Sunday, April 30, 2017

ಬಿಗುಮಾನ ಬಿಡು

ಬಿಗುಮಾನ ಬಿಡು

ನಿನ್ನನು ಗೆಲ್ಲುತ್ತೇನೆ ನಿನಗೆ ಸೋತಿದ್ದೇವೆ
ಎಂಬ ಭ್ರಮೆ ನನಗಿಲ್ಲ ಹಾಗಂತ
ಮನಸೋತಿರುವುದನು ಬಚ್ಚಿಡಲಾದೀತೆ ?

ಹೌದು ಗೆಲ್ಲುವೆ ಎಂಬ ಭರವಸೆಯಲಿ ಎದೆಯ
ಬಗೆದು ನಿವೇದಿಸುವೆ ಮನದಾಳದ ಆಸೆಗಳಿಗೆ
ಬಣ್ಣದುಂಬಿ ನಿನ್ನ ಅಂಗೈಯಲಿಡುವೆ

ಎದೆಗಪ್ಪಿ ಮುದ್ದಾಡಿ ಲಾಲಿ ಹಾಡುವ ಬಯಕೆಯನು
ಪೂರೈಸುವ ಹಕ್ಕು ನಿನಗಿದೆ
ಬೇಡವಾದರೆ ಗೋಡೆಗೆ ತೂಗು ಹಾಕು ಒಣ
ಜಂಬದ ಮೊಳೆಗೆ

ನೋಡುಗರ ಕಣ್ಣಿಗೆ ಹಬ್ಬವಾಗಿ ಕಾಡುವ ನೋವುಗಳ
ಒಂದು ಕ್ಷಣ ಮರೆಸಿ ಬಿಡುವೆ

ಈ ಪ್ರೇಮದಾಟದಲಿ ನಾ ಕೀಳಲ್ಲ ನೀ ಮೇಲೂ ಅಲ್ಲ
ಇದು ಇಬ್ಬರ ಇಬ್ಬಗೆಯ ಅನುಸಂಧಾನ ನಾ
ಹೇಳಿದ್ದೇನೆ ನೀ ಹೇಳುತ್ತಿಲ್ಲ ಅಷ್ಟೇ

ನನಗಿರುವ ಆಸೆ ನಿನಗೂ ಇದೆ ಬಿಗುಮಾನಕೆ
ಚಾರಿತ್ರ್ಯದ ಹೊದಿಕೆಯ ಮುಖವಾಡವ ಕಳಚಿ
ಸುಂದರ ನಗುವಿನಾಭರಣ ಹೊತ್ತು
ಒಮ್ಮೆ ಬಿಗಿದಪ್ಪಿ ಕಣ್ಣು ಮುಚ್ಚಿ ಮೈ ಮರೆಯೋಣ
ಒಲವ ಧಾರೆಯಲಿ ಮೀಯೋಣ ಬಾ ಬಾ ಬಾ...

---ಸಿದ್ದು ಯಾಪಲಪರವಿ

Tuesday, April 25, 2017

ಬೀಳಲಾರೆ

ಬೀಳಲಾರೆ

ಬೀಳುತ್ತೇನೆ ಬಿದ್ದಾಗ ಪೆಟ್ಟಾದರೂ
ಸಾವಳಿಸಿಕೊಂಡು ಏಳುತ್ತೇನೆ
ಮತ್ತೆ ಅದೇ ಜಾಗದಲಿ ಬೀಳಬಾರದೆಂಬ
ಅರಿವಿನಿಂದ ಮುಂದೆ ನಡೆಯುತ್ತೇನೆ.

