Friday, September 28, 2018

ಎಲ್ಲವೂ ನೀ ನಾ ಆದಾಗ‌‌

*ಲವ್ ಕಾಲ*

*ಎಲ್ಲವೂ ನೀ ನಾ ಆದಾಗ ಮಾತು ಬೆಳೆಸುವದಾ!*

‘ಹೌದು ಇಷ್ಟೊಂದು ತಕಾರಾರು ಬೇಕಿತ್ತ, ಹೇಳುವುದನ್ನ ನೇರವಾಗಿ ಹೇಳಬೇಕಪ್ಪ.’

‘ನಿಜ ಆದರೆ ಹಾಗೆ ಹೇಳೋಕಾಗಲ್ಲ ಬಂಗಾರ,
ಅರ್ಥ ಮಾಡಿಕೊಳ್ಳಲಾಗದಿದ್ದರೂ ನನ್ನ ಮೇಲಿನ ನಂಬಿಕೆಯಿಂದ ಒಪ್ಪಿಕೊಂಡರೆ ನನಗೂ ಸಮಾಧಾನ’

‘ಇಷ್ಟು ದೂರ ಕ್ರಮಿಸಿದ ಮೇಲೆ ತಿರುಗಿ ಹೋಗಬಾರದು, ಹೋಗುವ ಆಲೋಚನೆ ಅನಾರೋಗ್ಯಕರ, ಇಡೀ ಮನುಷ್ಯ ಸಂಬಂಧಗಳ ಮೇಲೆ ನಂಬಿಕೆ ಹಾಳಾಗುತ್ತೆ.’

‘ಇರುವಷ್ಟು ದಿನ ಪರಸ್ಪರ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.‌ ವಿನಾಕಾರಣ ಏನೋ ನೆಪ ಮಾಡಿಕೊಂಡು ಮನಸು ಕೆಡಿಸಿಕೊಳ್ಳುವದರಲಿ ಯಾವ ಪುರುಷಾರ್ಥವಿದೆ.’

*ನೀನು ಗಂಟೆಗಟ್ಟಲೇ ಹೇಳಿದ್ದನ್ನು ಕೇಳಿಸಿಕೊಳ್ಳುವ ಅನಿವಾರ್ಯತೆ.*

ನಾನು ನನ್ನದೇ ಹಾದಿಯಲ್ಲಿ ನಿನ್ನ ನಿಷ್ಕಾಮವಾಗಿಯೇ ಸ್ವೀಕರಿಸಿದ್ದೆ. ಮಿಲನ ಆಕಸ್ಮಿಕ, ಅದೇ ಎಲ್ಲ ಅಲ್ಲವೇ ಅಲ್ಲ.
ವಯೋಮಾನಕೆ ತಕ್ಕಂತೆ ಮಾತ್ರ ವರ್ತಿಸುವಷ್ಟು ದೇಹ ಸಹಕರಿಸುತ್ತದೆ. ಅತಿಯಾಗಿ ಎಲ್ಲ ದಕ್ಕುವುದಿಲ್ಲ.‌

ದಕ್ಕಿದ್ದನ್ನು ಸಮರ್ಪಕವಾಗಿ ವಿವಾದವಿಲ್ಲದೆ ಅನುಭವಿಸಬೇಕು.‌
ಅನುಮಾನ, ಅವಮಾನ, ಹಟಮಾರಿತನದ ಮಾತೇ ಬರಬಾರದು.
ಆದರೂ ಬರುತ್ತೆ, ಮಾತು-ಮಂಥನಗಳ ಮೂಲಕ ಕುದಿಯಬೇಕು, ಭಾವನೆಗಳು ಬೇಯಬೇಕು ಅಂದಾಗ ಬಾಂಡೇಜ್ ಗಟ್ಟಿಗೊಳ್ಳುತ್ತೆ.‌
ಅರ್ಧಕ್ಕೆ ಬಿಟ್ಟು ಓಡಿ ಹೋಗುವುದು ಅಮಾನವೀಯ, ಅಸಹ್ಯ.

ಕಾಮದಾಸೆಗೆ ಕೂಡಿದರೆ ಹಾದರವಾಗುತ್ತೆ. ಅನೈತಿಕವಾಗುತ್ತೆ. ನಮ್ಮ ಬಾಂಧವ್ಯ ಹಾಗಲ್ಲ.‌ ಅದರಾಚೆಗೆ ಅನೇಕ ಸಂಗತಿಗಳಿವೆ.

ಓದು-ಬರಹ-ಸಂಸ್ಕೃತಿಯ ಹೊಳಪಿದೆ.‌
ಆಧ್ಯಾತ್ಮಿಕ ಚಿಂತನೆಗಳಿವೆ, ಇವೇ ಹಾದಿಯಲಿ ಕೊನೆ ದಿನಗಳು ಗಟ್ಟಿಯಾಗಿ ಉಳಿದುಕೊಳ್ಳಬೇಕು.

ದೇಹ ಯಾವಾಗ ದುರ್ಬಲವಾಗುತ್ತೋ ಗೊತ್ತಿಲ್ಲ. ಆರೋಗ್ಯ ಕೈ ಕೊಟ್ಟರೆ ಏನೂ ಬೇಕಾಗಲ್ಲ.
ಆರೋಗ್ಯ ಕೆಟ್ಟು ಮುಪ್ಪು ಆವರಿಸಿದರೂ ಬಾಂಧವ್ಯ ಉಳಿಯಬೇಕಾದರೆ ಕಾಮದ ವಾಸನೆ ಹೊಡೆಯಬಾರದು.

ದೇಹ ಸಾಮಿಪ್ಯವಿಲ್ಲದೆ ಪರಮಸುಖ ಅನುಭವಿಸುವ ತಾಕತ್ತು ಆಧ್ಯಾತ್ಮಿಕ ಬದುಕಿಗಿದೆ.

ಹೇಳುವುದು ಹೇಳಿಯಾದ ಮೇಲೆ ಮತ್ತೆ ಮತ್ತೆ ಹೇಳಿದ್ದನ್ನು  ಹೇಳುವ ಉದ್ದೇಶ ಇಷ್ಟೇ, ಅದು ಮನದಲ್ಲಿ ದಾಖಲಾಗಿ ಉಳಿಯಲೆಂಬ ಆಶಾವಾದ.

ರೋಸಿಕೊಳ್ಳುವುದರಿಂದ ಏನೂ ಪಡೆಯಲಾಗದು, ಕಳೆದುಕೊಂಡು ಹುಚ್ಚರಾಗುತ್ತೇವೆ.‌
ಎಲ್ಲಾ ತಿಳಿದು ಹುಚ್ಚರಾಗುವಷ್ಟು ನಾವು ದಡ್ಡರಲ್ಲ.
ಮಾತು, ಜಗಳ, ವಾದ, ವಿವಾದಗಳೂ ನಮ್ಮನ್ನು ಮುನ್ನಡೆಸಲಿ.

