Tuesday, June 29, 2010

ಸಣ್ಣ ಅಪಘಾತ ದೊಡ್ಡ ವೇದನೆಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ

ಆಗುತ್ತಿರುವುದೆಲ್ಲಾ ಒಳ್ಳೆಯದೇ ಆಗುತ್ತಿದೆ

ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆರೋಧಿಸಲು ನೀನೇನು ಕಳೆದುಕೊಂಡಿರುವೆ ?

ಕಳೆದುಕೊಳ್ಳಲು, ನೀನು ತಂದಿರುವುದಾದರೂ ಏನು ?

ನೀನೇನು ಪಡೆದಿದ್ದರೂ, ಅದನ್ನು ಇಲ್ಲಿಂದಲೇ ಪಡೆದಿರುವೆ

ಏನನ್ನು ನೀಡಿದ್ದರೂ ಅದನ್ನು ಇಲ್ಲಿಗೇ ನೀಡಿರುವೆ ?

ನಿನ್ನೆ ಬೇರಾರದ್ದೋ ಆಗಿದ್ದಿದ್ದು ಇಂದು ನಿನ್ನದಾಗಿದೆ.

ಮತ್ತೆ ನಾಳೆ ಮತ್ಯಾರದ್ದೋ ಆಗಲಿದೆ

ಪರಿವರ್ತನೆ ಜಗದ ನಿಯಮ

ನನ್ನ ನಂಬಿ ಕೆಟ್ಟವರಿಲ್ಲ.ಹೀಗೆ ಹೇಳುವ ಕೃಷ್ಣನ ಮಾತುಗಳನ್ನು ನೂರೆಂಟು ಬಾರಿ ಓದಿದರೂ, ಓದಲೇ ಬೇಕೆನಿಸುತ್ತದೆ. ಪ್ರತಿ

ಓದಿನಲ್ಲೂ ಸಮಾಧಾನ ಸಿಕ್ಕುತ್ತದೆ. ಆದರೂ ನಾವು ನೆಮ್ಮದಿಯಿಂದ ಇಲ್ಲವಲ್ಲ ಏಕೆ ? ಎಂದನ್ನುಕೊಳ್ಳುತ್ತಲೇ

ಚಿಂತಿಸುತ್ತೇವೆ.ಮಾತನಾಡುವಾಗ, ಬೇರೆಯವರು ತೊಂದರೆಯಲ್ಲಿದ್ದಾಗ, ಉಪದೇಶ ನೀಡುವಾಗ, ಹೀಗೆ ಹೇಳುತ್ತಲೇ

ಇರುತ್ತೇವೆ.ಆದರೆ ಅಂತಹ ಸಂದರ್ಭ ನಮಗೆ ಬಂದಾಗ ನೆನಪು ಮಾಡಿಕೊಳ್ಳಬೇಕಾಗಿಲ್ಲ. ಅದು ತಾನೇ ತಾನಾಗಿ ನೆನಪಾಗಬೇಕಲ್ಲ .೯ನೇ ಜೂನ್ ೨೦೧೦ ರಂದು ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ಬರಬೇಕಾಗಿತ್ತು. ಅದಕ್ಕಾಗಿ

ಹಂಪಿ ಎಕ್ಸ್ ಪ್ರೆಸ್ ಗೆ ರಿಸರ್ವೇಷನ್ ಕೂಡ ಆಗಿತ್ತು. ಅನಿರೀಕ್ಷಿತವಾಗಿ ಸಚಿವ ಮಿತ್ರರಾದ ಶ್ರೀರಾಮುಲು

ಹುಬ್ಬಳ್ಳಿ ಇಂದ ವಿಮಾನಕ್ಕೆ ಒಟ್ಟಿಗೆ ಹೋಗೋಣವೆಂಬ ಒತ್ತಾಸೆಯನ್ನು ತಿರಸ್ಕರಿಸುವ ಮನಸ್ಸಾಗಲಿಲ್ಲ.

ಒಪ್ಪಿಕೊಂಡು ಹೊರಟೆ. ಗದಗ್ ನಿಂದ . ತುಂತುರು ಮಳೆ. ಮನದಲಿ ಏನೋ ದಾವಂತ.