ಕಾಲನಾಟದಲಿ ಯಾರದೋ ಕಳ್ಳ ನೋಟದ
ನಗುವಿನ ಒಲವಿಗೆ ಮರುಳಾಗಿ ಮತ್ತೆ
ಅದೇ ಜಾಗದಲಿ ಮೈ ಮರೆತು ಬೀಳುತ್ತೇನೆ
ಈಗ ಅರಿವಿದೆ ಆದರೆ ಮನದ ಮಾಯೆ
ಅರಿವ ಮರೆಸಿ ಮೆರೆದಿದೆ

ಬದುಕು ಬದಲಾಗದ ಇತಿಹಾಸ ಪಾಠ
ಕಲಿತದ್ದು ಮರೆಯುವ ಮೋಹದ  ಅರವಳಿಕೆ
ಮತ್ತೆ ಮಾಯಾಜಾಲದಲಿ ತಿರುಗುವ ಚಪಲ
ದೂರಲಾಗದು ಯಾರನೂ ಇದಕೆ ಅದಕು
ಇದುಕೊ ಎದುಕೋ

ಏಳು-ಬೀಳುಗಳ ಚಪಲದಲಿ ಕೊಂಚ ವಿರಮಿಸಿ
ಸುಖಿಸುವಾಸೆ ಬೀಳುವ ಹಂಗ ಹರಿದು ಬಿದ್ದರೂ
ಬಿಡದ ಹಟ ಇದುವೇ ಮನದ ಮಂಗನಾಟ

ಈಗ ಬೀಳಿಸಲು ನೀ ಒಂದು ನೆಪ
ಆದರೆ ಬೀಳುವವನು ನಾ ನಿನ್ನ
ನೆಪದಲಿ

ಕಣ್ಣ ನೋಟ ತುಟಿಯಲರಳಿರುವ ನಗು
ಸರಳ ಉಡುಗೆಯ ತೊಡುಗೆಯ ತೊಡರಲಿ
ಎಡವಿ ಬೀಳುವ ಮುನ್ನ ಗಟ್ಟಿಯಾಗಿ ನಿಂತಿದ್ದೇನೆ
ಮತ್ತೆ ಬೀಳಬಾರದೆಂದು ಮುಂದೆಂದೂ ಎಂದು
ಇಂದು ನಾ ಕೊಂಚ ನೊಂದು.

---ಸಿದ್ದು ಯಾಪಲಪರವಿ

Thursday, April 13, 2017

ಹುಟ್ಟು-ಹಬ್ಬ

ಹುಟ್ಟು -ಹಬ್ಬ

ನಿನ್ನೆ ಇಡೀ ದಿನ ಸಂಭ್ರಮ , ಪರಿಚಿತರು , ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾದವರು , ಬರಹ -ಭಾಷಣಗಳ ಮೂಲಕ ಗುರುತಿಸುವ ಹಿತೈಷಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಲೇ ಇದ್ದಾರೆ , belated    ಕಾರಣದಿಂದ ಖುಷಿಯಿಂದ ಸ್ವೀಕರಿಸುತ್ತಿದ್ದೇನೆ.
ಈ ಹುಟ್ಟು ಹಬ್ಬ ಮಕ್ಕಳ ಪಾಲಿಗೆ happy birthday ಆದರೆ ತಿಳಿದವರಿಗೆ ಅಷ್ಟೊಂದು happy ಅಲ್ಲ !
ವಯಸ್ಸಾಯ್ತಲ್ಲ , ಬೇಗ ನಿವೃತ್ತಿಯಾಗುತ್ತೇನೆ ಎಂಬ ಸಣ್ಣ ನಕಾರಾತ್ಮಕ ಅಳುಕು.

ಆದರೂ ಎಲ್ಲವನ್ನು ಅಷ್ಟೇ ಖುಷಿಯಿಂದ ಸ್ವೀಕರಿಸಿ ಬದುಕನ್ನು ಪ್ರೀತಿಸಬೇಕು .

ಇನ್ನೂ ಓದಬೇಕು , ಬರೆಯಬೇಕು , ಏನನ್ನಾದರೂ ಸಾಧಿಸಬೇಕು , ಆದಷ್ಟು ಆರೋಗ್ಯವಾಗಿರಬೇಕು ಎಂಬ ತುಡಿತದೊಡನೆ ನಿನ್ನೆಯನ್ನು ಆಚರಿಸಿದೆ.
ನನ್ನ ನಿಜವಾದ date of birth ಸಿಕ್ಕು ಮೂವತ್ತು  ವರ್ಷವಾಯಿತು .

