Wednesday, February 23, 2011

ನಶಿಸಿ ಹೋದ ಸಿರಿವಂತಿಕೆ ಸರಸ್ವತಿಗಾಗಿ ಹುಡುಕಾಟ

ನ್ಯಾಯ ಅನ್ಯಾಯದ ಪ್ರಶ್ನೆ ಅಲ್ಲ. ಬ್ಯಾರೆ ಆದ ಮೇಲೆ ಮನೆತನದ ವ್ಯಾಪಾರ ಕುಸಿಯಿತು. ಅಮರಣ್ಣ ತಾತನಿಗೂ ನಿರಾಶೆಯಾಯಿತು. ಒಂದೇ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಗ್ರಾಹಕರಲ್ಲಿ ಗೊಂದಲ ಉಂಟಾಯಿತು. ಕಿರಾಣಿ ಅಂಗಡಿಯಲಿ ಅಪ್ಪ, ಅಮರಣ್ಣ ತಾತ ಇರುತ್ತಿದ್ದರೆ, ಬಸಣ್ಣ ದೊಡ್ಡಪ್ಪ ಖರೀದಿಗಾಗಿ ಹೈದ್ರಾಬಾದ, ರಾಯಚೂರಿಗೆ ತಿರುಗಾಡುತ್ತಿದ್ದ.
ಆದರೆ ಬೇರೆ ಆದ ಮೇಲೆ ಅಪ್ಪನೂ ಕಿರಾಣಿ ಅಂಗಡಿ ಮಾಡುವುದು ಅನಿವಾರ್ಯವಾಯಿತು. ನಮ್ಮ ಗಿರಾಕಿಗಳಿಗೆ ನಿರಾಶೆಯಾಯಿತು. ಪರಿಚಯವಿದ್ದ ಅಪ್ಪನ ಅಂಗಡಿಗೂ ಮನೆತನದ ಹಿರಿಯ ಅಮರಣ್ಣ ತಾತನ ಕಡೆಗೋ ಎಂಬ ಸಂಕೋಚದಲ್ಲಿ ನಮ್ಮ ಗ್ರಾಹಕರು ದೂರಾದರು.
ಆಸ್ತಿ ಹಂಚಿಕೊಂಡ ಹಾಗೆ ನಾವು ನಮ್ಮ ಆಳುಗಳನ್ನು ಲೆಕ್ಕ ಬರೆಯುವವರನ್ನು ಹಂಚಿಕೊಂಡೆವು ಅನಿಸುತ್ತದೆ. ಕೆಲವರು ಅಪ್ಪನ ಕಡೆ, ಕೆಲವರು ತಾತನ ಕಡೆ ಉಳಿದರು. ಒಂದು ರೀತಿಯ ಇಳಿಮುಖ ಆರಂಭವಾಯಿತು. ದಿನಕ್ಕೆ ಸಾವಿರಾರು ರೂಪಾಯಿ ಲಾಭ ತಿರುತ್ತಿದ್ದ ಅಂಗಡಿ ನಿರ್ಜನವಾಯಿತು. ನಮ್ಮಲ್ಲಿ ಕೆಲಸಮಾಡಿ ಗಿರಾಕಿಗಳೊಂದಿಗೆ ಸಂಪರ್ಕ ಹೊಂದಿದ ಗುಮಾಸ್ತರು ಅಂಗಡಿ ಪ್ರಾರಂಭಸಿದರು. ಇದು ಅವರ ಬೆಳವಣಿಗೆಗೆ ಅನಿವಾರ್ಯ ಕೂಡಾ ಆಗಿತ್ತು.
೧೯೭೬ರಲ್ಲಿ ಅಮರಣ್ಣ ತಾತ ಇದೇ ಬೇಸರದಿಂದ ನಿಧನ ಹೊಂದಿದ ಮೇಲೆ ಇಡೀ ಪರಿವಾರದ ಮೇಲೆ ತೀವ್ರ ಪರಿಣಾಮವಾಯಿತು. ಎರಡೂ ಅಂಗಡಿಗಳು ಸರಿಯಾಗಿ ನಡೆಯಲಿಲ್ಲ. ಓಡಾಟಕ್ಕೆ ಇದ್ದ ಜೀಪು ದೂರವಾಯಿತು.ಹಳೆ ಸ್ಕೂಟರ್, ಒಂದೆರಡು ಸೈಕಲ್ಲುಗಳು ನಮ್ಮ ಪಾಲಿಗೆ ಉಳಿದವು. ರಾಯಚೂರಿನಿಂದ ಮಾಲು ತರಲು ಬಳಸುತ್ತಿದ್ದ ಲಾರಿ ಮಾರಾಟವಾಯಿತು. ದಿನದಿಂದ ದಿನಕ್ಕೆ ಧಣಿತನ ಕ್ಷೀಣವಾಗಿ, ಧಣಿ ಎಂಬ ಪಟ್ಟ ಮಾತ್ರ ಉಳಿಯಿತು. ಸೂಗಪ್ಪ ಮಾಮಾ, ನಾಗಪ್ಪ ಮಾಮಾ ಅಪ್ಪನೊಂದಿಗೆ ಉಳಿದು ಬೇರೆ, ಬೇರೆ ವ್ಯಾಪಾರಗಳ ವಿಫಲ ಪ್ರಯೋಗ ಮಾಡಿದರು. ಕನಕರಡ್ಡಿ ಶಿವಲಿಂಗಪ್ಪ, ಮಲ್ಲಪ್ಪ, ಕುಳಗಿ ಶರಣಪ್ಪ ಬೇರೆ ವ್ಯಾಪಾರ ಪ್ರಾರಂಭಿಸಿದರು ನಮ್ಮದು ಅರಸೊತ್ತಿಗೆಯಿಲ್ಲದ ಸಾಮ್ರಾಜ್ಯವಾಯಿತು. ಶಾಲೆಗೆ ಕರೆದುಕೊಂಡು ಹೋಗಲು ನೇಮಿಸಿದ್ದ ಆಳುಗಳು ಬಿಟ್ಟು ಹೋದರು. ನಾವೇ ಪಾಟಿ ಚೀಲ ಹೊತ್ತುಕೊಂಡು ಶಾಲೆಗೆ ಹೋಗಲು ಬೇಸರವಾಗುತ್ತಿತ್ತು.
ಆದರೆ ಕಾಲಚಕ್ರ ನಮ್ಮನ್ನು ಕೆಳಗೆ ಇಳಿಸಿತ್ತು. ನಾವು ಮೇಲಿದ್ದೇವೆ ಎಂಬ ಭ್ರಮೆಯಲ್ಲಿ ಬಹಳ ದಿನ ಉಳಿಯಲಾಗಲಿಲ್ಲ.
ಸೂಗಪ್ಪ ಮಾಮ ಅಪ್ಪನನ್ನು ಬಿಟ್ಟು ಹೋಗಿ ಬೇರೆ ಉದ್ಯೋಗ ಪ್ರಾರಂಭಿಸಿ ಅಷ್ಟೇ ಬೇಗ ಯಶಸ್ಸುನ್ನು ಗಳಿಸಿದ ನಮ್ಮ ಅಂಗಡಿಯಲ್ಲಿ ಗುಮಾಸ್ತರಾಗಿದ್ದವರೆಲ್ಲ ಸ್ವಯಂ ಪರಿಶ್ರಮದಿಂದ, ಪ್ರಾಮಾಣಿಕ ಹೋರಾಟದಿಂದ ನಿಜವಾದ ಧಣಿಗಳಾದರು.
ದುರಾದೃಷ್ಟ ಅಂದುಕೊಂಡು ಅಪ್ಪಾ, ದೊಡ್ಡಪ್ಪ ವ್ಯಾಪಾರ ನಿಲ್ಲಿಸುವುದು ಅನಿವಾರ್ಯವಾಯಿತು.
ನಾವು ಬೇರೆ ಆಗಿದ್ದು ತಪ್ಪು ಎಂಬ ಭಾವನೆ ಉಂಟಾದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.
ಬಟ್ಟೆ ಅಂಗಡಿ, ದಲಾಲಿ ಅಂಗಡಿಗಳ ಪ್ರಯೋಗವು ಆಯಿತು. ಹಳೆ ಬಜಾರನ ಕಿರಾಣಿ ಅಂಗಡಿಗೆ ನನ್ನನ್ನು ಕೂಡ್ರಿಸಿದರು. ನನಗೆ ವಿಪರೀತ ಪೇಪರ್ ಹೋದೋ ಹುಚ್ಚು ವ್ಯಾಪಾರದ ಕಡೆ ನಿಗಾ ಬರಲಿಲ್ಲ.
ವ್ಯಾಪಾರ ಕುಸಿಯಿತು. ರದ್ದಿ ಪತ್ರಿಕೆಗಳಾಗಿ ಬರುತ್ತಿದ್ದ ಕನ್ನಡಪ್ರಭ, ರೂಪತಾರಾ, ಪ್ರಪಂಚ ಓದಲು ಶುರು ಮಾಡಿ ಸಾಹಿತ್ಯದ ಗೀಳು ಬೆಳಸಿಕೊಂಡೆ.
ರಾಜನ ಪಾತ್ರಧಾರಿ ತನ್ನ ಪಾತ್ರ ಮುಗಿದು ಮನೆಗೆ ಹೋಗುವಾಗ ಆಭರಣ ಕಳಚಿಡುವಂತೆ, ನಾವು ಒಂದೊಂದನ್ನೆ ಕಳಚುತ್ತಾ ಹೋದೆವು.
ಹೈಸ್ಕೂಲು ಸೇರೋ ಹೊತ್ತಿಗೆ ರಿಪೇರಿಯಾಗದ ಸೈಕಲ್ಲು ಚೈನು ಹರಿದುಕೊಂಡು ಮೂಲೆ ಸೇರಿತು.
ನಾನು, ದಿದಗಿ ಸುರೇಶ, ಕಾಗಲಕರ್ ನಾಗರಾಜ್ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದೆವು. ಎಂಟನೇ ಕ್ಲಾಸಿನಲ್ಲಿದ್ದಾಗ ಸ್ಕೂಟರ್ ಸವಾರಿ ಕಲಿಕೆ, ಆದರೆ ಪೆಟ್ರೋಲ್ ದುಬಾರಿ ಆಗಿದ್ದರಿಂದ ಶಾಲೆಗೆ ಒಯ್ಯಲು ಸಾಧ್ಯವಾಗಲಿಲ್ಲ. ಲಕ್ಷ್ಮೀ ನಮ್ಮಿಂದ ದೂರಾದಳು ಎಂಬ ಭಾವ ಉಂಟಾಗುವಾಗಲೇ ಸರಸ್ವತಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಶುರು ಆಯಿತು. ಆದರೆ ದುರಾದೃಷ್ಟ ಅಲ್ಲಿಯೂ ಕೈಕೊಡಬೇಕೆ ?

