Monday, August 9, 2010

ಜನನಾಯಕನಾಗಿ ರೂಪುಗೊಳ್ಳುತ್ತಿರುವ ಶ್ರೀರಾಮುಲು
'ಸ್ಟಾರ್ ವಾಲ್ಯೂ' ಹೀಗೆಂದರೇನು? ಇದು ಯಾರಿಗಿರುತ್ತದೆ. ಇಂಡಿಯಾದ ಸಂದರ್ಭದಲ್ಲಿ ಈ starvalue ಇರುವುದು ಸಿನೆಮಾ ನಟರಿಗೆ, ಕ್ರಿಕೆಟ್ ಆಟಗಾರರಿಗೆ, ಸಾಂಸ್ಕೃತಿಕ ಲೋಕದ ದಿಗ್ಗಜರಿಗೆ ಹಾಗೂ ರಾಜಕೀಯ ನಾಯಕರಿಗೆ.
ಆದರೆ ಇಂದು ಬಹುಪಾಲು ರಾಜಕೀಯ ನಾಯಕರು ಸ್ಟಾರ್ ಗಿರಿ ಕಳೆದುಕೊಂಡಿದ್ದಾರೆ. ನಾವು ವಿದ್ಯಾರ್ಥಿಗಳಾಗಿದ್ದಾಗ ರಾಜಕೀಯ ನಾಯಕರ ಮಾತುಗಳನ್ನು ಕೇಳಲು ಮುಗಿಬೀಳುತ್ತಿದ್ದೆವು. ಇಂದು ಆ ವಾತಾವರಣ ಉಳಿದಿಲ್ಲ. ಮಾಧ್ಯಮಗಳು ಹೆಚ್ಚಾದಂತೆಲ್ಲ, ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ಜನರ ಕೂತುಹಲವನ್ನು ಬತ್ತಿಸಿವೆ.
ಈಗ ಎಲ್ಲವೂ ಖುಲ್ಲಂ, ಖುಲ್ಲಾ, ಬಟಾ ಬಯಲು. ಈ ಹಂತದ ನಿರುತ್ಸಾಹದ ದಿನಗಳಲ್ಲಿಯೂ ಅಲ್ಲಲ್ಲಿ ಕೆಲವೊಬ್ಬರು ಈ value ಉಳಿಸಿಕೊಂಡಿರುವುದು ಅಚ್ಚರಿ.
ಬಳ್ಳಾರಿಯ ಶ್ರೀರಾಮುಲು ಕುರಿತು ಬರೆಯಬೇಕಾದಾಗ ಮೇಲಿನ ಸಾಲುಗಳು ಪ್ರಸ್ತುತ ಎನಿಸಿದವು.
ಬಿ. ಶ್ರೀರಾಮುಲು ' ಈಗ ಸುದ್ದಿಯಲ್ಲಿದ್ದಾರೆ. ಇಪ್ಪತ್ತು ವರ್ಷಗಳಿಂದ ಬಳ್ಳಾರಿಯಲ್ಲಿ ಓಡಾಡಿಕೊಂಡು, ಬಡವರ, ಜನಸಾಮಾನ್ಯರ ಪರವಾಗಿ ಕೆಲಸ ಮಾಡಿಕೊಂಡು ನಗರ ಸಭಾ ಸದಸ್ಯರಾಗಿ ಬಳ್ಳಾರಿಗೆ ಸೀಮಿತವಾಗಿದ್ದ 'ಶ್ರೀ' ಇಂದು ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ವ್ಯಕ್ತಿಯಾಗಿ ರೂಪುಗೊಂಡಿದ್ದು ಹೇಗೆ?
ಈ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. 2004 ರಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದ ಶ್ರೀರಾಮುಲು ಸ್ವತ: ತಾವೇ ಅಂದುಕೊಂಡಿರಲಿಲ್ಲ ತಾವು ಈ ಪರಿ ಬೆಳೆಯಬಹುದು ಎಂದು.