ಅದಕ್ಕೆ ನೂರೆಂಟು ಕಾರಣಗಳು. ಮುಂದಿನ ಕಾರುಗಳಲ್ಲಿ ಸಚಿವರು ಹಾಗೂ ಅವರ ಹಿಂಬಾಲಕರು

ಹಿಂದೆ ಸ್ಕಾರ್‍ಫಿಯೋದಲ್ಲಿ. ಒಂಟಿ ಪಯಣ. ಮುಳಗುಂದ ನಾಕಾದಿಂದ ಫೋಟೋಗ್ರಾಫರ್ ಮಹೇಂದ್ರಕರ್

ಜೊತೆಗೂಡಿದ.ಕಾರು ಹುಲಕೋಟಿ ದಾಟಿರಲಿಲ್ಲ. ವೇಗವಾಗಿ ಹೋಗುವುದು ಬೇಡವೆಂದೆ. ಇಲ್ಲ ಸಾರ್,

ಹುಬ್ಬಳ್ಳಿ ತಲುಪಿದ ಮೇಲೆ ಸಾಹೇಬರ ಹಿಂದೆ ಹೋಗದಿದ್ದರೆ ಸ್ಲೋ ಹೋಗ ಬೇಕಾಗುತ್ತದೆ ಅಂದ ಡ್ರೈವರ್ ಭದ್ರಿ.

ಸರಿ ಎಂದು ಸುಮ್ಮನಾದೆ. ಎಷ್ಟೇ ಆಗಲಿ, ಸ್ಟೇರಿಂಗ್ ಇರುವುದು ಅವನ ಕೈಲಿ ಅಲ್ಲವೇ ? ದುಂದೂರ್ ಕ್ರಾಸ್

ಬಳಿ ಯಾರದೋ ಸಣ್ಣ ತಪ್ಪಿನಿಂದ ತಕ್ಷಣ ನಿಂತ ಮಂತ್ರಿಗಳ ಕಾರಿಗೆ, ಭದ್ರಿ ಹೊಡೆಯುವುದನ್ನು ನೋಡುತ್ತಲೇ

ಅಯ್ಯೋ ಹೊಡೆದೆ ಮಾರಾಯ ಎಂದೆ. ಕ್ಷಣಾರ್ಧದಲ್ಲಿ ಎಲ್ಲವೂ ಮುಗಿತು. ನೋಡಿಕೊಂಡೆ, ಎಲ್ಲವೂ

ಸರಿಯಾಗಿತ್ತು. ಆದರೆ ಎಡ ಕೈ ಮಾತ್ರ ಫಾರ್ಸಿ ಹೊಡೆದಂತೆ ನಿಯಂತ್ರಣವಿಲ್ಲದೆ, ಗರಗರ ತಿರುಗತ್ತಲಿತ್ತು.

ಕೈ ಮುರಿತು ಮಾರಾಯ ಎಂದೆ. ನೋವು ಸಹಿಸಲಾಗಲಿಲ್ಲ. ಜೋರಾಗಿ ಚೀರಬೇಕೆನಿಸಿತು. ಸಹಿಸಿಕೊಂಡೆ.

ಎಷ್ಟೋ ಬಾರಿ ನಾನೇ ಹೇಳುತ್ತಿದ್ದ ಮೇಲಿನ ಕೃಷ್ಣನ ಮಾತುಗಳು ನೆನಪಾದವು. ಆಗುವುದೆಲ್ಲಾ ಒಳ್ಳೆಯದಕ್ಕೆ

ಸಧ್ಯ ಎಡದಕೈ ಮುರಿತು, ಬಲದಕೈ ಮುರಿಯಲಿಲ್ಲ ಎಂದು ಸಮಾಧಾನಿಸಿಕೊಂಡೆ. ಇಳಿದು ಎಲ್ಲವನ್ನೂ

ವಿವರಿಸಿ ಪ್ರಯಾಣ ರದ್ದು ಪಡಿಸಿ, ಸಚಿವರಿಗೆ ವಿಶಯ ತಿಳಿಸಿ ದು:ಖವನ್ನು ಸಹಿಸಿಕೊಂಡೆ. ಅತ್ತರೆ, ಚೀರಿದರೆ ಕೇಳುವರಾರು ?