ಮಾಟ-ಮಂತ್ರ ಇಂದಿನ ಕತೆಯಲ್ಲ

೨೧ನೇ ಶತಮಾನದಲ್ಲಿಯೂ ಮಾಟ ಮಾಡಿಸುತ್ತಾರೆ. ವಿಧಾನ ಸೌಧಕ್ಕೆ ಮುಖ್ಯಮಂತ್ರಿಗಳಿಗೆ ಮಾಟ ಮದ್ದು ಮಾಡಿಸುವಾಗ ಹಿಂದಿನ ಕತೆ ಹೇಳಿದರೆ ಪರಮಾ ಶ್ವರ್ಯವಲ್ಲ ಬಿಡಿ.
ನಾನು ಕೇವಲ ಹನ್ನೆರಡರ ಪ್ರಾಯದಲ್ಲಿದ್ದಾಗಲೇ ಈ ಶಬ್ದಗಳನ್ನು ಕೇಳಿದ್ದೇನೆ.
ಅವಿಭಕ್ತ ಕುಟುಂಬ, ವಿಭಕ್ತಗೊಳ್ಳವದನ್ನು ಗ್ರಾಮ್ಯಭಾಷೆಯಲ್ಲಿ ಬ್ಯಾರೆ ಆಗುವುದು ಅನ್ನುತ್ತಿದ್ದರು. ಬ್ಯಾರೆ ಆಗುವುದು ಆ ಕಾಲದಲ್ಲಿ ದೇಶ ವಿಭಜನೆ ಆದಂತೆಯೇ.
ಕಾರಟಗಿಯ ಪ್ರತಿಷ್ಠಿತ ಯಾಪಲಪರವಿ ಮನೆತನದವರು ಬ್ಯಾರೆ ಆಗ್ತಾರೆ ಅಂದದ್ದು ಇಡೀ ಊರನ್ನೇ ಬೆರಗುಗೊಳಿಸಿತ್ತು. ಸಾವಿರ ವರ್ಷ ಬದುಕಿದ್ರು ಸಾಯೋದು ತಪ್ಪಲಿಲ್ಲ, ನೂರು ವರ್ಷ ಕೂಡಿದ್ರು ಬ್ಯಾರೆ ಆಗೋದು ತಪ್ಪಲಿಲ್ಲ ಎಂಬುದೊಂದು ನಮ್ಮೂರಲ್ಲಿ ಪ್ರಚಲಿತ ಗಾದೆ.
೧೯೭೨ ರಲ್ಲಿ ನಮ್ಮ ಮನೆತನದ ಬ್ಯಾರೆ ಆಗೋ ಪ್ರಕಿಯೆ ಶುರು ಆಯಿತು. ಕೂಡಿದ್ದಾಗ ಹಾಲು-ಜೇನಿನಂತೆ ಇರುವ ಕುಟುಂಬಗಳು ಬ್ಯಾರೆ ಆಗುವ ಸಂದರ್ಭದಲ್ಲಿ ದಾಯಾದಿ ಕಲಹದ ಸ್ವರೂಪ ತಾಳುವುದು ಕುಟುಂಬ ವ್ಯವಸ್ಥೆಯ ವಿಪರ್‍ಯಾಸ.
ಒಂದರ್ಥದಲ್ಲಿ ಇದು ಕೂಡಾ ಅತ್ತೆ-ಸೊಸೆ ಸಂಬಂಧ ಇದ್ದ ಹಾಗೆ ನೆವರ್ ಎಂಡಿಂಗ್ ಪ್ರಾಬ್ಲಂ ಅಂತಾರೆಲ್ಲ ಹಾಗೆ.
ಅಂತೂ ಇಂತೂ ಹತ್ತು ಹಲವು ಹೊಡೆದಾಟ ತಾಕಲಾಟಗಳ ನಡುವೆ ಬ್ಯಾರೆ ಆದದ್ದೇನೋ ಆಯಿತು.
ಆದರೆ ನಂತರದ ಸಮಸ್ಯೆಗಳು ಅದಕ್ಕಿಂತಲೂ ಭಯಾನಕ ಸರಿಯಾಗಿ ಪಾಲು ಕೊಡಲಿಲ್ಲ ಎಂಬ ಅಸಹನೆ ಅವ್ವನದಾದರೆ, ಸುರಕ್ಷಿತ ಬ್ಯಾರೆ ಆಗಲಿಲ್ಲ ಎಂಬ ಸಿಟ್ಟು ಅಮ್ಮನದು ಇದು ಮಾಟ ಮೂಡಿಸಿದ್ದಾರೆ ಎಂಬ ದಂತಕ್ಕೆ ತಲುಪಿತು. ಮನೆತನದ ಹಿರಿಯ ಅಮ್ಮ, ಅವ್ವನ ಮೇಲಿನ ಸಿಟ್ಟಿಗೆ ಮಾಟ ಮಾಡಿಸುತ್ತಾಳೆ ಎಂಬ ಭಾವನೆ ಅವ್ವಗೆ ಬಂದಿದ್ದೆ ಮುಂದಿನ ಅವಾಂತರಗಳಿಗೆ ಕಾರಣವಾಯಿತು.
ಅವಿಭಕ್ತ ಕುಟುಂಬದಲ್ಲಿದ್ದಾಗ ಇದ್ದ ದನದ ಮನೆ ನಮ್ಮ ಪಾಲಿಗೆ ಬಂತು. ಹಾಗೆ ಅದರ ಪಕ್ಕದಲ್ಲಿದ್ದ ಭಾವಿಯನ್ನು ಭಾಗ ಮಾಡಿದ್ದು ನಮ್ಮೂರ ಮಟ್ಟಿಗೆ ಇತಿಹಾಸವೇ.
ದುಂಡಗಿನ ನೀರಿನಿಂದ ಆವೃತವಾದ ಜಾಗೆಯನ್ನು ಬಿಟ್ಟು ಉಳಿದ ಭಾವಿಮನೆಯನ್ನು ವಿಭಜಿಸಲು ಗೋಡೆ ಕಟ್ಟಲಾಯಿತು. ಹೀಗೆ ನೀರು ಕೊಡುವ ಭಾವಿಯನ್ನು ಹಂಚಿಕೊಂಡಿದ್ದು, ಅದಕ್ಕಾಗಿ ನಡುರಸ್ತೆಯಲ್ಲಿ ನಿಂತು ಅಮ್ಮ ಅವ್ವ ಚೀರಾಡಿದ್ದು ಇನ್ನೂ ಹಚ್ಚ ಹಸಿರಾಗಿದೆ. ಮಾತಿಗೆ ಮಾತು ಬೆಳೆದು ಅಮ್ಮ ಸಿಟ್ಟಿನಲ್ಲಿ ನೀರು ಹಂಚಿಕೊಂಡ ನಿನ್ನ ಹೊಟ್ಟೇಲಿ ನೀರು ತುಂಬಲಿ ಅಂದಳಂತೆ.
ಮುಂದಿನ ದಿನಗಳಲ್ಲಿ ಆ ಮಾತು ಸತ್ಯ ಅನುವಂತೆ ಬಸುರಿಯಾಗಿದ್ದ ಅವ್ವನ ಹೊಟ್ಟೆಯಲ್ಲಿ ನೀರು ತುಂಬಿತ್ತಂತೆ ನೀರು ತುಂಬಿದ ಕಾರಣಕ್ಕೆ ಮಗು ಬದುಕಲಿಲ್ಲವಂತೆ.

ಈ ಎಲ್ಲ ಅಂತೆ-ಕಂತೆಗಳಿಗೆ ಕಾರಣ ಅಂತಿಮವಾದದ್ದು ಮಾಟ ಎಂಬ ಮಹಾಭೂತದಿಂದ.
ಅಮ್ಮ ಸಿಟ್ಟಿನಿಂದ ಅವ್ವಗೆ ಮಾಟ ಮಾಡಿಸಿದ್ದರಿಂದ ಹೊಟ್ಟೆಯಲಿ ನೀರು ತುಂಬಿ ಮಗು ಬದುಕಲಿಲ್ಲ ಅನಿಸಿ ಕುಟುಂಬದ ಮಧ್ಯೆದ ದ್ವೇಷ ಹೆಚ್ಚಾಯಿತು.
ಹಳೆ ದೊಡ್ಡ ಮನೆಗೆ ಹೋಗಬಾರದು ಎಂದು ಅವ್ವ ತಾಕೀತು ಮಾಡಿದಳು, ಹಳೆಯ ಮನೆಯ ಸೆಳೆತದಿಂದ ನಾನು ತಪ್ಪಿಸಿಕೊಳ್ಳಲಿಲ್ಲ. ಕದ್ದು ಮುಚ್ಚಿ ಹೋಗಿ ಅಮ್ಮ ಕೊಟ್ಟ ಹಾಲು ಕುಡಿದು ಬರುತ್ತಿದ್ದೆ .ವಿಷಯ ತಿಳಿದು ಅವ್ವ ಕೆಂಡ ಮಂಡಲವಾದಳು. ಹೆಂಗಾದರೂ ಹಾಳಾಗಿ ಹೋಗಲಿ ಎಂದು ಬೈದು ಯಾಲಕ್ಕಿ ತಿನಿಸಿ ಕಳಿಸುತ್ತಿದ್ದಳು. ಯಾಲಕ್ಕಿ ತಿಂದು ಹೋದರೆ ಮಾಟ ಮಾಡಿದ್ದು ಹೊಟ್ಟೆಗೆ ಹತ್ತುವುದಿಲ್ಲ ಎಂಬ ವಿಚಿತ್ರ ನಂಬಿಕೆ ಬೇರೆ !
ನಾನು ಮನೆ ಬಿಟ್ಟು ಹೊರಗೆ ಹೋಗುವ ಮುಂಚೆ ಯಾಲಕ್ಕಿ ತಿನ್ನುವುದು ಕಡ್ಡಾಯವಾಯಿತು. ಮಾಟ ಎಂದರೆ ಏನು ? ಅದು ಯಾವ ಸ್ವರೂಪದಲ್ಲಿರುತ್ತದೆ ಎಂಬುದನ್ನು ಅರಿಯದ ಮುಗ್ದ ವಯಸ್ಸಿನಲ್ಲಿ ಇಂತಹ ಪದಗಳು ಅನಿವಾರ್ಯವಾಗಿ ಕಿವಿಗೆ ಅಪ್ಪಳಿಸುತ್ತಿದ್ದವು.

