Tuesday, August 23, 2016

ಚಡಪಡಿಕೆ

ತವಕ-ತಲ್ಲಣಗಳು ಹಾಗೂ ಚಡಪಡಿಕೆ

ಆಧುನಿಕ ಕಮ್ಯುನಿಕೇಶನ್ ದುನಿಯಾ ವಿಚಿತ್ರ ವೇಗದಲ್ಲಿದೆ.
ನಸುನಗುತ್ತ ಪರಿಚಯವಾದ ಸಾಮಾಜಿಕ ಜಾಲತಾಣಗಳ ಸಂಗಾತಿಗಳು ಬೇಗ ಹತ್ತಿರವಾಗಿ ಅಷ್ಟೇ ವೇಗದಲ್ಲಿ ಸಿಡಿದು ಹೋಗುತ್ತಾರೆ.

ತೋಳ ಮೇಲೆ ಮಲಗಿದ ಮಗು , ಮಾತು ಮಂಥನ ಜಗಳಕ್ಕೂ ಸಿಗದ ಸಂಗಾತಿ , ತಲೆ ತುಂಬಾ ನೂರಾರು ಆಲೋಚನೆಗಳು , ಯಾವುದಕ್ಕೂ ಟೈಮ್ ಇಲ್ಲ ಎನ್ನುತ್ತಲೇ ತಾಣಗಳಿಗೆ ಸೆರೆಯಾಗಿಬಿಡುತ್ತೇವೆ .

ಇಲ್ಲಿ ಸಿಗುವ ಅನೇಕರ ಸಂಬಂಧಗಳು ಯಾವ ಹಂತಕ್ಕೆ ತಲುಪುತ್ತವೆಯೋ ಗೊತ್ತಾಗುವುದಿಲ್ಲ.
ಸ್ನೇಹಿತರಾಗಿ , ಹಿತೈಷಿಗಳಾಗಿ , ಒಲುಮೆಯ ಗೆಳತಿಯೂ ಆಗಿ ಪ್ರೊಪೊಜ್ ಮಾಡುವ ಧಾವಂತ ಹುಟ್ಟಿಸಿ , I'm not like that ಅಂತ ಕೆನ್ನೆಗೆ ಬಾರಿಸಿ ಮಂಗ ಮಾಯವಾದರೂ ಬಿಡದ ಮಾಯೆ.

ಪರಿಣಾಮ ಮಾತ್ರ ಶೂನ್ಯ ಯಾಕೆಂದರೆ ಎಲ್ಲವೂ ಅಮೂರ್ತ , ಶೂನ್ಯದಿಂದ ಶೂನ್ಯಕ್ಕೆ
ಆದರೂ ಬಿಡದೀ ಮಾಯೆ.

ಉಳಿಯುವ , ಉಳಿಸಿಕೊಳ್ಳುವ ಇರಾದೆ ಯಾರಿಗೂ ಇಲ್ಲವಾದರೂ ಹುಟ್ಟುವ ಸಂಬಂಧಗಳಿಗೆ ಲೆಕ್ಕವಿಲ್ಲ.

ಇದೊಂದು ಅಂತರ್ಜಾಲದ ಮಾಯಾವಿ
ದಕ್ಕಲಿ , ದಕ್ಕದಿರಲಿ ಯಾರಿಗೂ ಹೇಳದ ಕಣ್ಣಾ-ಮುಚ್ಚಾಲೆ ನಡದೇ ಇದೆ , ಇರುತ್ತದೆ...

ಇರುವುದೆಲ್ಲವ ಬಿಟ್ಟು
ಇರದುದರ ಎಡೆಗೆ
ತುಡಿಯುವುದೇ....

----ಸಿದ್ದು ಯಾಪಲಪರವಿ

Monday, August 22, 2016

ಡಾ.ಆರ್.ಎಂ.ರಂಗನಾಥ್

ಮರೆಯಬಾರದ ಚೇತನ . .

ಇವರು ಡಾ.ಆರ್.ಎಂ.ರಂಗನಾಥ್ . ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರುವರೆ ದಶಕಗಳ ಕಾಲ ಸಸ್ಯಶಾಸ್ತ್ರ ಪ್ರೊಫೆಸರ್.

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗೈಡ್ , ಗೆಳೆಯರಿಗೆ ಆತ್ಮೀಯ ಸಂಗಾತಿ , ಕುಟುಂಬಕ್ಕೆ ಹಿರಿಯಣ್ಣ , ಅಮ್ಮನ ಮುದ್ದಿನ ಮಗ , ಹಿರಿಯರಿಗೆ ನೆರವಿನಾಸರೆ , ಎಲ್ಲರೊಳು ಬೆರೆಯುವ ಹಸನ್ಮುಖಿ . ಪ್ರತಿಭೆ , ಅಧಿಕಾರ , ಅಂತಸ್ತು , ಬೆಂಗಳೂರಿನ ಭವ್ಯತೆ ಇದಾವುದು ಇವರನ್ನು ಅಲುಗಾಡಿಸಲೇ ಇಲ್ಲ !

ಎಂಬತ್ತರ ದಶಕದಲ್ಲಿ ಜನತಾ ಪರಿವಾರದ ಅಬ್ದುಲ್ ನಜೀರ್ ಸಾಬ್ ಹಾಗೂ ಕೆ.ಆರ್. ರಮೇಶ್ ಕುಮಾರ್ ಅವರ ಆತ್ಮೀಯ ಒಡನಾಟವಿದ್ದರೂ ಕಿಂಚತ್ತು ರಾಜಕೀಯ ಲಾಭ ಪಡೆಯದ ನಿಶ್ಪ್ರಹ ಸ್ನೇಹ .
ಅಮ್ಮನನ್ನು ಸಾಕುವ , ತಮ್ಮ -ತಂಗಿಯರ ಬಾಳು ಬೆಳಗಿಸುವ , ಸ್ನೇಹಿತರಿಗೆ ಸಹಾಯ ಹಸ್ತ ಚಾಚುವ ಭರದ ನಡಿಗೆಯಲ್ಲಿ ಸಂಸಾರ ಬಂಧನದಲಿ ಬಂಧಿಯಾಗದ ನಿರ್ಲಿಪ್ತ ಸಂತ.
  ಯುರೋಪಿನ ಸಮ್ಮೇಳನ , ಅಪಾರ ಅಧ್ಯಯನದ ಹರವು , ಅನಿರೀಕ್ಷಿತವಾಗಿ ಒಲಿದ ಕುಲಸಚಿವ ಹುದ್ದೆ ಇವರ ಸರಳತೆಯನ್ನು ಕಿತ್ತುಕೊಳ್ಳಲಿಲ್ಲ. ಕುಲಸಚಿವರಾಗಿದ್ದಾಗ ಖಾಸಗಿ ಕೆಲಸಗಳಿಗೆ ಕಾರು ಆಟೋದಲ್ಲಿಯೇ ಸುತ್ತಾಟ . ಈಗಲೂ ಅಷ್ಟೇ ತಮಿಳು ಮೂಲದ ಭೂಪಾಲನ್ ಇವರ ಆಟೋ ಸಾರಥಿ .
ಐಷಾರಾಮಿ ಬದುಕು ಇವರ ಬಳಿ ಸುಳಿಯಲಾರದು . ಅವರ ಹಿತೈಷಿಗಳು ಇಂದಿಗೂ ಅವರನ್ನು ಆಟೋ ರಂಗನಾಥ್ ಎಂದೇ ತಮಾಷೆಯಿಂದ ಗೌರವಿಸುತ್ತಾರೆ. ಆನೆ ನಡೆದದ್ದೇ ದಾರಿ ಎಂಬಂತೆ , ಅವರು ಎಲ್ಲಿಂದ ಹೇಗೆ ಬರುತ್ತಾರೆ ಎಂಬುದು ಅಮುಖ್ಯ .