ಅದಕ್ಕೂ ಮುಂಚೆ ಶಾಲಾ ದಾಖಲಾತಿಯ ಜೂನ್ 1 ಗತಿಯಿತ್ತು , ಕಾಲೇಜಿನಲ್ಲಿ ಇದ್ದಾಗ ಜಾತಕ ಹಿಡಿದು ಹಳೆ ಪಂಚಾಂಗ ತೆಗೆಸಿ ಮೊದಲ real birthday ಆಚರಿಸಿದ್ದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ.
ಐತಿಹಾಸಿಕ ಪ್ರಜ್ಞೆಯ ಮೊದಲ ಪ್ರಯೋಗವೂ ಅದೇ ಅನ್ನಿ! ಈಗ ಬಿಡಿ facebook ಇತಿಹಾಸ ನೆನಪಿಸುವ ಕೆಲಸವನ್ನು ನಮಗಿಂತ ಅಚ್ಚುಕಟ್ಟಾಗಿ ಮಾಡುತ್ತದೆ.
ಕಳೆದು ಹೋದ ಗೆಳೆಯರು ಮರಳಿ ಸಿಕ್ಕು ಇತಿಹಾಸ ನೆನಪಿಸುವ ಸವಿ ಸವಿ ನೆನಪು !!
Anyway  I thank one and all for your wishes and blessings...
ಸದಾ ಖುಷಿಯಾಗಿರೋಣ.

ಆರದಿರಲಿ ಬೆಳಕು...
---ಸಿದ್ದು ಯಾಪಲಪರವಿ

Saturday, April 8, 2017

ನಾ ಪಾತ್ರಧಾರಿ

ನಾ ಪಾತ್ರಧಾರಿ

ಬದುಕು ಬದಲಾಗುತ್ತಿಬೇಕು
ದೇವನಾಟದಲಿ ಅಸಂಖ್ಯ
ಅನಿರೀಕ್ಷಿತ ದೃಶ್ಯಗಳು ನೂರೆಂಟು
ಪಾತ್ರಗಳು

ನಾನೂ ಒಂದು ಪಾತ್ರವಾಗಿ
ಅವನಾಡಿಸಿದಂತೆ ಆಡಬೇಕು
ಹೋಗು ಅಂದಲ್ಲಿಗೆ ಓಡಲೇಬೇಕು

ಎಲ್ಲವೂ ಪೂರ್ವ ನಿಯೋಜಿತ
ಚಿತ್ರಕಥೆ , ನಾ ಕೇವಲ ಪಾತ್ರಧಾರಿ
ಆದರೂ ನಾ ನನಗೆ ಸರಿ ಕಂಡ ಹಾಗೆ
ನಟಿಸುತ್ತೇನೆ ಎಂಬ ಭ್ರಮೆ

ಅಂತ್ಯದ ಅರಿವಿಲ್ಲದ ಹಾರಾಟ
ಸಾವಿರದ ಯೋಜನೆಗಳು
ನೂರೆಂಟು ಯೋಚನೆಗಳು

ಎಲ್ಲವೂ ಎಲ್ಲದೂ ನನ್ನಿಂದಲೇ ಎಂಬ
ಅನರ್ಥ ಹಾರಾಟ ಕಿರುಚಾಟ ಹೆಚ್ಚಾದ
ಕೂಡಲೇ ಒಂದು ಸಣ್ಣ ಎಚ್ಚರ
ಅನಾರೋಗ್ಯ , ಸಾವು , ಅನಾಹುತಗಳ
ಪರಿಚಯಿಸಿ ಬದುಕ ಅಸ್ಥಿರದರಿವು