ಆರು ವರ್ಷಗಳಲ್ಲಿ ಆಳೆತ್ತರಕ್ಕೆ ಬೆಳೆಯ ನಿಂತಿದ್ದಾರೆ ಅವರ ಆರಡಿ ವ್ಯಕ್ತಿತ್ವದ ಹಾಗೆ!
2006 ಅಗಸ್ಟ 14 ರ ರಾತ್ರಿ ಗದಗ ಜಿಲ್ಲಾಧಿಕಾರಿಗಳ ಸಂದೇಶ ಬಂತು. "ನಾಳೆ ಜಿಲ್ಲಾ ಉಸ್ತುವಾರಿ ಸಚಿವರು ಭಾಷಣ ಮಾಡಲಿದ್ದಾರೆ. ಅದರ ಪ್ರತಿಯನ್ನು ಪರಿಶೀಲಿಸಿ ತುರ್ತಾಗಿ ಮತ್ತೊಂದು ಭಾಷಣ ತಯಾರಾಗಬೇಕು" ಎಂದು.
ಗದಗ ಐ.ಬಿ. ಯಲ್ಲಿ ಅವರ ಆಪ್ತ ಸಹಾಯಕ ಸೋಮನಾಥ ಕುಡತಿನಿ ನೆರವಿನೊಂದಿಗೆ ಸರಳ ಭಾಷೆಯಲ್ಲಿ ಭಾಷಣ ತಯಾರಿಸಿದೆ. ಗದುಗಿನಲ್ಲಿ ಆಗಬಹುದಾದ ಅಭಿವೃದ್ಧಿ ಕೆಲಸಗಳ ಕುರಿತು ಸಣ್ಣ ಟಿಪ್ಪಣಿ ತಯಾರಿಸಿದೆ.
ರಾತ್ರಿ ಹನ್ನೆರಡು ಗಂಟೆಗೆ ವ್ಯಕ್ತಿಯೊಬ್ಬರು ಅಲ್ಲಿಗೆ ಪ್ರವೇಶಿಸಿದರು ನನ್ನ ಪಾಡಿಗೆ ನಾನು ಬರೆಯುತ್ತಲೇ ಇದ್ದೆ. ಕುರುಚಲು ಗಡ್ಡದ ಎತ್ತರ ವ್ಯಕ್ತಿ ಸದ್ದಿಲ್ಲದೇ ಎದುರಿಗೆ ಕುಳಿತಿದ್ದನ್ನು ನಾನು ಲೆಕ್ಕಿಸಲಿಲ್ಲ. ಅವರ ಸಹಾಯಕರ ನೆರವಿನಿಂದ ಪರಿಚಯಿಸಿಕೊಂಡು ಮುಂದಾದೆ, ಇಲ್ಲ ಕುತ್ಕೊಳ್ಳಿ ಸರ್ ಎಂದು ತಮ್ಮ ಕನ್ನಡ ಭಾಷಾ ಸಮಸ್ಯೆಯನ್ನು ವಿವರಿಸಿದರು. ಆದಷ್ಟು language simple ಆಗಿರಲಿ ಸರ್ ಎಂದರು.
ರಾಜ್ಯದ ಕ್ಯಾಬಿನೆಟ್ ಸಚಿವರೊಬ್ಬರ ಸರಳತೆ, ಪ್ರಾಮಾಣಿಕತೆಗೆ ಅಚ್ಚರಿ ಎನಿಸಿತು.
ಹೇಳಿಕೇಳಿ ನಾನು ಕಾಲೇಜಿನಲ್ಲಿ ಪಾಠಮಾಡುವ ಮೇಷ್ಟ್ರು, ಇಲ್ಲಿಯೂ ಪಾಠ ಪ್ರಾರಂಭಿಸಿದೆ. ಶಿಸ್ತಿನ ವಿದ್ಯಾರ್ಥಿಯಂತೆ ಸಚಿವ ಶ್ರೀರಾಮುಲು ತುಂಬಾ ಅಚ್ಚುಕಟ್ಟಾಗಿ ಹೊಂವರ್ಕ ಮಾಡಿದರು. ಅವರ ಮುಖದಲ್ಲಿ ಸಂತೃಪ್ತಿಯ ಭಾವ. ಅಲ್ಲಿಂದ ಬೀಳ್ಕೊಟ್ಟಾಗ ರಾತ್ರಿ ಎರಡು ಗಂಟೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಡುರಾತ್ರಿಯ ಸಮಯದಲ್ಲಿ ಮನೆ ಸೇರಿದೆ.