ಸಿಕ್ಕಾಗ ಸಿಗುವ ಸಾಮಿಪ್ಯ ಸುಖದ ಹಂಬಲದಲಿ, ಮೈಮನಗಳ ಪುಳಕದಿಂದ ಕಾಯುತ್ತಲಿರೋಣ.

*ಸಿದ್ದು ಯಾಪಲಪರವಿ*

Read my thoughts on YourQuote app at https://yq.app.link/DmwrpAjqAQ

Wednesday, September 26, 2018

ಸಾಗಿರಲಿ ಮೌನ ಮೆರವಣಿಗೆ

*ಸಾಗಿರಲಿ ಮೌನ ಮೆರವಣಿಗೆ*

ಯಾಕೋ ಕಾಣೆ ಈ ವ್ಯಾಮೋಹ
ಬಂಧನದ ಗೊಂದಲದ ಭ್ರಮಾಲೋಕ

ಕಳೆಯುವುದಿಲ್ಲ‌ ಯಾರೂ ಒಮ್ಮೆ ಕೂಡಿ
ಆಡಿ ನಲಿದ ಮೇಲೆ ಅಲ್ಲ ಇಲ್ಲಿ‌ ಯಾರೂ
ಮೇಲೆ ಕೆಳಗೆ ನೆಲೆ ಒಂದೇ ಒಲವ ಬೆಲೆಗೆ

ನೀ
ನಾ

ಆದ ಮೇಲು ಸಣ್ಣ ಅಳುಕು ನನಗಾಗಿಯೇ
ಇದು ಎಂಬ ಕಳವಳ ಕಸಿವಿಸಿಯ ಹುಸಿ
ಮುನಿಸು

ಬಂದು ಬಿಗಿದಪ್ಪಿ ಮುತ್ತಿನ ಮಳೆಯಲಿ
ತೊಯ್ದು ತೊಪ್ಪೆಯಾದಾಗ ಬರೀ ಶೂನ್ಯ
ಬೇರೇನೂ ಬೇಡವೇ ಬೇಡೆಂಬ ಗುನುಗುವಿಕೆ

ಅಗಲಿದರೆ ಸಾಕು ಮೈಮನ ಹಗುರಾದ
ಮೇಲೆ ಮತ್ತದೇ ರಾಗ ಅದೇ ಹಾಡು

ಯಾಕೆ ಹೀಗೆಂಬ ಅರಳಿ ಕೆರಳುವಿಕೆಯ
ತವಕಕಿಲ್ಲ‌ ಆದಿ ಅಂತ್ಯ

ಚಿನ್ನಾಟವಾಡಿ ನಲಿಯುವ ಬೆಕ್ಕಿಗೂ
ಹಾಲಿನ ಚಿಂತೆ ನೆಲುವಿಗೆ ಹಾರುವ
ಧಾವಂತ

ಅದು ಇದು ಅವರು ಇವರು ಅಲ್ಲಿ
ಇಲ್ಲಿ ನಾನಿರದಿರೆ ಹೇಗೆಂಬ ವ್ಯರ್ಥ
ಪ್ರಶ್ನೆಗಿಲ್ಲ ಇಲ್ಲಿ ಉತ್ತರ

ಯಾರಿಗೆ ಯಾರೂ ಅಲ್ಲ ಅನಿವಾರ್ಯ
ಬರೀ ಮನದ ತವಕಕೆ ಅನಿವಾರ್ಯತೆಯ
ಸೋಂಕು

ಹಿಡಿದರೆ ಜೀವಂತ ಹಿಸುಕಿದರೆ ಅಂತ್ಯ
ಸತ್ಯದ ಒರೆಗಲ್ಲಿಗಿದು ಅಲ್ಲ ಸಕಾಲ

ಕೇಳಿದರೆ ಸಾಕು ನಾನೀ ತತ್ತರ
ಏನಾದರಾಗಲಿ ಉಳಿದಿರಲಿ ಕಸುವು
ಒಲವ ಹಸುವು

ನಾನೀ ಬಿದ್ದು
ಹೋಗುವತನಕ ಸಾಗಿಯೇ ಇರಲಿ
ಬರೀ ಸದ್ದು ಮಾಡದ
ನಿಶಬ್ದ ಮಾತುಗಳ ಮೌನ ಮೆರವಣಿಗೆ.

  *ಸಿದ್ದು ಯಾಪಲಪರವಿ*

Friday, September 21, 2018

ಜಗದ ಹಂಗ ಹರಿದು

*ಜಗದ ಹಂಗ ಹರಿದು*

ಈ ಜಗದ ಹಂಗ ಹರಿದು ಬೆರೆಯುವ
ಸಂಗದಿ ಮೈಮರೆಯದೇ ಮೆರೆಯೋಣ
ನಾವು ಕೇವಲ ನಮಗಾಗಿ

ಯಾರದೋ ಹಂಗು ಯಾವುದೋ‌ ಗುಂಗು
ಇನ್ನೇತಕೆ ಅವರಿವರ ಹಂಗು ನಮ್ಮ
ಪಾಡಿಗೆ ನಾವಿರೋಣ

ಒಡಲ ಕಿಚ್ಚ ತಣಿಸಲು ಮನದ ಬಿಸಿಯಲಿ
ಬೇಯುತ ಆಚೀಚೆ ಅಲುಗದೆ ಟೀಕೆಗೆ
ನಲುಗದೆ ನಮ್ಮ ಭಾವನೆಗಳ ರಮಿಸೋಣ

ಅತ್ತರೂ ನಕ್ಕರೂ ಸುಖಿಸಿ ದುಃಖಿಸಿದರೂ
ನಮಗೆ ನಾವೇ ರಮಿಸಿ ವಿರಮಿಸಬೇಕು

ಯಾರೂ ಇಲ್ಲ ನಮ್ಮ ಬೆನ್ನು ತಟ್ಟಿ
ಅಹುದೆನಲು ಇದು ಅವನ ಮಹಿಮೆಯ
ಲೀಲಾವಿನೋದ

ಕಳೆದುಹೋದರೆ ಪರಮ
ಮೂರ್ಖರು ನಾವು ಈ ಸೋಗಲಾಡಿ
ಸ್ವಾರ್ಥಿಗಳ ಜಗದಲಿ

ಕಾಯತಲಿವೆ ಸಾವಿರ ಕುಹಕ
ಕಣ್ಣುಗಳು ಕಣ್ಣಾಮುಚ್ಚಾಲೆಯಾಡುತ

ನಮ್ಮ ಕಣ್ಣು ಮುಚ್ಚಿ ಕರಳು
ಬಗೆದು ಗಾಳಿಗೆ ತೂರಿ ಮಾನ
ಹರಾಜಿಗಿಡಲು ಕೈಗೆ ಸಿಕ್ಕರೆ ಸಾಕು

ಕಲ್ಲು ತೂರಾಟ ಚಾರಿತ್ರ್ಯದ ಹುಯಿಲು
ಬರೀ ಗುಮಾನಿ ಹೊಸ ಚರಿತೆಗೆ
ಆಹಾರ ನಾವು ನೀಚ ಹೊಟ್ಟೆಗೆ

ನಿದ್ದೆಯಲು ಎಚ್ಚರಿದ್ದು ಮಲಗದೇ
ದಣಿವಾರಿಸಿ ಉಣ್ಣದೇ ಹೊಟ್ಟೆ
ತುಂಬಿಸಿಕೊಳುವ ಹೊಸ ಇತಿಹಾಸದ
ರೂವಾರಿಗಳು ನಾವು ಬದುಕಬೇಕು
ಕೇವಲ ನಮಗಾಗಿ ನಮ್ಮ ಅಸ್ಮಿತೆಗಾಗಿ.