ಇದಿಷ್ಟು ಇವರ ಖಾಸಗಿ ಜೀವನ ಶೈಲಿಯಾದರೆ , ಒಬ್ಬ ಆಡಳಿತಗಾರರಾಗಿ ಅತ್ಯಂತ ವಿಶಿಷ್ಟ ಶೈಲಿ ಇವರದು . ಕುಲಸಚಿವರಾಗಿದ್ದಾಗ ಅತ್ಯಂತ ಜವಾಬ್ದಾರಿಯುತವಾಗಿ , ಕಾಳಜಿಯಿಂದ ಕಾರ್ಯ ನಿರ್ವಹಿಸಿ ಕಳಂಕ ಅಂಟಿಸಿಕೊಳ್ಳದೆ ಪ್ರಾಮಾಣಿಕತೆ ಮೆರೆದರು 'ಅವರ ಜಾಗದಲ್ಲಿ ಯಾರಿದ್ದರೂ ಕೋಟ್ಯಾಧಿಪತಿಯಾಗುತ್ತಿದ್ದರು ' ಎಂದು ವಿಶ್ವವಿದ್ಯಾಲಯದ ಕಲ್ಲುಗಳೂ ಹೇಳುತ್ತವೆ .
ಶಿಸ್ತು , ದಕ್ಷತೆ ಹಾಗೂ ಆಡಳಿತ ಪ್ರೌಢಿಮೆಯೊಂದಿಗಿನ 'ಪ್ರಾಮಾಣಿಕತೆ' ಅನುಕರಣೀಯ. ಅಧಿಕಾರ ಮುಗಿದ ಕೂಡಲೇ ನಸು ನಗುತ್ತಾ ಭೂಪಾಲನ್ 'ನ ಆಟೋ ಏರಿ ನಿರ್ವಿಕಾರವಾಗಿ ಹೋಗಲು ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿತ್ವವೇ ಕಾರಣ. ಬ್ರಷ್ಟ ವ್ಯವಸ್ಥೆ ಇರದೆ , ಕೇವಲ ಅಕ್ಯಾಡೆಮಿಕ್ ಎಕ್ಸಲೆನ್ಸ್ ಗೆ ಬೆಲೆ ಇದ್ದರೆ ಎಂದೋ ಕುಲಪತಿಯಾಗುತ್ತಿದ್ದರು . ಆದರೆ ಆ ಭಾಗ್ಯ ವಿಶ್ವವಿದ್ಯಾಲಯಗಳಿಗೆ ಇಲ್ಲ ಬಿಡಿ !

ಹಿಪೊಕ್ರಸಿಯ ಸುಳಿವಿಲ್ಲದ ನೇರ ನಡೆಯ , ಪರಿಶುದ್ಧ ಮನದ ಹಿರಿಯರೊಂದಿಗೆ ಎರಡು ವರ್ಷ ಇದ್ದದ್ದೇ ನನ್ನ ಪುಣ್ಯ . ಅತಿಯಾದ ಭಾವುಕನಾದ ನನಗೆ ವಾಸ್ತವ ಜಗತ್ತಿನ ಮಸಲತ್ತುಗಳ ಪರಿಚಯ ಮಾಡಿಸಿ ಅವುಗಳಿಂದ ಇರಬೇಕಾದ ಅಂತರ ಹೇಳಿಕೊಟ್ಟ ಮಹಾನ್ ಸಂತನ ಮನಸ್ಥಿತಿ ಪ್ರೊ. ಆರ್.ಎಂ. ರಂಗನಾಥ್ ಅವರದು . ಆಟೋದಲ್ಲಿ ಅಲೆದಾಟ , ನಿರಂತರ ಸಂಶೋಧನೆ , ಸಂಜೆ ಕೋಶಿಸ್ ಎಂಬ ಚಿಂತಕರ ಚಾವಡಿಯಲಿ ಬೆಚ್ಚಗಿನ ಹರಟೆ ಇವರ ದಿನಚರಿ . ಇಂತಹ ದಿವ್ಯ ಚೇತನವನ್ನು ನನಗೆ ಪರಿಚಯಿಸಿದ ಹಿರಿಯಣ್ಣ , ಮಾಧ್ಯಮ ಲೋಕದ ಎನ್ ಸೈಕ್ಲೋಪಿಡಿಯಾ , ನೇರ ನುಡಿಯ ಪತ್ರಿಕೋದ್ಯಮಿ ಪ್ರೊ. ರವೀಂದ್ರ ರೇಷ್ಮೆ ಅವರಿಗೆ ಚಿರಋಣಿ. ಈಗಲೂ ಅಷ್ಟೇ ಇವರಿಬ್ಬರೂ ಹಲೋ ಹೇಳದಿದ್ದರೆ ನನಗೆ ಬೆಳಕಾಗುವುದಿಲ್ಲ.

----ಸಿದ್ದು ಯಾಪಲಪರವಿ

Tuesday, August 16, 2016

ನೀ ನಿಲ್ಲಲಾರೆ

ನೀ ನಿಲ್ಲಲಾರೆ ನಾ ಬಿಡಲಾರೆ.

ಹರಿದಾಡುವ ನಿನ್ನ ಹಿಡಿದು ಹಾಕುವುದು ಕಡು ಕಷ್ಟ
ಹಾಗಂತ ಸುಮ್ಮನೇ ಬಿಡಲಾದತೇ?