ಮರುದಿನ ಎಂದಿನಂತೆ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ ಅಂದು ಊರ ತುಂಬಾ ನೂತನ ಸಚಿವ ಶ್ರೀರಾಮುಲು ಅವರದೇ ಸುದ್ದಿ. ಆಶ್ಚರ್ಯ! ಇಡೀ ನಗರವೇ ಉಲ್ಲಸಿತವಾಗಿತ್ತು. ಬಳ್ಳಾರಿಯಿಂದ ಬಂದ ರಾಮುಲು ಬೆಳಕು ಹರಿಯುವುದರೊಳಗೆ super star ನಂತೆ ಮಿಂಚತೊಡಗಿದರು.
ಮಾಧ್ಯಮದ ಮಿತ್ರರು, ಅಧಿಕಾರಿಗಳು, ವಿಶೇಷವಾಗಿ ಯುವಕರು ಹೊಸ ನಾಯಕನ ಭಿನ್ನ ಆಲೋಚನಾ ರೀತಿಯನ್ನು ಸಂತೃಪ್ತಿಯಿಂದ ಕೊಂಡಾಡಿದರು. ಗದುಗಿನ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಉಂಟಾಯಿತು. ಎಲ್ಲರ ನಾಲಿಗೆ ಮೇಲೆ ಶ್ರೀರಾಮುಲು ತೇಲಾಡುತ್ತಿದ್ದರು.
ಹಂತಹಂತವಾಗಿ ಜಿಲ್ಲೆಯ ಬೆಳವಣಿಗೆಗೆ ಕಾರಣರಾದರು. ಕಾರಿನಲ್ಲಿ ಹೋಗುವಾಗ ಸರ್ಕಲ್ ಸಿಕ್ಕಿತು. ಇದೇನು ಎಂದು ಅಧಿಕಾರಿಗಳಿಗೆ ಕೇಳಿದರು 'ಸರ್ ಇದು ಗಾಂಧಿ ಸರ್ಕಲ್' ಎಂದರು ಮತ್ತೆ ಇಲ್ಲಿ ಗಾಂಧೀಜಿಯೇ ಇಲ್ಲಾ ಎಂದು ಉತ್ತರಿಸಿದ ಸಚಿವರು ಕೆಲವೇ ತಿಂಗಳಿನಲ್ಲಿ ಅಲ್ಲಿ ಸುಂದರವಾದ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿ ಗಾಂಧಿ ಸರ್ಕಲ್ ನ ಘನತೆ ಹೆಚ್ಚಿಸಿದರು.
ಗಾಂಧಿ ಪ್ರತಿಮೆಯ ಅನಾವರಣದ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಶ್ರೀರಾಮುಲುರ ಇಚ್ಛಾ ಶಕ್ತಿಯನ್ನು ಪಕ್ಷಭೇದ ಮರೆತು ಕೊಂಡಾಡಿದರು. ಅಂದೇ ಉಳಿದ ಸರ್ಕಲ್ ಗಳನ್ನು ವೀಕ್ಷಿಸಿ ಒಂದು ಕ್ರೀಯಾಯೋಜನೆ ತಯಾರಿಸಿ ಪ್ರತಿಮೆಗಳ ಅನಾವರಣಕ್ಕೆ ಕಾರಣರಾಗಿ ನಗರದ ಸೌಂದರ್ಯವನ್ನು ಹೆಚ್ಚಿಸಿದರು.
ಗದುಗಿಗೆ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ ಅಧಿಕಾರಿಗಳು ಏನೇನೋ ಕಾರಣ ಹೇಳುತ್ತಿದ್ದರು. ನಿರಂತರ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಂಡು ನೀರಿಗಾಗಿ ಶಪಿಸುತ್ತಿದ್ದ ಮಹಿಳೆಯರ ಖುಷಿಗೆ ಕಾರಣರಾದರು.