*ಸಿದ್ದು ಯಾಪಲಪರವಿ*

Thursday, September 13, 2018

ಬತ್ತದ ಚಿಲುಮೆ

*ಬತ್ತದ ಚಿಲುಮೆ ತೀರದ ದಾಹ*

ಹೊಸ ಹುಡುಗಿಯ
ಮುಲುಕಾಟದ
ನಗು ಕೇಕೆ ನನ್ನ ಕಳವಳವ
ದೂರ ದೂಡಿದೆ

ಕಣ್ಣು ಮುಚ್ಚಿ ಬಯಲಾಗಿ
ತೆರೆದುಕೊಳುವ ಮಹಾ ಕಾವ್ಯದ
ಪ್ರತಿ ಅಕ್ಷರವ ಅರಿತು ಅರೆದು
ಕುಡಿದು ದಕ್ಕಿಸಿಕೊಳ್ಳುವ
ಸಂಭ್ರಮಕೆ ಕೊನೆಯಿರದ
ಬತ್ತದ ಜೀವನೋತ್ಸಾಹ

ಹೆಚ್ಚು ಕಾಲ ಹಾಯಾಗಿ
ನಿನ್ನ ಮಡಿಲ ಮಗುವಾಗಿ
ಕಡಲ ಸಿರಿಯ ಸವಿಯುವ
ಚಂದಿರನಾಗಿ

ಮಧುಪಾನಿಸುವ
ದುಂಬಿಯಾಗಿ
ಮದವೇರಿದ ಆನೆಯಾಗಿ
ಕುಣಿದು ನೆಗೆಯುವ
ಕುದುರೆಯಾಗಿ

ಹಾಡಿ ಕುಣಿದು ಹಾರಾಡಿ
ನಿನ್ನ ಮುಗಿಲು ಮುಟ್ಟುವ
ಸಂಭ್ರಮ

Monday, September 10, 2018

ಮಾಡಿದೆನೆನಬೇಡ

ಮಾಡಿದೆನೆನಬೇಡ: ಅನಗತ್ಯ ಪೈಪೋಟಿಯ ಹಟವೂ ಬೇಡ

ಹೀಗೆ ಮನಸು ಹಟ ಮಾಡಿಬಿಡುತ್ತೆ, ವಿನಾಕಾರಣ ಅನಬಹುದು ಆದರೆ ವಿನಾಕಾರಣ ಅಲ್ಲ.‌‌
ಮನಸಿನ ಜಂಜಾಟಕೆ ನೂರಾರು ಕಾರಣಗಳು, ನೂರೆಂಟು ಆತಂಕಗಳು‌. ಕಾರಣ ಸ್ವಾರ್ಥ, ಮತ್ತೆ ಇನ್ನೂ ಏನೇನೋ !

ನಿಸ್ವಾರ್ಥ-ನಿರ್ಮಲ-ನಿರ್ಲಿಪ್ತರಾಗಿ ಆಲೋಚಿಸಿದಾಗ ಎಲ್ಲವೂ ಗೌಣ. ಇಂತಹ ಅನೇಕ ಪದಗಳೊಂದಿಗೆ ನಮ್ಮ ಮುಖಾಮುಖಿ ಅಗುತ್ತೆ ಆದರೆ ನೋವು ಅನುಭವ ಆಗದ ಹೊರತು ಆಳಕ್ಕಿಳಿಯುವುದಿಲ್ಲ.

ಒಂದೇ ವಿಷಯಕ್ಕೆ ಇಬ್ಬರು ಹಟ ಮಾಡಿದರೇ ಮುಗಿದೇ ಹೋಯಿತು.‌ ಯಾರಾದರು ಒಬ್ಬರು ಹಿಂದೆ ಸರಿಯಬೇಕು, ಸರಿಯದಿದ್ದರೆ ನಮ್ಮ ಬಾಂಡೇಜುಗಳ ಕತೆ ಮುಗಿದಂತೆ.

*ಮಾಡಿದೆನೆನ್ನಬೇಡ ಲಿಂಗಕ್ಕೆ, ಮಾಡಿದೆನೆನ್ನಬೇಡ ಜಂಗಮಕ್ಕೆ ಮಾಡಿದೆನೆಂಬುದು ಮನದಲಿ ಕಾಡಿದರೆ ಏಡಿಸಿ ಕಾಡಿತ್ತು ಶಿವನ ಡಂಗುರ* ಎಂಬ ಬಸವಣ್ಣನ ಸಾಲುಗಳ ಎಚ್ಚರಿಕೆ ನಮ್ಮನ್ನು ಕಾಡುತ್ತಿರಬೇಕು. ಇಲ್ಲದಿರೆ ಅನಗತ್ಯ ಅಹಂಕಾರದ ಶನಿ ಹೆಗಲೇರಿಬಿಡುತ್ತದೆ.

ನಮ್ಮ ಜೀವಪಯಣದಲಿ ಹತ್ತಾರು ಜನರಿಗೆ ಮಾರ್ಗದರ್ಶನ ಮಾಡುವ ಅವಕಾಶ ಸಿಕ್ಕಾಗ ಯಾವುದೇ ಅಳುಕು, ನಿರೀಕ್ಷೆ ಹಾಗೂ ಪ್ರತಿಫಲಾಪೇಕ್ಷೆ ಇಲ್ಲದೇ ದಾರಿ ತೋರಬೇಕು.
ಅಕಸ್ಮಾತ ಅವರು ಬಾನೆತ್ತರ ಬೆಳೆದರೆ ಅವರ ಗ್ರಹಿಕೆ ಮತ್ತು ಪರಿಶ್ರಮವೇ ಕಾರಣ ಹೊರತು ಸಂಪೂರ್ಣ ನಮ್ಮ ಮಾರ್ಗದರ್ಶನವಲ್ಲ ಎಂಬ ವಾಸ್ತವದ ವಿವೇಚನೆ ಇರಬೇಕು.‌

*ನಾನೇ ಕಾರಣ, ನನ್ನಿಂದಲೇ ಎಲ್ಲ* ಎಂದು ಬೀಗಬಾರದು.
ಬೀಗುವಿಕೆಗಿಂತ ಬಾಗುವಿಕೆಯಲಿ ಸುಖವಿದೆ.‌
‘ಏಣಿಯಂತೆ ಬಳಸಿ ಒದ್ದರು’ ಎಂಬ ನೆಗೆಟಿವ್, ಪುರಾತನ ಮಾತು ಈಗ ಅಪ್ರಸ್ತುತ.

