Monday, August 22, 2016

ಡಾ.ಆರ್.ಎಂ.ರಂಗನಾಥ್

ಮರೆಯಬಾರದ ಚೇತನ . .

ಇವರು ಡಾ.ಆರ್.ಎಂ.ರಂಗನಾಥ್ . ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರುವರೆ ದಶಕಗಳ ಕಾಲ ಸಸ್ಯಶಾಸ್ತ್ರ ಪ್ರೊಫೆಸರ್.

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗೈಡ್ , ಗೆಳೆಯರಿಗೆ ಆತ್ಮೀಯ ಸಂಗಾತಿ , ಕುಟುಂಬಕ್ಕೆ ಹಿರಿಯಣ್ಣ , ಅಮ್ಮನ ಮುದ್ದಿನ ಮಗ , ಹಿರಿಯರಿಗೆ ನೆರವಿನಾಸರೆ , ಎಲ್ಲರೊಳು ಬೆರೆಯುವ ಹಸನ್ಮುಖಿ . ಪ್ರತಿಭೆ , ಅಧಿಕಾರ , ಅಂತಸ್ತು , ಬೆಂಗಳೂರಿನ ಭವ್ಯತೆ ಇದಾವುದು ಇವರನ್ನು ಅಲುಗಾಡಿಸಲೇ ಇಲ್ಲ !

ಎಂಬತ್ತರ ದಶಕದಲ್ಲಿ ಜನತಾ ಪರಿವಾರದ ಅಬ್ದುಲ್ ನಜೀರ್ ಸಾಬ್ ಹಾಗೂ ಕೆ.ಆರ್. ರಮೇಶ್ ಕುಮಾರ್ ಅವರ ಆತ್ಮೀಯ ಒಡನಾಟವಿದ್ದರೂ ಕಿಂಚತ್ತು ರಾಜಕೀಯ ಲಾಭ ಪಡೆಯದ ನಿಶ್ಪ್ರಹ ಸ್ನೇಹ .
ಅಮ್ಮನನ್ನು ಸಾಕುವ , ತಮ್ಮ -ತಂಗಿಯರ ಬಾಳು ಬೆಳಗಿಸುವ , ಸ್ನೇಹಿತರಿಗೆ ಸಹಾಯ ಹಸ್ತ ಚಾಚುವ ಭರದ ನಡಿಗೆಯಲ್ಲಿ ಸಂಸಾರ ಬಂಧನದಲಿ ಬಂಧಿಯಾಗದ ನಿರ್ಲಿಪ್ತ ಸಂತ.
  ಯುರೋಪಿನ ಸಮ್ಮೇಳನ , ಅಪಾರ ಅಧ್ಯಯನದ ಹರವು , ಅನಿರೀಕ್ಷಿತವಾಗಿ ಒಲಿದ ಕುಲಸಚಿವ ಹುದ್ದೆ ಇವರ ಸರಳತೆಯನ್ನು ಕಿತ್ತುಕೊಳ್ಳಲಿಲ್ಲ. ಕುಲಸಚಿವರಾಗಿದ್ದಾಗ ಖಾಸಗಿ ಕೆಲಸಗಳಿಗೆ ಕಾರು ಆಟೋದಲ್ಲಿಯೇ ಸುತ್ತಾಟ . ಈಗಲೂ ಅಷ್ಟೇ ತಮಿಳು ಮೂಲದ ಭೂಪಾಲನ್ ಇವರ ಆಟೋ ಸಾರಥಿ .
ಐಷಾರಾಮಿ ಬದುಕು ಇವರ ಬಳಿ ಸುಳಿಯಲಾರದು . ಅವರ ಹಿತೈಷಿಗಳು ಇಂದಿಗೂ ಅವರನ್ನು ಆಟೋ ರಂಗನಾಥ್ ಎಂದೇ ತಮಾಷೆಯಿಂದ ಗೌರವಿಸುತ್ತಾರೆ. ಆನೆ ನಡೆದದ್ದೇ ದಾರಿ ಎಂಬಂತೆ , ಅವರು ಎಲ್ಲಿಂದ ಹೇಗೆ ಬರುತ್ತಾರೆ ಎಂಬುದು ಅಮುಖ್ಯ .

