್ಯ ರೂಪಿಸಿಕೊಂಡ ಶ್ರೀಗಳು ಹಂತ ಹಂತವಾಗಿ ಬೆಳಕಿಗೆ ಬಂದರು. ಅಷ್ಟೇನು ಸಿರಿವಂತಿಕೆ ಹೊಂದಿರದ ಮಠಕ್ಕೆ ಮಕ್ಕಳೇ ಆಸ್ತಿಯಾದರು.

ಮಠದಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನ ತಲುಪಿದ ಹಳೆಯ ವಿದ್ಯಾರ್ಥಿಗಳು ಶ್ರೀಗಳಿಗೆ ಪರೋಕ್ಷವಾಗಿ ಜೊತೆಯಾದರು.
ಅನೇಕ ಲಿಂಗಾಯತ ಮಠಗಳಂತೆ ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದ ಶ್ರೀಗಳ ನಿಲುವಿನಲ್ಲಿ ಸ್ಪಷ್ಟತೆ ಇತ್ತು.
*ಶಿಕ್ಷಣ ಕೇವಲ ಶಿಕ್ಷಣ* ಅದೂ ಬಡ ಮಕ್ಕಳಿಗಾಗಿ ಮೂಲಭೂತ ಶಿಕ್ಷಣ.

ಇತ್ತೀಚೆಗೆ ಬಹುಪಾಲು ಮಠಗಳಿಗೆ ಸಿದ್ಧಗಂಗಾ ಮಠ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಬಿಸಲು ಪ್ರೇರಣೆಯಾಯಿತು. ಉಚಿತ ಶಿಕ್ಷಣಕೆ ಸಿದ್ಧಗಂಗಾ ಮಠದ ಬದ್ಧತೆ ಪ್ರಶ್ನಾತೀತ.

ಮಠ ಬೆಳೆದಂತೆ ಭಕ್ತರು ಹೆಚ್ಚಾಗುವುದು ಸಹಜ. ಅದರಲ್ಲೂ ರಾಜಕಾರಣಿಗಳು ಜಾಣರು. ಮಠಾಧೀಶರನ್ನು ಬೇಗ ಪವಾಡ ಪುರುಷರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆಶೀರ್ವಾದ ಪಡೆಯುವ ನೆಪದಲ್ಲಿನ ಪೋಜುಗಳೇ ಮತವಾಗಿಸುವ ಹುನ್ನಾರ.

ಅವರ ಆರೋಗ್ಯ, ಚಾರಿತ್ರ್ಯ, ನಿರ್ವಿಕಾರ ಮನೋಧರ್ಮ,ಸಾಮಾಜಿಕ ಕಾಳಜಿ ಅನೇಕರ ಬಂಡವಾಳವಾಯಿತು.‌ ಆದರೆ ಅದಕ್ಕೆ ಶ್ರೀಗಳು ಹೊಣೆಗಾರರಲ್ಲ. ಅದೂ ಪರಸ್ಥಿತಿಯ ಉಪಯೋಗ ಅಷ್ಟೇ.

ಇಂದು ಇಡೀ ಜಗತ್ತು ಶ್ರೀಗಳ ಹಿರಿಮೆಯನ್ನು ಕೊಂಡಾಡುತ್ತದೆ. ಶತಾಯುಷಿ ಶ್ರೀಗಳು ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ತೋರಿದ ಲಿಂಗ ನಿಷ್ಟೆಯನ್ನು ವೈಭವೀಕರಿಸಿದ್ದೂ ಸಹಜ.

ದೈಹಿಕವಾಗಿ ತುಂಬ ಆರೋಗ್ಯಪೂರ್ಣವಾಗಿರುವ ಅನೇಕ ಮಠಾಧೀಶರು ಆಧ್ಯಾತ್ಮ ಬಿಟ್ಟು ಬೇರೆಲ್ಲಾ ಮಾಡುತ್ತಾರೆ.
ಹಾಗೆ ರಾಜಕಾರಣ ಮಾಡುವ ಸ್ವಾಮಿಗಳಿಗೆ ಸಣ್ಣ ಅಸಮಾಧಾನವಿತ್ತಾದರೂ ಹೇಳುವ ತಾಕತ್ತಿರಲಿಲ್ಲ.

ಪೂಜ್ಯರು ಶಿಕ್ಷಣ ದಾಸೋಹ ಹೊರತುಪಡಿಸಿ ಬೇರೇನು ಮಾಡುತ್ತಿರಲ್ಲ. ಕೊನೆ ಕ್ಷಣದವರೆಗೆ ಲಿಂಗಾಂಗ ಸಾಮರಸ್ಯ, ಶಿಕ್ಷಣ ದಾಸೋಹ ಅವರ ಉಸಿರಾಯಿತು.
ಲಿಂಗಾಯತ ನಾಯಕರೊಬ್ಬರ ಮೇಲೆ ಮಮಕಾರವಿತ್ತಾದರೂ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ.

*ಜನರ ನಂಬಿಕೆಗಳಿಗೆ ಅನುಗುಣವಾಗಿ ಕರಿದಾರ, ಭಸ್ಮದ ಚೀಟು ನೀಡುತ್ತಿದ್ದರು ಎಂಬ ಪ್ರಗತಿಪರರ ಸಣ್ಣ ಗೊಣಗಾಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗೆ ಅದರ ಅಗತ್ಯವೂ ಇರಲಿಲ್ಲ*.