ಹೀಗೆ ಒಂದೊಂದು ಸಮಸ್ಯಗಳನ್ನು ಪರಿಹರಿಸುತ್ತ ಗದುಗಿನ ಚಿತ್ರಣ ಬದಲಿಸಿದರು. ಗದುಗಿನಲ್ಲಿ ಅವರ ಪಕ್ಷ ಅಧಿಕಾರದಲ್ಲಿರಲಿಲ್ಲ. ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಪಕ್ಷಕ್ಕೆ ಹೊಸ ಚಾಲನೆ ನೀಡಿದರು.
ಈಗ ಅದೆಲ್ಲ ಇತಿಹಾಸ. 2008 ಕ್ಕೆ ಗದಗ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಯಿತು. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷ ತನ್ನ ಖಾತೆ ತೆರೆದದ್ದು ಶ್ರೀರಾಮುಲು ಪ್ರಭಾವದಿಂದಲೇ ಎಂದು ಎಲ್ಲರೂ ಒಪ್ಪಿಕೊಂಡರು.
ಅಂದಿನಿಂದ ಜಿಲ್ಲಾ ಮಂತ್ರಿಯಾಗಿ ರಾಮುಲು ಅಭಿವೃದ್ಧಿ ಹರಿದು ಬರುತ್ತಲೇ ಇದೆ.
ಇದು ನಾನು ಕಂಡ ಶ್ರೀರಾಮುಲು ಅವರ ರಾಜಕೀಯ ಸಾಧನೆ. ಆದರೆ ಒಬ್ಬ ವ್ಯಕ್ತಿಯನ್ನು ವೈಯಕ್ತಿಕವಾಗಿ ನೋಡುವುದು ಅಷ್ಟೇ ಕೂತುಹಲಕರ.
ಆರಂಭದಲಿ ಹೇಳಿದ ಕತೆಯನ್ನು ಅರ್ಧಕ್ಕೆ ಬಿಟ್ಟಿದ್ದೆ ಅಲ್ಲವೆ? ಅಗಷ್ಟ 15 ರ ಭಾಷಣ ಯಶಸ್ವಿಯಾದ ಮೇಲೆ ಅವರ ಪ್ರತಿ ಭಾಷಣಗಳನ್ನು ತಯಾರಿಸುವ ಹೊಣೆ ನನ್ನ ಮೇಲೆ ಬಿತ್ತು. ಒಬ್ಬ ಅರೆಸರಕಾರಿ ನೌಕರನಾಗಿ ಇದು ಜಿಲ್ಲಾಡಳಿತ ಒಪ್ಪಿಸಿದ ಜವಾಬ್ದಾರಿಯ ಮಿತಿಯಲ್ಲಿತ್ತು. ನಾನೆಂದು ಮಂತ್ರಿಗಳನ್ನು ವೈಯಕ್ತಿಕವಾಗಿ ಗೋಜಿಗೆ ಹೋಗಲಿಲ್ಲ. ಅವರ ಆಪ್ತ ಸಹಾಯಕರು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದರು.
ಭಾಷಣಗಳ ಮೂಲಕ ಆರಂಭವಾದ ನಂಟು ವೈಯಕ್ತಿಕ ಸಂದರ್ಭಕ್ಕೆ ತಿರುಗಿದ್ದು ನಿರೀಕ್ಷಿತವೇನಲ್ಲ. ಅವರ ಎಲ್ಲ ಖಾಸಗಿ ಮೊಭೈಲುಗಳಲಿ ನಾನುಸೇರಿಕೊಂಡಿದ್ದೆ. ಆಪ್ತ ಸಹಾಯಕರು ಇಲ್ಲದಾಗ ನಸುಕಿನಲ್ಲಿ ಅವರು ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದರು.