ತಿರುಗೆಂದರೆ ತಿರುಗಬೇಕು ಮರುಗೆಂದರೆ
ಮರುಗಬೇಕು ಮರೆಯೆಂದರೆ ಮರೆಯಾಗದೆ
ಮರೆಯಬೇಕು

ಬಯಲಲಿ ಹುಟ್ಟಿ ಬಯಲಾಗುವ ಮುನ್ನ
ಮಲೆನಾಡು , ರಸಬೀಡು , ಹಿಮಾಲಯಗಳ
ನೋಡು , ಕಾಡಲಿ ಅಲೆದು ನಾಡಲಿ ಮೆರೆದು
ಮರೆಯಾಗುವ ಮುನ್ನ ಅವರಿವರು ನೆನೆಯುವ
ಹೆಗ್ಗುರುತ ಬಿಟ್ಟು ನಡೆಯೋಣ

ಇದೆಲ್ಲವೂ ನಿನದೇ ವರಪ್ರಸಾದವೆಂಬ ಸದು
ವಿನಯವ ಮರೆಯದೇ ಸದ್ದಿಲ್ಲದೆ ಸಾಗೋಣ
ಅವನು ಹೇಳಿದೆಡೆಗೆ ಕೊನೆಗೊಮ್ಮೆ
ಅವನ ಕಡೆಗೆ ಕಟ್ಟ ಕಡೆಗೆ.

---ಸಿದ್ದು ಯಾಪಲಪರವಿ

ಹಬ್ಬದೂಟ

ಹಬ್ಬದೂಟ

ಹೊಸ ವರುಷದ ಹರುಷ ಮನೆ ಮಾಡಲು ಮನಸು ಹದವಾಗಿರಲಿ ಭಾವನೆಗಳ ಏರಿತದಲಿ ಲಯಗಾರಿಕೆ ಹೊರಹೊಮ್ಮಲಿ ಕದಡಿದ ನೀರಲಿ ಮುಖವ ನೋಡದೆ ಸಮಾಧಾನದಿ  ಸಾಗೋಣ.

ಹಬ್ಬಗಳು ಬಾಲ್ಯದ ನೆನಪುಗಳ ಸರಮಾಲೆ ಕಳೆದುಕೊಂಡುದ ಹಿಡಿಯುವ ಹಗ್ಗದಾಟ
ಅಪ್ಪ ಕೊಡಿಸಿದ್ದ ಅರಿವೆ , ಅವ್ವ ಮಾಡಿದ್ದ ಹೋಳಿಗೆ , ಗುರು ಕೊಟ್ಟ ಅರಿವು , ಗೆಳೆಯರ ತಂದಿದ್ದ ಹುಮ್ಮಸ್ಸು ಈಗ ಬರೀ ಹಚ್ಚ ಹಸಿರು ಬೆಚ್ಚನೆಯ ನೆನಪು.

ಹೊಲ , ಕಾಲುವೆ , ಈಜಾಟ , ಮಾವಿನ ಕಾಯಿ ,ಕಳ್ಳ ನೋಟದ ಕಣ್ಣಾಟ , ರತ್ನ ಪಕ್ಷಿಯ ಮುಖ ನೋಡುವ ಚಡಪಡಿಕೆ , ಕರಗದ ಬೆರಗು ಮೂಡಿಸಿದ ಹಗಲುಗನಸುಗಳು , ಮೈಮನಗಳಲಿ ಪುಟಿದೇಳುತ್ತಿದ್ದ ಕಾಮನೆಗಳು , ನಿಲುಕದ ನಕ್ಷತ್ರಗಳ ಹಿಡಿಯುವ ಹಟ ಈಗ ಈ ನೆನಪುಗಳ ದಾಳಿ...

ಬೇವು , ಬೆಲ್ಲ ಎಲ್ಲವೂ ಫೇಸ್ಬುಕ್ಕಿನಲಿ ,
ಆ್ಯಪುಗಳಲಿ ಹರಿದಾಟ.
ಮಾತಿಲ್ಲ , ಕತೆಯಿಲ್ಲದ ಕತ್ತಲೆಯ ಕತ್ತೆ ಬದುಕು.