ಕೆಲವು ಪುಢಾರಿಗಳು ಪೂಜ್ಯರ ಹೆಸರನ್ನು ದುರುಪಯೋಗ ಪಡಿಸಿಕೊಂಡರೂ ಮೌನವಹಿಸಿದರು. ಅದು ಅವರವರ ಪಾಪ-ಪುಣ್ಯ ಎಂಬ ಧೋರಣೆಯ ತಟಸ್ಥ ನಿಲುವು.

*ಪೂಜ್ಯರೊಂದಿಗೆ ವೇದಿಕೆ ಹಂಚಿಕೊಂಡ ಪುಣ್ಯ*.

ಹದಿನೈದು ವರ್ಷಗಳ ಹಿಂದೆ ಹಿರಿಯ ನಟ, ಸಾಹಿತಿ ಪ್ರೊ.ಟಿ.ಎಸ್.ಲೋಹಿತಾಶ್ವ ಅವರ ತಂದೆಯವರ ನಿಧನದ ನಂತರ ಪುಣ್ಯಾರಾಧನೆಯ ಸಮಾರಂಭ ತುಮಕೂರು ಜಿಲ್ಲೆಯ ಕೊನೆ ಹಳ್ಳಿ ತೊಂಡಗೆರೆಯಲ್ಲಿ ಆಯೋಜಿಸಲಾಗಿತ್ತು. ಅನಿರೀಕ್ಷಿತವಾಗಿ ಪ್ರೊ.ಚಂಪಾ ಅವರೊಡನೆ ನಾನು ವೇದಿಕೆ ಹಂಚಿಕೊಂಡು *ಮರಣವೇ ಮಹಾನವಮಿ* ಎಂದು ಮಾತನಾಡಿದ್ದನ್ನು ಕೇಳಿ ಪೂಜ್ಯರು ನಗೆ ಚಲ್ಲಿದ್ದ‌ ನೆನಪು ಈಗಲೂ ಹಸಿರು.‌

*ಭಾರತರತ್ನ ಮತ್ತು ಶ್ರೀಗಳು*

ನಮ್ಮ ದೇಶದಲ್ಲಿ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡು ತುಂಬ ದಿನಗಳಾದವು. ಆದರೂ ಅನೇಕ ಮನಸುಗಳು ಪ್ರಶಸ್ತಿಗಳಿಗಾಗಿ ಹಾತೊರೆಯುತ್ತವೆ, *ಪಡೆಯಲು ಮತ್ತು ಕೊಡಿಸಲು*.

ಪ್ರಶಸ್ತಿಗಳಾಚೆ ಬ್ರಹದಾಕಾರವಾಗಿ ಬೆಳೆದರೂ ಪ್ರಶಸ್ತಿಗಳನ್ನು ಮಾನದಂಡವಾಗಿ ವಿಶೇಷಣಗಳನ್ನಾಗಿ ಬಳಸಿದಾಗಲೇ ಸಮಾಧಾನ.

ಕೇಂದ್ರ ಸರ್ಕಾರ ಯಾಕೆ ಕೊಡಲಿಲ್ಲ ಎಂಬುದು ಮುಖ್ಯವಲ್ಲ. ಕೊಡಲಿ ಎಂದು ಒತ್ತಾಯಿಸುವುದು ನಮ್ಮ ತಪ್ಪು. ಅದು ಪೂಜ್ಯರಿಗೆ ಮಾಡುವ ಅವಮಾನ.‌ ಪೂಜ್ಯರ ಮಠದಲ್ಲಿ ಬೆಳೆದ
ಲಕ್ಷಾಂತರ ವಿದ್ಯಾರ್ಥಿಗಳು, ಕೋಟ್ಯಂತರ ಭಕ್ತರ ಭಕ್ತಿಗಿಂತ ದೊಡ್ಡ ಪುರಸ್ಕಾರ ಬೇರೆ ಯಾವುದೂ ಇಲ್ಲ.
ಪ್ರಶಸ್ತಿ ಮಾನದಂಡ ಇಟ್ಟುಕೊಂಡು ರಾಜಕಾರಣ ಮಾಡಬಾರದು. ‌
ತುಂಬು ಜೀವನ ಸಾಗಿಸಿ ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲಿ ದೈಹಿಕವಾಗಿ ಅಗಲಿದ್ದಾರೆ.
ಉಳಿದ ಮಠಗಳು, ಸರಕಾರ ಅವರ ಶೈಕ್ಷಣಿಕ ಮೌಲ್ಯಗಳ ನಿರಂತರ ಉಳಿಸಿಕೊಳ್ಳಲಿ.

  *ಸಿದ್ದು ಯಾಪಲಪರವಿ*

Monday, January 7, 2019

ವಿವಾದ ವಿಷಾದ

*ವಿವಾದಕ್ಕಾಗಿ ವಿವಾದ: ಒಂದು ವಿಷಾದ*

ಕೆಲದಿನಗಳಿಂದ ಬರೀ ಅಬ್ಬರ, ಭೀಕರ ಸದ್ದು ಗದ್ದಲ. ವೈಚಾರಿಕತೆಯ ಹೆಸರಿನ ಚರ್ಚಾ ಭರಾಟೆಯಲಿ.
ಪ್ರೊ.ಭಗವಾನ ಅವರು ಆಗಾಗ ರಾಮನ ಹೆಸರಿನಲ್ಲಿ ರಾಮಾಯಣ ಮಾಡಿಕೊಳ್ಳುತ್ತಾರೆ.