ಸದಾ ಜನಜಂಗುಳಿಗಳ ಮಧ್ಯ ಇರುತ್ತಿದ್ದ ಅವರ ಹತ್ತಿರ ಹೋಗಲು ನನಗೆ ಸಂಕೋಚ ಹೀಗಾಗಿ ವೈಯಕ್ತಿಕ ಭೇಟಿಯಲ್ಲಿ ನಿರಾಕರಿಸಿ ಕೇವಲ ಫೋನಿನಲ್ಲಿಯೇ ವ್ಯವಹರಿಸುತ್ತಿದ್ದೆ.
ಒಂದೆರೆಡು ಬಾರಿ ಭೇಟಿಯಾಗಲು ಒತ್ತಾಯಿಸಿದರು. 2008 ರ ಚುನಾವಣೆ ಹಾಗೂ ಅಖಿಲಭಾರತ ಸಾಹಿತ್ಯ ಸಮ್ಮೇಳನ ಸಂದರ್ಭಗಳಲಿ ಸುಧೀರ್ಘಭೇಟಿ ಅನಿವಾರ್ಯವಾಯಿತು.
ನಂತರದ ಅನೇಕ ಭೇಟಿಗಳಲಿ ಅವರ ಸರಳತೆ ಅರಿಯಲು ಕಾರಣವಾಯಿತು.
Mass Leader ಆಗುವ ಎಲ್ಲ ಸಾಧ್ಯತೆಗಳನ್ನು ರೂಪಿಸಿಕೊಂಡಿದ್ದಾರೆ.
ಒಮ್ಮೆ ಅವರೊಂದಿಗೆ ಬಳ್ಳಾರಿಯಿಂದ ಕ್ಯಾಪ್ಟರನಲ್ಲಿ ಪ್ರಯಾಣಿಸುವಾಗ ತಮ್ಮ ಬಾಲ್ಯದ ಬಡತನದ ದಿನಗಳನ್ನು ನೆನಪಿಸಿಕೊಂಡರು. ಹೀಗೆ ಐಷಾರಾಮಿ ವರ್ತಮಾನದಲ್ಲಿರುವಾಗ ಕಳೆದು ಹೋದ ಕಹಿ ದಿನಗಳನ್ನು ಮೆಲಕು ಹಾಕಲು ಮನಸ್ಸು ನಿರಾಕರಿಸುತ್ತದೆ. ಆದರೆ ಬದುಕಿನ ಮೌಲ್ಯ ತಿಳಿದರು ಇತಿಹಾಸವನ್ನು ಮರೆಯುವುದಿಲ್ಲ.
ಮರೆಯುವ ವರ್ತಮಾನಕ್ಕೆ ಇತಿಹಾಸವನ್ನು ಮರೆಸುವ ಕ್ರೌರ್ಯವಿರುತ್ತದೆ. ಆದರೆ ಶ್ರೀರಾಮುಲು ಅವರಿಗೆ ಇತಿಹಾಸದ ದುರ್ದಿನಗಳನ್ನು ವರ್ತಮಾನದ ಸುಖವನ್ನು ಅರ್ಥವಾಗಿ ಅನುಭವಿಸಲು ಕಾರಣವಾಗಿದೆ.
ಕೇವಲ ಹಣದಿಂದ ರಾಜಕೀಯ ಅಸಾಧ್ಯ ಎಂದವರಿಗೆ ಗೊತ್ತಿದೆ. ಆದ್ದರಿಂದಲೇ ಸದಾ ಜನರೊಂದಿಗೆ ಇರಲು ಬಯಸುತ್ತಾರೆ. ಜನರು ಅಷ್ಟೇ ಅವರ ಸಾಮಿಪ್ಯ ಬಯಸುತ್ತಾರೆ.
ಗದುಗಿನಲ್ಲಿ ಶಾಲಾ ಮಕ್ಕಳಿಗೆ ರಾಮುಲು ಎಂದರೆ ಸಂಭ್ರಮ. ಅವರನ್ನು ನೋಡಲು, ಮಾತನಾಡಿಸಲು, ಮುಟ್ಟಲು ಬಯಸುತ್ತಾರೆ. ಅವರೊಬ್ಬ superman ಎಂಬಂತೆ ಮಕ್ಕಳು ಮಾತನಾಡುವುದನ್ನು ಸಾರ್ವಜನಿಕವಾಗಿ ಕೇಳಿದ್ದೇನೆ.