ಮತ್ತೊಮ್ಮೆ ಸಹಕಾರ, ಸಲಹೆ ಕೇಳಿದವರಿಗೆ ಹಿಂದಿನ ಕಹಿ ಅರುಹದೇ ಉತ್ಸಾಹದಿಂದ ಪ್ರೋತ್ಸಾಹಿಸಬೇಕು.
ನಾವೂ ಹರಿವ ನದಿಯಂತೆ ಸಾಗುತಿರಲೇಬೇಕು.
ಮೈ ತೊಳೆದುಕೊಂಡವರು, ಬೊಗಸೆಯಲಿ ನೀರು ಹಿಡಿದವರು, ಕಾಲು ಅಲುಗಾಡಿಸಿ ಹಾಯ್ ಅಂದುಕೊಂಡವರು ಆ ಕ್ಣಣ ಖುಷಿ ಪಟ್ಟಿರುತ್ತಾರಲ್ಲ‌, ಆ ಖುಷಿಗೆ ಅಷ್ಟಾದರೂ ನಮ್ಮ ಕೊಡುಗೆ ಇದ್ದರೆ ಅದೇ ಬದುಕಿನ ಸಾರ್ಥಕತೆ.

ಇಂದು ಇವರು, ನಾಳೆ ಅವರು, ಮುಂದೆ ಇನ್ಯಾರೋ, ಆದರೂ ಬದುಕ ಬಂಡಿ ಖುಷಿ ಹಂಚುತ್ತ ಸಾಗುತ್ತಲೇ ಇರಬೇಕು. ಇಂದು ಈ ಊರು, ಮುಂದೆ ಆ ಊರು…

  ಸಿದ್ದು ಯಾಪಲಪರವಿ

Sunday, September 9, 2018

ಅಮರ ಪ್ರೇಮಕೆ ದೇವನೊಲುಮೆ

ಅಮರ ಪ್ರೇಮಕೆ ದೇವನೊಲುಮೆ

ಬಾನಲಿ ಹಾರಾಡುವ ಜೋಡಿ
ಹಕ್ಕಿಗಳೇ ಎಷೊಂದು ಉಲ್ಲಸಿತ
ಹಾರಾಟ ದಣಿವರಿಯದ ಸಂಚಲನ

ರೆಕ್ಕೆ ದಣಿದು ಹಾಡು ಮುಗಿದ
ಮೇಲೆ
ಒಂದಿಷ್ಟು ಕೊಂಬೆ ಮೇಲೆ
ವಿರಮಿಸಿ ಗುಟಕುಗಳ
ವಿನಿಮಯದ ಕಚಗುಳಿ
ಮತ್ತದೇ ಹಾರಾಟ
ಬಾನಂಗಳದಲಿ

ಬೇಟೇಗಾರರು ಬಂದಾರು
ನಿಮ್ಮನು ಕೊಂದಾರು ಎಂದಿಲ್ಲದ
ಭೀತಿ
ನಿಮಗೆ ನಿಮದೇ ಆದ
ಧಾಟಿ

ಜೋಡಿ ಸಿಕ್ಕ ಮೇಲೆ ಸಾವಿಗಿಲ್ಲ
ಭೀತಿ
ಒಮ್ಮೆ ಸಾಯುವುದು ಇದ್ದೇ ಇದೆ

ಬದುಕನನುಭವಿಸುವ ಪರಿಗೆ
ಸಾವಿನ ಹಂಗಿಲ್ಲ ನೋವಿನ
ಗುಂಗೂ ಇಲ್ಲ

ಭಿನ್ನ ಗೂಡುಗಳ ಸೇರಿ ಒಂಟಿಯಾಗಿ
ನರಳುವ ಜಂಜಡವ ದೂಡಿ

ಮತ್ತೆ ಮತ್ತೆ ಮೇಲೇರುವ ಮೇಲೆ
ಹಾರುತಲೇ ಇರುವ ನಿಲ್ಲದ ತವಕ

ತಥಾಸ್ತು ಎಂದಭಯವ ಕರುಣಿಸಿರುವೆ
ಹಾರಿ ಹಾಡಿ ಕುಣಿದು ಜಗದ
ಜಂಜಡವ ಮರೆತು ಮೆರೆಯಲು
ಮನದ ನೋವ ಮರೆಯಲು.

---ಸಿದ್ದು ಯಾಪಲಪರವಿ

ಈಗ ಹೊಸ ಇತಿಹಾಸ

ಈಗ ಹೊಸ ಇತಿಹಾಸ

ಯಾರೂ ಊಹಿಸಲಾಗದ ಕೊಡಲಾಗದ  ನೀಡಲಾಗದ
ಯಾರಿಗೂ ಕೊಡಲು ಬಾರದ ಕೊಡಲು ನಿರಾಕರಿಸಿದ ಅನುರೂಪದ ಕಾಣಿಕೆಯ ಅಂಗೈಯಲಿ ಹಿಡಿದು ನಸು ನಕ್ಕಾಗ ಬೆಚ್ಚಿ ಬೆರಗಾದೆ.

ಬಿಡಲಾಗದೆ ಚಡಪಡಿಸಿ ಅಂಗಲಾಚಿ
ಬೆಂಬಿಡದ ಭೂತ ನಾ ಎಂದರಿತ
ನೀ ಕೊಂಚ ಅರಳಿದೆ ಕೆರಳದೆ

ನಿಧಾನದಿ ತೂರಿ ಬಂದ ಭಾವ
ಬಂಧಗಳಲಿ ಬಂಧಿಯಾದೆ ಶಬ್ದಗಳ
ದಿವ್ಯಾಲಂಕಾರದ ಹೊಳಪಿಗೆ

ನಿತ್ಯ ನಿನ್ನ ಧ್ಯಾನಿಸುತಿರೆ ಇನ್ನೇನು
ನಿನ್ನ ಅಂತರಂಗದಿ ಅವಿತು ದುಃಖಿಸುವ ಗಾಯಗಳಿಗೆ ಮುಲಾಮು ಸಿಕ್ಕಾಗ
ಕರಗಿ ನೀರಾಗಿ ನೀನಾಗಿ ನೀನೇ
ಕೈಹಿಡಿದು ಮೇಲೆ ಬಂದೆ