ಭಾರತ ಅನೇಕ ನಂಬಿಕೆಗಳ ತವರು, ಈ ನಂಬಿಕೆ ಅನೇಕರಿಗೆ ಮೌಢ್ಯದಂತೆ ಕಾಣಿಸುವುದು ಸಹಜ. ಅವೈಜ್ಞಾನಿಕ ನಂಬಿಕೆಗಳಿಗೆ ನಮ್ಮ ಸನಾತನ ಕತೆ, ಪುರಾಣಗಳೂ ಕಾರಣವಿರಬಹುದು ಅನ್ನಿ. ಸರಿಯೋ, ತಪ್ಪೋ ಒಟ್ನಲ್ಲಿ ಅದನ್ನು ಅನೇಕರು ಪ್ರಶ್ನೆ ಮಾಡದಂತೆ ಪಾಲಿಸುವುದು ಅವರಿಗೆ ಸಮಾಧಾನ ತಂದಿದೆ.

ಅದು ಬಹುಸಂಖ್ಯಾತರ ಭಾವನಾತ್ಮಕ ನಂಬಿಕೆಯಾದಾಗ ನಾವದನ್ನು ಸಿದ್ಧಾಂತಗಳ ಹೆಸರಿನಲ್ಲಿ ಕೆರಳಿಸುವುದು ಸರಿಯಲ್ಲ.
ಹಾಗೆ ಟೀಕಿಸುವ ಭರದಲ್ಲಿ ಹತ್ತಾರು ಮಹಾಕಾವ್ಯದ ಪಾತ್ರಗಳನ್ನು ಮನಸೋ ಇಚ್ಛೆ ಈಗ ಜಾಡಿಸಲಾಗದು.‌
ಒಂದು ಕಾಲದಲ್ಲಿ ಈ ತರಹದ ಒಳನೋಟ ಕುತೂಹಲ ಉಂಟು ಮಾಡಿ ಓದಿಸಿಕೊಂಡು ಹೊಗುತ್ತಿತ್ತು.

ಎಡ-ಬಲ ವಾದ ಈಗ ಕೇವಲ ಸೈದ್ದಾಂತಿಕ ಚರ್ಚೆಯಾಗಿ ಉಳಯದೇ ಹಿಂಸಾ ಸ್ವರೂಪ ಪಡೆದುಕೊಂಡಿದೆ.
ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ನಂತರ ಕಾಲ ಸೂಕ್ಷ್ಮವಾಗಿದೆ‌. ಕೊಲೆಗಾರರು ಯಾರು ಎಂಬುದು ತನಿಖೆ ಮುಗಿಯದೇ ಹೇಳಲಾಗದು.

ಒಂದರ್ಥದಲ್ಲಿ ಎಲ್ಲವೂ ಓಪನ್ ಸೀಕ್ರೇಟ್ ನಂತೆ ಇರುವಾಗ ಭಗವಾನ್ ಅವರು ಮಾಧ್ಯಮಗಳಿಗೆ ಆಹಾರವಾಗಿ ಜನರನ್ನು ಕೆರಳಿಸುವುದು ಸರಿಯಲ್ಲ.
ಅದರಲ್ಲೂ ಜನರ ನಂಬಿಕೆಗಳನ್ನು ಅಲುಗಾಡಿಸುವಾಗ ಬಳಸುವ ಪದಗಳ ಮೇಲೆ ಹಿಡಿತವಿರಬೇಕು.

ವೈಚಾರಿಕ ಸಂಘರ್ಷಕೆ ಡೆಮಾಕ್ರಸಿಯಲ್ಲಿ ಜಾಗವಿದೆಯಾದರೂ ವಾತಾವರಣ ಪೂರಕ ಇರದೇ ಇದ್ದಾಗ ಕಹಿಯಾದ ಸತ್ಯಗಳ ನಿರರ್ಗಳವಾಗಿ ಹಂಚಿಕೊಳ್ಳಲಾಗದ ಸಂದರ್ಭ ವಿಶಾದನೀಯ.

ಎಡ-ಬಲ ಚರ್ಚೆ ನಿಯತ್ತನ್ನು ಕಳೆದುಕೊಂಡಿದೆ. ಸಾಮಾಜಿಕ ಜಾಲತಾಣದ ವಿಪರೀತ ದುರ್ಬಳಕೆ, ದೃಶ್ಯ ವಾಹಿನಿಗಳ ಟಿ.ಅರ್.ಪಿ. ದಾಹಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ.

ಭಗವಾನ ಅವರು ರಾಮಾಯಣ, ಮಹಾಭಾರತದ ವ್ಯಕ್ತಿಗಳನ್ನು ಕೇವಲ ಪಾತ್ರಗಳನ್ನಾಗಿ ನೋಡಿ ವಿಶ್ಲೆಷಿಸಬಹುದು. ಆದರೆ ಬಹುಪಾಲು ಜನರು ದೇವರೆಂದು ಆರಾಧಿಸುವ ಕಾರಣದಿಂದಾಗಿ ನಂಬಿಕೆಯ ಅಲುಗಾಟ ಶುರುವಾಗಿದೆ.

ಪೋಲಿಸರ ರಕ್ಷಣೆ ಪಡೆಯುವ ಅನಿವಾರ್ಯ ವಾತಾವರಣ ಸೃಷ್ಟಯಾದಾಗ ಸಹನೆ ಅನಿವಾರ್ಯವಾಗುತ್ತದೆ.

“ಲಿಂಗಾಯತರು ಸೈದ್ಧಾಂತಿಕವಾಗಿ ಹಿಂದುಗಳಲ್ಲ” ಎಂಬ ವಾಸ್ತವ ಸತ್ಯ ಹೇಳಿದ ಡಾ..ಕಲಬುರ್ಗಿ ಅವರನ್ನು ಸಹಿಸದ ವಾತಾವರಣದಲ್ಲಿ ಇಂತಹ ಕಠೋರ ಸಂಗತಿಗಳನ್ನು ಸಹಿಸಿಕೊಳ್ಳುತ್ತಾರೆಯೇ?
ಸಹಿಸದೇ ಇರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯವಿಲ್ಲ.