ಅವರ ಹತ್ತಿರ ದೊಡ್ಡ ಕಾರುಗಳಿವೆಯಂತೆ, ಅವರು ಹಾಕುವ ಚಸ್ಮಾ(sunglass) ಇಂಗ್ಲೆಂಡಿನಿಂದ ತಂದಿದ್ದಾರಂತೆ. ಅವರು ತಾವೇ ಹೆಲಿಕ್ಯಾಪ್ಟರ್ ನಡೆಸುತ್ತಿದ್ದರಂತೆ ಹೀಗೆ ಮಕ್ಕಳು ತಮ್ಮ ನೆಚ್ಚಿನ ನಾಯಕನ ಗುಣಗಾನ ಮಾಡಿ ಆರಾಧಿಸುತ್ತಾರೆ.
ಹಾಗಂತ ಶ್ರೀರಾಮುಲು ಕೇವಲ ಆರಾಧ್ಯ ದೈವದಂತೆ ಇದ್ದಾರೆ ಎಂದರ್ಥವಲ್ಲ. ಜನಪರ ಶಾಸಕನಾಗಿ, ಪ್ರಾಮಾಣಿಕವಾಗಿ ಮಂತ್ರಿಯಾಗಿ ಕೆಲಸ ಮಾಡುತ್ತಾರೆ. ಆದರೆ ಆರೋಪದಿಂದಾಗಿ ಅವರ ಸಾಧನೆಗಳನ್ನು ಗಣಿಧೂಳಿನಲ್ಲಿ ಮುಚ್ಚಿಹಾಕುವ ಹುನ್ನಾರ ನಡೆದಿದೆ.
ಗಣಿಗಾರಿಕೆ ಅವರ ಉದ್ಯೋಗವಿರಬಹುದು. ಗಣಿಗಾರಿಕೆಯನ್ನು ಬಳ್ಳಾರಿಯಲ್ಲಿ, ನಾಡಿನಲ್ಲಿ ಬೇಕಾದಷ್ಟು ಜನ ಮಾಡುತ್ತಾರೆ.
ಇಂತಹ ವ್ಯಾಪಾರೋಧ್ಯಮಗಳಲ್ಲಿ ಪ್ರಾಮಾಣಿಕತೆಯನ್ನು ಅಪೇಕ್ಷಿಸುವುದು ಸಲ್ಲದು. ಆದರೆ ಗಣಿಗಾರಿಕೆಯ ಲಾಭವನ್ನು ಸಾಮಾಜಿಕ ಸೇವೆಗೆ, ರಾಜಕೀಯ ಬೆಳವಣಿಗೆಗೆ ಬಳಸಿಕೊಂಡಿರುವುದು ತಪ್ಪಲ್ಲ. ಅವರ ಸಾಮಾಜಿಕ ಬದ್ಧತೆ ಅಷ್ಟೇ ನಮಗೆ ಮುಖ್ಯ.