ಮನದ ತಳಮಳ ಮಂಗಮಾಯ
ಅಂತ್ಯಗೊಂಡ ದುಗುಡ

ಚಾರಿತ್ರ್ಯದ ಸೋಗಿನ ಮುಖವಾಡದ
ಮುಸುಕ ಕಳಚಿ
ಹಂಗ ಹರಿದು ಸಂಗ
ಬೇಡಿ ಓಡೋಡಿ ಬಂದೆ

ತೋಳಬಂಧನದಿ ಕರಗಿ ಹೂತಾಗ ಸವಿಮುತ್ತುಗಳ ಸರಮಾಲೆ ತೊಡಿಸಿ

ಮೇಲೆಳೆದು ಅಡಿಯಿಂದ ಮುಡಿಯವರೆಗೆ ನಾಲಿಗೆಯ ನರ್ತನ

ಹಗಲು ರಾತ್ರಿಯಾಗಿ ಮೈಮನಗಂಟಿದ
ಲಜ್ಜೆ ಸರ ಸರ ಜಾರಿ ಅರಳಿದ
ಪರಿಗೆ ಇನ್ನಿಲ್ಲದ ತಲ್ಲಣ

ಮೈಮನಗಳ ಚಲ್ಲಾಟದಲಿ ಉಕ್ಕಿ ಹರಿದ ಉನ್ಮಾದಕೆ ಚಿಮ್ಮಿದ ರಸಧಾರೆ

ಕಳೆದು ಹೋದ ಇತಿಹಾಸದಲಿ
ಒಲುಮೆಯ ಒಲವಿಲ್ಲದ ಮುಗಿದ ಅಧ್ಯಾಯದಲಿ ಸಂತಸಕಿರಲಿಲ್ಲ
ಕೊಂಚವೂ ಜಾಗ

ಅನುಮಾನ , ಅಪಮಾನಗಳಲಿ ಬೆಂದು
ಬಾಡಿ ಹೋದ ಭಾವನೆಗಳು ಕರಗಿ
ಹೋದ ಕನಸುಗಳು

ಅಯ್ಯೋ ಈ ಹೇಸಿ ಬದುಕೇ ಎಂದು
ಹಳಹಳಸಿ ಉನ್ಮಾದಗಳ ಅದುಮಿಟ್ಟ ಜೀವಕೀಗ ಇನ್ನಿಲ್ಲದ ಹೊಸ ಚೈತನ್ಯ

ಪ್ರೀತಿ-ಪ್ರೇಮ-ಪ್ರಣಯದಾಟದ ಗಮ್ಮತ್ತಿಗೆ
ಹಾರಿ ಹಾಡಿ ಕುಣಿದು ಕುಪ್ಪಳಿಸುವ
ಮನಕೀಗ
ಎಲ್ಲವೂ ನೀನೇ ನಿನಗೆ ನಾನೇ
ಎಂದು ಹಾಡುವ  ಹಾಡಿಗೆ
ಲಯ ರಾಗ ತಾಳ
ಎಲ್ಲವೂ ನೀನೇ ನೀನೇ.

---ಸಿದ್ದು ಯಾಪಲಪರವಿ

Tuesday, September 4, 2018

ಲವ್ ಕಾಲಕೂ ಮುನ್ನ

*ಲವ್ ಕಾಲಕೂ ಮುನ್ನ…*

ಭಾವ ಪ್ರಪಂಚದಲ್ಲಿ ತೇಲಾಡಿ ಸುಖ ಅನುಭವಿಸುದೊಂದು ಬಗೆಯ ಉನ್ಮಾದ. ಪ್ರೀತಿ-ಪ್ರೇಮ-ಪ್ರಣಯ ದೌರ್ಬಲ್ಯ ಏನೆಂದರೂ ಒಂದೇ. ಮುಂದೇ ಅದೇ ಪ್ರೀತಿ ವೈರಾಗ್ಯವಾಗಿ ಭಕ್ತಿಯ ಸ್ವರೂಪ ಪಡೆಯಬಹುದು.

*ಪ್ರೀತಿ ಕಣ್ಣು, ಕೈಕಾಲು ಏನೂ ಇಲ್ಲದೆ ಹರಿಯುವ ನದಿ…*

ಬಾಲ್ಯದಲ್ಲಿ ತಾಯಿ-ತಂದೆ, ಕೌಟುಂಬಿಕ ವಾತಾವರಣದ ಪ್ರೀತಿ ಯೌವನಕೆ ಕಾಲಿಟ್ಟ ಕೂಡಲೇ ಅನುರಾಗವಾಗಿಬಿಡುತ್ತೆ.
ಹರೆಯದಲ್ಲಿ ಕಚಗುಳಿ ಇಡುವ ಹುಡುಗಿ/ ಹುಡುಗಿಯರಿಗೆ ಲಿಂಗ, ವಯಸ್ಸು, ಜಾತಿ, ಧರ್ಮಗಳ ತರತಮವಿಲ್ಲ.
ನಂಬಿ ಆರಾಧಿಸಿ ನುಗ್ಗುವುದಷ್ಟೇ ಗೊತ್ತು.

ಲೈಲಾ-ಮಜ್ನು, ಸಲೀಮ್-ಅನಾರ್ಕಲಿ, ರೋಮಿಯೋ-ಜೂಲಿಯೆಟ್ ಮಾತ್ರ ನೆನಪಾಗುತ್ತಾರೆ. ಹಾಗಾದರೆ ಉಳಿದ ನೂರಾರು ಕೋಟಿ ಮನುಜರು ಪ್ರೇಮಿಗಳಲ್ಲವೆ?

ಪ್ರೀತಿಯನ್ನು ದಕ್ಕಿಸಿಕೊಂಡು ಗೆದ್ದವರು, ಸೋತು ರಾಜಿಯಾಗಿ ಹೊಸ ಬದುಕು ರೂಪಿಸಿಕೊಂಡ ಕೋಟಿಗಟ್ಟಲೆ ಮನುಜರು ಪ್ರೇಮಿಗಳಾಗುವುದು ಅಸಾಧ್ಯ.
ಅವರೆಲ್ಲ ಬರೀ ಮನುಷ್ಯರು ಅಷ್ಟೇ!

ಅವರಿಗೆ ಬೇರೆಯವರ ಪ್ರೇಮಲೋಕ ನೋಡುವ ಅಧಿಕಾರ ಮಾತ್ರ ಇದೆ ಆದರವರು ಪ್ರೇಮಿಗಳಲ್ಲ. ರಾಜಿಯಾಗಿ ಬದುಕಿನುದ್ದಕ್ಕೂ ಒದ್ದಾಡುವ ಸಾಮಾನ್ಯ ಪ್ರಾಣಿಗಳು ಈ ಪ್ರೇಮಿಗಳ ದೃಷ್ಟಿಯಲ್ಲಿ.