ಎಡ-ಬಲಗಳ ಗೆರೆಯನ್ನು ತೀಕ್ಷ್ಣವಾಗಿ ಎಳೆಯಲಾಗಿದೆ.
ಬಹುಸಂಖ್ಯಾತರೆಂದರೆ ದೇವರು ಎಂದು ನಂಬಿ ಆರಾಧಿಸುವ ಜನ. ಈ ಆರಾಧಕರಿಗೆ ಜಾತಿ, ಧರ್ಮ ಏನೇನೂ ಗೊತ್ತಿಲ್ಲ. ಬ್ಲೈಂಡ್ ಆಗಿ ನಂಬುತ್ತಾರೆ. ಹಾಗೆ ನಂಬದೇ ಇರುವವರಿಗೆ ವಾಸ್ತವ ಸಂಗತಿ ಗೊತ್ತಿದೆ ಎಂಬ ಭರದಲ್ಲಿ ಕಲ್ಲಿಗೆ ತಲೆ ಜಜ್ಜಿಕೊಳ್ಳಲಾಗದು. ಸಂಯಮದ ಅನಿವಾರ್ಯತೆ ಇದೆ.

ವೈಜ್ಞಾನಿಕ ಸಂಗತಿಗಳನ್ನು ಒಪ್ಪಲಾರದ ಜನರ ಸಂಖ್ಯೆ ಹೆಚ್ಚಿದ್ದಾಗ *ಬೆತ್ತಲೆ ಓಡಾಡುವವರು ಹೆಚ್ಚಾದಾಗ ಬಟ್ಟೆ ಹಾಕಿಕೊಂಡವರೇ ಅಸಹ್ಯವಾಗಿ ಕಾಣುತ್ತಾರೆ* ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಒಮ್ಮೆಲೇ ಬಟ್ಟೆಯ ಮಹತ್ವ ಹೇಳ ಹೋದರೆ ನಮ್ಮ ಬಟ್ಟೆ ಬಿಚ್ಚಿ  ಒಗೆಯುತ್ತಾರೆ.

ಅತಿಯಾದ ಟೀಕೆಯಿಂದ ದಿಢೀರ್ ಸಾಮಾಜಿಕ ಬದಲಾವಣೆ ಅಸಾಧ್ಯ.
ಬುದ್ಧ, ಬಸವ,ಗಾಂಧಿ, ಅಂಬೇಡ್ಕರ್ ಹಾಗೂ ಇತರೆ ಸಾಮಾಜಿಕ ಸುಧಾರಕರು ಸತ್ಯ ಹೇಳುವ ಭರದಲ್ಲಿ ಸಾಮಾಜಿಕ ಸ್ವ್ಯಾಸ್ಥ ಕದಡಲಿಲ್ಲ.
ನಿಧಾನವಾಗಿ ಜನಜಾಗೃತಿ ಮೂಡಿಸಿದರು.
ಅವರಿಗೆ *ಪರಿವರ್ತನೆ* ಮುಖ್ಯವಾಗಿತ್ತು *ಪ್ರಚಾರ* ಅಲ್ಲ.
ಈಗಿನ ಇಸಂ ಗಳಿಗೆ ಬೇಕಾಗಿರುವುದು ಕೇವಲ ಪ್ರಚಾರ ಬದಲಾವಣೆ ಅಲ್ಲ.‌

ಅಬ್ಬರದ ಕೀಳು ಪ್ರಚಾರ ಬಿಟ್ಟು ಬದಲಾವಣೆಗಾಗಿ ಕೆಲಸ ಮಾಡೋಣ.

*ಸಿದ್ದು ಯಾಪಲಪರವಿ*

Tuesday, January 1, 2019

2018 ರ ಹಿನ್ನೋಟ

*2018 ರ ಅವಕಾಶ, ಅನುಕೂಲ- ಅವಲೋಕನ*

ಆತ್ಮಾನುಸಂಧಾನ ಪ್ರತಿವರ್ಷ ಅನಿವಾರ್ಯ.
ಏನೇನೋ ಕನಸಿನ ಯೋಜನೆಗಳು, ಗಂಭೀರವಾದ ಪ್ರಯತ್ನ ಸಾಗಿದ್ದಂತೂ ನಿಜ. ಯಶಸ್ಸಿಗಾಗಿ ಕೊಂಚ ಸಮಾಧಾನ ಬೇಕು. ಕಾಯಬೇಕು ಭರವಸೆ ಕಳೆದುಕೊಳ್ಳದೇ.

*ಪಿಸುಮಾತುಗಳ ಜುಗಲ್*( ಜುಗಲ್ ಕವಿತೆಗಳು) ಹಾಗೂ *ಅಸಂಗತ ಬರಹಗಳು* (ಬಿಡಿ ಲೇಖನಗಳು) ಗಮನ‌ ಸೆಳೆದ ಕೃತಿಗಳು ಚಾಲ್ತಿಗೆ ಬಂದು ಚರ್ಚೆಗೆ ಒಳಪಟ್ಟವು.‌

*ಪಿಸುಮಾತುಗಳ ಜುಗಲ್* ಬಿಡುಗಡೆ ಸ್ಮರಣೀಯ.