ಆಗ ಬಹಳಷ್ಟು ಯಾಲಕ್ಕಿ ತಿಂದದ್ದಕ್ಕೋ ಏನೋ ನನಗೆ ಇಲ್ಲಿಯವರೆಗೆ ಯಾವ ಮಾಟಗಳು ನನ್ನ ತಂಟೆಗೆ ಬಂದಿಲ್ಲ ಎನಿಸುತ್ತದೆ. ಅಮ್ಮ ಮಾಡಿಸಿರಬಹುದಾದ ಮಾಟ ತೆಗೆಸಲು ತಜ್ಞರು ಬೇರೆ ಊರಿಂದ ಬಂದದ್ದು ಭಾವಿ ಮನೆಯ ನೆಲದಲ್ಲಿ ಹೂತಿಟ್ಟ ಗೊಂಬೆ ತೆಗೆದದ್ದು ಅಸ್ಪಷ್ಟವಾಗಿ ನೆನಪಿದೆ. ಹೀಗೆ ಅಮ್ಮ ಅವ್ವ ಹತ್ತಾರು ವರ್ಷ ಬಡಿದಾಡಿ ಸುಸ್ತಾದರು. ಬರು ಬರುತ್ತಾ ಸಂಬಂಧಗಳು ಸುಧಾರಿಸಿದವು. ಭಾವಿ ಮಧ್ಯೆ ಕಟ್ಟಿದ ಗೋಡೆ ಶಿಥಿಲವಾಗಿ ಸಂಬಂಧಗಳು ಗಟ್ಟಿಯಾಗುತ್ತ ಹೋದದ್ದು ವಿಪರ್ಯಾಸವಲ್ಲವೇ ?

ಬ್ಯಾರೆ ಆಗೋದು ಧರ್ಮ ಯುದ್ಧವಲ್ಲ

ನನಗೆ ಅವಿಭಕ್ತ ಕುಟುಂಬ ವ್ಯವಸ್ಥೆಯ ಸೌಹಾರ್ದದಲ್ಲಿ ಖುಷಿ ಇತ್ತು ಹೀಗಿರುವಾಗ ನಾವು ಬ್ಯಾರೆ ಆಗ್ತೇವೆ. ನಾನು ಅಪ್ಪಾ, ಅಮ್ಮ ಅವರೊಂದಿಗೆ ಇನ್ನೊಂದು ಮನೆಗೆ ಹೋಗ್ತೆವೆ ಎಂದಾಗ ದುಃಖವಾಯಿತು. ಕೂಡಿದ್ದ ಮನೆಯ ಸಂಭ್ರಮ ಕಳೆದುಕೊಳ್ಳುತ್ತೇನೆ ಎನಿಸಿತು. ಅತ್ತೆ, ಕಕ್ಕ, ದೊಡ್ಡಪ್ಪ, ದೊಡ್ಡಮ್ಮ, ತಾತ, ಹಿರಿಯ ಅಮ್ಮ ಹೀಗೆ ಎಲ್ಲರೂ ಒಟ್ಟಿಗೆ ಇರುವುದಿಲ್ಲ ಎಂಬುದು ಅವರಿವರು ಆಡುವ ಮಾತುಗಳಿಂದ ಗ್ರಹಿಸಿಕೊಂಡೆ.
ಒಂದು ಮಾತುಕತೆಯ ದಿನ ಫಿಕ್ಸ್ ಆದ ಮೇಲೆ ನಮ್ಮ ಪರವಾಗಿ ವಾದಿಸಲು ಕುಷ್ಟಗಿ ಅಜ್ಜ ,ಕೊಪ್ಪಳದ ಪ್ರಸಿದ್ಧ ವ್ಯಾಪಾರಿ ಅಜ್ಜ ಗಡಾದ ಸಂಗಣ್ಣ ಶೆಟ್ಟರ ಇದ್ದ ನೆನಪು. ಅಮರಣ್ಣ ತಾತನ ಪರವಾಗಿ ಜವಳಿ ಪಂಪಣ್ಣ ತಾತ ಇತರರು ಇದ್ದ ಚಿತ್ರ ಈಗಲೂ ಕಣ್ಣ ಮುಂದೆ ಕಟ್ಟಿ ನಿಲ್ಲುತ್ತದೆ.
ಮುಂಜಾನೆಯಿಂದ ಚರ್ಚೆ ಪ್ರಾರಂಭವಾಯಿತು. ಮನೆ ತುಂಬ ಗದ್ದಲೋ ಗದ್ದಲು. ನಮ್ಮ ಅಂಗಡಿಯಲಿ ಕೆಲಸ ಮಾಡುತ್ತಿದ್ದ ಆಳು ಲೆಕ್ಕ ಬರೆಯುವ ಯಜಮಾನರು ತುಂಬಿ ಹೋಗಿದ್ದರು.
ಈ ರೀತಿ ಬ್ಯಾರೆ ಆಗುವ ಸಮಯದಲ್ಲಿ ಇಡೀ ಆಸ್ತಿಯನ್ನು ಸಮನಾಗಿ ವಿಭಜಿಸುವುದು ವಾಡಿಕೆ.
ಆದರೆ ಅಂದು ವಿಭಿನ್ನ ರೀತಿಯ ಪ್ರಸ್ತಾಪವಾದದ್ದನ್ನು ಊರಲ್ಲಿ ಎಲ್ಲರೂ ಆಡಿಕೊಳ್ಳುತ್ತಿದ್ದರು.
ಅದೇನೆಂದರೆ ಆಸ್ತಿಯನ್ನು ಮೂರು ಭಾಗವಾಗಿ ವಿಂಗಡಿಸುವುದು, ಎರಡು ಪಾಲನ್ನು ಅಮರಣ್ಣ ತಾತನ ಪರವಾಗಿ ತೆಗೆದುಕೊಂಡರೆ ಉಳಿದ ಒಂದು ಪಾಲನ್ನು ಮಾತ್ರ ಅಪ್ಪ ತೆಗೆದುಕೊಳ್ಳಬೇಕು ಎಂಬ ಅಮ್ಮನ ವಾದವನ್ನು ಹಿರಿಯರು ಒಪ್ಪಲಿಲ್ಲ.

ಅನಾಥರಾಗಿದ್ದ ಅಪ್ಪನನ್ನು ಸಾಕಿ ಬೆಳೆಸಿದ್ದರಿಂದ ಸಮಪಾಲು ಕೊಡುವುದು ತಾರ್ಕಿಕವಾಗಿ ಸರಿಯಲ್ಲ ಎಂಬುದು ಅಮರಣ್ಣ ತಾತನ ಪರವಾಗಿ ಇರುವ ಹಿರಿಯರ ವಾದವಾಗಿತ್ತು.
ಇದೇ ವಿಷಯವನ್ನು ಮುಂಜಾನೆಯಿಂದ, ಮಧ್ಯಾಹ್ನದ ವರೆಗೆ ಚರ್ಚಿಸಿ ಅನಿವಾರ್ಯವಾಗಿ ನಮ್ಮ ಪರವಾಗಿರುವ ಹಿರಿಯರು ಒಪ್ಪಬೇಕಾಯಿತು. ಆದರೆ ನ್ಯಾಯಸಮ್ಮತವಲ್ಲ ಎಂದು ಎಲ್ಲರೂ ವಾದಿಸಿದರು. ಅಮ್ಮ ಕೇಳಲೇ ಇಲ್ಲ. ಸರಿ ಹಾಗಾದರೆ ನಿಜವಾಗಿ ಇದ್ದ ಆಸ್ತಿಯನ್ನು ಸಭೆಗೆ ತಿಳಿಸುವ ವಿಷಯದಲ್ಲಿಯೂ ಗೊಂದಲ ಶುರು ಆಯಿತು.