ಸಾಲದ ಕಂತುಗಳು , ಇಲ್ಲದ ಭ್ರಾಂತುಗಳು , ಈಡೇರದ ವ್ಯಾಮೋಹಗಳು , ಲೆಕ್ಕವಿಲ್ಲದ ಲೆಕ್ಕಾಚಾರಗಳು , ಸಂಗಾತಿಗಳು ಈಗ ಬರೀ ಒಂದು ಸಂಗತಿ.
ಪ್ರೀತಿ- ರೀತಿ -ನೀತಿಗಿರಲಿ ಜಗಳಕೂ ಇಲ್ಲ ಸಮಯ.
ಗೆಳೆಯರು ಅಳೆಯುತ್ತಾರೆ , ತೂಗಿ ನೋಡುತ್ತಾರೆ ಏರಿಳಿಯುವ ಮೈಮನಗಳ ತಾಪ-ಮಾನ.

ಎಲ್ಲರೂ ಅವರವರ ಯೋಜನೆಗಳಲಿ , ಯೋಚನೆಗಳ ಗಾಳದಲಿ ಸ್ಮಾರ್ಟ್ ಫೋನುಗಳಲಿ ಕಳೆದು ಹುಡುಕಾಟ  ಅಲ್ಲಿ ಸಿಕ್ಕರೂ ಸಿಗಬಹುದಾದ ಹೊಸ ಸಂಗತಿ-ಸಂಗಾತಿಗಳ.

ಹಲ್ಕಿರಿದು ಸಿಕ್ಕವರು ವಾಕರಿಕೆಯಾಗಿ ಕೈಗೆ ಸಿಗದೇ ಬ್ಲಾಕ್ ಆಗಿ ಮಂಗಾಟವಾಡಿ ಮಾಯವಾಗುತ್ತಾರೆ.
ಮತ್ತೆ ಜೊತೆಗಿದ್ದವರ ಅಸ್ತಿತ್ವ ನೆನಪಿಸುತ್ತಾರೆ.

Reality show ಗಳ ಹಾಡು-ಕುಣಿತ , ಬಾಬಾಗಳ ಏದುಸಿರು ಬಿಡುವ ಯೋಗಾಯೋಗ. 
ಪತಂಜಲಿಯ , ಸಿರಿಧಾನ್ಯಗಳ ಸಿಹಿರಹಿತ ಆಹಾರ-ವಿಹಾರಗಳ ತಡಕಾಟ.

ಉಸಿರು ನಿಂತು , ಜೀವದ ಹಸಿರು ಮಾಯವಾಗುವದ ಮರೆತ ಅವಾಸ್ತವ ಭ್ರಮಾಲೋಕ.

ನೆಮ್ಮದಿ , ಶಾಂತಿ , ಸಂಭ್ರಮ ಹಾಗೂ ಸುಖ ಬಿಟ್ಟು ಎಲ್ಲ ಹುಡುಕುವ ಹುಚ್ಚಾಟ ಬಿಟ್ಟು ಆರೋಗ್ಯ -ನೆಮ್ಮದಿಗೆ ಹಂಬಲಿಸೋಣ.
ಯುಗಾದಿಯ ಹರುಷವ ಸವಿಯೋಣ.
ಎಲ್ಲರಿಗೂ ಹಾರ್ದಿಕ ಶುಭಾಶಯಗಳು.

---ಸಿದ್ದು ಯಾಪಲಪರವಿ

ಬಣ್ಣವಿಲ್ಲದ ಬದುಕು

ಬಣ್ಣವಿಲ್ಲದ ಮನಸು

ಬಣ್ಣ ನೋಡಲಿಲ್ಲ ಬವಣೆ ನೋಡಲಿಲ್ಲ
ಬದುಕೂ ನೋಡಲಿಲ್ಲ ದೂರದಿಂದಲೇ
I love you , I want you
ಎಂದು ಮುಗ್ಧತೆಯಿಂದ ಕೂಗಿ
ಹುಚ್ಚನೆನಿಸಿಕೊಂಡೆ ಏಕೆಂದರೆ
ನನ್ನದು ಮುಖವಾಡವಿಲ್ಲದ ಮುಖ