ವಿ.ಎಂ.ಮಂಜುನಾಥ ಹಾಗೂ ಅನೇಕ ಸಾಂಸ್ಕೃತಿಕ ಮನಸುಳ್ಳ ಗೆಳೆಯರು ಚಿತ್ರಕಲಾ ಪರಿಷತ್ ಆವರಣದಲ್ಲಿ ಬಿಡುಗಡೆ ಮಾಡಿದರು.‌
ನಟ ರಾಮಕೃಷ್ಣ, ಜೋಗಿ, ನಿರ್ಮಲಾ ಎಲಿಗಾರ, ವನಮಾಲಾ ಸಂಪನ್ನಕುಮಾರ, ಕೃತಿ ಪರಿಚಯಿಸಿದ ಬೇಲೂರು ರಘುನಂದನ, ನಿರೂಪಕ ನಿನಿ ಲೋಕದ ಎಂ.ಜಿ.ವಿನಯಕುಮಾರ,ಕವಿತೆ ಓದಿದ ಹೊಸ ಕಲಾವಿದರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಬಹುಪಾಲು ಆತ್ಮೀಯರು ಖುದ್ದಾಗಿ ಬಂದು ಮನಸಾರೆ ಹಾರೈಸಿ ನನ್ನ ಹೊಸ ಪ್ರಯೋಗಕ್ಕೆ ಬೆನ್ನು ತಟ್ಟಿದರು.
ಈ ತರಹದ ಪ್ರಯೋಗಗಳನ್ನು ಓದುಗರು ಸ್ವೀಕರಿಸುವ ಕುರಿತ ನಮ್ಮ ಆಲೋಚನೆಯ ಗೊಂದಲಕ್ಕೆ ಅರ್ಥವಿಲ್ಲ ಅನಿಸಿತು. ಸರಿ ಕಂಡದ್ದನ್ನು ಮಾಡುತ್ತ ಸಾಗಬೇಕು. ಬೇರೆಯವರ ಕುರಿತು ಆಲೋಚಿಸುವಷ್ಟು ಸಮಯ ಯಾರಿಗೂ ಉಳಿದಿಲ್ಲ.‌

*ಜುಗಲ್ ಚರ್ಚೆ*

ಬೀದರ, ಕಲಬುರ್ಗಿಯ ಸಂಗಾತಿಗಳು ಈ ಕೃತಿ ಕುರಿತ ಚರ್ಚೆ ಇಟ್ಟುಕೊಂಡಿದ್ದರು.

ಬೀದರಿನಲ್ಲಿ ರಜಿಯಾ ಬಳಬಟ್ಟಿ, ಕಲಬುರ್ಗಿಯಲ್ಲಿ ವಿಕ್ರಮ್ ವಿಸಾಜಿ ಛಂದ ಮಾತನಾಡಿದರು. ಹಲವು ಅನುಮಾನಗಳ ದೂರ ಮಾಡಿದರು.

ಕಾಂತಾವರದ ಕನ್ನಡ ಸಂಘದವರು ಬಿಡುಗಡೆ ಮಾಡಿ ಕರಾವಳಿಯ ಗಂಭೀರ ಓದುಗರಿಗೆ ಕೃತಿ ತಲುಪಿಸಿದ್ದು ವಿಶೇಷ.
ಡಾ.ನಾ.ಮೊಗಸಾಲೆ ಅವರು ಜುಗಲ್ ಕುರಿತ ವಿಮರ್ಶಾ ಸಂಕಲನ ತರುವ ಸದುದ್ದೇಶ ಹೊಂದಿದ್ದಾರೆ.‌
ಒಂದಿಷ್ಟು ಗೆಳೆಯರು ಪ್ರತಿಕ್ರಿಯೆ ಬರೆದು ಕಳಿಸಿದ್ದಾರೆ ಕೂಡ. ಓದುಗರು ಬಹುವಾಗಿ ಮೆಚ್ಚಿದ್ದಾರೆ, ಅದೇ ಪ್ರಶಸ್ತಿ, ಪುರಸ್ಕಾರ ಏನೆಲ್ಲ.‌
ಕೆಲವು ಮಾಧ್ಯಮದ ಗೆಳೆಯರು ಮೌಖಿಕವಾಗಿ ಖುಷಿ ಹಂಚಿಕೊಂಡಿದ್ದಾರೆ.
ಇಂತಹ ಪ್ರಯೋಗಕ್ಕೆ ಮನಸು ಮಾಡಿದ *ಸಿಕಾ* ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಅವರಿಗೆ ಥ್ಯಾಂಕ್ಸ್ ಹೇಳಬೇಕು.

                                 ***

*ಅಸಂಗತ ಬರಹಗಳು*

ಅಸಂಗತವನ್ನು ಮೈಸೂರಿನ ರೂಪ ಪ್ರಕಾಶನ ಮಿತ್ರರಾದ ಯು.ಎಸ್.‌ಮಹೇಶ್ *ಅಸಂಗತ ಬರಹಗಳು* ಲೇಖನ ಸಂಗ್ರಹ  ಹೊರತಂದರು.
ಹೊಸ ಬಗೆಯ ಬರಹ ಎಂಬ ಶಬ್ಬಾಸಗಿರಿ ಪಡೆದುಕೊಂಡೆ.
ಹುಬ್ಬಳ್ಳಿಯ ಗೆಳೆಯ ಪ್ರಾಚಾರ್ಯರಾದ ಸಂದೀಪ್ ಬೂದಿಹಾಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಪುಸ್ತಕಾರ್ಪಣೆಗಾಗಿ ಪ್ರತಿ ಕೊಂಡಿದ್ದಾರೆ.