ಹರೆಯದಲ್ಲಿ ಪ್ರತಿಯೊಬ್ಬರೂ ಪ್ರೇಮಿಸುತ್ತಾರೆ, ಕೆಲವರು ಇನ್ನೇನು ಪ್ರೇಮಿಸಬೇಕು ಅನ್ನುವುದರೊಳಗೆ ಬಂಧನದಲ್ಲಿ ಕಳೆದು ಹೋಗಿ ಮರುಗುತ್ತ ಕೊನೆತನಕ ಪ್ರೀತಿಗಾಗಿ ಹಂಬಲಿಸುತ್ತ, ಹಂಬಲಿಸುತ್ತಾ ಬದುಕ ಪಯಣ ಮುಗಿಸಿ ಬಿಡುತ್ತಾರೆ.
ಮತ್ತೆ ಕೆಲವರು ಅಯ್ಯೋ ಬದುಕು ಇಷ್ಟೇ ಅಂದುಕೊಳ್ಳುತ್ತಿರುವಾಗ ಅನಿರೀಕ್ಷಿತವಾಗಿ ಪ್ರೇಮಲೋಕದಲಿ ಎಂಟ್ರಿ ಕೊಟ್ಟುಬಿಡುತ್ತಾರೆ. ಅದಕೆ ಈ ಪ್ರೇಮಕೆ ವಯಸಿನ ಹಂಗಿಲ್ಲ ಅಂದದ್ದು.

ಯಾವ ಪ್ರೀತಿಯೂ ಹಾದರ, ಅನೈತಿಕ ಅಲ್ಲ just imbalance happening ಆದರೆ ನಿಭಾಯಿಸವುದು ಹೆಚ್ಚು ಕಡಿಮೆ ಆದರೆ ಎಲ್ಲ ಬಟಾ ಬಯಲು. ಹಾಗಾಗಬಾರದೆಂಬ ಇರಾದೆ ಪ್ರೇಮಿಗಳಿಗೆ ಇರುತ್ತೆ…
ಸಮಯ ಸಂದರ್ಭ ಅವರನ್ನು ಸಿಗಿಸಿಬಿಟ್ಟಾಗ just helpless.

ಮುಂದೇನು ? ಏನೂ ಇಲ್ಲ, ಅನುಭವಿಸಿ ಎದುರಿಸಬೇಕು ಹೆದರದೇ…
ಹೆದರುವ ಮನಸ್ಥಿತಿ ಕಳೆದುಕೊಂಡ ಮನಸು ಬೇರೆ ಹಾದಿ ಹಿಡಿದು ಹೋಗುವುದು ಸಹಜ. ಈ ಬದುಕಿನಲ್ಲಿ ಯಾವುದೂ ಅಸಹಜವಲ್ಲ.

ಎಳೆ ಪ್ರಾಯದಲ್ಲಿ ಯುವಕರು ಪ್ರೀತಿ ಮಾಡಲಿ, ಆದರೆ ಅಸಹ್ಯ, ಅತಿರೇಕವೆನಿಸಿ ಜೀವ ತೆಗೆಯುವ ಅಥವಾ ಕಳೆಯುವ ಮನೋವಿಕಾರ ತಲುಪದೇ ಕೇವಲ ಮನದ ಲೆಕ್ಕಾಚಾರದಲ್ಲಿ ಕಾಲ ದೂಡಲಿ ಯಾರನ್ನೂ ದೂರಿ ದೂರ ದೂಡದೇ.

ಹಿಡಯದ, ಬಿಡಲಾಗದ, ಮಾಡದ, ಮಾಡಲಾಗದ, ಮಾಡದಂತಿರುವ ಮಾಟದೊಳು ತಾನಿದ್ದು ಇರದಂತಿರಬೇಕು.
ಸಹಜವಾಗಿ ದಕ್ಕಿದ್ದು ಸುಂದರ, ಅಸಹಜ ಸದಾ ವಿಕೃತವೆಂಬ ಅರಿವಿದ್ದರೆ ಸಾಕು.

ನಮ್ಮ ತಲ್ಲಣಗಳಿಂದ ಬೇರೆಯವರ ಜೀವ ಹಿಂಡಿ ಹಿಪ್ಪಿ ಮಾಡುವುದು ಬೇಡ.
ಅವ್ವ-ಅಪ್ಪ, ಬಂಧು-ಬಳಗ, ಸಮಾಜ-ಕುಟುಂಬ ವ್ಯವಸ್ಥೆಗೆ ಅಪಾಯಕಾರಿ ಹೊರೆಯಾಗದ ಎಚ್ಚರಿಕೆ, ವಿವೇಚನೆ ಪ್ರೇಮಿಗಳಾದವರಿಗೆ ಇರಲಿ.
ಸಂಯಮ, ಸಂವೇದನೆಗಳ ಪ್ರತಿಫಲವೇ ಪ್ರೀತಿ-ಪ್ರೇಮ-ಪ್ರಣಯ.
*ಅದರ ಜಾಡು ಹಿಡಿದ ಓದು-ಬರಹ, ಕತೆ-ಕವಿತೆ-ಕಾದಂಬರಿ, ಹಾಡು-ಸಂಗೀತ-ಭಾವಗೀತೆ*.
ಮನುಷ್ಯ ತನ್ನ ಖುಷಿಗಾಗಿ ಓದುತ್ತ, ಬರೆಯುತ್ತ, ಹಾಡುತ್ತ, ಕುಣಿಯುತ್ತ ಮನಸನು ರಂಜಿಸಿಕೊಳ್ಳುತ್ತಾನೆ. *ಯಾರು ಕಿವಿಮುಚ್ಚಿದರು ನನಗಿಲ್ಲ ಚಿಂತೆ*.
“ಹಾಡುವುದು ಅನಿವಾರ್ಯ ಕರ್ಮ ನನಗೆ” ಎಂದು ಹಾಡುತ್ತಲೇ ಇರುತ್ತಾನೆ.

ಈ ಪ್ರಪಂಚದಲ್ಲಿ ಬರೀ ವಾಸ್ತವವಾದಿಗಳು, ನಾಸ್ತಿಕರು ಇದ್ದರೆ ಬದುಕು ನೀರಸವಾಗುತ್ತಿತ್ತು.
ಅವಾಸ್ತವ ಎಂಬ ಪ್ರೀತಿಗೆ ಮೈಯಲ್ಲ ಕಾಲು.
ಎಂತಹ ಕ್ರೂರಿಯೂ ಈ ಜಾಲದಲಿ ತನಗರಿವಿಲ್ಲದಂತೆ ಕಳೆದು ಹೋದಾಗ ದಿಢೀರ್ ಅಂತ ತನ್ನ ನಿಲುವಿಗೆ ಮರುವ್ಯಾಖ್ಯಾನ ಮಾಡಿಕೊಂಡು ಬಿಡುತ್ತಾನೆ.

