ಬೀಳಲಾರೆ
ಬೀಳುತ್ತೇನೆ ಬಿದ್ದಾಗ ಪೆಟ್ಟಾದರೂ 
ಸಾವಳಿಸಿಕೊಂಡು ಏಳುತ್ತೇನೆ 
ಮತ್ತೆ ಅದೇ ಜಾಗದಲಿ ಬೀಳಬಾರದೆಂಬ 
ಅರಿವಿನಿಂದ ಮುಂದೆ ನಡೆಯುತ್ತೇನೆ.
ಕಾಲನಾಟದಲಿ ಯಾರದೋ ಕಳ್ಳ ನೋಟದ 
ನಗುವಿನ ಒಲವಿಗೆ ಮರುಳಾಗಿ ಮತ್ತೆ 
ಅದೇ ಜಾಗದಲಿ ಮೈ ಮರೆತು ಬೀಳುತ್ತೇನೆ 
ಈಗ ಅರಿವಿದೆ ಆದರೆ ಮನದ ಮಾಯೆ 
ಅರಿವ ಮರೆಸಿ ಮೆರೆದಿದೆ 
ಬದುಕು ಬದಲಾಗದ ಇತಿಹಾಸ ಪಾಠ 
ಕಲಿತದ್ದು ಮರೆಯುವ ಮೋಹದ  ಅರವಳಿಕೆ 
ಮತ್ತೆ ಮಾಯಾಜಾಲದಲಿ ತಿರುಗುವ ಚಪಲ 
ದೂರಲಾಗದು ಯಾರನೂ ಇದಕೆ ಅದಕು 
ಇದುಕೊ ಎದುಕೋ 
ಏಳು-ಬೀಳುಗಳ ಚಪಲದಲಿ ಕೊಂಚ ವಿರಮಿಸಿ 
ಸುಖಿಸುವಾಸೆ ಬೀಳುವ ಹಂಗ ಹರಿದು ಬಿದ್ದರೂ 
ಬಿಡದ ಹಟ ಇದುವೇ ಮನದ ಮಂಗನಾಟ 
ಈಗ ಬೀಳಿಸಲು ನೀ ಒಂದು ನೆಪ 
ಆದರೆ ಬೀಳುವವನು ನಾ ನಿನ್ನ 
ನೆಪದಲಿ 
ಕಣ್ಣ ನೋಟ ತುಟಿಯಲರಳಿರುವ ನಗು 
ಸರಳ ಉಡುಗೆಯ ತೊಡುಗೆಯ ತೊಡರಲಿ 
ಎಡವಿ ಬೀಳುವ ಮುನ್ನ ಗಟ್ಟಿಯಾಗಿ ನಿಂತಿದ್ದೇನೆ 
ಮತ್ತೆ ಬೀಳಬಾರದೆಂದು ಮುಂದೆಂದೂ ಎಂದು 
ಇಂದು ನಾ ಕೊಂಚ ನೊಂದು.
---ಸಿದ್ದು ಯಾಪಲಪರವಿ
 
 
 
 Posts
Posts
 
 
No comments:
Post a Comment