ಸುಪ್ತ , ಜಾಗೃತ , ಶವಾವಸ್ಥೆಯಲೂ ನೀನು
ಸದಾ ಎಚ್ಚರ
ನಿರಂತರ ಬೆಂಬತ್ತುವ
ನಿನ್ನ
ಬಿಟ್ಟರೆ ಅವಿವೇಕಿ
ಹಿಡಿದರೆ ಹುಚ್ಚ

ಹೆಣ್ಣು-ಹೊನ್ನು-ಮಣ್ಣು
ಮಾಯೆಯಂಬ ಭ್ರಮೆ ಹುಟ್ಟಿಸುತ್ತ
ನೀ ಪಾರಾಗುವ ಜಾದೂಗಾರ

ಮಾಯೆಯ ಕೂಪದಲಿ ಅರಿವಿಲ್ಲದೆ ನೂಕಿ
ಸಾಯದೆ ಬದುಕಿಸದೇ ಜೀವಂತ ಹೆಣವಾಗಿಸಿ
ಅಂತ್ಯಕ್ರಿಯೆಯಿಲ್ಲದೆ ಪ್ರೇತಾತ್ಮವಾಗಿಸುವ
ಹುನ್ನಾರ

ಆಸೆ ಹುಟ್ಟಿಸಿ ಅಂಡಲೆಯುವಂತೆ
ಮಾಡುವ ಮಾಟಗಾರ
ಬಾಲ ಅಲ್ಲಾಡಿಸುತ್ತ , ಜೊಲ್ಲು ಸುರಿಸುತ್ತ
ತಿರುಗುವುದ ಕಂಡು ಕೇಕೆ ಹಾಕುವ ಖದೀಮ

ಪಂಚಮಹಾಭೂತಗಳಲಿ , ಪಂಚೇಂದ್ರಿಯಗಳಲಿ
ನಿತ್ಯ ವಾಸಿಯಾದರೂ ಕಣ್ಣಿಗೆ ಕಾಣದ ಮಾಯಾವಿ

ಬಯಲಲಿ ಹುಟ್ಟಿ ಬಯಲಲಿ ಬೆಳೆದು
ಬಯಲಲಿ ಅಡಗಿ ಅಣಕಿಸುವ ಮಂಗ

ಹಿಡಿಯಲೆತ್ನಿಸಿದಂತೆ ಮೇಲಕೆ ಹಾರುವ ಗೂಬೆ
ರಣಹದ್ದಿನ ಹಾಗೆ ಅರಿವಿಲ್ಲದೆ ಅಪ್ಪಳಿಸುವ
ನೀ
ಮಹಾ ಚತುರ

ನೀ ನಿಲ್ಲದೇ
ನೀ ಇಲ್ಲದೆ

ಯಾರೂ ಬದುಕಲಾರರು
ಯಾರೂ ಸಾಯಲಾರರು
ಎಂದರಿತ ನೀ
ಆಡುವ ಆಟಕೆ ಎಲ್ಲರೂ ಬಲಿ

ಬಲ್ಲಿದವರ ಬೆಲ್ಲದ ಮಾತಿಗೂ
ವಿಷ ಸವರುವ ಕುಟಿಲ

ಎಷ್ಟು ಜರಿದರೂ ನಕ್ಕು ನಿನ್ನ ಪಾಡಿಗೆ ನೀ
ನಿದ್ದು ಎಲ್ಲವ ನಿನಗೆ ಸರಿಕಂಡಂತೆ
ಅಳೆದು ತೂಗುವ ಜಾಣ ಶೆಟ್ಟಿ

ಆದರೆ


ರೆ

ನಿನ್ನ ಹಿಡಿದು ಕಟ್ಟಿ ಆಳಿದ ಧೀರರು
ಮೆರೆದಿಹರು
ಸಾಧು-ಸಂತ-ಮುನಿಗಳಾಗಿ

ನಿನ್ನ ಕಳ್ಳಾಟ ಮಳ್ಳಾಟ ಅರಿತವರೇ
ಮಹಾನುಭಾವರು

ಕಟ್ಟಿ ಹಾಕಿ ನಿಗ್ರಹಿಸಿ ಧ್ಯಾನಸ್ಥ ಸ್ಥಿತಿಯಲಿ
ಸಮತೆಯ ಶಮದಲಿ ನಿನ್ನನೇ ದಿಟ್ಟಿಸಿ
ಉಸಿರು ಬಿಗಿ ಹಿಡಿದು ಒಳಗಣ್ಣ ಇಳಿಬಿಟ್ಟು
ನನ್ನಷ್ಟಕೆ ನಾನೇ ಬೇಟೆಯಾಡಿ ನಾಲ್ಕು ಬಾರಿಸಿ
ಐವರು ಕಾವಲುಗಾರರ ಕೈಗೊಪ್ಪಿಸಿ ನವ
ದ್ವಾರಗಳ ಮುಚ್ಚಿ ಕೂಡಿಟ್ಟು ಕೂಳಿಲ್ಲದೆ
ಕೆಡವಿದರೆ
ನೀ ಒಲಿದೇ ಒಲಿಯುವ ಜೀತದಾಳು

ಹಿಡಿದು ಆಳಿದರೆ ನಮ್ರ ಸೇವಕ
ಕೈ ಬಿಟ್ಟರೆ ದುಷ್ಟ ಒಡೆಯ

ಈಗ ನಿನ್ನಾಟವ ಮೆಲ್ಲಗೆ ಅರಿತು
ಉಸಿರ ಬಿಗಿ ಹಿಡಿದು ನಿಧಾನ
ನಿಧಾನವಾಗಿ ಹಿಡಿತ ಸಾಧಿಸಲೆತ್ನಿಸುತ್ತಿರುವೆ
ನಿನ್ನ ಮಾಯಾ ಪಾಶವ
ಕಳಚುತ.

----ಸಿದ್ದು ಯಾಪಲಪರವಿ

ದಣಿದ ದೇಹ

ದಣಿದ ದೇಹ

SLEEP IS A TEMPORARY DEATH
DEATH IS A PERMANENT SLEEP

ದಣಿದ ದೇಹ -ಮನಸಿಗೆ
ಕೋಟಿ ಸುರಿದರೂ ನೆಮ್ಮದಿ
ದೊರಕೀತೆ ?

ಆಳರಸ ದುಡಿವ ಕೂಲಿಯಿರಲಿ
ಎಲ್ಲರಿಗೂ ಒಡೆಯ ಈ
ದೇಹವೆಂಬ ದೇವಾಲಯ

ನಿರಂತರ ದೇಹಾಲಯದ
ಆಸರೆಯ ಮನಕೆ
ಸುಖ ನಿದಿರೆಯೇ
ಜೀವಾತ್ಮ.