ಬಳ್ಳಾರಿಯೆಂದರೆ ಧೂಳು, ಕೊಳಕು ವಾಸನೆ ಎಂಬ ಭಾವನೆಯಿತ್ತು. ಇಂದು ಬಳ್ಳಾರಿಯ ವಿಶಾಲ ರಸ್ತೆಗಳು ಅಭಿವೃದ್ಧಿಯನ್ನು ಸಾರುತ್ತವೆ ನಗರ ಸೌಂದರ್ಯಕ್ಕೆ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಕಳಕಳಿಯಿಂದ ದುಡಿಯುತ್ತಾರೆ. ಕೇವಲ ಗಣಿಗಾರಿಕೆ ನೆಪ ಇಟ್ಟುಕೊಂಡು ಅಭಿವೃದ್ಧಿಯನ್ನು ಮರೆಮಾಚಲು ಯತ್ನಿಸುವುದು ಖಂಡನೀಯ. ಅದೇ ಕಾರಣಕ್ಕೆ ಇವರನನ್ಉ ದ್ರೋಹಿಗಳಂತೆ ಚಿತ್ರಿಸುವುದು ಸಮಂಜಸವಲ್ಲ. ಇವರಿಗೆ ವಯಸ್ಸಿದೆ, ಹುಮ್ಮಸ್ಸಿದೆ ಆಮೇಳದಲ್ಲಿ ಸಣ್ಣಪುಟ್ಟ ರಾಜಕೀಯ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅದನ್ನು ದೊಡ್ಡದು ಮಾಡಿ ಇವರ ಅಭಿವೃದ್ಧಿ ಕಾರ್ಯಗಳನ್ನು ಉಪೇಕ್ಷಿಸುವುದು ಖಂಡನೀಯ. ಅಭಿವೃದ್ಧಿಗಾಗಿ ಚಿಂತಕರು ಮಾರ್ಗದರ್ಶನ ಮಾಡಲಿ. ಇಡೀ ದೇಶದಲ್ಲಿಯೇ ಸಮರ್ಪಕ ಗಣಿ ನೀತಿ ರೂಪಗೊಳ್ಳಲಿ. ಅದನ್ನು ಬಿಟ್ಟು ಕೇವಲ ಬಳ್ಳಾರಿಯನ್ನು ಟಾರ್ಗೇಟ್ ಮಾಡಿಕೊಂಡು ಅವಮಾನಿಸುವುದು ಸರಿಯಲ್ಲ.
ಪರಿಸರ ವಿನಾಶ ತಡೆಯಲು ರಾಜಕೀಯ ಇಚ್ಛಾಶಕ್ತಿ ಬೇಕು ಪರಿಸರ ವಿನಾಶ ಎಲ್ಲರಿಂದ ಆಗಿದೆ. ಕೇವಲ ರೆಡ್ಡಿಗಳಿಂದಲ್ಲ ಎಂಬ ಸತ್ಯ ಅರಿಯಬೇಕು.
ಈಗ ಶ್ರೀರಾಮುಲು ತಮ್ಮ ಸಾತ್ವಿಕ ಪ್ರತಿಭಟನೆ ಎಲ್ಲಿಗೆ shock ನೀಡಿದ್ದಾರೆ. ಕೇವಲ ಜಿಲ್ಲೆಯಲ್ಲಿ ತಿರುಗಾಡಿದ್ದಾರೆ ಮಹತ್ವ ಬಿರುತ್ತಿದ್ದಿಲ್ಲ. ತಮ್ಮ ಪ್ರತಿಭಟನೆ ಸಾತ್ವಿಕ ರೂಪ ನೀಡಿದ್ದಾರೆ.
ತಮಗೆರ ತುಂಬಾ ಇಷ್ಟವಾದ, ಅವರ ಸೌಂದರ್ಯಕ್ಕೆ ಸ್ಟಾರಗಿರಿಗೆ ಕಾರಣವಾದ ಗುಂಗುರು ಕೂದಲು ಬಲಿಕೊಟ್ಟಿದ್ದಾರೆ. ತುಂಬಾ ಇಷ್ಟವಾದ ವಸ್ತುಗಳನ್ನು ತ್ಯಜಿಸಲಿಕ್ಕೆ ಮಾನಸಿಕ ಸ್ಥೈರ್ಯ ಬೇಕು. ಶ್ರೀರಾಮುಲು ಅಂತಹ ಧೈರ್ಯಕ್ಕೆ ಮುಂದಾಗಿದ್ದಾರೆ. ತಲೆ ಬೊಳಿಸಿಕೊಂಡು ತಮ್ಮಷ್ಟಕ್ಕೆ ತಾವೇ ಶಿಕ್ಷೆ ಅನುಭವಿಸಿ ಜನರನ್ನು ರೋಮಾಂಚನಗೊಳಿಸಿದ್ದಾರೆ.