ಡಾ:ಸಂಕನೂರು ಹತ್ತಿರ ಕರೆದುಕೊಂಡು ಹೋಗಲು ಹೇಳಿದೆ. ಮುರಿದಿದ್ದು ಖಾತ್ರಿಯಾತು. ಬೆಂಗಳೂರಿಗೆ

ಚಿಕಿತ್ಸೆಗಾಗಿ ತೆರಳುವ ನಿರ್ಧಾರ. ಯಮಯಾತನೆಯನ್ನು ಸಹಿಸಿಕೊಂಡೆ. ಅಳುತ್ತಾ ರೇಖಾ ಬಂದಳು. ಸಧ್ಯ

ಬದುಕಿದೆ. ತಲೆಗೆ ಪೆಟ್ಟಾಗಲಿಲ್ಲ. ಕಾಲು ಮುರಿಯಲಿಲ್ಲ. ರೈಲಿಗೆ ಹೋಗಿದ್ದರೆ ಚೆನ್ನಾಗಿತ್ತು. ಹೀಗೆ ಹತ್ತು

ಹಲವು ಭಾವಗಳು. ಆಗುವುದೆಲ್ಲಾ ಒಳ್ಳೆಯದಕ್ಕೆ ಅಂದುಕೊಂಡು ಮಾಧ್ಯಮ ಮಿತ್ರರ ಪ್ರಚಾರ ತಪ್ಪಿಸಿಕೊಂಡು

ಏನೂ ಆಗಿಲ್ಲ ಎಂದು ಸುದ್ದಿ ಮಾಡಿ ಡಾ: ಜಿ.ಬಿ. ಪಾಟೀಲ, ಗುಳಗೌಡರ್, ಡಾ: ವಿರೇಶ್, ಹಾಗೂ ಡಾ: ಸಂಕನೂರ್

ರವರೊಂದಿಗೆ ಚರ್ಚೆ ಮಾಡಿ, ಮನೆಗೆ ಬಂದೆ.ಮಧ್ಯರಾತ್ರಿ ಅವ್ವ, ಅಪ್ಪ, ರತ್ನ ಬಂದಿದ್ದು ,ಆ ನೋವು ಈಗೆಲ್ಲಾ ಒಂದು ಕನಸು. ಮರುದಿನ

ಬೆಂಗಳೂರು ಪಯಣ. ರಾಮಪ್ರಿಯರವರ ಸೂಚನೆಯಂತೆ, ಜಯನಗರ ಸರ್ಕಾರಿ ಆಸ್ಪತ್ರೆಗೆ. ಯಾಕೋ ನಿರಾಶೆ.

ಇಷ್ಟೊಂದು ಅವಕಾಶಗಳು ಇರಬೇಕಾದಾಗ ಸರ್ಕಾರಿ ಆಸ್ಪತ್ರೆ ಏಕೆ ಎಂಬ ಆತಂಕ. ಸಣ್ಣ ಅಳುಕು. ಆದರೆ

ಶ್ರೀರಾಮುಲು ಹಾಗೂ ರಾಮಪ್ರಿಯರವರ ಕಾಳಜಿ ಗೊತ್ತಿದ್ದು, ಒಪ್ಪಿಕೊಂಡೆ. ಅದು ಈಗಲೂ ಸರಿ ಎನ್ನಿಸಿದೆ.