ಗಪ್ಪನೆ ಜಪ್ಪನೆ ಮಲಗಿ
ಸುಖಿಸುವಾಸೆ ಈ
ದಣಿದ ಜೀವಕೆ

ಅವ್ವನ ಮಡಿಲು
ಗೆಳತಿಯ ತೋಳಿನಾ
ಸೆರೆಗೆ ಸೆರಗಿನ ಮರೆಗೆ
ಮರೆಯಾಗುವ ತುಡಿತ

ನಿದಿರೆಯೆಂಬುದು ತಾತ್ಕಾಲಿಕ
ಸಾವು
ಸಾವೆಂಬುದು ಶಾಶ್ವತ
ನಿದಿರೆ
ಎಂಬ ಸಂತವಾಣಿ
ಸವಿನುಡಿಯ ಸವಿಯುತ
ಒಮ್ಮೊಮ್ಮೆ ನಿನ್ನ
ನಿನ್ನ ಬಿಸಿಯಪ್ಪುಗೆಯ
ಬಂಧಿಯಾಗಿ
ಬೆಚ್ಚಗೆ ಮಲಗಿ
ಹಗುರಾಗುವಾಸೆ.

----ಸಿದ್ದು ಯಾಪಲಪರವಿ

Monday, August 15, 2016

ಮನದ ಮುಂದಣ ಆಸೆ

ಮನದ ಮುಂದಣ ಆಸೆ

ಮುತ್ತಿಕ್ಕುವ ಬಯಕೆಗಳಿಗೆ ಲೆಕ್ಕವಿಲ್ಲ
ಮೈಮನಗಳ ಸುಳಿಯಲಿ ಅದಮ್ಯ
ಆಸೆಗಳು

ಹೆಣ್ಣು ಗಂಡೊಲುಮಿಯ ಬಿಸಿ ಹಸಿ
ಭಾವನೆಗಳ ಕೇವಲ ರಮಿಸಲಾದೀತೆ ?

ಈಡೇರದ ಆಸೆಗಳ ಹುಲಿ ಸವಾರಿಯ
ಭ್ರಮಾಲೋಕ
ನಡೆಯುವುದು ರಾಜಮಾರ್ಗ
ಅಲ್ಲವಾದರೂ ಮಹಾರಾಜನೆಂಬ
ಜಂಬ
ಕಾಣದಾಗಿದೆ ಸ್ಪಷ್ಟ
ಬಿಂಬ

ರಮ್ಯ ಪರಿಸರದಿ ಮಗುವಾಗಿ ಮಲಗುವ
ಇರಾದೆಯನು ಲೆಕ್ಕಿಸದ ಮನಕೆ ನೂರೆಂಟು
ತಾಕಲಾಟ

ಕಂಡದ್ದೆಲ್ಲ ದಕ್ಕಿಸಿಕೊಳ್ಳುವ ಹಪಾಹಪಿಯ
ಹಳವಂಡದ ಹಳೇ ಚಾಳಿ
ಬಿಡಬೇಕೆಂದರೂ ಬಿಡದ ಮಾಯೆ

ಕೂಳುಬಾಕ ಕೊಳ್ಳುಬಾಕ ಮನಕೆ ಇಂಗದ
ದಾಹ
ಸಿಗದಿದ್ದರ ಬೆಂಬತ್ತುವ ಮೊಂಡು ಹಟ

ಇತಿಹಾಸದ ಪಾಠಗಳು ಮರೆಯಾಗಿ
ಮತ್ತದೇ ಇತಿಹಾಸವಾಗುವ ಜಾಣಮರೆವು

ಅರಿತವರ ಅನುಭವಗಳ ಆಲಿಸದ
ಜಾಣಕಿವುಡು

ಮನದೊಳಗಣ ವಿಕಾರ ವಿನಿಮಯಕೆ
ನಿರಂತರ ಬಲಿಯಾಗುವ ಹಗಲುಗನಸಿನ
ಹಾಸಿಗೆ ಮೇಲೆ ಎಚ್ಚರಾಗದ ನಿದ್ರೆ

ಮಲಗದ ಮನವ ಎಬ್ಬಿಸುವ ಇಬ್ಬಗೆಯ
ನಿಲುವಿನ ಜೀವಜಾತ್ರೆಯ ಕೇವಲ
ಪಾತ್ರದಾರಿ
ಮೇಲಿನ ಸೂತ್ರದಾರನ
ಆಟದಲಿ...

----ಸಿದ್ದು ಯಾಪಲಪರವಿ

Friday, August 12, 2016

ಕಳೆದು ಹೋದ ರಸಮಯ ಕ್ಷಣಗಳು

ಕಳೆದು ಹೋದ ರಸಮಯ...

ಮಬ್ಬುಗತ್ತಲ ಸಂಜೆ ಸಜೆಯಲಿ ಎಂತಹ
ಮಜವಿತ್ತು
ಎದುರಿಗಡೆ ಬಣ್ಣ ಬಣ್ಣದ ಗಾಜಿನ ಬಾಟಲಿಗಳ
ಗ್ಲಾಸುಗಳ ಸದ್ದಿನ ನಿಶ್ಯಬ್ದ

ಹರಡಿ ಅಸ್ತವ್ಯಸ್ತಗೊಂಡ ಸ್ನಾಕ್ಸುಗಳ
ಘಮಲು

ನೀರು - ಸೋಡಾಗಳ ಅವಿನಾಭಾವ
ಸಂ-ಬಂಧ
ಭಿನ್ನ - ಭಾವಗಳ ಬಿನ್ನಾಣವಿಲ್ಲದ
ಸೊಗಡು

ಬೇಸಿಗೆಯಾದರೆ ಸಾಕು ಬೀರ-ಬಲ್ಲರ
ಥಕ-ಥಕ ಕುಣಿತ
ಸೇಂಗಾ , ಬಜಿ ಆಮಲೆಟ್ಟುಗಳ
ಆಮೆಯ ನಡಿಗೆ

ಕೊರೆಯುವ ಛಳಿಯಾದರಂತೂ ಅಬ್ಬಾ
ಅದರ ಮಜವೇ ಬೇರೆ !