ಬರಿಗಾಲಿನಲ್ಲಿ ಊಟ ತ್ಯಜಿಸಿ ಹೊಸ ಸಾತ್ವಿಕ ಕಳೆ ತಂದುಕೊಟ್ಟಿದ್ದಾರೆ. ಅವರ ಬೋಳಾದ ತಲೆ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಒಮ್ಮೊಮ್ಮೆ ಜನನಾಯಕರಿಗೆ ಇಂತಹ ಸಾತ್ವಿಕ ಎದೆಗಾರಿಕೆ ಬೇಕು ಕೇವಲ ಶೋ ಮಾಡಿದರೆ ಸಾಲುವುದಿಲ್ಲ ಎಂಬುವುದನ್ನು ಶ್ರೀರಾಮುಲು ಅರಿತುಕೊಂಡು ಪ್ರಬುದ್ಧರಾಗಿದ್ದಾರೆ.
ಅವರ ಪ್ರಬುದ್ಧತೆ ವಿರೋಧಿಗಳನ್ನು ಬೆಚ್ಚಿಬೀಳಿಸಿದೆ. ಈಗ ಬಿ.ಜೆ.ಪಿ ಯನ್ನು ಅಷ್ಟೇ ಅಲ್ಲ ರಾಜ್ಯ ರಾಜಕಾರಣದಲ್ಲಿ ಇದ್ದ ನಾಯಕತ್ವದ ಕೊರತೆಯನ್ನು ಸರಿದೂಗಿಸುವ ನಿರ್ಣಯ ಮಾಡಿದ್ದಾರೆ.
ಅವರ ನಡೆ-ನುಡಿಯಲ್ಲಿ ಸಹನೆಯಿದೆ, ಏನನ್ನೊ ಕಟ್ಟುವ ಛಲವಿದೆ. ಅದಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಅಧ್ಯಯನಶೀಲರಾಗಲಿ, ರಾಜಕೀಯ ಇತಿಹಾಸವನ್ನು ಅರಿತುಕೊಂಡು ಧೀಮಂತ ಹೆಜ್ಜೆ ಇಡಲಿ.
ಕರ್ನಾಟಕ ರಾಜಕೀಯ ಇತಿಹಾಸಕ್ಕೆ ತನ್ನದೆ ಆದ ಮೌಲ್ಯವಿದೆ. ಜನ ಬೇಡವಾದದ್ದನ್ನು ಸಾರಾಸಗಟವಾಗಿ ತಿರಸ್ಕರಿಸುತ್ತಾರೆ. ಬೇಕಾದರೆ ಹೃದಯವಂತಿಕೆಯಿಂದ ಪುರಸ್ಕರಿಸುತ್ತಾರೆ.
ಹಣ, ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿತವರು ಇಲ್ಲಿ ನೆಲೆ ನಿಲ್ಲುತ್ತಾರೆ.
ಅಂತಹ ನಿರ್ಮಲ ವ್ಯಕ್ತಿತ್ವ ರೂಪಿಸಿಕೊಂಡು ಶ್ರೀರಾಮುಲು ಬೆಳೆದರೆ ಖಂಡಿತಾ ಪ್ರೋತ್ಸಾಹಿಸುತ್ತಾರೆ.
ಶ್ರೀರಾಮುಲು ಕೇವಲ ಹಿಂದುಳಿದ ನಾಯಕರಲ್ಲ, ಎಲ್ಲ ವರ್ಗದ ಜನರಿಗೆ ಬೇಕಾದ ನಾಯಕರಿದ್ದಾರೆ. ಅವರ ಜಾತ್ಯಾತೀತ ನಿಲುವು ಅವರನ್ನು ಇನ್ನೂ ಎತ್ತರಕ್ಕೆ ಏರಿಸಬಲ್ಲದು.
ಅಂತಹ ಅವಕಾಶವನ್ನು ಕಾಲ ಈಗ ಒದಗಿಸಿಕೊಟ್ಟಿದೆ. ಶ್ರೀರಾಮುಲು ರಂತಹ ಹೃದಯವಂತರ 'ಜನನಾಯಕ' ರಾಗಿ ಬೆಳೆಯಲಿ ಎಂದು ಆಶಿಸುತ್ತೇನೆ.