ಇದಿಷ್ಟು ಇವರ ಖಾಸಗಿ ಜೀವನ ಶೈಲಿಯಾದರೆ , ಒಬ್ಬ ಆಡಳಿತಗಾರರಾಗಿ ಅತ್ಯಂತ ವಿಶಿಷ್ಟ ಶೈಲಿ ಇವರದು . ಕುಲಸಚಿವರಾಗಿದ್ದಾಗ ಅತ್ಯಂತ ಜವಾಬ್ದಾರಿಯುತವಾಗಿ , ಕಾಳಜಿಯಿಂದ ಕಾರ್ಯ ನಿರ್ವಹಿಸಿ ಕಳಂಕ ಅಂಟಿಸಿಕೊಳ್ಳದೆ ಪ್ರಾಮಾಣಿಕತೆ ಮೆರೆದರು 'ಅವರ ಜಾಗದಲ್ಲಿ ಯಾರಿದ್ದರೂ ಕೋಟ್ಯಾಧಿಪತಿಯಾಗುತ್ತಿದ್ದರು ' ಎಂದು ವಿಶ್ವವಿದ್ಯಾಲಯದ ಕಲ್ಲುಗಳೂ ಹೇಳುತ್ತವೆ .
ಶಿಸ್ತು , ದಕ್ಷತೆ ಹಾಗೂ ಆಡಳಿತ ಪ್ರೌಢಿಮೆಯೊಂದಿಗಿನ 'ಪ್ರಾಮಾಣಿಕತೆ' ಅನುಕರಣೀಯ. ಅಧಿಕಾರ ಮುಗಿದ ಕೂಡಲೇ ನಸು ನಗುತ್ತಾ ಭೂಪಾಲನ್ 'ನ ಆಟೋ ಏರಿ ನಿರ್ವಿಕಾರವಾಗಿ ಹೋಗಲು ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿತ್ವವೇ ಕಾರಣ. ಬ್ರಷ್ಟ ವ್ಯವಸ್ಥೆ ಇರದೆ , ಕೇವಲ ಅಕ್ಯಾಡೆಮಿಕ್ ಎಕ್ಸಲೆನ್ಸ್ ಗೆ ಬೆಲೆ ಇದ್ದರೆ ಎಂದೋ ಕುಲಪತಿಯಾಗುತ್ತಿದ್ದರು . ಆದರೆ ಆ ಭಾಗ್ಯ ವಿಶ್ವವಿದ್ಯಾಲಯಗಳಿಗೆ ಇಲ್ಲ ಬಿಡಿ !

ಹಿಪೊಕ್ರಸಿಯ ಸುಳಿವಿಲ್ಲದ ನೇರ ನಡೆಯ , ಪರಿಶುದ್ಧ ಮನದ ಹಿರಿಯರೊಂದಿಗೆ ಎರಡು ವರ್ಷ ಇದ್ದದ್ದೇ ನನ್ನ ಪುಣ್ಯ . ಅತಿಯಾದ ಭಾವುಕನಾದ ನನಗೆ ವಾಸ್ತವ ಜಗತ್ತಿನ ಮಸಲತ್ತುಗಳ ಪರಿಚಯ ಮಾಡಿಸಿ ಅವುಗಳಿಂದ ಇರಬೇಕಾದ ಅಂತರ ಹೇಳಿಕೊಟ್ಟ ಮಹಾನ್ ಸಂತನ ಮನಸ್ಥಿತಿ ಪ್ರೊ. ಆರ್.ಎಂ. ರಂಗನಾಥ್ ಅವರದು . ಆಟೋದಲ್ಲಿ ಅಲೆದಾಟ , ನಿರಂತರ ಸಂಶೋಧನೆ , ಸಂಜೆ ಕೋಶಿಸ್ ಎಂಬ ಚಿಂತಕರ ಚಾವಡಿಯಲಿ ಬೆಚ್ಚಗಿನ ಹರಟೆ ಇವರ ದಿನಚರಿ . ಇಂತಹ ದಿವ್ಯ ಚೇತನವನ್ನು ನನಗೆ ಪರಿಚಯಿಸಿದ ಹಿರಿಯಣ್ಣ , ಮಾಧ್ಯಮ ಲೋಕದ ಎನ್ ಸೈಕ್ಲೋಪಿಡಿಯಾ , ನೇರ ನುಡಿಯ ಪತ್ರಿಕೋದ್ಯಮಿ ಪ್ರೊ. ರವೀಂದ್ರ ರೇಷ್ಮೆ ಅವರಿಗೆ ಚಿರಋಣಿ. ಈಗಲೂ ಅಷ್ಟೇ ಇವರಿಬ್ಬರೂ ಹಲೋ ಹೇಳದಿದ್ದರೆ ನನಗೆ ಬೆಳಕಾಗುವುದಿಲ್ಲ.

----ಸಿದ್ದು ಯಾಪಲಪರವಿ

No comments:

Post a Comment