ಕಾಸಿದ್ದರೆ ಸ್ಕಾಚುಗಳ ರಮ್ಯತೆಯ ರಂಗು
ರಾತ್ರಿ ಕಳೆಯುವವರೆಗೆ ಅದೇ ಗುಂಗು
ಇಲ್ಲದಿರೆ ವಿಸ್ಕಿ ರಮ್ಮು ಜಿನ್ನು ಎಂಬ ಬೇದ
ಭಾವಗಳ ಹಂಗಿಲ್ಲದ ತೀರ್ಥ-ಯಾತ್ರೆ

ಮಬ್ಬುಗತ್ತಲಲಿ ಎಲ್ಲವೂ ಕುಲ್ಲಾ-ಖುಲ್ಲಾ
ಮುಚ್ಚು ಮರೆಯಿಲ್ಲದ ಭಾವನೆಗಳ ಹರಿದಾಟ
ಮಾತು ಮಂಥನ ಚಿಂತನಗಳದೇ ಕಾರುಬಾರು

ಎಲ್ಲವೂ . ಎಲ್ಲರೂ ಖುಷಿ ಎಲ್ಲಿಲ್ಲದ ಸಂಭ್ರಮ
ಹಳ್ಳಿಯಿಂದ ದಿಲ್ಲಿಗೆ , ಅಲ್ಲಿಂದ ಅಮೇರಿಕೆಗೆ
ಅಲೆದಾಟ
ಮೈ-ಮನಗಳಲಿ ಅದೆಂತದೋ ಪುಳಕ
ಮುಕ್ತ ಮಾತು-ಕತೆಗಳ ಚಲ್ಲಾಟ
ಅನೇಕಾನೇಕ ನಗ್ನಸತ್ಯಗಳ ಬಯಲಾಟ
ಅದುಮಿಡಲಾಗದ ಭಾವನಗಳ ಚಲ್ಲಾಟ

ಆಹಾ ! ಆ ಸಂಜೆಗಳು ರಾತ್ರಿಗಳಾಗಿ
ಬೆಳಕು ಹರಿದುದರ ಪರಿವೇ ಇಲ್ಲದ
ಜಾಗರಣೆ
ಅದೇನು ಖುಷಿ ! ಅದೇನೋ ಮಜಾ
ಮುಚ್ಚು ಮರೆಯಿಲ್ಲದ ನಿರ್ಮಲ ಮುಗಿಯದ
ಪಯಣ....

----ಸಿದ್ದು ಯಾಪಲಪರವಿ

Thursday, August 11, 2016

ಹಾಗೆ ಸುಮ್ಮನೇ

Shooting...
----------------------
ಒಂದು ಕಾಲಕ್ಕೆ ನನ್ನನ್ನು ಕಾಡುತ್ತಿದ್ದ ಹವ್ಯಾಸ , ತುಂಬಾ ದುಬಾರಿ ಅನಿಸಿ ಕೈಬಿಟ್ಟದ್ದೆ. ಎಪ್ಪತ್ತರ ದಶಕದಲ್ಲಿ ನಾನಾಗ ಹೈಸ್ಕೂಲ್ ವಿದ್ಯಾರ್ಥಿ , ನಮ್ಮ ಕಟ್ಟಡದಲ್ಲಿ ಸ್ಟುಡಿಯೋ ಇತ್ತು ಅದರ ಒಡೆಯ ನ್ಯೂಯ್ ಕರ್ನಾಟಕ ಸ್ಟುಡಿಯೋ ಮಾಲೀಕ ಪ್ರಭು ಇಲ್ಲದಾಗ ಉಳಿದ ಉದ್ಯೋಗಿಗಳ ನೆರವಿನಿಂದ dark room ಕೆಲಸ ಕಲಿತೆ, ನನ್ನ ಫೋಟೋ ತೆಗೆಸಿಕೊಂಡು ನಾನೇ ಪ್ರಿಂಟ್ ಹಾಕುತ್ತಾ ಇದ್ದುದು ಮಜಾ ಅನಿಸುತ್ತಿತ್ತು. ಆಗ ಕ್ಯಾಮರಾ ಬಳಸುವುದನ್ನೂ ಕಲಿತೆ.
ಮನೆತನದ ಉದ್ಯೋಗ ವ್ಯಾಪಾರದಲ್ಲಿ ಅಷ್ಟೊಂದು ಆಸಕ್ತಿ ಇರದೇ ಅಂಗಡಿಗೆ ಹೋದರೆ ವ್ಯಾಪಾರ ಬಿಟ್ಟು dark room ಸೇರುತ್ತಿದ್ದೆ.
ಇದು ಅತಿಯಾಗಿ ಓದಿನ ಕಡೆಗೂ ಗಮನ ಕೊಡದೆ ಹತ್ತನೇ ವರ್ಗದಲ್ಲಿ ಡುಮ್ ಕಿ ಹೊಡೆದದ್ದು , ನಂತರ ಕಷ್ಟಪಟ್ಟು ಕಾಲೇಜಿನ ವ್ಯಾಸಂಗದಲ್ಲಿ ನಿಧಾನವಾಗಿ ಮೇಲೇರುತ್ತ ಈಗ ಈ ಹಂತ ತಲುಪಿದ್ದು ಒಂದು ಸಣ್ಣ
ಇತಿಹಾಸ
ನಂತರ ಕ್ಯಾಮರಾ ಆಗಾಗ ಹೇಗಲೇರಿತಾದರೂ ದುಬಾರಿ ಎನಿಸಿ ಕೊಂಚ ದೂರಾಗಿದ್ದೆ
ಆದರೆ ಈಗ ಡಿಜಿಟಲ್ ಹಾಗೂ ಸೋಸಿಯಲ್ ಮೀಡಿಯಾ ಯುಗ ದುಬಾರಿಯೂ ಅಲ್ಲವಾದ್ದರಿಂದ ಖುಷಿಗಾಗಿ ಇಂದು ಒಂದಿಷ್ಟು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದೆ.
ಕಾಲ ಕೂಡಿ ಬಂದರೆ ಬಿಡುವಾಗಿಸಿಕೊಂಡು ಕ್ಯಾಮರಾ ಹೇಗಲಿಗೇರಿಸುವ ಇರಾದೆ.
----ಸಿದ್ದು ಯಾಪಲಪರವಿ

ಜಾರಿ ಹೋಗಿದ್ದೇನೆ

ಬೆಂಬತ್ತಿ ಹೋದದ್ದೆಲ್ಲ
ಸಿಗುವುದೇ ಇಲ್ಲ
ಸುಮ್ಮನಿದ್ದರೆ
ಬಿಡುವುದಿಲ್ಲ
ಹಿಡಿಯುವುದು
ಬಿಡುವುದು
ನಮ್ಮ
ಕೈಯಲ್ಲಿಲ್ಲ ಎಂದು
ಗೊತ್ತಿದ್ದರೂ ಸಿಗದುದ
ಹಿಡಿಯುವ ತುಡಿತ
ನೀರಲ್ಲಿ ಸಿಕ್ಕ ಮೀನು ಕೈ
ಜಾರಿದರೂ ಹಿಡಿಯುವ
ತವಕ
ಹಿಡಿಯುವ ಬಿಡುವ
ತವಕ-ತಲ್ಲಣಗಳ
ಹೊಯ್ದಾಟದಲಿ
ನಾನೇ
ಜಾ
ರಿ
ಹೋ
ಗಿ
ದ್ದೇ
ನೆ