ದೇಹ-ಮನಸು ಬೇರೆ ಬೇರೆಯಾಗಿ ಇರುವುದಿಲ್ಲವಾದರೂ ಬೇರೆ ಬೇರೇಯೇ.
ದೇಹ ದಣಿದು ಮುಪ್ಪಾಗುತ್ತದೆ, ಮನಸಿಗೆ ಮುಪ್ಪು, ಸಾವು ಏನೂ ಗೊತ್ತಿಲ್ಲ. ಅಲೌಕಿಕರು ಇದಕೆ ಆತ್ಮವೆಂದರೆ, ಲೌಕಿಕರು ಮನಸು ಅನ್ನುತ್ತಾರೆ ಅಷ್ಟೇ…

ಇದೆಂದಿಗೂ ಮುಗಿಯದ, ಅರ್ಥವಾಗದ ಮೆಲ್ಲುಸಿರ ಸವಿಗಾನ, ಕ್ಷಿಪ್ರ ಕಲರವ, ಅರಿವಿನ ಅನುಸಂಧಾನ.
ಮುಪ್ಪಿನಲಿ ಹರೆಯದ ಒಲವು ನೆನಪಾದರೆ ಮನಸು ಅರಳುತ್ತದೆ. ಹರೆಯದಲ್ಲಿ ಬೆದರಿ ಕೆರಳುತ್ತದೆ, ಎರಡೂ ಒಂದೇ.
ಅರಳಿ ಕೆರಳುವ ತಾಕತ್ತು ಈ ಪ್ರೀತಿಗಿರುವುದೇ ಜೀವನೋತ್ಸಾಹದ ಧಿಮಾಕು.
ಕಾಮದಾಚೆಗಿನ ಆತ್ಮನಿವೇದನೆಗೆ ಒಲವ ವರತೆ ಉಕ್ಕಿ ಹರಿಯುತ ಸಾಗುವುದೇ ಜೀವನ.

ಇರುವುದ ಬಿಟ್ಟು ಇರದುದ ಹುಡುಕುವ ಹುಡುಗಾಟ ಮುಗಿಯುವುದಿಲ್ಲ. ಈ‌ ರೀತಿಯ ಹುಡುಗಾಟದ ಹುಡುಕಾಟವ ನೋಡಿದ್ದೇನೆ, ಕೇಳಿದ್ದೇನೆ, ಅನುಭವಿಸಿದ್ದೇನೆ.
ಅಗಾಗ, ಈಗೀಗ ಬರೆದ ಮನದ ತಳಮಳಗಳ ಓದಿದಾಗ ಅದೇನೋ ಪುಳಕ.

ಬೆಳೆದು ನಿಂತ ಮಕ್ಕಳು, ವಿದ್ಯಾರ್ಥಿಗಳು, ವಾರಿಗೆಯವರು ಕೇಳುವ ಪ್ರಶ್ನೆಗಳಿಗೆ ಈ ಬರಹಗಳೇ ಉತ್ತರಿಸಲಿ.
ಇಲ್ಲಿ ನಾನೀ ಅಲ್ಲದೇ, ಅವನು-ಅವಳು, ಅವರು-ಇವರು ಎಲ್ಲರೂ ಇದ್ದಾರೆ. ನಮ್ಮನ್ನು ನಾವು ಹುಡುಕಿಕೊಂಡರೆ ಸಾಕು.
ಓದಿ ಖುಷಿ ಪಡಿ. ಎಲ್ಲರ ಪರವಾಗಿ ನಾ ಹಾಡಿ ಹಗುರಾಗಿದ್ದೇನೆ. ನೀವೂ ಹಗುರಾಗಿ…

ಸಿದ್ದು ಯಾಪಲಪರವಿ

Monday, September 3, 2018

ನಾವು ಮನುಷ್ಯರು

Read my thoughts on YourQuote app at https://yq.app.link/KG8m2EktVP

ನಾವು ಮನುಷ್ಯರು

ನಿರೀಕ್ಷೆಗಳಿಲ್ಲದ ಬದುಕು ಹಗುರವಾದ ಲಗೇಜು ಹೊತ್ತುಕೊಂಡು ಪಯಣಿಸಿದಂತೆ ಎಂದು ಎಲ್ಲರಿಗೂ ಗೊತ್ತು. ಆದರೂ ಅನಗತ್ಯವಾಗಿ ತುರುಕಿಕೊಂಡು ಅಶಿಸ್ತಿನಿಂದ ಇರುವುದೇ ಮನುಷ್ಯನ ಮಿತಿ.

ವ್ಯಾಮೋಹ ಎರಡನೇ ಭಾರ. ಅನೇಕ ವ್ಯಾಮೋಹಗಳು ನಮ್ಮ ಸಾಧನೆಯ ಹಾದಿಯ ಮುಳ್ಳುಗಳು ಎಂದು ಗೊತ್ತಿದ್ದರೂ ಆ ನೋವನ್ನು ಸಂಭ್ರಮಿಸುತ್ತೇವೆ.

ನಾವು ಮನುಷ್ಯರು ಸಂತರಾಗುವ ಎಲ್ಲ ರಾಜಮಾರ್ಗಗಳು ಗೊತ್ತಿದ್ದರೂ ಕಚ್ಚಾ ರಸ್ತೆಯಲ್ಲಿ ಹೋಗುವ ಹುಂಬತನ.

ಅಧಿಕಾರ , ಅಂತಸ್ತು , ಬೆಚ್ಚಗಿನ ಸಾಂಗ್ಯತ್ಯಕ್ಕೆ ಕರಗಿ ನೀರಾಗುವ ತಲ್ಲಣ. ಇವುಗಳ ಸುತ್ತ ಸುತ್ತುವ ದೌರ್ಬಲ್ಯ.

ಹೊಗಳಿಕೆಗೆ ಅರಳಿ , ಬೈಗಳಕೆ ಕೆರಳಿ ವಾಸ್ತವ ಮರೆಯುತ್ತೇವೆ.
ಸಮಯ-ಸಂದರ್ಭಗಳನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಅದನ್ನು ಸಮರ್ಥಿಸುವ ಜಾಣತನ.

ಬದುಕಿನ ಎಲ್ಲ ಸತ್ಯಗಳನು ಇತಿಹಾಸ ಕಟ್ಟಿ ಕಣ್ಣೆದುರಿಗೆ ಇಟ್ಟರೂ ಆಚೆ ನೋಡುವ ಮನಸು ಮಾಯವಾಗಿದೆ.

ಇತಿಹಾಸದ ಆಧಾರದ ಮೇಲೆ ವರ್ತಮಾನ ರೂಪಿಸಿಕೊಂಡರೆ ನಾವು ಪರಮಸುಖಿಗಳು.
ಆದರೆ ದುಃಖ , ಭಾವುಕತೆ , ಅನಾರೋಗ್ಯ ಮಾರ್ಗಗಳ ಮೂಲಕವೇ ಸಾಗಬೇಕು ಯಾಕೆಂದರೆ ನಾವು ಕೇವಲ ಮನುಷ್ಯರು, ಸಂತರಲ್ಲವೇ ಅಲ್ಲ !