*ನಮ್ಮ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕರಾದ ಡಾ.ಬಿ.ಎಫ್. ದಂಡಿನ ಅವರು ಹಾಗೂ ನನ್ನ ಮೆಂಟರ್ ಡಾ.ಆರ್.ಎಂ.ರಂಗನಾಥ ಅವರಿಗೆ ಕೃತಿ ಅರ್ಪಿತವಾಗಿದೆ*
ಎರಡು ಕೃತಿಗಳು ತಾಂತ್ರಿಕವಾಗಿ 2017 ರ ಲೆಕ್ಕಕ್ಕೆ ಸೇರಿಕೊಂಡವು. ಈ ವರ್ಷ ಲೋಕಾರ್ಪಣೆ ಆಗಬೇಕಾಗಿದೆ.

                              ***

*ಏಪ್ರಿಲ್‌ 11 ವಿಶೇಷ ದಿನ*

ಚಂದನ ವಾಹಿನಿಯಲ್ಲಿ ಪ್ರಸಾರವಾಗುವ *ಶುಭೋದಯ ಕರ್ನಾಟಕ* ಅತ್ಯಂತ ಜನಪ್ರಿಯ ನೇರ ಪ್ರಸಾರದ ಕಾರ್ಯಕ್ರಮ. ಅಧಿಕಾರಿ ನಿರ್ಮಲಾ ಎಲಿಗಾರ ಅವರ ಕಲ್ಪನೆಯ ಕೂಸು ಆರೋಗ್ಯಪೂರ್ಣವಾಗಿ ಬೆಳೆಯುತ್ತಿದೆ.
ತುಂಬಾ ಸಣ್ಣವನಾದ ನನಗೆ103 ನೇ ಸಂಚಿಕೆಯಲ್ಲಿ ಭಾಗವಹಿಸಿ ಮುಕ್ತವಾಗಿ ಮಾತನಾಡುವ ಅವಕಾಶ. ಎರಡು ಗಂಟೆಯ ನೇರ ಪ್ರಸಾರದಲ್ಲಿ ಅರ್ಥಪೂರ್ಣವಾಗಿ ಮಾತನಾಡಲು ಕಾರಣರಾದವರು ನಿರೂಪಕರಾದ *ಕಲಾದೇಗುಲ ಶ್ರೀನಿವಾಸ್ ಹಾಗೂ ಮಂಗಲಾ ನಾಗರಾಜ ಜಮಖಂಡಿ*.
ಅವರ ಶೈಲಿ ನನ್ನ ಉತ್ತೇಜಿಸಿತು.
ಕಾರ್ಯಕ್ರಮದ ಪರಿಕಲ್ಪನೆ, ಸೆಟ್ಟಿಂಗ್, ತಂತ್ರಜ್ಞಾನದ ಗುಣಮಟ್ಟ ತುಂಬ ಎತ್ತರ.‌ ಹೀಗಾಗಿ ಈ ಪ್ರಸಾರ ನನ್ನ ನಾ ಅರಿಯಲು, ಜನ ಗಮನಿಸಲು ಕಾರಣವಾಯಿತು.
ನಮ್ಮ ಸಾಧನೆ ಮುಖ್ಯ ಅಲ್ಲ, ಅದನ್ನು ಗುರುತಿಸುವ ಅವಕಾಶ ಕೂಡ ಅಷ್ಟೇ ಮುಖ್ಯ. ನನಗೆ ಆ ಅವಕಾಶ ಬೇಗ ಸಿಕ್ಕಿತೆಂಬ ಸಂತಸ.‌
YouTube ಚಾನಲ್ ತುಂಬ ಶುಭೋದಯ ಕರ್ನಾಟಕ ಹರಿದಾಡುತ್ತ ಇದೆ. ಕಾರಣರಾದ ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ಸ್.

                                ***

*ಮೇ ತಿಂಗಳಲ್ಲಿ ದಾಂಪತ್ಯಕ್ಕೆ ಬೆಳ್ಳಿ ಸಡಗರ*

*ಮದುವೆ ಎಂಬುದು ನೆಪ ನೆಂಟರು ಬರುವುದೇ ಮುಖ್ಯ* ಕವಿ ಕುಮಾರವ್ಯಾಸನ ಸಾಲುಗಳ‌ ಮರುವ್ಯಾಖ್ಯಾನ. ನಾವು ಮಾಡುವ ಕೆಲಸಗಳಿಗೆ ಅನ್ವರ್ಥಕ.
ಗೆಳೆಯರು, ಬಂಧುಗಳು ಕಾರ್ಯಕ್ರಮ ಸರಳವಾಗಿ ಆಚರಿಸಿ ಹಾರೈಸಿದರು. *ಸಹನೆಯ ದಾಂಪತ್ಯಕ್ಕೆ ರೇಖಾ* ಕಾರಣಳಾಗಿದ್ದಾಳೆ. ಏಳು-ಬೀಳು ನಿಂತೇ‌ ಇಲ್ಲ. ಏರಿಳಿತದ ಬದುಕ ಬಂಡಿ ಸಾಗಿಯೇ‌ ಇರುತ್ತದೆ. ಏನೇ ಬಂದರೂ ಸಮಚಿತ್ತದಿ, ಸಮರಸದಿ ಸಾಗಿರಬೇಕು.
ಮಕ್ಕಳಾದ ಮುನ್ನುಡಿ, ಅಭಿವ್ಯಕ್ತಿ ಖುಷಿಯಿಂದ ಓಡಾಡಿ ಮದುವೆ ನೆನಪಿಸಿದರು.‌

*ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ಹಾಗೂ ಆಥರ್ ಕ್ರಾಫ್ಟ್*

ಕರಾವಳಿ ಉಡುಪಿ ಜಿಲ್ಲೆಯ ನಿಟ್ಟೆ ಶಿಕ್ಷಣ ರಂಗದ ಬಹುದೊಡ್ಡ ಕೊಡುಗೆ.
ಅಲ್ಲಿನ ಇಂಜಿನಿಯರಿಂಗ್ ಕೊನೇ ವರ್ಷದ ವಿದ್ಯಾರ್ಥಿಗಳು ಬರೆಯವ- ಓದುವ ಕಲೆಗಾರಿಕೆ ಬೆಳೆಸಿಕೊಳ್ಳಲು *Authorcraft* ಸಂಘಟನೆ ಮೂಲಕ ಸಾಹಿತ್ಯದ ಚಟುವಟಿಕೆ ಮಾಡುತ್ತಾರೆ.
ಅಭಿಷೇಕ್ ಪಾವಸ್ಕರ್, ಜ್ಯೋತಿ ಪಾಟೀಲ್ ಹಾಗೂ ಗೆಳೆಯರು ವಿಡಿಯೋ ಸಂದರ್ಶನ ಆಯೋಜಿಸಿದ್ದರು. ಆ ಮಾಲಿಕೆಯೂ YouTube ಸೇರಿಕೊಂಡಿದೆ.‌

*Yourquote*  App ಮೂಲಕ ಮನದ ಮಾತು ಬರೆಯಲು ಈ ಯುವಕರು ಕಾರಣರಾದರು.‌

ಕರಾವಳಿಯ ಅಲ್ಲಮಪ್ರಭು ಪೀಠದ ಹೊಣೆಗಾರಿಕೆ ಹೆಗಲಿಗೇರಿದೆ, ಇನ್ನೂ ಕಾರ್ಯಪ್ರವೃತ್ತವಾಗಬೇಕಾಗಿದೆ.

*ಸಾಮಾಜಿಕ ಜಾಲತಾಣದ ಬರಹಗಳು*

ಕವನ, ಲೇಖನಗಳು, ಮನದ ಮಾತು, ಕತೆಗಳು, ಲವ್ ಕಾಲ, ಓಲೆಗಳು ಹೀಗೆ ಎಲ್ಲ ಬಗೆಯ ಬರಹಗಳ ತಾಣವೇ ಸೋಸಿಯಲ್ ಮಿಡಿಯಾ. ಒಳ್ಳೆಯದು ಕೆಟ್ಟದು ಎಲ್ಲ ಕಡೆ ಇರುವಂತೆ ಇಲ್ಲಿಯೂ ಇದೆ. ಸರಿಯಾಗಿ ಬಳಕೆಯಾಗಬೇಕು ಅಷ್ಟೇ. ಗಂಭೀರ ಓದುಗರನ್ನು ಇಲ್ಲಿ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಇದೊಂದು ಸಂಗ್ರಹ ಯೋಗ್ಯ ನೆಲೆಯೂ ಹೌದು. ಯಾಕೋ ಇದರ ದಾಸರಾಗಿದ್ದೇವೆ ಅನಿಸಿದರೂ ಬರೆಯುವ ಕಸುವಂತೂ ಹೆಚ್ಚಾಗಿದೆ. ಬೆಂಕಿಯ ಸಹವಾಸ ಮೈ ಸುಡದಂತೆ ಎಚ್ಚರವಹಿಸಬೇಕು.

                                  ***

*ತೋಂಟದಾರ್ಯ ಪೂಜ್ಯರ ಅನಿರೀಕ್ಷಿತ ಅಗಲಿಕೆ*

ನನ್ನ ವೈಯಕ್ತಿಕ ಬದುಕಿನ ರೂವಾರಿಗಳು, ನಾಡಿನ ಪ್ರಖರ ಚಿಂತಕರು, ಅಪ್ಪಟ ಸನ್ಯಾಸಿಗಳಾದ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಅತ್ಯಂತ ಅನಿರೀಕ್ಷಿತವಾಗಿ ಹೋಗಿಬಿಟ್ಟರು. ತುಂಬಲಾಗದ ನಷ್ಟ ಎಂದರೇನೆಂಬ ಅನುಭವವಾಯಿತು. ಬಹುದೊಡ್ಡ ಶೂನ್ಯ ಭಾವ.
ಪೂಜ್ಯರ ಅಗಲಿಕೆ ಯಾರೂ ಊಹಿಸಿರಲಿಲ್ಲ.‌ ಸ್ವತಃ ಅವರಿಗೂ ಅನಿರೀಕ್ಷಿತ. ಅಗಲಿಕೆಯ ಸಂಕಷ್ಟ ನಿವೇದಿಸಲಾಗದ್ದು.‌ ಕೊನೆ
ಎರಡು ಸಲದ ಭೇಟಿಯಲ್ಲಿ ಬರಹದ ಕುರಿತು ಮಾತಾಡಿ ಬೆನ್ನು ತಟ್ಟಿದ್ದರು. ಅಸಂಗತ ಬಿಡುಗಡೆಗೆ ಕೂಡ ಒಪ್ಪಿಕೊಂಡಿದ್ದರು.

*ಶ್ರೀ ಬಸವ ಟಿ.ವಿ*

ಈ. ಕೃಷ್ಣಪ್ಪನವರು ವೈಯಕ್ತಿಕ ಸಂಪತ್ತನ್ನು ವಿನಿಯೋಗಿಸಿ ಆರಂಭಿಸಿದ‌ ಬಸವ ಟಿ.ವಿ. ಬಗ್ಗೆ ಪೂಜ್ಯರಿಗೆ ಅಪಾರ ಅಭಿಮಾನವಿತ್ತು. ಅದೇ ಕಾರಣಕ್ಕೆ ಪೂಜ್ಯರ ಸಾಧನೆ ಕುರಿತು ಆರು ಕಂತುಗಳಲ್ಲಿ ನನ್ನ ಅನುಭವ ಹಂಚಿಕೊಂಡೆ.
ವಚನ ವಿಶ್ಲೇಷಣೆಗೂ ಪೂಜ್ಯರ ಪ್ರೇರಣೆಯೇ ಕಾರಣ.
ಸಾವಿರಾರು ಪುಟ ಬರೆಯಬೇಕು, ನೂರಾರು ತಾಸು ವಿಡಿಯೋ ಮೂಲಕ ಮಾತನಾಡಿ ದಾಖಲಿಸುವ ಮನೋಭೂಮಿಕೆಗೆ ಪೂಜ್ಯರ ಪ್ರೇರಣೆಯೇ ಕಾರಣ.