------ಸಿದ್ದು ಯಾಪಲಪರವಿ

ಬಯಲಾಗೋಣ

ಕೂದಲಿಗೆ ಬಳಿಯುವ
ಬಣ್ಣ
ಮುಖಕ್ಕೆ ಹಚ್ಚುವ
ಸುಣ್ಣ
ಅಡಗಿದ ಸುಕ್ಕನು
ಮರೆ ಮಾಚದ
ಅಸಹಾಕತೆಯ
ಮುಖವಾಡ

ಒಳಗೊಳಗೆ
ತಿಣುಕಿದರೂ
ಉದ್ರೇಕಗೊಳ್ಳದ
ಕಾಮ

ಸಕ್ಕರೆಯ ಕಹಿ
ರಕ್ತದೊತ್ತಡದ
ತುಮುಲಗಳ
ತಾಕಲಾಟ

ಸಾವೆಂಬ ಸಾಗರದ
ಅಲೆಗಳ ಭಯಾನಕ
ಹಳವಂಡ

ಕಳೆದುಕೊಂಡ
ಕನಸುಗಳ
ಹುಡುಕಾಟ

ಬತ್ತಿ ಹೋಗುವ
ಭಾವಗಳ
ಮಿಡುಕಾಟ

ಮಾಗಿ ಮುಗಿಯುವ
ವಯೋ-ಮಾನವ
ಮುಚ್ಚಿಟ್ಟರೂ
ಮರೆಯಾಗದ
ವಾಸ್ತವ

ಮುಖವಾಡ
ಕಳಚಿ ಬಟ್ಟ
ಬಯಲಲಿ
ಬರೀ ಬೆತ್ತಲಾಗಿ
ಸದ್ದಾಗುವ
ಸಂತೆಯಲಿ
ನಿಶ್ಯಬ್ದವಾಗೋಣ.

----ಸಿದ್ದು ಯಾಪಲಪರವಿ

Wednesday, August 3, 2016

ಮುಖವಾಡ ಬೇಡ

ನಮ್ಮ ಬದುಕಿನಲ್ಲಿ ವೈಯಕ್ತಿಕ ಹಾಗೂ ಸಾರ್ವಜನಿಕ ಮುಖಗಳಿರುತ್ತವೆಯಾದರೂ ಎರಡನ್ನು ಸಮತೋಲನಗೊಳಿಸುವ ಜವಾಬ್ದಾರಿಯೂ ಇದೆ.
ಅದರಲ್ಲೂ ವಿಶೇಷವಾಗಿ ಜವಾಬ್ದಾರಿಯುತ , ಉನ್ನತ ಸ್ಥಾನದಲ್ಲಿರುವವರು ಇನ್ನೂ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳುವ ಅಗತ್ಯವಿದೆ.
ಮಾನ್ಯ ಮುಖ್ಯ ಮಂತ್ರಿಗಳ ಖಾಸಗಿ ದುಃಖದ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮಾದರಿಯೆಂಬಂತೆ ವರ್ತಿಸಿದ್ದು ಅಭಿನಂದನೀಯ.
ಅದೇ ಮಾದರಿಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೂಡಾ ಸಂಯಮದಿಂದ ಪಕ್ಷಾತೀತವಾಗಿ ನಡೆದುಕೊಳ್ಳಲಿ ಎಂದು ಆಶಿಸೋಣ.
ರೈತರು , ಅಧಿಕಾರಿಗಳ ಆತ್ಮಹತ್ಯೆ , ಮಹಾದಾಯಿ ಯೋಜನೆ ಹಾಗೂ ಇತರ ಜ್ವಲಂತ ಸಮಸ್ಯಗಳನ್ನು ಪಕ್ಷಗಳ ಹಿತದೃಷ್ಟಿಯಿಂದ ನೋಡದೇ ಜನಪರವಾಗಿ ಆಲೋಚಿಸುವುದು ಹಿತಕರ.
ಎಲ್ಲಾ ವಿಷಯಗಳಿಗೂ ಮುಂದುವರೆದ ರಾಷ್ಟ್ರಗಳ ಉದಾಹರಣೆಗೆ ತೆಗೆದುಕೊಳ್ಳುವ ನಾವು ರಾಜಕೀಯ ವಿಷಯ ಬಂದಾಗ ವಿಮುಖರಾಗಿಬಿಡುತ್ತೇವೆ.
ಅಧಿಕಾರದಿಂದ ನಿರ್ಗಮಿಸಿದ ಇಂಗ್ಲೆಂಡ್ ಪ್ರಧಾನಿ ನಮಗೆ ಆದರ್ಶ ಆಗಲಾರ.
ಭಾರತದ ರಾಜಕಾರಣ ಕೋಟೆ ಕೊತ್ತಲಲಿ ದೇಶವನ್ನಾಳಿದ ಮಹಾರಾಜ ಮಾಡೆಲ್ ನಂತೆ ಇರುವುದು ದುರಂತವಲ್ಲದೆ ಇನ್ನೇನು ?
ಬದ್ಧತೆ ಹಾಗೂ ಪ್ರಾಮಾಣಿಕತೆ ಇಲ್ಲದ ರಾಜಕೀಯ ಪ್ರೇರಿತ ಹೇಳಿಕೆಗಳು ಅಸಂಬದ್ಧ ಎಂದು ಗೊತ್ತಿದ್ದರೂ ಈ ತರಹದ ಹಿಪೊಕ್ರಸಿಯ ಮೇಲಾಟ ನಿಲ್ಲಲಿ ಎಂಬ ಸದಾಶಯ ನನ್ನಂತಹವರದು.
ಬೃಷ್ಟಾಚಾರ , ಸ್ವಜನ ಪಕ್ಷಪಾತ ಹಾಗೂ ರಾಜಕೀಯ ಮಹತ್ವಾಕಾಂಕ್ಷೆ ಸಂಪೂರ್ಣವಾಗಿ ನಿಲ್ಲಲಿ ಎಂದು ಬಯಸುವಷ್ಟು ಜಾಣ (?) ನಾನಲ್ಲವಾದರೂ ಜನಸಾಮಾನ್ಯರಿಗೆ ಅರ್ಥವಾಗುವ  ಕೃತಕ ಹೇಳಿಕೆಗಳು ನಿಲ್ಲಲಿ ಎಂದು ಬಯಸುವೆ.

----ಸಿದ್ದು ಯಾಪಲಪರವಿ

Difficult ...

It is very difficult to understand
the mind set and mood of achievers
and great personalities.

They take and face failures and success
In equal force.

But once you understand their mentality
  and chemistry life will be more interesting.

Let us spend our time with THEM.

  ---Siddu Yapalaparvi.