ಯಾಪಲಪರವಿ ಅವರ ಮನೆಯಲಿ ತೊಲೆಗಟ್ಟಲೆಯಲ್ಲ ಮಣಗಟ್ಟಲೆ ಬಂಗಾರವಿದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ಅಂದು ಸಭೆಯಲ್ಲಿ ಹಾಜರಾದದ್ದು, ಕೆಲವೇ ತೊಲೆಗಳಲ್ಲಿ ಎಂಬುದು ಎಲ್ಲರಿಗೂ ಬೆರಗು ಮೂಡಿಸಿತು. ಈ ಅಂಕಿ ಅಂಶಗಳನ್ನು ನಮ್ಮ ಕಡೆಯ ಹಿರಿಯರು ಒಪ್ಪಲಿಲ್ಲ.
ಹಿಂದಿನ ಒಂದೆರಡು ದಿನ ಮೊದಲು ಮನೆಯಲ್ಲಿದ್ದ ಬಂಗಾರವನ್ನು ಗೋಣಿ ಚೀಲದಲ್ಲಿ ಆಪ್ತರ ಮನೆಗೆ ಸಾಗಿಸಲಾಗಿತ್ತು. ಎಂಬ ವದಂತಿಯೂ ಇತ್ತು. ಗೋಣಿ ಚೀಲಗಳಲ್ಲಿ ಬಂಗಾರದ ಆಭರಣಗಳನ್ನು ತುಂಬಿ ಇಟ್ಟದ್ದಂತು ನಿಜ. ಆದರೆ ಬ್ಯಾರೆ ಆಗುವ ಸಂದರ್ಭಗಳಲ್ಲಿ ಆ ಚೀಲಗಳು ಅಲ್ಲಿಂದ ಮಾಯವಾದದ್ದು ಅಷ್ಟೇ ನಿಜ!
ಆದರೆ ಈಗಲೂ ಆರ್ಥಿಕ ವಿಷಯ ಬಂದಾಗ ನಾವು ಪುರಾಣಗಳ ನೀತಿ ಕತೆಗಳಲಿ ಹೇಳುವಂತೆ, ಕದ್ದು ಮೋಸ ಮಾಡಬಾರದು. ಅಣ್ಣ ತಮ್ಮಂದಿರುಗಳಿಗೆ ಆಸ್ತಿಯಲಿ ಪಾಲು ಕೊಡದಿದ್ದರೆ ಉಳಿಯುವುದಿಲ್ಲ ಹಾಗೆ ಹೀಗೆ ಅಂತ ಆದರೆ ಬೇರೆ ಆಗುವ ಸಂದರ್ಭಗಳಲಿ, ಆಸ್ತಿ ಹಂಚಿಕೊಳ್ಳುವಾಗ ಸ್ನೇಹಿತರಿಗೆ, ಸೋದರರಿಗೆ ಮೋಸ ಮಾಡುವುದು ಮಾನವನ ಹುಟ್ಟುಗುಣ.
ಕಾಲಚಕ್ರದಲಿ ಈ ಸಂಗತಿ ಪುನರಾರ್ವನೆಯಾಗುತ್ತಲೇ ಇರುತ್ತದೆ. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಹಾಡು ನೆನಪಿಸಿಕೊಂಡು ಅಂದಿನ ಸಭೆಯನ್ನು ಮುಗಿಸಲಾಯಿತು. ಅವ್ವ ತನಗಾದ ಅನ್ಯಾಯದ ವಿರುದ್ಧ ಕೂಗಾಡಿದರೂ ಯಾರೂ ಕೇಳಲಿಲ್ಲ.
ಆಸ್ತಿಗೆ ಮುಖ್ಯ ಪಾಲುದಾರರಾದ ಅಮರಮ್ಮ ಅಮ್ಮ, ಅಪ್ಪ ಇದೊಂದು ನೈತಿಕ ವಿಷಯ ಎಂದು ಪರಿಗಣಿಸಿದ್ದರಿಂದ ವಿಷಯ ಹೆಚ್ಚು ಚರ್ಚೆಯಾಗಲಿಲ್ಲ.
ನಾನು ಕುಷ್ಟಗಿ ಗುರುಸಿದ್ಧಪ್ಪ ಅಜ್ಜನ ತೊಡೆಯ ಮೇಲೆ ಕುಳಿತುಕೊಂಡೆ ಬೇರೆ ಆಗುವ ಪ್ರಹಸನವನ್ನು ಗಂಭೀರವಾಗಿ ಆಲಿಸಿದ್ದು, ಇಂದಿಗೂ ನೆನಪಿದೆ ಎಂದರೆ ನೀವು ನಂಬುವುದಿಲ್ಲ ಅಲ್ಲವೇ ? ನನಗಂತೂ ಖಂಡಿತಾ ನೆನಪಿದೆ.
ಅಂದು ಆದ ಒಪ್ಪಂದದಂತೆ ನಾವು ದನದ ಮನೆಯಲ್ಲಿ ವಾಸಿಸತೊಡಗಿದೆವು ಭವ್ಯವಾದ ದೊಡ್ಡ ಮನೆ ಬಿಟ್ಟು ದನದ ಮನೆಯಲ್ಲಿ ವಾಸಿಸುವ ಸ್ಥಿತಿಗೆ ಅವ್ವ ವಿಚಲಿತಳಾದಳು. ದನದ ಮನೆಯಲ್ಲಿದ್ದ ದನ-ಕರುಗಳು ಭಾವಿಮನೆಗೆ ಶಿಫ್ಟ್ ಆದವು. ದನದ ಗ್ವಾದಲಿಯಲ್ಲಿಯೇ ಮಲಗುವುದು ನನಗೆ ಮಜ ಅನಿಸುತ್ತಿತ್ತು. ಬಾಲ್ಯದ ಮುಗ್ಧತೆಗೆ ಎಲ್ಲವೂ ಮಜವೇ ಆದ್ದರಿಂದ ನನಗೆ ಅಷ್ಟೇನು ನಿರಾಶೆ ಆಗಲಿಲ್ಲ.

