Tuesday, June 8, 2010

ಅಧಿಕಾರ - ಹಣ - ಪಟಾಲಂ ಇತ್ಯಾದಿ

ಇಂದಿನ ರಾಜಕೀಯ ವ್ಯವಸ್ಥೆಯನ್ನು ನೋಡಿದಾಗ ಅಚ್ಚರಿ ಎನಿಸದಿರದು ಹಣದಿಂದ ಅಧಿಕಾರ ಸಿಗುತ್ತದೆಯೋ ಇಲ್ಲವೋ ಆದರೆ ಅಧಿಕಾರದಿಂದ ಸಿಕ್ಕೇ ಸಿಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ.
ನನಗೆ ಒಬ್ಬ ರಾಜಕೀಯ ಮನುಷ್ಯ ಆಪ್ತರು. ಅವರಿಗೆ ಏನಕೇನ ಕಾರಣದಿಂದ ಅಧಿಕಾರವಿರಲಿಲ್ಲ. ಒಂಟಿತನವೇ ಅವರ ಸಂಗಾತಿ. ಜೇಬಿನಲ್ಲಿ ಹಣವಿರುತ್ತಿರಲಿಲ್ಲ. ಬರೀ ಚರ್ಚೆಗಳೇ ಸಂಗಾತಿ. ನಾಲ್ಕಾರು ಜನ ಬಿಟ್ಟರೆ ಯಾರೂ ಸುಳಿಯುತ್ತಿರಲಿಲ್ಲ. ವಾರದಲ್ಲಿ ಹತ್ತಾರು ತಾಸುಗಳನ್ನು ನನ್ನೊಂದಿಗೆ ಕಳೆದು ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿ ಮುಂದೇನು ಎಂದು ಲೆಕ್ಕ ಹಾಕುತ್ತಿದ್ದಾಗ ನನಗೆ ಅಯ್ಯೋ ಎನಿಸುತ್ತಿತ್ತು. ಅಧಿಕಾರರಹಿತರನ್ನು ಕಂಡರೆ ನನಗೆ ಒಂದು ರೀತಿಯ ಆಪ್ತತೆ ಅನುಭೂತಿ.
ಏನೋ ಪವಾಡ ನಡೆದು ಅವರಿಗೆ ಈಗ ಅಧಿಕಾರ ಸಿಕ್ಕಿದೆ. ಅಧಿಕಾರ ಸಿಗಲು ನೂರಾರು ಜನ ನನ್ನಂತೆ ಕಾರಣವಾಗಿರಬಹುದು. ನನ್ನದೊಂದು ಮಹತ್ವದ ಪಾತ್ರವಂತು ಇದೆ. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿತ್ತು. ಅಧಿಕಾರದ ನಶೆ ಏರಿದಂತೆಲ್ಲ ಯಾಕೋ ಆಪ್ತರು ತೊಡರಾಗಿ, ಚೇಲಾಗಳು, ಭಟ್ಟಂಗಿಗಳು ಇಷ್ಟವೆನಿಸಿದರು. ಅದರ ವಾಸನೆ ಬಡೆದಾಗ ಮೂಗು ಮುಚ್ಚಿಕೊಂಡು ನಾನೇ ದೂರಾದೆ. ಒಂದೆರೆಡು ತಿಂಗಳು ಮನಸಿಗೆ ಕಿರಿಕಿರಿ ಎನಿಸಿತು. ಕಾಲಚಕ್ರ ತಿರುಗುತ್ತಲೇ ಇದೆ.
ಅಧಿಕಾರಕ್ಕಾಗಿ ಜೊಲ್ಲು ಸುರಿಸಿ ಹಣ ಬಾಚಿಕೊಳ್ಳುವವರ ತಂಡ ಕ್ರಿಯಾಶೀಲವಾಗಿರುವಾಗ ಸ್ನೇಹಿತರದು ಯಾವ ಲೆಕ್ಕ!
ಖಾಲಿಯಾಗಿದ್ದ ಪರ್ಸು ತುಂಬಲು, ಬಣಗುಡುತ್ತಿದ್ದ ಮನೆ ಬೆಳಗಲು ಅಧಿಕಾರ - ಹಣದ ರಾಶಿ. ಪ್ರಭುದ್ಧತೆ ಇರದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಸುಮ್ಮನೆ ಸಹಿಸಿಕೊಂಡಿದ್ದೇನೆ. ಕಾಲ ಎಲ್ಲವನ್ನು ನಿರ್ಣಯಿಸುತ್ತದೆ. ಅಲ್ಲಿಯವರೆಗೆ ತಡೆಯಬೇಕು. ತಡೆದುಕೊಳ್ಳುತ್ತೇನೆ. ಮನಸಿಗೆ ಆದ ಗಾಯಕ್ಕೆ ಔಷಧಿ ಇಲ್ಲ. ಅದು ತನ್ನಷ್ಟಕ್ಕೆ ತಾನೇ ಮಾಯಬೇಕು. ಈಗ ಆ ಗಾಯ ಮಾಯಿಸುವ ಮುಲಾಮು ಸಿಕ್ಕಿದೆ. ಇನ್ನು ಮುಂದೆ ಹೊಸ ಗಾಯ ಆಗದಂತೆ ಎಚ್ಚರವಹಿಸುತ್ತೇನೆ. ಅಧಿಕಾರ ಇಲ್ಲದಾಗ ಆಪ್ತರಾದವರನ್ನು, ಅಧಿಕಾರ ಸಿಕ್ಕಾಗ ಕೈ ಬಿಟ್ಟರೆ ಏನಾಗುತ್ತದೆ ಎಂಬುದನ್ನು ಇತಿಹಾಸ ಹೇಳಿದರು. ಮನುಷ್ಯ ಮಾತ್ರ ಮಾಡಿದ ತಪ್ಪನ್ನೇ ಮಾಡುತ್ತಾನೆ. ನಂಜಾದ ಹಲ್ಲಿಗೆ ನಾಲಿಗೆ ಹೊರಳುವಂತೆ. ಈಗ ನಿದ್ರೆಯಲೂ ಎಚ್ಚರಾಗಿರುತ್ತೇನೆ.

No comments:

Post a Comment