ಗು 'ಲಾಬಿ' ನಗರ

ಇಂದು ಈ ರಾತ್ರಿ ತತ್ತರಿಸಿದೆ ಗುಲಾಬಿನಗರ

ಸದಾ ನಳನಳಿಸುವ ಕೆಂಗುಲಾಬಿಗಳು
ಇಂದು ಈ ರಾತ್ರಿ ತತ್ತರಿಸಿ ಮುಳ್ಳುಗಳ
ಮೇಲೆ ವಾಲಿ ತತ್ತರಿಸಿವೆ.

ಕಾಲು ಹಿಡಿದು ಬೇಡುವವರ ಆರ್ತನಾದವ
ತಲೆ ಹಿಡಿದು ಕುಳಿತಿರುವವರು ಕೇಳಿಸಿಕೊಳ್ಳುತ್ತಿಲ್ಲ.
ನಿಧಾನ ಸೌಧದ ಸುತ್ತಲೂ ಅಸಹನೆಯ ಪಹರೆ
ಒಳಗೆ ನುಸುಳಲು ಜಾಗವೆಲ್ಲಿ ಮಾನವತೆಗೆ ?

ಎಲ್ಲರೂ ಗಂಟುಗಳ್ಳುರು ಸಾವಿನ ಮನೆಯಲ್ಲಿ
ಸೂತಕದ ಭೋಜನ ಸವಿಯಲು ಸನ್ನದ್ಧರಾಗಿದ್ದರಾರೆ
ಸಾವಿನ ಕೊರಳಿಗೆ ಉರುಲು ಬಿಗಿದು ವಿಲಿ ವಿಲಿ
ಒದ್ದಾಡುವುದ ಕಂಡು ಕೇಕೆ ಹಾಕುತ್ತಾರೆ.

ಎಲ್ಲದಕೂ ಸಿದ್ಧರಾದವರಿಗೆ ಸಂತೆಯಲೂ ಸುಖನಿದ್ರೆ
ಸಂತೆಯಲಿ ಮನೆಯ ಮಾಡಿ ನಡುಬೀದಿಯಲಿ ನಿಂತು
ಬಟ್ಟೆ ಬಿಚ್ಚಿ ಬೆತ್ತಲಾಗಿ ತಕ ತಕ ಕುಣಿಯುತ್ತ
' ಅಯ್ಯೋ ಮಾನ ಹೋಯ್ತು '
ಎಂದರಚುವ ಮಾನಗೇಡಿಗಳ
ಮಹಾ ಕೂಟ.

ಯಾರು ಹೋದರೇನು ? ಯಾರು ಬಂದರೇನು ?
ತುತ್ತು ಕೂಳಿಗೆ ಕೈ ಚಾಚುವುದು ತಪ್ಪಲಿಲ್ಲ .

ಅಂದದೂರು ಚಂದದೂರಿನಲಿ ಬರೀ ಲಾಬಿಗಳದೇ
ಕಾರು-ಬಾರು , ಸಂಜೆಯಾದರೆ ಸಾಕು ಇಲ್ಲಿ ರಂಗೇ
ರಂಗು.

ಪಂಚೆಯುಟ್ಟವರು ಕಿತ್ತು ಬಿಸಾಕಿ ಜೀನ್ಸಗಳಲಿ
ಕಾಲ ಹಾಕುತ್ತಾರೆ....

ದೂರದೂರಿಂದ ಬಂದು ನೆಲ ಹಿಡಿದು ನೆಲೆ 
ನಿಂತವರು ಕನ್ನಡಕೆ ಕನ್ನ ಹಾಕಿದ್ದಾರೆ.

ಈ ಗುಲಾಬಿ ನಗರದಲಿ ಈಗ ಬರೀ ಕತ್ತಲು
ಬೆಟ್ಟಕೆ ಛಳಿಯಾದರೆ ಹೊಚ್ಚುವವರು ಯಾರು ?
ಕಂದೀಲ ಬೆಳಕಲಿ ಕೈ ಹಿಡಿದು ದಡ
ದಾಟಿಸುವವರು ಎಲ್ಲಿಹರು ?

ಇಂದು
ಈ ರಾತ್ರಿ
ತತ್ತರಿಸಿದೆ
ಗುಲಾಬಿನಗರ.

-----ಸಿದ್ದು ಯಾಪಲಪರವಿ

ಗುರು ಪೂರ್ಣಿಮೆ

ಗುರು ಪೂರ್ಣಿಮೆಗೆ ಯಾರ್ಯಾರ ನೆನೆಯಲಿ.

ಒಂದಕ್ಷರ ಕಲಿಸಿದವನೂ ಗುರು
ಎಂದು ವ್ಯಾಖ್ಯಾನಿಸಲಾಗಿರುವಾಗ
ನಮ್ಮ ಬದುಕಿನಲ್ಲಿ ಅಸಂಖ್ಯ
ಗುರುಗಳಿರುತ್ತಾರೆ.

ಅವರು ಯಾರು ಎಂಬುದನು ನಮ್ಮ
ಮನಸ್ಸು ಅರಿತಿರುತ್ತದೆ.

ನಿಂದೆ , ಅಪಮಾನ , ಅನಾರೋಗ್ಯ
ಸಮಯ , ಸಂದರ್ಭಗಳು ಒಮ್ಮೊಮ್ಮೆ
ಗುರುವಾಗಿಬಿಡುತ್ತವೆ.

ಅಂತಹ ಸಂದರ್ಭದಲ್ಲಿ
ಮಾರ್ಗದರ್ಶನ ತೋರಿ
ಬದುಕ ಬೆಳಗಿಸಿದ ಎಲ್ಲ
' ಗುರುಗಳಿಗೆ '
ಗುರು ಪೂರ್ಣಿಮೆಯ
ನ ಮ ನ ಗ ಳು

----ಸಿದ್ದು ಯಾಪಲಪರವಿ

ಕಾಯುವುದಿಲ್ಲ

ಕಾಯುವುದಿಲ್ಲ

ಕಾಯುವುದು ಸುಲಭವಲ್ಲ
ಒಲೆಯ ಮೇಲೆ ರೊಟ್ಟಿಯೇ
ಇಲ್ಲದ ಹಂಚಿನ ಹಾಗೆ
ಬರೀ ಕಾಯುವುದು
ಸುಲಭವಲ್ಲ.

ಹಂಚಿನ ಮೇಲೆ ಲಟ್ಟಿಸಿದ
ಹಿಟ್ಟು ನೀರಿನಿಂದ ತಣ್ಣಗಾಗಿ
ರೊಟ್ಟಿಯಾದರೆ ರುಚಿಯ
ಘಮಲಿನ ಕಂಪು
ಹೊಟ್ಟೆಗೂ ಹಿತ
ರೊಟ್ಟಿಗೂ ಹಸಿದ ಹೊಟ್ಟೆಯ
ಸೇರಿದ ಖುಷಿ.