                                  ***

*ವರ್ಷದ ಕೊನೆಗಿನ ಮತ್ತೊಂದು ಬೇಸರ*

ಸಾಹಿತ್ಯ, ಸಂಸ್ಕೃತಿ ಹಾಗೂ ವೈಯಕ್ತಿಕ ಬದುಕಿನ ಸಂಗಾತಿಗಳು, ಹಿರಿಯರಾದ ಡಾ.ಜಿ.ಬಿ.ಪಾಟೀಲ್ ಸಿಂಗಪುರ್ ಪ್ರವಾಸಕ್ಕೆ ಹೋದಾಗ ಅನಾರೋಗ್ಯಕ್ಕೆ ಈಡಾದರು. ಅದು ಸಾವು ಬದುಕಿನ ಸೆಣಸಾಟ. ಆದರೆ ಸುದೈವ ಅವರು ಮರುಜನ್ಮ ಪಡೆದು ವಾಪಾಸಾಗಿದ್ದಾರೆ. ಏರಿತದ ಬದುಕಿನ ಹೊಡೆತದಲ್ಲಿ ಕೆಲವು ಆಘಾತಗಳನ್ನು ತಡೆದುಕೊಳ್ಳಲಾಗುವುದಿಲ್ಲ.‌

ನಾವೇ ಕಟ್ಟಿಕೊಂಡ ಪುಟ್ಟ ಕೋಟೆಯಲಿ ಸಾವಿರಾರು ಜನ ಇರುವುದಿಲ್ಲ. ಈ ಪುಟ್ಟ ಇನ್ನರ್ ಸರ್ಕಲ್ಲಿನಲ್ಲಿ ಇರುವ ಕೆಲವೇ ಕೆಲವರು ಕೆಲ ಕಾಲ ದೂರಾದರೂ ತಡೆದುಕೊಳ್ಳಲಾಗುವುದಿಲ್ಲ.
ಈಗವರು ಮೊದಲಿನಂತಾಗಿ ಜೊತೆಗೆ ನಿಲ್ಲುತ್ತಾರೆಂಬ ಸಡಗರ ಮರುಕಳಿಸಿದೆ.
*ಇನ್ನರ್ ಸರ್ಕಲ್* ಇನ್ನೂ ಗಟ್ಟಿಯಾಗಿ ಉಳಿದು ಸದಾ ಕಾಲ ಉಲಿಯುತಿರಲಿ ಎಂಬ ಸಣ್ಣ ಆಸೆ.

                                ***

*ವಿಶ್ವಾಸ್ ಮುದಗಲ್ ಹಾಗೂ ದಿ ಲಾಸ್ಟ್ ಅವತಾರ್*

ಖ್ಯಾತ ಇಂಗ್ಲಿಷ್ ಕಾದಂಬರಿಕಾರ, ಉದ್ಯಮಿ ವಿಶ್ವಾಸ್ ಮುದಗಲ್ ಅವರ ಹೊಸ ಕಾದಂಬರಿ *ದಿ ಲಾಸ್ಟ್ ಅವತಾರ್* ಬಿಡುಗಡೆಯ ಹೊಣೆಗಾರಿಕೆ ನನ್ನ ಮೇಲೆ ಹಾಕಿದಾಗ ಖುಷಿಯಾಯಿತು.
ಹುಬ್ಬಳ್ಳಿಯ ಸಪ್ನಾ ಬುಕ್ ಹೌಸ್ ಹಾಗೂ ಹಾರ್ಪರ್ ಕಾಲಿನ್ಸ್ ಸಹಯೋಗದ ಸಮಾರಂಭ ತೃಪ್ತಿ ಎನಿಸಿತು.
ಈ ಕುರಿತ ಪತ್ರಿಕಾ ಗೋಷ್ಟಿ ವರ್ಷದ ಕೊನೆ ಕಾರ್ಯಕ್ರಮ.

                                ***

ತೃಪ್ತಿಕರವಾಗಿ ಬರೆಯುವ ಕಲೆಗಾರಿಕೆ ಸಿದ್ಧಿಸಿದೆ ಎಂಬ ಸಮಾಧಾನ. ಇನ್ನೂ ಅರ್ಥಪೂರ್ಣವಾಗಿ ಬರೆಯುವ ಹಾದಿಯಲಿ ಕ್ರಮಿಸಬೇಕು.

ಭೂತ ಮಾಯವಾಗಿದೆ,  ಭವಿಷ್ಯ ಗೊತ್ತಿಲ್ಲ, ವರ್ತಮಾನ ಮಾತ್ರ ನಮ್ಮೊಂದಿಗಿದೆ. ವರ್ತಮಾನದ ಸಮರ್ಥ ಬಳಕೆಯ ಧ್ಯಾನದೊಂದಿಗೆ ಕೊಂಚ ವಿರಮಿಸುವೆ.

*Good bye to 2018*

*ಸಿದ್ದು ಯಾಪಲಪರವಿ*