ಬೆನ್ನು ಹತ್ತಿದ ಬೆಂಗಳೂರು ನಂಟು

ಬಾಲ್ಯದಲ್ಲಿ ಹದಿನಾರು ವರ್ಷದವರೆಗೆ ಕಾರಟಗಿ, ಕುಷ್ಟಗಿ, ಕೊಪ್ಪಳ, ಗದಗ, ತೆಕ್ಕಲಕೋಟೆ, ರಾಯಚೂರ, ಬಳ್ಳಾರಿಯಂತಹ ಮಿನಿನಗರಗಳನ್ನು ನೋಡಿದ್ದೆ. ಅಂದದೂರು ಬೆಂಗಳೂರಿನ ಕತೆಯನ್ನು ಕೇಳಿ ತಿಳಿದಿದ್ದೆ, ಹತ್ತಿರದ ಸಂಬಂಧಿ ಗಿರಿಜಮ್ಮ ದೊಡ್ಡಮ್ಮಳ ಗಂಡ ಸೋಮಾಲಾಪೂರ ಗವಿಸಿದ್ದಪ್ಪ ದೊಡ್ಡಪ್ಪ ನಮ್ಮೂರಿನ ಪ್ರತಿಷ್ಠಿತ ವ್ಯಾಪಾರಿ ಆಗಿದ್ದು, ಶಿಕ್ಷಣ ಸಂಸ್ಥೆಗಳಲ್ಲೂ ಆಸಕ್ತಿ ಹೊಂದಿದ್ದರು. ತಮ್ಮ ರೈಸ್ ಮಿಲ್ಲಿನ ಕೆಲಸಕ್ಕೆ ಬೆಂಗಳೂರಿಗೆ ಹೋಗುತ್ತಿದ್ದರು. ತುಂಬಾ ಚೂಟಿ ಹಾಗೂ ಮಾತುಗಾರನಾಗಿದ್ದ ನನ್ನೊಂದಿಗೆ ವಾದ ವಿವಾದಕ್ಕೆ ಇಳಿಯುತ್ತಿದ್ದರು.
ಆ ಮಮಕಾರಕ್ಕಾಗಿ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದಾಗ ಆದ ಸಂಭ್ರಮ ಅಷ್ಟಿಷ್ಟಲ್ಲ. ೧೯೭೭ ರ ಮಾರ್ಚ ರಜೆಯಲ್ಲಿ ನನಗೆ ಅಂತಹ ಅವಕಾಶ ಸಿಕ್ಕಿತು. ಹನ್ನೆರಡು ವರುಷದ ಹರೆಯದ ಮನಸ್ಸಿಗೆ ಬೆಂಗಳೂರಿನ ಬಗ್ಗೆ ಅಪಾರ ಕುತೂಹಲವಿತ್ತು. ದೊಡ್ಡಪ್ಪ ಇಟ್ಟಿದ್ದ ಅಂಬಾಸಡರ್ ಕಾರಿನಲ್ಲಿ ಪ್ರಯಾಣ. ದೊಡ್ಡಮ್ಮ ಜೊತೆಯಾಗಿದ್ದರು. ಬೆಂಗಳೂರು ತಲುಪಲು ಒಂದು ದಿನ ಬೇಕಾಗುತ್ತಿದ್ದ ಕಾಲವದು.
ಮಾರ್ಗ ಮಧ್ಯೆ ಎಡೆಯೂರಿನಲ್ಲಿ ವಸತಿ ಮಾಡಿ ಮರುದಿನ ಬೆಂಗಳೂರು ಪ್ರವೇಶವಾದಾಗ ಎಲ್ಲಿಲ್ಲದ ಸಂಭ್ರಮ
ಕಿಡಕಿಯಾಚೆಯಲಿ ಕಣ್ಣಿಗೆ ಬಿದ್ದ ಬೆಂಗಳೂರು ಹೊಸ ಜಗತ್ತನ್ನು ಪರಿಚಯಿಸಿತು. ರಾಮಕೃಷ್ಣ ಲಾಜಿನಲ್ಲಿ ವಸತಿ. ಮೇನಕಾ ಚಿತ್ರಮಂದಿರದಲ್ಲಿ ಸಿನೆಮಾ ನೋಡಿದ ನೆನಪು. ವಿಧಾನ ಸೌಧ, ಲಾಲಬಾಗ, ವಿಶ್ವೇಶ್ವರಯ್ಯ ಮ್ಯೂಸಿಯಂ ತೋರಿಸಿದ ದೊಡ್ಡಪ್ಪ ಬೆಂಗಳೂರಿನ ಹಿರಿಮೆಯನ್ನು ವಿವರಿಸಿದರು.
ದೊಡ್ಡಪ್ಪ ಚೈನ್ ಸ್ಮೋಕರ್, ಅವರಿಗೆ ಸಿಗರೇಟ್ ಪ್ಯಾಕೇಟ್ ತರಲು ಮೆಜೆಸ್ಟಿಕ್ ಸರ್ಕಲ್ ಗೆ ಕಳಿಸುತ್ತಿದ್ದರು. ಸಣ್ಣ ಹುಡುಗ ತಪ್ಪಿಸಿಕೊಂಡರೆ ಹೇಗೆ ಎಂಬ ಆತಂಕ ದೊಡ್ಡಮ್ಮಗೆ ,ನಾನು ತಪ್ಪಿಸಿಕೊಳ್ಳುವುದಿಲ್ಲ ಎಂದು ವಾದಿಸಿದೆ.
ಸವಾಲು ಸ್ವೀಕರಿಸಿ ಮೆಜೆಸ್ಟಿಕ್ ಸರ್ಕಲಗೆ ಹೋಗಿ, ಸುರಕ್ಷಿತವಾಗಿ ವಾಪಸು ಬಂದೆ. ರಾಮಕೃಷ್ಣ ಲಾಡ್ಜ್ ಹೇಗೆ ಗುರುತಿಸಿದೆ ಎಂದು ದೊಡ್ಡಪ್ಪ ಕೇಳಿದರು. ಲಾಡ್ಜ್ ಮುಂದಿದ್ದ ಲೈಟಿನ ಕಂಬಗಳನ್ನು ಎಣಿಸುತ್ತಾ ಹೋದೆ. ವಾಪಸು ಬರುವಾಗ ಅದೇ ಕಂಬಗಳನ್ನು ಆಧರಿಸಿ ಲಾಡ್ಜ್ ಪತ್ತೆ ಹಚ್ಚಿದ್ದನ್ನು ಹೇಳಿದೆ. ದೊಡ್ಡಪ್ಪ ನನ್ನ ಜಾಣತನಕ್ಕೆ ಮೆಚ್ಚಿ ಐದು ರೂಪಾಯಿ ಬಹುಮಾನ ಕೊಟ್ಟ ನೆನಪು. ಸಣ್ಣ ಹುಡುಗ ಎಂಬುದನ್ನು ಲೆಕ್ಕಿಸದೇ ಕೇಳಿದೆ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದ ದೊಡಪ್ಪನ ಜಾದಾರ್ಯಕ್ಕೆ ಇಂದಿಗೂ ಕೃತಜ್ಞನಾಗಿದ್ದೇನೆ.
ಸ್ವಭಾವತಃ ಸಿಟ್ಟಿನ ವ್ಯಕ್ತಿ ಅನಿಸಿಕೊಂಡಿದ್ದರೂ ದೊಡ್ಡಪ್ಪನನ್ನು ನಾನು ಧೈರ್ಯದಿಂದ ಮಾತನಾಡಿಸುತ್ತಿದ್ದೆ. ಮನೆಯ ಹಜಾರದ ಸೋಫಾದ ಮೇಲೆ ಸಿಗರೇಟು ಸೇದುತ್ತಾ ಕುಳಿತಿದ್ದ ದೊಡ್ಡಪ್ಪನ ಚಿತ್ರ ಇನ್ನೂ ಕಣ್ಣು ಮುಂದೆ ಬರುತ್ತದೆ. ಹಟಮಾರಿ ದೊಡ್ಡಪ್ಪ ನನ್ನ ವ್ಯಕ್ತಿತ್ವದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದರು. ನಮ್ಮ ಹಾಗೂ ಅವರ ಮನೆತನದ ಸಂಬಂಧಗಳ ಬಿರುಕು, ಅವರ ಅನಿರಿಕ್ಷಿತ ಸಾವು ನನ್ನನ್ನು ಬಲವಾಗಿ ಕಾಡಿದವು.
ಆದರೆ ಬೆಳೆದು ನಿಂತ ಈ ಸಂದರ್ಭದಲ್ಲಿ ಬೆಂಗಳೂರಿಗೆ ಹತ್ತಾರು ಬಾರಿ ಹೋದಾಗಲೆಲ್ಲ ಗವಿಸಿದ್ದಪ್ಪ ದೊಡ್ಡಪ್ಪ, ಗಿರಿಜಮ್ಮ ದೊಡ್ಡಮ್ಮ ನೆನಪಾಗಿ ಕಾಡುತ್ತಾರೆ.
ಈಗ ಎಲ್ಲ ಸಂಬಂಧಗಳು ಸರಿ ಹೋಗಿವೆ. ಅನರ್ಥ ಇತಿಹಾಸ, ವರ್ತಮಾನದ ಅರ್ಥವನ್ನು ಹೆಚ್ಚಿಸುತ್ತದೆ. ಅಮರಮ್ಮ ಅಮ್ಮ ಹೇಳುತ್ತಿದ್ದ ಮಾತು ಈಗಲೂ ನೆನಪಾಗುತ್ತದೆ. ಸಿದ್ದಪ್ಪ ನಿನ್ನ ಕಾಲಲ್ಲಿ ನಾಯಿಗೆರೆಗಳು ಇವೆ ಎಂಬ ಮಾತಿನಂತೆ ಬೆಂಗಳೂರಿಗೆ ನಿರಂತರ ತಿರುಗುತ್ತಲೇ ಇದ್ದೇನೆ. ಬೆಂಗಳೂರು ಈಗ ನನ್ನ ಪಾಲಿನ ತಂಗಳೂರು ಆಗಿದೆ. ಗುಲಾಬಿ ನಗರ ಕೇವಲ ಲಾಬಿ ನಗರವಾಗಿದೆ. ಕಾಮಾ ಪೂರ್ತೆ ಮಾಮಾಗಳಿಂದ ತುಂಬಿರುವ ಬೆಂಗಳೂರಿನ ದೈಹಿಕ, ಮಾನಸಿಕ ಸೌಂದರ್ಯ ಹಾಳಾಗಿದೆ.
ನೌಕರಿ ಅನುಮೋದನೆಗೆ, ಆಫೀಸು ಕೆಲಸ, ಮೌಲ್ಯ ಮಾಪನಕ್ಕಾಗಿ ತಿಂಗಳುಗಟ್ಟಲೆ ಬೆಂಗಳೂರಿನಲ್ಲಿ ಇರುವುದು ಬಂದಾಗ ಬೇಡವೆನಿಸುವ ಬೆಂಗಳೂರು ಪಯಣ ಅನಿವಾರ್ಯವಾಗಿದೆ.
ಬೆಂಗಳೂರು ಬಿಟ್ಟರೆ ಲೈಫೇ ಇಲ್ಲ ಎನ್ನುವ ವಾತಾವರಣದಲ್ಲಿ ಬೆಂಗಳೂರಿಗೆ ಕೊಂಡೊಯ್ಯುವ ರೈಲು, ಬಸ್ಸು, ವಿಮಾನಗಳು ನಿತ್ಯ ಕೈ ಮಾಡಿ ಕರೆಯುತ್ತವೆ.
ನಿಧಾನ ಕೆಲಸಗಳಿಗೆ ಹೆಸರಾದ ವಿಧಾನ ಸೌಧ, ಅಕ್ಷರಗಳನ್ನು ಪುಸ್ತಕಕ್ಕೆ ಇಳಿಸುವ ಪ್ರಿಂಟಿಂಗ್ ಪ್ರೆಸ್ಸುಗಳು, ಹಿರಿಯ ಅಧಿಕಾರಿಗಳು, ಸಾಹಿತ್ಯ, ಪತ್ರಿಕೋದ್ಯಮದ ಗೆಳೆಯರು ಕರೆದಾಗಲೆಲ್ಲ ಬೆಂಗಳೂರಿಗೆ ಹಾರುತ್ತಲೇ ಇರುತ್ತೇನೆ.