ಅವರ ಕಾಳಜಿ ಪೂರ್ವಕ ನಿರ್ಣಯ ಗೆದ್ದಿದೆ.ಆಗಿದ್ದು ಸಣ್ಣ ಅಪಘಾತ, ಬಿದ್ದದ್ದು ದೊಡ್ಡ ಪೆಟ್ಟು. ಎಡಗೈಗೆ ಹ್ಯೂಮರಸ್ ಮಲ್ಟಿಪಲ್

ಫ್ರಾಕ್ಚರ್. ಮೂಳೆ ತುಂಡು ತುಂಡಾಗಿತ್ತು. ಸಹಿಸಿಕೊಂಡೆ.ದಿನಾಂಕ ೧೩-೦೬-೨೦೧೦ ರಂದು ರವಿವಾರ ವಿಶೇಷ ಕಾಳಜಿಯೊಂದಿಗೆ, ಆಪರೇಷನ್

ಎಲ್ಲ ಯಾತನೆ ಸಹಿಸಿಕೊಂಡು ಕೇವಲ ವಿಶ್ವಾಸದಿಂದ, ಓ.ಟಿ.ಯಲ್ಲಿ ಕಣ್ಣುಮುಚ್ಚಿದೆ. ತುಂಬಾ ಮೇಜರ್

ಆದರೂ ನಾಲ್ಕು ತಾಸಿನ ಹೋರಾಟದಲ್ಲಿ ಗೆದ್ದೆ. ಬರುವ ಕರೆಗಳಿಗೆಲ್ಲಾ ಒಂದೇ ಉತ್ತರ, ಚೆನ್ನಾಗಿದ್ದೇನೆ.ಈಗ ಆಸ್ಪತ್ರೆಯ ಅನುಭವಗಳು ಹೊಸಲೋಕವನ್ನು ತೋರಿಸಿವೆ. ಶ್ರೀರಾಮುಲು ಭೇಟಿ

ಹಿತೈಷಿ- ಸ್ನೇಹಿತರುಗಳ ಕಾಳಜಿ, ರೇಖಾಳ ಜವಾಬ್ದಾರಿ, ಕಕ್ಕಿಯ ಸಾಂತ್ವನ. ಪಾಲಕರ ಪ್ರೀತಿ, ಅಭಿ ,ಚಿನ್ನಿಯ

ನೆನಪು. ಕಾಲೇಜಿನಲ್ಲಿ ಅಂದುಕೊಂಡಿರಬಹುದಾದ ಸಂಗತಿಗಳನ್ನು ಮೆಲಕು ಹಾಕುತ್ತಾ ಇಪ್ಪತ್ತು ದಿನ ಕಳೆದೆ.

ಈಗ ಎಲ್ಲವೂ ಯಥಾಸ್ಥಿತಿ ಮುಂದೇನು ?


ಇನ್ನೆರಡು ತಿಂಗಳು ಕಡ್ಡಾಯ ರಜೆ. ಆಚೀಚೆ ಓಡಾಡುವ ಹಾಗಿಲ್ಲ. ಡಾ: ಕೆ. ನಾಗರಾಜ್,

ಡಾ: ಮಂಜುನಾಥ್, ಪಿ.ಎಸ್. ರಾಮಪ್ರಿಯ, ಆಸ್ಪತ್ರೆಯ ಸಿಬ್ಬಂದಿ ತೋರಿದ ಕಾಳಜಿಗೆ---- ಹೇಳುವುದು

ಕಷ್ಟ. ಇಲ್ಲಿನ ಪ್ರತಿಕ್ಷಣಗಳ ಅನುಭವಗಳನ್ನು ಖಂಡಿತ ದಾಖಲಿಸಬೇಕು.ಒಂದೆರಡು ತಿಂಗಳು ರಜೆ ಹಾಕಿ, ಬಾಕಿ ಇದ್ದ, ಕೆಲಸಗಳನ್ನು ಮುಗಿಸಲೇ ಬೇಕೆಂಬ

ಇರಾದೆ ಇತ್ತು. ಅದನ್ನು ಸೂಚ್ಯವಾಗಿ ಗೆಳೆಯರ ಮುಂದೆ ಹೇಳಿ ಕೊಂಡಿದ್ದೆ. ನನ್ನ ಇಚ್ಛೆಯಂತೆ, ರಜೆ

ಏನೋ ಸಿಕ್ಕಿತು. ಸಿಕ್ಕ ರೀತಿ ಮಾತ್ರ ತುಂಬಾ ಭಿನ್ನ. ಈ ರೀತಿ ಅಂದುಕೊಂಡಿರಲಿಲ್ಲ. ಗಟ್ಟಿಯಾಗಿ ಉಳಿದ

ಕಾಲು, ತಲೆ ಅಂಗಾಂಗಗಳಿಗಾಗಿ ಖುಷಿಯಾಗಿದೆ. ಕೆಲವು ತಿಂಗಳುಗಳಲ್ಲಿ ಕೈ ಮೊದಲಿನಂತಾಗುತ್ತದೆ.