ಮನಸಿನಲಿ ಗರಿಗೆದರಿದ ಆಸೆಗಳು ರೆಕ್ಕೆ
ಹಚ್ಚಿಕೊಂಡು ಹಾರಲು ಬಿಟ್ಟು ಭಾವನೆಗಳ
ಕೆಣಕಿ ಬಲಿಯಾದೆ

ಆದರೆ ನಿನ್ನ ಜಾಣತನ ಅತಿ ಮಧುರ
ಬೆಟ್ಟದಷ್ಟು ಆಸೆಗಳಿದ್ದರೂ ಮುಚ್ಚಿಡುವ
ನೂರಾರು ಮುಖವಾಡಗಳ ಹಿಂದೆ ಅಡಗಿ
ಅವಿತಿರುವ ಆಸೆಗಳ ಇರಿದು
ಹೊರಗೆಳೆದೆ

ನಾನು ಅಪರಾಧಿಯೂ ಅಲ್ಲ ಅವಿವೇಕಿಯೂ
ಅಲ್ಲ ಅಡಗಿರುವ ಘಮಲನು ಹೀರಿ ನಿನ್ನ
ಮುಖವಾಡವ ಕಳಚಿದಕ್ಕೆ ಎಲ್ಲಿಲ್ಲದ ಕೋಪ
ತಾಪ ಇಲ್ಲದ ವಿಕೋಪ

ಈಗಲೂ ಅಷ್ಟೇ ಕಾಯುವೆ ಹುಚ್ಚು ಸೈತಾನನ
ಹಾಗೆ ಕರಗದ ಹಿಮದಲಿ ಅಡಗಿರುವ ಬೆಚ್ಚನೆ
ಪ್ರೀತಿಯ ಒಪ್ಪಿಕೊಂಡು ಬಿಗಿದಪ್ಪು ಉಸಿರು
ನಿಲ್ಲುವ ಮುನ್ನ ಹಸಿರು ಬಾಡುವ ಮುನ್ನ

---ಸಿದ್ದು ಯಾಪಲಪರವಿ

Monday, April 3, 2017

ಬಾಳ ಸಂಗಾತಿ

ಬಾಳ ಸಂಗಾತಿ

ಬದುಕಿನಲಿ ನೂರೆಂಟು ಸಂಗತಿಗಳು
ಬಾಳ ಭಾವ ಪಯಣದಲಿ ದೂರ
ಸಾಗಲು ನಾವಿಕ ಬೇಕೇ ಬೇಕು

ಹೆಂಡತಿ-ಅರ್ಧಾಂಗಿ -ಸಹಧರ್ಮಿಣಿ
ಹೀಗೆ ಏನೇ ಅಂದರೂ ಸಂಸಾರದ
ನೊಗ ಹೊರುವ ಸಹನಶೀಲೆ.

ಹಕ್ಕಿಯ ಹಾಗೆ ಸ್ವಚ್ಛಂದವಾಗಿ
ಹಾರಲು ಪ್ರೇರೆಪಿಸುವ ರೆಕ್ಕೆ

ಹುಸಿ ಮುನಿಸು ಹಸಿ ಕೋಪ
ಅವ್ವನಿಂದ ನನ್ನ ಕಸಿದುಕೊಳುವ
ಭರದಲಿ ತನ್ನ ತಾನೇ ಕಳಕೊಂಡ
ಹಳವಂಡ.

ವಾತ್ಸಲ್ಯದ ಹಗ್ಗ ಜಗ್ಗಾಟದಲಿ ನಾ
ನುಗ್ಗಾದ ಪರಿಯಲಿ
ಇನ್ನಿಲ್ಲದ ಪರದಾಟ.