ಅಚ್ಚರಿ ಮೂಡಿಸಿದ ಮಾನವ ಸಂಬಂಧಗಳು

ಊರಲ್ಲಿ ಒಬ್ಬ ಹಿರಿಯರಿದ್ದರು. ಅವರು ಲಿಂಗಾಯತರ ಮೇಲ್ವರ್ಗಕ್ಕೆ ಸೇರಿದವರು. ನಮ್ಮೂರಿನಲ್ಲಿ ವಿವಾಹೇತರ ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣವಿರಲಿಲ್ಲ.
ಆದರೆ ಆ ಹಿರಿಯರು ಮಾತ್ರ ತುಂಬಾ ತಮಾಷೆಯಾಗಿ ಕಾಣಿಸುತ್ತಿದ್ದರು. ಗಂಡಸರ ಲೈಂಗಿಕ ಸಂಬಂಧಗಳನ್ನು ಹೆಂಡತಿಯರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಮಾತು ಚರ್ಚೆಗಳಲ್ಲಿ ಸಂಬಂಧಗಳನ್ನು ಸ್ಪೋಟಿವ್ ಆಗಿ ವಿವರಿಸುತ್ತಿದ್ದರು.
ಆಗ ಆ ಹಿರಿಯರ ಅನೇಕ ಮಹಿಳೆಯರೊಂದಿಗಿನ ಸಂಬಂಧಗಳನ್ನು ಅವರ ಪರಿವಾರದವರು ಅಷ್ಟೇ ರಸವತ್ತಾಗಿ ಹೇಳಿಕೊಳ್ಳುತ್ತಿದ್ದರು.
ಈಗಲೂ ಅಚ್ಚರಿ ಈ ರೀತಿಯ ಸಂಬಂಧಗಳು ಲೈಂಗಿಕ ವಾಂಛೆಯನ್ನು ಮಿರಿ ನಿಲ್ಲುತ್ತದೆ ಅನಿಸುತ್ತದೆ. ನಮ್ಮೂರಲ್ಲಿ ಆಗಿದ್ದು ಹಾಗೇಯೇ. ಆ ಅಯ್ಯನವರು ಪಾಪ! ಇಡೀ ರಾತ್ರಿ ನಿದ್ದೆಗಿಟ್ಟು ಎಲ್ಲ ಮನೆಗಳಿಗೂ ಹಾಜರಿ ಹಾಕುತ್ತಿದ್ದುದನ್ನು ಜನ ತಮಾಷೆಯಾಗಿ ಆಡಿಕೊಳ್ಳುತ್ತಿದ್ದರು. ಅವರೆದುರು ತಮಾಷೆ ಮಾಡಿದರೂ ಗಂಭೀರವಾಗಿ ತೆಗೆದುಕೊಳ್ಳದೇ ಇದೆಲ್ಲ ಇರದ ಬಿಡ್ರಲೇ ತಮ್ಮಾ ಅನ್ನುತ್ತಿದ್ದರು.
ಅವರ ಸಾನಿಯರ ಮಕ್ಕಳು ಕೂಡಾ ಅಷ್ಟೇ ಅಭಿಮಾನದಿಂದ ಅವರ ಹೆಸರನ್ನು ಹೇಳಿಕೊಂಡೇ ಓಡಾಡುತ್ತಿದ್ದರು.
ಅಪ್ಪಣ್ಣ ಅರಳಿ, ಸಿದ್ಧಲಿಂಗಣ್ಣ ನಾವೆಲ್ಲ ಈ ವಿಷಯವನ್ನು ಚರ್ಚಿಸುವಾಗಲೆಲ್ಲ ಅವರ ಸಾಮರ್ಥ್ಯವನ್ನು ತಮಾಷೆಯಿಂದ ಹೊಗಳುತ್ತಿದ್ದೆವು.
ಊರಲ್ಲಿ ಇವರದೊಂದು ಬೃಹತ್ ವಿಗ್ರಹ ನಿಲ್ಲಿಸಬೇಕು. ಮದುವೆಯಾಗದ ಹುಡುಗರು ಅವರ ವಿಗ್ರಹಕ್ಕೆ ಐದು ಅನುವಾಸ್ಯೆ ನಡೆದುಕೊಂಡರೆ ಮದುವೆಯಾಗುತ್ತೆ, ಮಕ್ಕಳಾಗದ ಮಹಿಳೆಯರು ವಿಗ್ರಹ ಪೂಜಿಸಿದರೆ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಮಾತಾಡಿಕೊಂಡು ಎಂಜಾಯ್ ಮಾಡುತ್ತಿದ್ದೆವು.
ನಮ್ಮ ಕೋಮಿನ ಅನೇಕ ವ್ಯಾಪಾರಸ್ಥ ಹಿರಿಯರನೇಕರ ಸಂಬಂಧಗಳನ್ನು ಹೀಗೆ ಆಡಿಕೊಳ್ಳುತ್ತಿದ್ದರೂ ಬೇರೆ ಹಳ್ಳಿಗಳಲ್ಲಿ ಆಗುವಂತೆ ಲೈಂಗಿಕ ಸಂಬಂಧ ಎಂದು ಭಯಾನಕವಾಗಿ ಬಣ್ಣಿಸಿ ಹೊಡೆದಾಟ-ಬಡಿದಾಟಗಳಾಗುತ್ತಿರಲಿಲ್ಲ ಎನ್ನುವದು ಅಭಿಮಾನದ ಸಂಗತಿ.
ರಾಜ್ಯದ ಕೆಲವು ಹಳ್ಳಿಗಳಲ್ಲಿ ಈ ರೀತಿಯ ಸಂಬಂಧಗಳು ಹಿಂಸೆಯಲ್ಲಿ ಕೊನೆಗೊಳ್ಳುವುದನ್ನು ಕಾಣುತ್ತೇವೆ. ನಮ್ಮೂರಿನ ಸೌಹಾರ್ದ ವಾತಾವರಣ ಈಗಲೂ ಹೆಮ್ಮೆಯನ್ನುಂಟು ಮಾಡುತ್ತದೆ.
ಜಾತಿ, ಧರ್ಮ, ಲಿಂಗ ತರತಮಗಳು, ಅಜ್ಞಾನದಿಂದ ಉಂಟಾಗುತ್ತವೆ ಎಂದು ಊಹಿಸುತ್ತೇವೆ. ಆದರೆ ಅಕ್ಷರ ಜ್ಞಾನವಿಲ್ಲದಿದ್ದರೂ ಕೇವಲ ಜೀವನಾನುಭವಗಳನ್ನು ಆಧರಿಸಿ ಜನ ಸಂತೋಷದಿಂದ ಸೌಹಾರ್ದದಿಂದ ಬದುಕಬಹುದು ಎಂಬುದನ್ನು ನಮ್ಮ ಹಿರಿಯರು ಸಾಬೀತು ಮಾಡಿದ್ದಾರೆ.
ಹಿರಿಯರ ಎಲ್ಲ ಪತ್ನಿಯರು, ಉಪಪತ್ನಿಯರು ಸಾರ್ವಜನಿಕ ಸಮಾರಂಭಗಳಲ್ಲಿ ಒಟ್ಟಾಗಿ ಭಾಗವಹಿಸಿ ಕಷ್ಟ ಸುಖ ಹಂಚಿಕೊಂಡು ತಮ್ಮ ಯಜಮಾನರ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ಚರ್ಚಿಸಿ ಹಾರ್ದಿಕವಾಗಿ ಮಾತನಾಡುತ್ತಿದ್ದರು. ಈ ರೀತಿ ಮೈ-ಮನಗಳ ಹಂಚಿಕೊಳ್ಳುವಿಕೆಯಲ್ಲಿಯೂ ಇದ್ದ ವಿಶಾಲತೆ, ತಿಳುವಳಿಕೆ ಅನನ್ಯವಲ್ಲದೆ ಇನ್ನೇನು ? ಈಗಿನ ಧಾರವಾಹಿಗಳಲ್ಲಿ ಚಿತ್ರಿಸುವ ಸಂಬಂಧಗಳು, ಅವುಗಳ ನೆಪದಲ್ಲಿ ಪರಸ್ಪರ ಕಚ್ಚಾಡುವ ಪಾತ್ರಗಳನ್ನು ನೋಡಿದರೆ ವ್ಯಥೆ ಎನಿಸುತ್ತದೆ.
ವಿವಾಹೇತರ ಸಂಬಂಧಗಳನ್ನು, ಬೇರೆಯವರ ಲೈಂಗಿಕ ಸಂಬಂಧಗಳನ್ನು ಕೀಳಾಗಿ ವೈಭವಿಕರಿಸುವ ಗುಣಧರ್ಮ ನಮ್ಮ ಹಳ್ಳಿಗಳಲ್ಲಿ ಇರಲಿಲ್ಲ.
ಪರಸ್ಪರ ಗೌರವ ಇದ್ದಾಗ ಈ ರೀತಿಯ ಗೊಂದಲ ಉಂಟಾಗುವುದಿಲ್ಲ. ಪ್ರತಿಯೊಬ್ಬರಲ್ಲಿರುವ ದೌರ್ಬಲ್ಯ ಮತ್ತು ಬಲವನ್ನು ಅರಿತುಕೊಂಡಾಗ ಸಮಸ್ಯೆಗಳು ಉದ್ಭವವಾಗುವುದಿಲ್ಲ.
ಮತ್ತೊಬ್ಬರ ಬದುಕಿನಲ್ಲಿನ ಘಟನೆಗಳನ್ನು ತಪ್ಪು ಎಂದು ನಿರ್ಣಯಿಸುವುದು ಅಸಮಂಜಸ ಎಂದರಿತುಕೊಂಡಾಗ ಈ ರೀತಿಯ ಗೊಂದಲ ಉಂಟಾಗುವುದಿಲ್ಲ.
ಈಗ ಬೇರೆಯವರ ಸಂಬಂಧಗಳನ್ನು ಬಹು ದೊಡ್ಡ ವಿಷಯ ಎಂಬಂತೆ ಚರ್ಚಿಸುವ ಪರಿಪಾಠ ಪ್ರಜ್ಞಾವಂತರಲ್ಲಿಯೇ ಹೆಚ್ಚಾಗಿರುವುದು ವಿಷಾದನೀಯ ಬೆಳವಣಿಗೆ.
ಪ್ರಜ್ಞಾವಂತರೆನಿಸಿಕೊಳ್ಳುವ ನಾವು ಅಶಿಕ್ಷಿತರಿಂದ ಕಲಿಯುವುದು ಬಹಳಷ್ಟಿದೆ ಎಂಬುದನ್ನು ನನ್ನ ಬಾಲ್ಯದ ಅನುಭವಗಳು ನಿರೂಪಿಸುತ್ತವೆ.