ರಜೆ ಸಿಕ್ಕಿದೆ. ಸ್ವಲ್ಪ ಸಜೆಯೊಂದಿಗೆ. ಅದೇ ಕೃಷ್ಣನ ಮಾತುಗಳು ಆದದ್ದೆಲ್ಲಾ ಒಳ್ಳೆಯದಕ್ಕ ಆಗಿದೆ.

ನೋವು ಸಹಿಸಿಕೊಂಡು ಸಣ್ಣ ಗೆಲುವು ಸಾಧಿಸಿದ್ದೇನೆ. ಮತ್ತೆ, ಉಳಿದ ಅನುಭವಗಳು ನಿಮ್ಮೊಂದಿಗೆ-----

Tuesday, June 8, 2010

ಒಂದಿಷ್ಟು ವಿಳಂಬ - ಅಷ್ಟಿಷ್ಟು ಅಲೆದಾಟ

ರಜೆಯಲಿ ನಿರಂತರ ಬರೆಯುತ್ತಿದ್ದು, ಈಗ irregular ಆಗಿದ್ದಕ್ಕೆ ಬೇಸರವಿದೆ. ಬರೆಯುವ ತುಡಿತ ಕಾಡುತ್ತಿದ್ದರೂ ಸಮಯ ಹೊಂದಾಣಿಕೆ ಆಗುತ್ತಿಲ್ಲ.
ಮಾನಸೋಲ್ಲಾಸದ ಹತ್ತಾರು ಪ್ರಶ್ನೆಗಳು ನನ್ನೆದುರಿಗಿದೆ. ಅವುಗಳಿಗೆ ಉತ್ತರಿಸಬೇಕಾಗಿದೆ.
ಲವ್ ಕಾಲದ ಬಗ್ಗೆ ಅನೇಕರಿಗೆ ಕುತೂಹಲವಿದೆ. ನಟ ರವಿಚಂದ್ರನ್ ರೊಂದಿಗಿನ ಸಂದರ್ಶನ ಓದುವ ಕಾತುರವೂ ಇದೆ. ಜುಲೈ ಕೊನೆವಾರ ph.d ಮುಗಿಯಲೇಬೇಕೆಂಬ ಆದೇಶ ಮಾರ್ಗದರ್ಶಕರಾದ ಡಾ, ಎಂ. ಎಂ. ಕಲಬುರ್ಗಿಯವರದು ನನಗೂ ಅಷ್ಟೇ. ಡಾ. ಎಂ. ಎಂ. ಕಲಬುರ್ಗಿ ಅವರಂತಹ ಸಂಶೋಧಕರ ಕೈಯಲ್ಲಿ ಪದವಿ ಪಡೆಯುವ ಸಂಭ್ರಮವಿದೆ.
ಇತ್ತಿಚೀಗೆ ಹೆಚ್ಚು ಆಪ್ತರಾಗಿರುವ ಸಚಿವರಾದ ಶ್ರೀರಾಮುಲು ಕೆಲ assignment ಒಪ್ಪಿಸಿದ್ದಾರೆ.
ಎಲ್ಲವನು, ಎಲ್ಲದನು ಪೂರೈಸುವ ಧಾವಂತ. ಏನೇ ಇದ್ದರೂ ಮೊದಲ ಆಯ್ಕೆ ಓದು - ಬರಹ - ಪಾಠ. ಅಷ್ಟೇ ಇದರ ಸ್ವರೂಪ ಬದಲಾಗಬಹುದು. ಪ್ರವಾಸಕಥನ ಮತ್ತೊಮ್ಮೆ ಅಚ್ಚಿಗೆ ಹೋಗಬೇಕಿದೆ.
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಾಹಿತ್ಯ ಪುರಸ್ಕಾರದ ಫಲಿತಾಂಶ ಬಂದಿದೆ. ಸರ್ ಅವರೊಂದಿಗೆ ಚರ್ಚಿಸಿ, ಪ್ರಕಟಿಸಿ ಒಂದು ಸುಂದರ ಕಾರ್ಯಕ್ರಮ ರೂಪಿಸಬೇಕಿದೆ.
ಅಂದುಕೊಂಡಂತೆ ಮೇ 26 ಕ್ಕೆ ಕಾರ್ಯಕ್ರಮ ಆಗಬೇಕಿತ್ತು. ಆದರೆ ರಜೆಗಾಗಿ ಸಾಹಿತ್ಯದ ಸ್ನೇಹಿತರೆಲ್ಲ ಊರಲ್ಲಿರಲಿಲ್ಲ. ಹೀಗಾಗಿ ಜೂನ್ ಕೊನೆ ವಾರದಲ್ಲಿ ಕಾರ್ಯಕ್ರಮ ಆಯೋಜಿಸುವ ಾಲೋಚನೆ ಇದೆ.
ಈ ಮಧ್ಯ 2ನೇ ಕವನ ಸಂಕಲನ ಪ್ರಕಟಿಸಬೇಕಾಗಿದೆ. ಹೀಗೆ ಕೆಲಸಗಳು ಬಾಕಿ ಇದ್ದಾಗ ಬೇಸರವಾಗುವುದು ಸಹಜ. ಆದರೆ ಎಲ್ಲವನ್ನು ನಿಭಾಯಿಸುವ ತುಡಿತ ಇಟ್ಟುಕೊಂಡು ಅಲೆದಾಡುವುದರಲ್ಲಿ ಖುಷಿ ಇರುತ್ತದೆ.
ರಾತ್ರಿ ಬಿಡುವಾಗಿಸಿಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿ writing table ಹುಡುಕಬೇಕೆನಿಸುವ ಮನಸಿಗೆ ಋಣಿಯಾಗಿದ್ದೇನೆ.