ಅವ್ವ , ಈಕೆ ಮಧ್ಯದಲಿ ಆಕೆ
ಆದರೂ ನಕ್ಕಳು ಈಕೆ
ಆಕೆಯ ಆಕರ್ಷಣೆಗೆ
ಮರುಳಾದ ಮೋಡಿಗೆ .

ಊರೆಲ್ಲ ಹರಿಗ್ಯಾಡಿ ಮುಸ್ಸಂಜಿಯಲಿ
ಮನೆಗೆ ಮರಳುವ ಮರುಳಿಗೆ
ಮರುಳಾದಳು ಈಕೆ ಈಗಲೂ ಆಕೆಯ
ಪೈಪೋಟಿಯ ಭರದಲಿ.

ಇರಲೇಬೇಕಲ್ಲ ಎಲ್ಲರ ಬದುಕಲಿ
ಈಕೆ ಆಕೆಯ ಅಬ್ಬರದಲೆಗಳು.

ಮುಸುಕಿನ ಗುದ್ದಾಟದಲಿ ನನಗಿಲ್ಲದ ಹುರುಪು

ಎಂದಿನಂತೆ ವರುಷಕೊಮ್ಮೆ ಬಂತು
ಈಕೆಯ ಹುಟ್ಟು ಹಬ್ಬ.

ಮಗಳಿಗೆ ಕೇಕಿನ ಸಡಗರ
ಈಕೆಗೆ ಸೀರೆಯ ರಂಗಿನ ಗುಂಗು

ಮೈಮನಗಳು ಹಗುರ ಭಾರವಾದ
ಸಂಸಾರದ ನೊಗ ಹೊತ್ತು ಸಾಗಿಹಳು
ಒಮ್ಮೊಮ್ಮೆ ಬೈಯುತ್ತ ಕೂಗುತ್ತ ನನ್ನ
ಬೇಜವಬ್ದಾರಿಯ ಹಂಗಿಸುತ.

ಮನೆಗೆ ಮರಳುವೆ  ಹೊಟ್ಟೆ ತಾಳ
ಹಾಕಿದಾಗ ಬಟ್ಟೆ ಕೊಳೆಯಾದಾಗ
ಅದೇ ಕಾರಣಕೆ ನನ್ನಾಕೆ
Washing-ton-DC ದೋಬಿ ಘಾಟ್
ಖಾನಾವಳಿ ಒಡತಿ ಎಂಬ
ತಮಾಷೆಯಲೂ ನಗುವ ಸಹಜ
ಸುಂದರಿ ನಿತ್ಯ ನನ್ನ ಪಾಲಿಗೆ .

ಸೆಲ್ ಫೋನಿನ ಸೆಲ್ಲಿನೊಳು
ಬಂಧಿಯಾಗಿರುವ , ಜನರ
ಜಂಗುಳಿಯಲಿ ಕಳೆದು ಹೋಗುವ
ನನ್ನನು ಬಿಡಿಸಿ ತರುವ ಗಡಿಬಿಡಿ.

ಇಲ್ಲಿ ಪ್ರೀತಿ ತಮಾಷೆ ಎಲ್ಲವೂ ಅಷ್ಟೇ
ಏಕತಾನತೆಯ ಬಾಳ ನಾದ ಸೃಷ್ಟಿಸಿದ
ರಾಗಗಳಿಗೆ ಲೆಕ್ಕವಿಲ್ಲ.

ಹೀಗೆ ಸಾಗಲಿ ಬಾಳ ಪಯಣ ನಿನ್ನ
ಹೊಣೆಗಾರಿಕೆಯ ಹಡಗಲಿ.
ಹುಟ್ಟು ಹಬ್ಬ ಆದರೂ
ವಯಸ್ಸಾಯಿತಲ್ಲ ಎಂಬ
ವಿಶಾದದಲಿಯೂ ಹಿರಿತನದ ಗರಿಮೆ.

ಹುಟ್ಟು ಹಬ್ಬದ ಶುಭ ಹಾರೈಕೆಗಳು.
---ಸಿದ್ದು ಯಾಪಲಪರವಿ