Wednesday, February 2, 2011

ನೆನಪಿನ ಮೇಲೆ ನರ್ತಿಸುವ ಬಯಲಾಟ ನಾಟಕಗಳು


ವೆಂಕಟರಮಣ ಗುಡಿಯ ಪಕ್ಕದ ಕಟ್ಟೆ ನಮ್ಮೂರಿನ ಬಯಲು ರಂಗಮಂದಿರವಾಗಿತ್ತು. ಬಯಲಾಟ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದ್ದ ಕಟ್ಟೆಯ ಮೇಲೆ ವರ್ಷದಲ್ಲಿ ನಾಲ್ಕಾರು ಬಾರಿ ಬಯಲಾಟಗಳು ನಲಿಯುತ್ತಿದ್ದವು.
ವೇದಿಕೆ ಮುಂದೆ ತಗ್ಗು ಅಗೆದು ಕಾಲಿನಿಂದ ತುಳಿಯುವ ಬೃಹತ್ ಹಾರ್ಮೋನಿಯಂ ಬಳಸಿ ನಾಟಕದ ಮಾಷ್ಟ್ರು ಆಟ ಕಲಿಸುತ್ತಿದ್ದರು. ಹಕಾರ, ಅಕಾರ ವನ್ನು ಲೆಕ್ಕಿಸದೆ ನಮ್ಮೂರ ಕಲಾವಿದರು ಭರ್ಜರಿಯಾಗಿ ಕುಣಿದು ಕುಪ್ಪಳಿಸುತ್ತ ಆಟ ಆಡುತ್ತಿದ್ದರು. ಕಣ್ಣಿಗೆ ರಾಚುವಂತೆ ಮುಖಕ್ಕೆ ಬಳಿದ ಮೇಕಪ್, ಕೂಲಿಂಗ್ ಗ್ಲಾಸ್, ಬುಜ ಕಿರೀಟಗಳು, ಥಳ ಥಳ ಹೊಳೆಯುವ ನಕಲಿ ಆಭರಣಗಳು ಇಂದಿಗೂ ನನ್ನ ಮುಂದೆ ನರ್ತಿಸುತ್ತವೆ.
ರಾಮಾಯಣ, ಮಹಾಭಾರತದಿಂದ ಆಯ್ದ ಕತೆಗಳನ್ನು ಆಡುತ್ತಿದ್ದರು. ಎಳೆಯ ಪ್ರಾಯದ ನನಗೆ ಆಟ ರಂಜನೀಯ ಎನಿಸುತ್ತಿತ್ತು. ನಮ್ಮೂರ ಮಣ್ಣಿನ ರಸ್ತೆಯ ನೆಲದ ಮೇಲೆ ಕುಳಿತು ಒಮ್ಮೊಮ್ಮೆ ಹೊದ್ದಿದ್ದ ಟಾವೆಲ್ ಹಾಸಿಕೊಂಡು ಮಲಗಿಯೇ ಇಡೀ ರಾತ್ರಿ ಆಟ ನೋಡುತ್ತಿದ್ದನ್ನು ನೆನೆದರೆ ಬೆರಗಾಗುತ್ತದೆ. ಅಂದು ನೆಲದ ಮೇಲೆ ಕುಳಿತುಕೊಳ್ಳಲು ಸಂಕೋಚಪಟ್ಟುಕೊಳ್ಳತ್ತಿರಲಿಲ್ಲ ಎಂಬುದು ನೆನೆದರೆ ಅಚ್ಚರಿಯೆನಿಸುತ್ತದೆ.
ಆಗಿನ ಮುಗ್ಧತೆ, ನಿಸ್ಶಂಕೋಚ ಕಲಾ ಪ್ರೇಮ ಅನನ್ಯವೆನಿಸುತ್ತದೆ. ಈಗ ಯಾರೂ ನೆಲದ ಮೇಲೆ ಕುಳಿತುಕೊಳ್ಳಲು ಮನಸ್ಸು ಮಾಡುವುದಿಲ್ಲ. ಕುರ್ಚಿ ಕೇಳುತ್ತಾರೆ. ವೆಂಕಟರವಣ ಗುಡಿಯ ಮುಂದಿನ ಬಯಲು ನೆಲದ ಮಣ್ಣಲಿ ಕುಳಿತು ಕೇಳಿದ ಸಂಭಾಷಣೆ- ಭಲರೇ ಎಲೈ ಸಾರಥಿ, ಮತ್ತೇನಂತಿಯಲೆ ಭೂಪತಿ ಎಂಬ ಸಾಲುಗಳು ಇಂದಿಗೂ ರಿಂಗಣವಾಡುತ್ತವೆ.
ನಾಲ್ಕಾರು ಅಡಿ ಎತ್ತರಕ್ಕೆ ಹಾರುತ್ತಿದ್ದ, ಕುಣಿಯುತ್ತಿದ್ದ ಕಲಾವಿದರ ಎನರ್ಜಿ ಅದ್ಭುತ ಅವರ ಕಾಲಲ್ಲಿನ ಶಕ್ತಿ, ಆಟಗಳ ಪ್ರದರ್ಶನದಲ್ಲಿನ ಜೀವನೋತ್ಸಾಹ ಇಂದು ಹುಡುಕಿದರೂ ಸಿಗುವುದಿಲ್ಲ.
ಅವರ ಕುಣಿದಾಟಕ್ಕೆ ಅಲುಗಾಡದಂತೆ ಭುಜಕಿರೀಟಗಳನ್ನು ಹಗ್ಗದಿಂದ ಬಿಗಿದಿರುತ್ತಿದ್ದರು. ಬಯಲಾಟದ ತಾಲೀಮಿನಿಂದ ಹಿಡಿದು ಪ್ರದರ್ಶನ ಮುಗಿಯುವವರೆಗೆ ಕುಣಿಯುತ್ತಿದ್ದ, ಚೀರುತ್ತಿದ್ದ ನಮ್ಮ ಕಲಾವಿದರ ತಾಕತ್ತು ನೆನೆದರೆ ರೋಮಾಂಚನವಾಗುತ್ತದೆ.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ನಾನು ಆ ರೀತಿ ಕುಣಿಯಲು ಪ್ರಯತ್ನಿಸಿ ಕೈಕಾಲು ನೋಯಿಸಿಕೊಂಡಿದ್ದೆ, ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾದ ಆಟ ಬೆಳಕು ಹರಿದರೂ ಮುಗಿಯುತ್ತಿರಲಿಲ್ಲ. ಇನ್ನು ನೂರಾರು ಮಾತುಗಳು ಹತ್ತಾರು ಹಾಡುಗಳು ಹಾಗೆ ಉಳಿದಿರುವಾಗಲೇ ಸೂರ್ಯ ಆಗಸನಲ್ಲಿ ಅರುಳುತ್ತಿದ್ದ, ಅನಿವಾರ್ಯವಾಗಿ ಕಲಾವಿದರು ಆಟ ಮುಗಿಸಬೇಕಾಗುತ್ತಿತ್ತು. ಬೆಳಕು ಹರಿದರೂ ಕಲಾವಿದರ ಉತ್ಸಾಹ ಮಾತ್ರ ಕುಗ್ಗುತ್ತಿರಲಿಲ್ಲ.
ಮುಂಜಾವು ಕಲಾವಿದರ ಉತ್ಸಾಹಕ್ಕೆ ತಣ್ಣೀರು ಎರೆಚುತ್ತಿತ್ತು. ಆಟ ಮುಗಿದರೂ ನೂರಾರು ಪ್ರೇಕ್ಷಕರು ಅಲ್ಲಲ್ಲಿ ಹಾಗೆ ನೆಲದ ಮೇಲೆ ನಿದ್ರೆಗೆ ಶರಣಾಗುತ್ತಿದ್ದರು. ಅವರು ಕುಳಿತು ಬಿಟ್ಟ ಉಳಿದ ಪ್ರದೇಶಗಳಲ್ಲಿನ ಮೂತ್ರ ವಿಸರ್ಜನೆಯು ಚಿತ್ತಾರಗಳನ್ನು ಕುತೂಹಲದಿಂದ ಗಮನಿಸಿ ಎಣಿಸುತ್ತಿದ್ದೆ. ಅರೆ ರಾತ್ರಿ ಯಾವಾಗ, ಎಲ್ಲಿ ಜನ ಉಚ್ಚೆ ಹೊಯ್ದರು ಎಂದು ಗೊತ್ತಾಗುತ್ತಿದ್ದಿಲ್ಲ.
ಪ್ರತಿಯೊಂದನ್ನು ಕೂಲಂಕುಷವಾಗಿ ಗಮನಿಸುವ ನನ್ನ ಮನಸ್ಸಿಗೆ ಇಂತಹ ಸಣ್ಣ ಸಂಗತಿಗಳು ಬೆರಗು ಮೂಡಿಸುತ್ತಿದ್ದವು.
ಮುಂದೆ ನಾನು ಹೈಸ್ಕೂಲು ಸೇರುವ ಹೊತ್ತಿಗೆ ಬಯಲಾಟಗಳು ಸಂಪೂರ್ಣ ಮಾಯವಾದವು. ಜನರಿಗೆ ಹಲಗಿ ಮುರಿಯುವ ಹಾಗೆ ಕುಣಿಯುವ ತಾಕತ್ತು ಕಡಿಮೆಯಾಯಿತೇನೋ ಅನಿಸುತ್ತದೆ. ಜನ ಸೂಕ್ಷ್ಮರಾದಂತೆಲ್ಲ ಜನಪದ ಕಲೆಗಳು ನಶಿಸಿ ಹೋದವು. ನಮ್ಮೂರ ಎರಡನೇ ತಲೆಮಾರಿನ ಯುವಕರು ರಕ್ತ ರಾತ್ರಿ ನಾಟಕದಲ್ಲಿ ಆಸಕ್ತಿ ಬೆಳೆಸಿದಿಕೊಂಡರು.
ಹವ್ಯಾಸಿ ಕಲಾವಿದರು, ಸೇರಿಕೊಂಡು ರಕ್ತರಾತ್ರಿ ನಾಟಕ ಆಡಲು ಆರಂಭಿಸಿದರು. ನಮ್ಮೂರ ವ್ಯಾಪಾರಸ್ಥರು ಬಣ್ಣ ಹಚ್ಚಿದ್ದು ರಕ್ತ ರಾತ್ರಿಯ ವೈಶಿಷ್ಟ್ಯ.
ಹಗಲು ಹೊತ್ತಿನಲ್ಲಿ ಪೈಜಾಮ, ದೋತ್ರ, ಲುಂಗಿ ಸುತ್ತಿಕೊಂಡು ತಿರುಗಾಡುತ್ತಿದ್ದ ಬಂಧು ಮಿತ್ರರನ್ನು ರಕ್ತ ರಾತ್ರಿ ನಾಟಕಗಳಲ್ಲಿ ನೋಡಿದಾಗ ನಿಜವಾದ ಅಪ್ರತಿಮ ಕಲಾವಿದರೆನಿಸುತ್ತಿದ್ದರು. ಕಂದಗಲ್ ಹನುಮಂತರಾಯರ ರಕ್ತರಾತ್ರಿ ಸಂಭಾಷಣೆಗಾಗಿ ಹೆಸರುವಾಸಿಯಾದ ನಾಟಕ.
ಎಲೆ ಉತ್ತರೆ ದಿನ ಮೂರು ಕಳೆಯುವದೊರಳಗೆ ನಿನ್ನ ಗರ್ಭಸ್ಠ ಪಿಂಡವು ಪ್ರಳಯ ಎಂಬ ಆರ್ಭಟ ಸಂಭಾಷಣೆ ಇಡೀ ವೇದಿಕೆ ಕಂಪಿಸುವಂತೆ ಮಾಡುತ್ತಿತ್ತು.
ಅಶ್ವತ್ಥಾಮನ ಪಾತ್ರದಾರಿ ಕೈಯಲ್ಲಿ ಚಂಡಾಡಿದ ರುಂಡಗಳನ್ನು ಹಿಡಿದು ವೇದಿಕೆ ಮೇಲೆ ಗುಡುಗುವಾಗ ಹೆಣ್ಣು ಮಕ್ಕಳು ಹೆದರಿ ಬಿಡುತ್ತಿದ್ದರು. ಬಾಲ್ಯದಲ್ಲಿ ಅತೀ ಹೆಚ್ಚು ಬಾರಿ ನೋಡಿ ನಲಿದ ನಾಟಕ ರಕ್ತ ರಾತ್ರಿ ಇಂದಿಗೂ ನೋಡಬೇಕೆನಿಸುತ್ತದೆ. ಆದರೆ ಮುಂದೆ ನಾಟಕ ಸಂಸ್ಕೃತಿ ಬದಲಾಯಿತು. ರಕ್ತರಾತ್ರಿಯಿಂದ ಕಲಾವಿದರು ಗೌಡ್ರ ಗದ್ಲ, ದೇಸಾಯರ ದರ್ಬಾರಕ್ಕೆ ತಿರುಗಿದಾಗ ನಿರಾಶೆಯಾಗ ತೊಡಗಿತು