ಅಧಿಕಾರ - ಹಣ - ಪಟಾಲಂ ಇತ್ಯಾದಿ

ಇಂದಿನ ರಾಜಕೀಯ ವ್ಯವಸ್ಥೆಯನ್ನು ನೋಡಿದಾಗ ಅಚ್ಚರಿ ಎನಿಸದಿರದು ಹಣದಿಂದ ಅಧಿಕಾರ ಸಿಗುತ್ತದೆಯೋ ಇಲ್ಲವೋ ಆದರೆ ಅಧಿಕಾರದಿಂದ ಸಿಕ್ಕೇ ಸಿಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ.
ನನಗೆ ಒಬ್ಬ ರಾಜಕೀಯ ಮನುಷ್ಯ ಆಪ್ತರು. ಅವರಿಗೆ ಏನಕೇನ ಕಾರಣದಿಂದ ಅಧಿಕಾರವಿರಲಿಲ್ಲ. ಒಂಟಿತನವೇ ಅವರ ಸಂಗಾತಿ. ಜೇಬಿನಲ್ಲಿ ಹಣವಿರುತ್ತಿರಲಿಲ್ಲ. ಬರೀ ಚರ್ಚೆಗಳೇ ಸಂಗಾತಿ. ನಾಲ್ಕಾರು ಜನ ಬಿಟ್ಟರೆ ಯಾರೂ ಸುಳಿಯುತ್ತಿರಲಿಲ್ಲ. ವಾರದಲ್ಲಿ ಹತ್ತಾರು ತಾಸುಗಳನ್ನು ನನ್ನೊಂದಿಗೆ ಕಳೆದು ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿ ಮುಂದೇನು ಎಂದು ಲೆಕ್ಕ ಹಾಕುತ್ತಿದ್ದಾಗ ನನಗೆ ಅಯ್ಯೋ ಎನಿಸುತ್ತಿತ್ತು. ಅಧಿಕಾರರಹಿತರನ್ನು ಕಂಡರೆ ನನಗೆ ಒಂದು ರೀತಿಯ ಆಪ್ತತೆ ಅನುಭೂತಿ.
ಏನೋ ಪವಾಡ ನಡೆದು ಅವರಿಗೆ ಈಗ ಅಧಿಕಾರ ಸಿಕ್ಕಿದೆ. ಅಧಿಕಾರ ಸಿಗಲು ನೂರಾರು ಜನ ನನ್ನಂತೆ ಕಾರಣವಾಗಿರಬಹುದು. ನನ್ನದೊಂದು ಮಹತ್ವದ ಪಾತ್ರವಂತು ಇದೆ. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿತ್ತು. ಅಧಿಕಾರದ ನಶೆ ಏರಿದಂತೆಲ್ಲ ಯಾಕೋ ಆಪ್ತರು ತೊಡರಾಗಿ, ಚೇಲಾಗಳು, ಭಟ್ಟಂಗಿಗಳು ಇಷ್ಟವೆನಿಸಿದರು. ಅದರ ವಾಸನೆ ಬಡೆದಾಗ ಮೂಗು ಮುಚ್ಚಿಕೊಂಡು ನಾನೇ ದೂರಾದೆ. ಒಂದೆರೆಡು ತಿಂಗಳು ಮನಸಿಗೆ ಕಿರಿಕಿರಿ ಎನಿಸಿತು. ಕಾಲಚಕ್ರ ತಿರುಗುತ್ತಲೇ ಇದೆ.
ಅಧಿಕಾರಕ್ಕಾಗಿ ಜೊಲ್ಲು ಸುರಿಸಿ ಹಣ ಬಾಚಿಕೊಳ್ಳುವವರ ತಂಡ ಕ್ರಿಯಾಶೀಲವಾಗಿರುವಾಗ ಸ್ನೇಹಿತರದು ಯಾವ ಲೆಕ್ಕ!
ಖಾಲಿಯಾಗಿದ್ದ ಪರ್ಸು ತುಂಬಲು, ಬಣಗುಡುತ್ತಿದ್ದ ಮನೆ ಬೆಳಗಲು ಅಧಿಕಾರ - ಹಣದ ರಾಶಿ. ಪ್ರಭುದ್ಧತೆ ಇರದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಸುಮ್ಮನೆ ಸಹಿಸಿಕೊಂಡಿದ್ದೇನೆ. ಕಾಲ ಎಲ್ಲವನ್ನು ನಿರ್ಣಯಿಸುತ್ತದೆ. ಅಲ್ಲಿಯವರೆಗೆ ತಡೆಯಬೇಕು. ತಡೆದುಕೊಳ್ಳುತ್ತೇನೆ. ಮನಸಿಗೆ ಆದ ಗಾಯಕ್ಕೆ ಔಷಧಿ ಇಲ್ಲ. ಅದು ತನ್ನಷ್ಟಕ್ಕೆ ತಾನೇ ಮಾಯಬೇಕು. ಈಗ ಆ ಗಾಯ ಮಾಯಿಸುವ ಮುಲಾಮು ಸಿಕ್ಕಿದೆ. ಇನ್ನು ಮುಂದೆ ಹೊಸ ಗಾಯ ಆಗದಂತೆ ಎಚ್ಚರವಹಿಸುತ್ತೇನೆ. ಅಧಿಕಾರ ಇಲ್ಲದಾಗ ಆಪ್ತರಾದವರನ್ನು, ಅಧಿಕಾರ ಸಿಕ್ಕಾಗ ಕೈ ಬಿಟ್ಟರೆ ಏನಾಗುತ್ತದೆ ಎಂಬುದನ್ನು ಇತಿಹಾಸ ಹೇಳಿದರು. ಮನುಷ್ಯ ಮಾತ್ರ ಮಾಡಿದ ತಪ್ಪನ್ನೇ ಮಾಡುತ್ತಾನೆ. ನಂಜಾದ ಹಲ್ಲಿಗೆ ನಾಲಿಗೆ ಹೊರಳುವಂತೆ. ಈಗ ನಿದ್ರೆಯಲೂ ಎಚ್ಚರಾಗಿರುತ್ತೇನೆ.