ಇನ್ನು ಮುಂದೆ ಉರಿಯುವ
ಒಲೆ
ಕಾಯುವ
ಹಂಚು
ನಾನಾಗಲಾರೆ.

ಹಿಟ್ಟು , ನೀರು
ಇಲ್ಲದ ಹಿತ ಎಲ್ಲಿದ್ದರೇನು ?
ಹೇಗಿದ್ದರೇನು ?

ಕಾಯುವುದಿಲ್ಲ ಇನ್ನು ಮುಂದೆ
ನಾ
ಯಾರಿಗಾಗಿಯೂ....

----ಸಿದ್ದು ಯಾಪಲಪರವಿ

ಅಗ್ನಿ ಪರೀಕ್ಷೆ

ಅಗ್ನಿ ಪರೀಕ್ಷೆ

ಆತ್ಮೀಯರು ಅನಿರೀಕ್ಷಿತವಾಗಿ
ಗೊಂದಲಕ್ಕೆ ಬಿದ್ದು ದಾರಿ
ಕಾಣದಾದಾಗ ಕೇವಲ
ಸಹಾನುಭೂತಿ
ತೋರದೇ
ಅನುಭೂತಿಯಿಂದ
ಅನುಭವಿಸಿ ಸೂಕ್ತ
ಮಾರ್ಗದರ್ಶನ
ತೋರಬೇಕು.
ಎಷ್ಟೇ ಜಾಣರಿದ್ದರೂ
ತೀವ್ರ ಸಂಕಷ್ಟ ಎದುರಾದಾಗ
ದಾರಿ ಕಾಣದಾಗುತ್ತದೆ.
ಆಗ ಸಹಾನುಭೂತಿಗಿಂತಲೂ
ಅನುಭೂತಿ ಪರಿಣಾಮಕಾರಿಯಾಗಿ
ನೆರವಾಗುತ್ತದೆ.
ವೈದ್ಯರೇ ಅನಾರೋಗ್ಯ
ದಿಂದ ಬಳಲುವಾಗ
ಇನ್ನೊಬ್ಬ ವೈದ್ಯನ ಚಿಕಿತ್ಸೆ
ಅನಿವಾರ್ಯವಾಗುತ್ತದೆ.
ಅಗ್ನಿ ಪರೀಕ್ಷೆಯಿಂದ
ಪಾರಾಗಲು
ನೆರವಾಗೋಣ .

----ಸಿದ್ದು ಯಾಪಲಪರವಿ

ಒಂದು ನೀರಸ ಭಾವ

ಒಂದು ನೀರಸ ಭಾವ

ನೀರಿಗಾಗಿ ಲಾಟಿ ಏಟು
ತಿಂದ ರೈತರು
ದೇಶಕ್ಕಾಗಿ ಪ್ರಾಣ ಬಿಟ್ಟ
ಯೋಧರು
ರಾಜಕುವರನನ್ನು
ಕಳೆದುಕೊಂಡ ರಾಜರು
ಎಲ್ಲರ ರೋಧನ
ಆಕ್ರಂದನ ಮುಗಿಲು
ಮುಟ್ಟಿ ಮೋಡ ಕವಿದು
ಕತ್ತಲಾದ
ಈ ರಾತ್ರಿ
ಮಳೆಯಾಗಿ ಸುರಿದು
ಹಗುರಾಗುವ
ಒಂದು
ನೀರಸ
ಭಾವ...

----ಸಿದ್ದು ಯಾಪಲಪರವಿ

ಸಕ್ಕರೆ ಸವಿಯ ಬಾರದಂತೆ

ಸಕ್ಕರೆ ಸವಿಯ ಬಾರದಂತೆ

ಸಕ್ಕರೆ ಸವಿಯಬಾರದಂತೆ , ಜೇನ ಹೀರಬಾರದಂತೆ
ಹಾಲ ಕುಡಿಯಬಾರದಂತೆ , ಹೂ ಮೂಸಬಾರದಂತೆ
ಇದು ವಯೋಮಾನಕಿರುವ ನಿಬಂಧನೆಗಳ ಅಂತೆ-ಕಂತೆ.

ನಿನ್ನ ತುಟಿಯಲರಳಿರುವ ನಗುವ ಉನ್ಮಾದದ ಸವಿಜೇನ
ಹೀರದಿರಲಾದೀತೆ ? ಮೈ-ಮನಗಳಲಿ ಹಾಸು ಹೊಕ್ಕಾಗಿರುವ
ಸವಿ-ಸಕ್ಕರೆ , ಮಧುರ-ಜೇನ ಅರಳಿ ನಿಂತು ಕೆರಳಿಸಿ ಕೈ ಮಾಡಿ ಕರೆಯುವ ಸುಗಂಧ ಪರಿಮಳವ ಸೂಸದಿರಲಾದೀತೆ ?

ಮತ್ತೇರಿಸುವ ನಗು , ತಲೆ ತಿರುಗಿಸುವ ತಿರುವುಗಳ ಮೈಮಾಟ ಮಧುರ ಮಿಲನ ಮಹೋತ್ಸವದ ರಂಗಿನಾಟದ ಹಂಗಿಲ್ಲದೆ ಇರಲಾದೀತೆ ?

ಹಸಿದ ಹೊಟ್ಟೆಯ ಕಟ್ಟೇನು , ಒಣಗಿದ ಗಂಟಲ ದಾಹವ ಇಂಗಿಸೇನು ಆದರೆ ನಿನ್ನ ಮೈಮನಗಳ ಸುಳಿಯ ದಾಳಿಯ ತಪ್ಪಿಸಲಾದೀತೆ ?

ಇದು ಕೇವಲ ದೇಹದ ದಾಹವಲ್ಲ ಅದರಾಚೆಗಿನ ಅದಮ್ಯ ಅನುಭೂತಿ ನಾ
ನಲ್ಲ ಯಾರೂ ತಪ್ಪಿಸಲಾಗದ ಅಂಟಿದ ನಂಟಿದು.

ಯಾರೂ ಕಸಿಯದ , ಎಲ್ಲೂ ದೊರಕದ ಮಾರುಕಟ್ಟೆಯಲಿ ಬೆಲೆ ಕಟ್ಟಲಾಗದ ಒಲವ ಹಿಮಾಲಯವಿದು. ಇಲ್ಲಿ ನನಗೆ ನೀ ನಿನಗೆ ನಾ ಅರಿತು ಅನುಭವಿಸುವ ಅನುಪಮ ಒಲವಿನಾಟವಿದು.

----ಸಿದ್ದು ಯಾಪಲಪರವಿ