ವೃತ್ತಿರಂಗಭೂಮಿ ಕಲಾವಿದರು ಹಾಗೂ ಊರ ಕಲಾವಿದರೊಂದಿಗೆ


ರಕ್ತ ರಾತ್ರಿ ನಾಟಕದ ದ್ರೌಪದಿ ಪಾತ್ರದಾರಿ ಮನ್ಸೂರ ಸುಭದ್ರಮ್ಮ ಶ್ರೇಷ್ಠ ಕಲಾವಿದೆ. ನಮ್ಮೂರಿನ ರಂಗಾಸಕ್ತಿ ವ್ಯಾಪಾರಿಗಳಾದ ಸಿ.ಶಿವಪ್ಪ ಅವರ ಸಹಾಯದೊಂದಿಗೆ ಸುಭದ್ರಮ್ಮ ಸಾಕಷ್ಟು ಸಲ ಕಾರಟಗಿಗೆ ಬರುತ್ತಿದ್ದರು.
ರಕ್ತ ರಾತ್ರಿ ನಾಟಕದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವದಲ್ಲದೆ, ಕೊನೆಗೆ ಬೆಟ್ಟದ ಮೇಲೊಂದು ಮನೆಯ ಮಾಡಿ ವಚನವನ್ನು ಹಾಡಿ ಪ್ರೇಕ್ಷಕರನ್ನು ಖುಷಿ ಪಡಿಸುತ್ತಿದ್ದರು.
ಒಮ್ಮೆ ನಮ್ಮೂರಲ್ಲಿನ ರಕ್ತ ರಾತ್ರಿಯ ಅಭಿನಯಕ್ಕಾಗಿ ನಾಡಿನ ಹಿರಿಯ ಕಲಾವಿದರನ್ನು ಕರೆಸಿದ ನೆನಪು. ರಕ್ತ ರಾತ್ರಿ ನಾಟಕದಲ್ಲಿ ಪಾತ್ರ ಮಾಡಲು ಪ್ರವಚನಕಾರ, ರಂಗಕಲಾವಿದ ರೇವಣಸಿದ್ಧಯ್ಯಶಾಸ್ತ್ರೀ (ಭಾರತೀಶ) ಹಾಗೂ ಎಲಿವಾಳ ಸಿದ್ಧಯ್ಯ ಅವರನ್ನು ಕರೆಸಿದ್ದರು.
ಆವರಿಬ್ಬರೂ ಸಿನೆಮಾ ನಟರು ಎಂಬ ಖ್ಯಾತಿ ಬೇರೆ ರಂಗ ಕಲಾವಿದ ಎಲಿವಾಳ ಸಿದ್ಧಯ್ಯ ಶ್ರೀಕೃಷ್ಣ ಗಾರುಡಿ ಸಿನೆಮಾದಲ್ಲಿ ಡಾ ರಾಜ್ ಅವರೊಂದಿಗೆ ಅಭಿನಯಿಸಿದ್ದರು ಎಂಬ ಖ್ಯಾತಿ ಬೇರೆ ಇತ್ತು.
ರಕ್ತ ರಾತ್ರಿ ನಾಟಕದಲ್ಲಿನ ಎಲಿವಾಳ ಸಿದ್ಧಯ್ಯ ಹಾಗೂ ಭಾರತೀಶರ ಅಭಿನಯ, ಸಂಭಾಷಣೆ ಹೇಳುವ ವಿಧಾನ ಅಬ್ಬಾ ! ತುಂಬಾ ರೋಮಾಂಚನಕಾರಿ !!
ಬಾಲಕನಾಗಿದ್ದಾಗಿನ ರಂಗಾಸಕ್ತಿಗೆ ಕಾರಣ ಹುಡುಕಿದೆ ಉತ್ತರ ಸಿಗಲಿಲ್ಲ. ನಂತರ ವಿರಾಮದ ವೇಳೆಯಲ್ಲಿ ನಮ್ಮೂರ ಹಿರಿಯರನ್ನು ವಿನಂತಿಸಿಕೊಂಡು ಗ್ರೀನ್ ರೂಮಿನಲ್ಲಿ ಸಿದ್ಧಯ್ಯ ಹಾಗೂ ಭಾರತೀಶರನ್ನು ಭೇಟಿ ಆಗಿ ಬಂದೆ. ಒಬ್ಬ ಕಲಾವಿದನ ಖಾಸಗಿ ಬದುಕಿನ ವರ್ತನೆಯನ್ನು ಗ್ರೀನ್ ರೂಮಿನಲ್ಲಿ ಕಂಡು ಅಚ್ಚರಿ ಪಟ್ಟೆ.
ರಾಜ ಮಹಾರಾಜರ ವೇಷಧಾರಿಗಳು ಗ್ರೀನ್ ರೂಮಿನಲ್ಲಿ ಬೀಡಿ, ಸಿಗರೇಟು ಸೇದುತ್ತಾ ಕುಳಿತದ್ದನ್ನು ಕಂಡು ದಂಗಾದೆ. ಅಯ್ಯೋ ರಾಜ-ಮಹಾರಾಜರು ಬೀಡಿ ಸೇದಬಹುದೇ ಎಂದು ಆಲೋಚಿಸಿದೆ.
ಮುಂದೆ ನಮ್ಮೂರಿಗೆ ಗೌಡ್ರಗದ್ಲ ನಾಟಕದ ಕ್ಯಾಂಪ್ ಬಂದಿತು. ನಾಟಕದ ಲೇಖಕ ಬಿ.ವ್ಹಿ.ಈಶ ಹಾಸ್ಯಪಾತ್ರದಲ್ಲಿ ನಟಿಸುತ್ತಿದ್ದರೆ, ಸಂಘದ ಒಡೆಯರಾದ ಹಾಲಾಪೂರ ರಾಮರಾವ್ ದೇಸಾಯಿ ಗೌಡರ ಪಾತ್ರ ಮಾಡುತ್ತಿದ್ದರು.
ಗೌಡ್ರ ಗದ್ಲ ಕಾರಟಗಿಯಲ್ಲಿ ತುಂಬಾ ದಿನ ಇತ್ತು. ರಂಗಭೂಮಿ ಕಲಾವಿದರ ಅಸಹಾಯಕತೆ, ಹಗಲು ನಿದ್ರೆ, ಕುಡಿತದ ಹವ್ಯಾಸಗಳನ್ನು ಹಿರಿಯ ಗೆಳೆಯರು ರಸವತ್ತಾಗಿ ವಿವರಿಸುತ್ತಿದ್ದರು.
ಮುಂದೆ ಮತ್ಯಾವುದೋ ಕಂಪನಿಯಲ್ಲಿ ಅಭಿನಯಿಸಲು ಹಿರಿಯ ನಟ ಉದಯಕುಮಾರ ಬಂದಿದ್ದರು. ನಮ್ಮ ಕಟ್ಟಡದಲ್ಲಿ ಬಾಡಿಗೆಯಿದ್ದ ಕರ್ನಾಟಕ ಪೋಟೋ ಸ್ಟುಡೀಯೋ ಪ್ರಭು ನನ್ನು ಕರೆದುಕೊಂಡು ಹೋಗಿ ಉದಯಕುಮಾರ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ.
ಉದಯಕುಮಾರರಂತಹ ಮೇರು ನಟ, ನಾಟಕ ಆಡಲು ಹಳ್ಳಿಗಳಿಗೆ ತಿರುಗುವ ಅನಿವಾರ್ಯತೆಗಾಗಿ ಒಳಗೊಳಗೆ ಮರುಕ ಪಟ್ಟಿದ್ದೆ, ಸಿನೆಮಾದವರು ಎಂದರೆ ನಡೆದಾಡುವ ದೇವರೆಂದು ನಂಬಿದ ಕಾಲವದು.
ಅವರನ್ನು ಕಣ್ಣು ಪಿಳುಕಿಸದಂತೆ ನೋಡಿ ನಂತರ ಅವರು ಅಭಿನಯಿಸಿದ ಸಿನೆಮಾಗಳನ್ನು ನೋಡಿ, ಹೋ ನಾನವರನ್ನು ಹತ್ತಿರದಿಂದ ನೋಡಿದ್ದೇನೆಲ್ಲ ಎಂದು ಆನಂದ ಪಡುತ್ತಿದ್ದೆ.
ಆಗ ಸಿನೆಮಾಗಳಲ್ಲಿ ಜನಪ್ರಿಯತೆ ಗಳಿಸಿದ್ದ ಕಾಲದಲ್ಲಿ ಸುಂದರ ಕೃಷ್ಣ ಅರಸ್ ಕಾರಟಗಿಗೆ ಬಂದಿದ್ದರು. ಅಷ್ಟೊಂದು ಬೇಡಿಕೆಯಿದ್ದರೂ, ನಾಟಕಗಳಲ್ಲಿ ಅಭಿನಯಿಸಿದ್ದು ಯಾಕೆ ಎಂದು ಅರ್ಥವಾಗಲಿಲ್ಲ.
ಮುಂದೆ ಸುದರ್ಶನ ಶೈಲಶ್ರೀ ದಂಪತಿಗಳು ಕಾರಟಗಿಗೆ ಬಂದಿದ್ದರು. ಹೀಗೆ ಬಾಲ್ಯದಲ್ಲಿ ನಾಟಕದ ಹುಚ್ಚಿನಿಂದಾಗಿ ಮತ್ತೆ ಸಿನೆಮಾ ನೋಡುವ ಚಟಕ್ಕೆ ಬಲಿಯಾದೆ .
ನಟರು, ಅವರ ಅಭಿನಯ, ರಂಗು ರಂಗಿನ ಬದುಕು ಎಲ್ಲರಿಗಿಂತ ಅವರೇ ಗ್ರೇಟ್ ಎನಿಸುತ್ತಿತ್ತು. ಕಲಾವಿದರು ಸತ್ತರೂ ಅವರ ಸಿನೆಮಾಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರಲ್ಲ ಅನಿಸುತ್ತಿತ್ತು.
ಹಾಸ್ಯ ನಟ ನರಸಿಂಹರಾಜು ಅವರನ್ನು ಕುಷ್ಟಗಿಯಲ್ಲಿ ನೋಡಿದ್ದೆ, ಬಾಲ್ಯದುದ್ದಕ್ಕೂ ನಾಟಕಗಳ ಮೂಲಕ ನಾನು ಕಂಡ ಕಲಾವಿದರು ನನ್ನ ಮೇಲೆ ಪ್ರಭಾವ ಬೀರಿದರು. ನನ್ನ ನೆಚ್ಚಿನ ನಟರಾದ ಅನಂತನಾಗ, ಶಂಕರನಾಗ ಹಾಗೂ ರಾಜಕುಮಾರ ಅವರನ್ನು ನೋಡಬೇಕೆಂದು ಹಂಬಲಿಸುತ್ತಿದ್ದೆ ಮುಂದೊಂದು ದಿನ ಆ ಕನಸು ಈಡೇರಿತು.