#kannada #kannadaquotes #lovequotes #love #LoveQuote #YQJogi #YQbaba #YQkannada
Jogi YourQuote

Saturday, September 1, 2018

ಹಿಡಿದು ಕಟ್ಟುವ ತವಕ

Read my thoughts on YourQuote app at https://yq.app.link/Z4WVBQDGRP

ಲವ್ ಕಾಲ

*ಹಿಡಿದು ಕಟ್ಟುವ ತವಕಕೀಗ ಮೂಗುದಾರ*

ಅಲ್ಲಿ ನೀ ಒಂಟಿ, ಏಕಾಂಗಿ ನನಗಾಗಿ ಎಲ್ಲವನೂ ತ್ಯಜಿಸಿಬಿಟ್ಟೆ. ನೋಡಲು ಬಂಗಾರದ ಪಂಜರದ ಥಳುಕು, ಒಳಗೆಲ್ಲ ಬರೀ ಹುಳುಕು ಎಂದು ಗೊತ್ತಾದ ಕೂಡಲೇ ಮನಸು ಕೆರಳಿತು.

ಬಿಡಿಸಿ ಹಾರಲು ತೂರಿ ಬಿಡುವ ಸಂಕಲ್ಪ.

ಹಗಲಿರುಳು ಅದೇ ಧ್ಯಾನ ಗೊತ್ತು ಗುರಿ ಇಲ್ಲದ ಅಡ್ಡಕಸಬಿಯ ಹಾಗೆ.

ಮೈತುಂಬ ಬಿಡಿಸಲಾಗದಷ್ಟು ಕೆಲಸಗಳು, ಅವುಗಳ ಮಧ್ಯೆ ಮೂರನೇ ಕಣ್ಣಿಂದ ಸಂರಕ್ಷಿಸುವ ಧಾವಂತ.

ತಾಯಿ ಮಗುವಿಗಾಗಿ ಹಲುಬಿದಂತೆ ಅದೇ ಹುಚ್ಚಾಟ.

ಒಂದಲ್ಲ ಎರಡಲ್ಲ ಸಾವಿರದ ಗಂಟೆಗಳ ಕಲರವ ಹಗಲಿರುಳು ಅದೇ ತೀವ್ರತೆ.

*ಆಡುವ ಮಾತಲಿ, ನೋಡುವ ನೋಟದಲಿ, ಕೂಡುವ ಕೂಟದಲಿ, ಬರೆಯುವ ಅಕ್ಕರದಲಿ, ಓದುವ ಪುಟದಲಿ, ಉಣ್ಣುವ ಅನ್ನದಲಿ, ಬಿಗಿದಪ್ಪುವ ಮಗಳ ಬಿಸುಪಲಿ, ಅಪ್ಪಳಿಸುವ ಕನಸಲೂ ಅದೇ ಅದೇ ಗುಂಗು*.

ಎಂದೂ ಮುಗಿಯದ ಹಾಡಿಗೆ ಹೊಸ ಹೊಸ ರಾಗಗಳ ಕಾವ್ಯಾಂಕುರ.

ಬೆವರು, ನೆತ್ತರು, ಅಣು ಕಣದಲಿ, ಒತ್ತರಿಸಿ ಚಿಮ್ಮುವ ಧಾತುವಲಿ ಇನ್ನಿಲ್ಲದ ಕಸುವು. ಅದೇನೋ ಪೊಗರು, ಆಕಳಾಗಿದ್ದ ಮನಕೀಗ ಗೂಳಿಯ ಖದರು.

ಕುದುರೆಯ ಓಟಕೀಗ ತಿರುಗಿದ ಹರೆಯ. ಬಿಗಿದಪ್ಪಿದರೆ ಗಾಳಿಗೂ ತೂರಲು ಜಾಗವಿಲ್ಲ.

ಅರಳುವ ಗುಲಾಬಿಗೆ ಕೆರಳಿದ ದುಂಬಿ.‌ ಮಕರಂದವ ಹೀರಿ ಚಂದ್ರನ ಬೆಳಕಲಿ ಮೆಲ್ಲುಸಿರ ಕಂಪನ.

ಜಿನುಗುವ ಹನಿಯಲಿ ಮಿನುಗುವ ಕೆಂಗುಲಾಬಿ.‌

ಮಾವಿನ ತೋಪಲೂ ಮಿಂಚುವ ದ್ರಾಕ್ಷಿ.

ಹುಚ್ಚು ಹೆಚ್ಚಾದಾಗ ನನಗೇ ಇರಲೆಂಬ ದುರಾಸೆ. ಅಪರಿಮಿತ ವ್ಯಾಮೋಹದಲಿ ಕಟ್ಟಿ ಹಾಕಿ ಉಸಿರುಗಟ್ಟಿ ಚೀರಿದರೂ ಬಿಡದ ಕರಡಿಯ ಹಿಡಿತ.

ನಾ ನೀ ಆದಾಗ ನೀ ನಾನಾಗಲೀ ಎಂಬ ಅಟ್ಟಹಾಸ.

ಇನ್ನಿಲ್ಲದ ಸಿಟ್ಟು, ಸೆಡವು ಮೊಂಡಾಟ, ಹಟ, ಹಟ, ಹಟ ಬೇಕೇ ಬೇಕು ಈ ಮಡಿಲಲಿ ಹಗಲು ಇರುಳು, ಆಗ ಈಗ ಬೇಗ ಬೇಗ.

ಬಿಡಲಾರದ ತಲ್ಲಣದ ಮೂಗುದಾರಕೆ ಮೂಗುತಿಯ ಸಡಗರ.

ನೀನೋ ಸಿಗಬಾರದೆಂಬ ಜಾಣ ಹಿರಿಮೆ. ಹಿಂದಿನ ಬಂಧನದ ಮುಕ್ತಿಗೆ ಹೊಸ ಬಂಧ ಬೇಡೆಂಬ ನಿಲುವು.

ಇರಲಿ ನೋಡೋಣ, ಕೂಡಿಸಿದ ಅವನು ಕಳೆಯಲಾರ. ಕಳೆದರೆ ಹಿಡಿದು ಕಟ್ಟಿ, ಕೂಡಿ ಹಾಕಿ ಮೌನರಾಗದಲಿ ಹಾಡಿ ನಲಿವೆ ಚರಮ ಗೀತೆಯ.

ಬಿಡಲಾರೆ ಎಂದೆಂದೂ ಮುಂದೂ.  ಮೂಗುತಿಯ ಮಿಂಚಲಿ, ಉಸಿರ ಲಯದಲಿ ಮೂಗಿನ ಹೊಳ್ಳಿಯಲಿ ಏದುಸಿರಾಟದ ಲಹರಿಯಲಿ ನಾನಿರುವೆ ಉಸಿರು ನಿಲ್ಲುವ ತನಕ. ಮಣ್ಣಲಿ ಮಣ್ಣಾಗುವ ಗರತಿಯ ಮೂಗುತಿಯ ಮುತ್ತಲಿ.

ಸಿದ್ದು ಯಾಪಲಪರವಿ

#kannada #kannadaquotes #lovequotes #love #LoveQuote #YQJogi #YQbaba #YQkannada
@YourQuote Jogi